ಸಂಜೆ ಸ್ನ್ಯಾಕ್ಸ್ ತಿನ್ನಬೇಕೆಂದರೆ ಕ್ರಿಸ್ಪಿ ಆಲೂಗಡ್ಡೆ ಲಾಲಿಪಾಪ್ ಮಾಡಿ


ಕೆಲವರಿಗೆ ಸಂಜೆ ಹೊತ್ತು ಹಸಿವು ಆಗೋದು ಜಾಸ್ತಿ. ಆಗ ಏನಾದರೂಕಾಫಿ-ಟೀ ಜೊತೆ ಬಿಸಿ ಬಿಸಿ, ಗರಿ ಗರಿಯಾದ ತಿಂಡಿ ಸಿಕ್ಕರೆ ಸಾಕು ಅನ್ನಿಸುತ್ತದೆ. ಪ್ರತಿದಿನ ಅದೇ ಬಜ್ಜಿ, ಪಕೋಡಾ, ಬೋಂಡಾ ಮಾಡುವುದು ಬೇಸರವಾಗಿದ್ದರೆ. ಈ ಬಾರಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪೊಟ್ಯಾಟೋ ಲಾಲಿಪಾಪ್ ಟ್ರೈ ಮಾಡಿ.

ಹೊರಭಾಗ ಕ್ರಿಸ್ಪಿಯಾಗಿದ್ದು, ಒಳಭಾಗ ಮೃದುವಾಗಿರುವ ಈ ಸ್ನ್ಯಾಕ್ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರ ಫೇವರಿಟ್. ಮನೆಯಲ್ಲಿರುವ ಕೆಲವೇ ಪದಾರ್ಥಗಳಿಂದ ಕೇವಲ 15 ನಿಮಿಷಗಳಲ್ಲಿ ಇದನ್ನು ಸಿದ್ಧಪಡಿಸಬಹುದು. ಹಾಗಿದ್ದರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು:

- ದೊಡ್ಡ ಆಲೂಗಡ್ಡೆ – 3 (ಬೇಯಿಸಿ ಮ್ಯಾಶ್ ಮಾಡಿದ್ದು)

– ಬ್ರೆಡ್ ಚೂರು – ಅರ್ಧ ಕಪ್

– ಕಾರ್ನ್ ಫ್ಲೋರ್ – 2 ಚಮಚ

– ಅಕ್ಕಿ ಹಿಟ್ಟು – 1 ಚಮಚ

– ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ

– ಹಸಿ ಮೆಣಸಿನಕಾಯಿ – 2 (ನುಣ್ಣಗೆ ಹೆಚ್ಚಿದ್ದು)

– ಕೊತ್ತಂಬರಿ ಸೊಪ್ಪು – 2 ಚಮಚ

– ಜೀರಿಗೆ ಪುಡಿ – ಅರ್ಧ ಚಮಚ

– ಗರಂ ಮಸಾಲಾ – ಕಾಲು ಚಮಚ

– ಉಪ್ಪು – ರುಚಿಗೆ ತಕ್ಕಷ್ಟು

– ಕರಿಯಲು ಎಣ್ಣೆ

– ಟೂತ್ಪಿಕ್ ಅಥವಾ ಐಸ್ಕ್ರೀಮ್ ಕಡ್ಡಿ

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಗೆ ಮ್ಯಾಶ್ ಮಾಡಿದ ಆಲೂಗಡ್ಡೆ, ಬ್ರೆಡ್ ಚೂರು, ಕಾರ್ನ್ ಫ್ಲೋರ್ ಹಾಗೂ ಅಕ್ಕಿ ಹಿಟ್ಟನ್ನು ಸೇರಿಸಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಮಿಶ್ರಣ ಕೈಗೆ ಅಂಟುವಂತಿದ್ದರೆ ಸ್ವಲ್ಪ ಕಾರ್ನ್ ಫ್ಲೋರ್ ಸೇರಿಸಿ ಗಟ್ಟಿಯಾಗುವಂತೆ ಮಾಡಿಕೊಳ್ಳಿ.

ಈಗ ಮಿಶ್ರಣವನ್ನು ಸಮಾನ ಗಾತ್ರದ ಉಂಡೆಗಳಾಗಿ ಮಾಡಿಕೊಂಡು, ಪ್ರತಿಯೊಂದರ ಮಧ್ಯಭಾಗಕ್ಕೆ ಟೂತ್ಪಿಕ್ ಅಥವಾ ಐಸ್ಕ್ರೀಮ್ ಕಡ್ಡಿ ಚುಚ್ಚಿ ಲಾಲಿಪಾಪ್ ಆಕಾರ ನೀಡಿ. ನಂತರ ಸುಮಾರು 10 ನಿಮಿಷ ಫ್ರಿಜ್ನಲ್ಲಿ ಇಟ್ಟರೆ ಕರಿಯುವಾಗ ಒಡೆಯುವ ಸಾಧ್ಯತೆ ಕಡಿಮೆಯಾಗುತ್ತದೆ.

ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಮಧ್ಯಮ ಉಷ್ಣಾಂಶಕ್ಕೆ ಬಂದ ಬಳಿಕ ಲಾಲಿಪಾಪ್ಗಳನ್ನು ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ. ಬಳಿಕ ಟಿಶ್ಯೂ ಪೇಪರ್ ಮೇಲೆ ತೆಗೆದು ಹೆಚ್ಚುವರಿ ಎಣ್ಣೆಯನ್ನು ಹೀರಿಸಿಕೊಳ್ಳಲು ಬಿಡಿ.

ಬಿಸಿ ಬಿಸಿಯಾದ ಪೊಟ್ಯಾಟೋ ಲಾಲಿಪಾಪ್ಗೆ ಟೊಮೆಟೊ ಕೆಚಪ್, ಪುದೀನಾ ಚಟ್ನಿ ಅಥವಾ ಹಸಿ ಚಟ್ನಿಯನ್ನು ಜೊತೆಯಾಗಿ ನೀಡಬಹುದು. ಬೇಕಿದ್ದರೆ ಮೇಲೆ ಸ್ವಲ್ಪ ಚಾಟ್ ಮಸಾಲಾ ಸಿಂಪಡಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.