ಬಿಸಿಲಿನಲ್ಲಿ ನಿಮ್ಮ ಮುಖ ಹಾಲಿನಂತೆ ಹೊಳೆಯುತ್ತೆ. ಕೇವಲ 2 ನಿಮಿಷ ಈ ಮಸಾಜ್ ಮಾಡಿ!


ಬೇಸಿಗೆ ಕಾಲಿಡುತ್ತಿದ್ದಂತೆ ಚರ್ಮದ ಸಮಸ್ಯೆಗಳು ಹೆಚ್ಚಾಗುವುದು ಸಹಜ. ತೀವ್ರ ಬಿಸಿಲು, ಬೆವರು ಮುಖದ ಕಾಂತಿ ಕುಗ್ಗಿಸಿ, ಸನ್ ಟ್ಯಾನ್, ಕಿರಿಕಿರಿ, ಮೊಡವೆಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಂತಹ ಸವಾಲುಗಳನ್ನು ಎದುರಿಸಲು ದುಬಾರಿ ಸನ್ಸ್ಕ್ರೀನ್ಗಳು ಅಥವಾ ಬ್ಯೂಟಿ ಪ್ರಾಡಕ್ಟ್ಗಳ ಮೊರೆ ಹೋಗುತ್ತೇವೆ.

ಆದರೆ, ನಿಮ್ಮ ಮನೆಯ ಫ್ರಿಡ್ಜ್ನಲ್ಲೇ 'ಮ್ಯಾಜಿಕ್' ಅಡಗಿದೆ. 'ಐಸ್ ಕ್ಯೂಬ್ಸ್' ಮತ್ತು 'ತಣ್ಣನೆಯ ಅಲೋವೆರಾ ಜೆಲ್' ಆ ಮ್ಯಾಜಿಕ್. ಕೇವಲ 2 ನಿಮಿಷಗಳ ಈ ಮಸಾಜ್, ಚರ್ಮಕ್ಕೆ ಚಳಿಗಾಲದಂತಹ ತಂಪಾದ ಹಿತ ನೀಡಿ, ಪಾರ್ಲರ್ ಫೇಶಿಯಲ್ ಹೊಳಪು ತರುತ್ತದೆ. ಈ ಅದ್ಭುತ ಬದಲಾವಣೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಬೇಸಿಗೆಯಲ್ಲಿ ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮ ತೆರೆದುಕೊಂಡಾಗ ರಂಧ್ರಗಳು ದೊಡ್ಡದಾಗಿ, ತೈಲ ಗ್ರಂಥಿಗಳು ಹೆಚ್ಚು ಸಕ್ರಿಯವಾಗುತ್ತವೆ. ಐಸ್ ಕ್ಯೂಬ್ ಮಸಾಜ್ ರಕ್ತ ಸಂಚಾರವನ್ನು ಸುಧಾರಿಸಿ, ಮುಖಕ್ಕೆ ಸಹಜ ಗುಲಾಬಿ ಹೊಳಪು ನೀಡುತ್ತದೆ. ಇದು ಚರ್ಮದ ಉರಿಯನ್ನು ತಕ್ಷಣ ಶಮನಗೊಳಿಸುತ್ತದೆ. 

ಐಸ್ ಕ್ಯೂಬ್ಗಳನ್ನು ನೇರವಾಗಿ ಮುಖಕ್ಕೆ ಉಜ್ಜುವುದು ಸರಿಯಲ್ಲ. ಗರಿಷ್ಠ ಪ್ರಯೋಜನ ಪಡೆಯಲು ಕೆಲವು ಪ್ರಮುಖ ಹಂತಗಳನ್ನು ಅನುಸರಿಸಬೇಕು. ಅವುಗಳ ವಿವರ ಇಲ್ಲಿದೆ. 

ಮುಖವನ್ನು ಸ್ವಚ್ಛಗೊಳಿಸಿ: 
ಮೊದಲು ಮುಖವನ್ನು ತಣ್ಣೀರಿನಿಂದ ಅಥವ ಮೃದುವಾದ ಫೇಸ್ ವಾಶ್ ಬಳಸಿ ಸ್ವಚ್ಛಗೊಳಿಸಿ. ಮುಖದ ಮೇಲೆ ಜಿಡ್ಡು, ಧೂಳು ಅಥವಾ ಮೇಕಪ್ ಇರಬಾರದು. ಇದು ಮಸಾಜ್ಗೆ ಅತ್ಯಗತ್ಯ.

ಬಟ್ಟೆಯ ಬಳಕೆ:
ಐಸ್ ಕ್ಯೂಬ್ಗಳನ್ನು ನೇರವಾಗಿ ಚರ್ಮಕ್ಕೆ ಬಳಸಬೇಡಿ. ತೆಳುವಾದ ಹತ್ತಿ ಬಟ್ಟೆ ಅಥವಾ ಹ್ಯಾಂಡ್ ಕರ್ಚೀಫ್ನಲ್ಲಿ ಸುತ್ತಿ ಬಳಸಿ. ಇದರಿಂದ ಅತಿಯಾದ ಶೀತದಿಂದ ಚರ್ಮಕ್ಕೆ ಆಗುವ ಹಾನಿ ತಪ್ಪಿಸಬಹುದು.

ಸೌಮ್ಯವಾದ ಮಸಾಜ್: 
ಬಟ್ಟೆಯಲ್ಲಿ ಸುತ್ತಿದ ಐಸ್ನಿಂದ ಮುಖದ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡಿ. ವಿಶೇಷವಾಗಿ ಕಣ್ಣಿನ ಕೆಳಗೆ, ಕೆನ್ನೆ, ಹಣೆಯ ಭಾಗದಲ್ಲಿ ಎರಡು ನಿಮಿಷ ಹಗುರವಾಗಿ ಉಜ್ಜಿ. 

ಅಲೋವೆರಾ ಜೆಲ್ ಫಿನಿಶಿಂಗ್: 
ಮಸಾಜ್ ಬಳಿಕ, ಫ್ರಿಡ್ಜ್ನಲ್ಲಿಟ್ಟ ತಣ್ಣನೆಯ ಅಲೋವೆರಾ ಜೆಲ್ ಹಚ್ಚಿಕೊಳ್ಳಿ. ಇದು ಚರ್ಮಕ್ಕೆ ತೇವಾಂಶ ನೀಡುವುದಲ್ಲದೆ, ಬಿಸಿಲಿನಿಂದಾದ ಕಪ್ಪನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಬೇಸಿಗೆಯಲ್ಲಿ ಐಸ್ ಕ್ಯೂಬ್ ಮಸಾಜ್ ನಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. ನಿಮ್ಮ ಸೌಂದರ್ಯ ಕಾಪಾಡಿಕೊಳ್ಳುವ ಈ ವಿಧಾನದ ನಾಲ್ಕು ಮುಖ್ಯ ಲಾಭಗಳು ಇಲ್ಲಿವೆ: 

ಸನ್ಬರ್ನ್ ನಿವಾರಣೆ ಬಿಸಿಲಿಗೆ ಚರ್ಮ ಕೆಂಪಾಗಿ, ಉರಿಯುತ್ತಿದ್ದರೆ ಐಸ್ ಮಸಾಜ್ ತಕ್ಷಣದ ಉಪಶಮನ ನೀಡುತ್ತದೆ. ಇದು ಚರ್ಮದ ಕೆಸರನ್ನು ಕಡಿಮೆ ಮಾಡಿ, ಆರಾಮದಾಯಕ ಅನುಭವ ನೀಡುತ್ತದೆ. 

ಓಪನ್ ಪೋರ್ಸ್ ನಿಯಂತ್ರಣ: 
ತೆರೆದ ರಂಧ್ರಗಳು ಧೂಳು ಹಾಗೂ ಕೊಳೆಯನ್ನು ಹೀರಿಕೊಂಡು ಮೊಡವೆಗಳಿಗೆ ಕಾರಣ. ಐಸ್ ಮಸಾಜ್ ಈ ರಂಧ್ರಗಳನ್ನು ಕುಗ್ಗಿಸಿ, ಚರ್ಮವನ್ನು ಬಿಗಿಗೊಳಿಸಿ ಮೊಡವೆ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ತೈಲ ಮತ್ತು ಬೆವರಿನ ನಿಯಂತ್ರಣ: 
ಅತಿಯಾದ ಬೆವರು ಮತ್ತು ಎಣ್ಣೆ ಉತ್ಪಾದನೆಯಿಂದ ಮುಖ ಜಿಡ್ಡಾಗುವುದು ಸಾಮಾನ್ಯ. ಐಸ್ ಮಸಾಜ್ ಇದನ್ನು ನಿಯಂತ್ರಿಸಿ, ದಿನವಿಡೀ ಮುಖವನ್ನು ಫ್ರೆಶ್ ಆಗಿ ಇಡುತ್ತದೆ. 

ಇನ್ಸ್ಟಂಟ್ ಗ್ಲೋ: 
ಕಾರ್ಯಕ್ರಮಕ್ಕೆ ಹೊರಡುವ ಮುನ್ನ ಎರಡು ನಿಮಿಷ ಐಸ್ ಮಸಾಜ್ ಮಾಡಿದರೆ ಮುಖದ ಆಯಾಸ ದೂರವಾಗುತ್ತದೆ. ಇದು ಪಾರ್ಲರ್ ಫೇಶಿಯಲ್ನಂತಹ ತಕ್ಷಣದ ಹೊಳಪು ನೀಡುತ್ತದೆ. ನಿಮ್ಮನ್ನು ತಾಜಾವಾಗಿ ಕಾಣುವಂತೆ ಮಾಡುತ್ತದೆ. 

ಹೆಚ್ಚುವರಿ ಸಲಹೆಗಳು: 
ಕೇವಲ ನೀರಿನ ಐಸ್ ಕ್ಯೂಬ್ಗಳಿಗೆ ಸೀಮಿತಗೊಳ್ಳಬೇಕಾಗಿಲ್ಲ. ಸೌತೆಕಾಯಿ ರಸ ಅಥವಾ ಗ್ರೀನ್ ಟೀ ದ್ರಾವಣವನ್ನು ಐಸ್ ಟ್ರೇನಲ್ಲಿ ಹಾಕಿ ಗಟ್ಟಿಯಾಗಿಸಿ ಬಳಸಿ. ಇದು ಚರ್ಮಕ್ಕೆ ಹೆಚ್ಚಿನ ಪೌಷ್ಟಿಕಾಂಶ ಮತ್ತು ವಿಶೇಷ ಆರೈಕೆ ನೀಡುತ್ತದೆ.