ನೆನೆಸಿದ ಕಡಲೆ ಮತ್ತು ಬೆಲ್ಲ ಖಾಲಿ ಹೊಟ್ಟೆಯಲ್ಲಿ ತಿಂದು ನೋಡಿ!

ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ತಿಂದು ನೋಡಿ. ಕುದುರೆಯಂತಹ ಶಕ್ತಿ ನೀಡುವ ಈ ಸೂಪರ್ ಫುಡ್ನ 5 ಪ್ರಯೋಜನಗಳು ಇಲ್ಲಿವೆ. ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ, ದಿನನಿತ್ಯದ ಆಹಾರದಲ್ಲಿ ಸಣ್ಣ ಬದಲಾವಣೆ ದೀರ್ಘಕಾಲ ಉತ್ತಮ ಆರೋಗ್ಯ ನೀಡುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ತಿನ್ನುವುದು ಅಂತಹ ಸರಳ ಹಾಗೂ ಶಕ್ತಿಶಾಲಿ ಅಭ್ಯಾಸಗಳಲ್ಲಿ ಪ್ರಮುಖವಾಗಿದೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿದ ಕಡಲೆಯಲ್ಲಿ ಪ್ರೋಟೀನ್, ವಿಟಮಿನ್, ಕಬ್ಬಿಣಾಂಶ, ಮೆಗ್ನೀಸಿಯಮ್ ಮತ್ತು ಫೈಬರ್ನಂತಹ ಪೌಷ್ಟಿಕಾಂಶಗಳು ಹೇರಳ. ಡಯೆಟಿಷಿಯನ್ಗಳ ಅಭಿಪ್ರಾಯದಂತೆ, ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ತಿನ್ನುವುದರಿಂದಾಗುವ 5 ಅದ್ಭುತ ಪ್ರಯೋಜನಗಳು ಹೀಗಿವೆ.

ಕಡಲೆ ಕೇವಲ ರುಚಿಕರವಲ್ಲ, ಬದಲಾಗಿ ಅದೊಂದು ಪೌಷ್ಟಿಕಾಂಶದ ಗಣಿ. ಇದನ್ನು ಬೇಯಿಸಿ ತಿನ್ನುವುದಕ್ಕಿಂತ ನೆನೆಸಿ ಹಸಿಯಾಗಿ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ನೇರವಾಗಿ ತಲುಪುತ್ತವೆ. 

ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತೆ:
ನೆನೆಸಿದ ಕಡಲೆಯಲ್ಲಿ ನಾರಿನಂಶ ಅತಿ ಹೆಚ್ಚಾಗಿರುತ್ತದೆ. ಇದು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ಇದನ್ನು ಸೇವಿಸುವುದರಿಂದ ಮಲಬದ್ಧತೆ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದು ಕರುಳಿನ ಆರೋಗ್ಯವನ್ನು ಸುಧಾರಿಸಿ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. 

ತೂಕ ಇಳಿಕೆಗೆ ಸಹಕಾರಿ:
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ನೆನೆಸಿದ ಕಡಲೆ ವರದಾನ. ಇದರಲ್ಲಿರುವ ಅಧಿಕ ಫೈಬರ್ ಮತ್ತು ಪ್ರೋಟೀನ್ ಅಂಶವು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದು ಅಥವಾ ಅನಗತ್ಯವಾಗಿ ತಿನ್ನುವುದು ತಪ್ಪುತ್ತದೆ, ಇದು ನೈಸರ್ಗಿಕವಾಗಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಮೂಳೆಗಳ ಬಲವರ್ಧನೆ:
ವಯಸ್ಸಾದಂತೆ ಕಾಡುವ ಕೀಲು ನೋವು ಅಥವಾ ಮೂಳೆಗಳ ದೌರ್ಬಲ್ಯ ತಡೆಯಲು ಕಡಲೆ ಸಹಕಾರಿ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಫಾಸ್ಫರಸ್ ಸಮೃದ್ಧವಾಗಿದೆ. ಇವು ಮೂಳೆ, ಸ್ನಾಯುಗಳನ್ನು ಸದೃಢಗೊಳಿಸುತ್ತವೆ. ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಲು ಹಾಗೂ ಕೀಲು ನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು ನೆನೆಸಿದ ಕಡಲೆ ಉತ್ತಮ ನೈಸರ್ಗಿಕ ಮದ್ದು. 

ಇಡೀ ದಿನ ದೇಹಕ್ಕೆ ಚೈತನ್ಯ:
ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು ಅಥವಾ ದೈಹಿಕ ದೌರ್ಬಲ್ಯ ಕಾಡುತ್ತಿದ್ದರೆ, ಪ್ರತಿದಿನ ಕಡಲೆ ಕಾಳು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಲ್ಲಿನ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳು ದೇಹಕ್ಕೆ ತ್ವರಿತ ಶಕ್ತಿ ನೀಡುತ್ತವೆ. ಇದು ಸುಸ್ತು ಮತ್ತು ದೌರ್ಬಲ್ಯವನ್ನು ದೂರ ಮಾಡಿ, ಇಡೀ ದಿನ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. 

ರಕ್ತಹೀನತೆ ದೂರ ಮಾಡುತ್ತೆ:
ಭಾರತದಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಕಡಲೆಯಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತದ ಕೊರತೆಯಿಂದ ಬಳಲುತ್ತಿರುವವರು ಪ್ರತಿದಿನ ಬೆಳಗ್ಗೆ ನೆನೆಸಿದ ಕಡಲೆಯನ್ನು ಸ್ವಲ್ಪ ಬೆಲ್ಲದೊಂದಿಗೆ ಸೇವಿಸಿದರೆ ಅತ್ಯಂತ ವೇಗವಾಗಿ ಚೇತರಿಸಿಕೊಳ್ಳಬಹುದು.

ಬಳಸುವ ಸರಿಯಾದ ಕ್ರಮ:
ರಾತ್ರಿ ಒಂದು ಮುಷ್ಠಿ ಕಡಲೆಯನ್ನು ಸ್ವಚ್ಛವಾದ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದ ಕೂಡಲೇ ಆ ನೀರನ್ನು ಬಸಿದು, ಕಡಲೆಯನ್ನು ಚೆನ್ನಾಗಿ ಅಗಿದು ತಿನ್ನಿ. ಇನ್ನು ಹೆಚ್ಚಿನ ಲಾಭ ಬೇಕೆಂದರೆ ಆ ಕಡಲೆಯ ಜೊತೆಗೆ ಸ್ವಲ್ಪ ಹಸಿ ಶುಂಠಿ ಅಥವಾ ಬೆಲ್ಲವನ್ನು ಸೇರಿಸಿಕೊಳ್ಳಬಹುದು. 

ಪ್ರಮುಖ ಎಚ್ಚರಿಕೆ ದುರ್ಬಲ ಜೀರ್ಣಕ್ರಿಯೆ ಅಥವಾ ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆಯಿರುವವರು ಇದನ್ನು ಮಿತವಾಗಿ ಸೇವಿಸಬೇಕು. ಇಲ್ಲವೇ, ಸ್ವಲ್ಪ ಬೇಯಿಸಿ ತಿನ್ನುವುದು ಉತ್ತಮ. ಒಟ್ಟಾರೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ ರಕ್ತಹೀನತೆಯೂ ದೂರವಾಗುತ್ತದೆ. ಇದರ 5 ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀವೂ ಸದುಪಯೋಗಪಡಿಸಿಕೊಳ್ಳಿ.