ಮಳೆಗಾಲದ ಸಂಜೆಗೆ ಬದನೆಕಾಯಿ ಬಜ್ಜಿ ಮಾಡಿ!

ಮಳೆಗಾಲದ ಸಂಜೆಗೆ ಬಿಸಿ ಬಿಸಿ ಸ್ನ್ಯಾಕ್ಸ್ ಸವಿಯುವ ಆಸೆ ಇದ್ದರೆ ನಿಮಗಾಗಿ ಇಲ್ಲಿದೆ ಒಂದು ಸೂಪರ್ ರೆಸಿಪಿ! ಸಾಮಾನ್ಯವಾಗಿ ಬದನೆಕಾಯಿ ಎಂದರೆ ಇಷ್ಟಪಡದಿರುವವರೇ ಹೆಚ್ಚು. ಆದರೆ ಅದೇ ಬದನೆಕಾಯಿಯಿಂದ ಗರಿಗರಿಯಾದ, ಬಾಯಿಯಲ್ಲಿ ನೀರೂರಿಸುವ ‘ಬದನೆಕಾಯಿ ಬಜ್ಜಿʼ ಮಾಡಿದರೆ ಪ್ಲೇಟ್ ಖಾಲಿಯಾಗುವುದು ಗ್ಯಾರಂಟಿ.

ಬೇಕಾಗುವ ಪದಾರ್ಥಗಳು:

ಬದನೆಕಾಯಿ

ಕಡಲೆ ಹಿಟ್ಟು

ಅರಿಶಿನ ಪುಡಿ:

ಜೀರಿಗೆ ಪುಡಿ

ಧನಿಯಾ ಪುಡಿ

ಇಂಗು

ಕರಿಬೇವು

ಉಪ್ಪು

ಎಣ್ಣೆ

ಮಾಡುವ ವಿಧಾನ:
ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ತೆಳುವಾದ ಮತ್ತು ವೃತ್ತಾಕಾರದಲ್ಲಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಹೆಚ್ಚಿದ ಕರಿಬೇವು, ಅರಿಶಿನ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ, ಗಂಟಿಲ್ಲದಂತೆ ಮಧ್ಯಮ ಹದಕ್ಕೆ (ಬಜ್ಜಿ ಹಿಟ್ಟಿನ ಹದಕ್ಕೆ) ಕಲಸಿಕೊಳ್ಳಿ. 

ಬಾಣಲೆಯಲ್ಲಿ ಕರಿಯಲು ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಿ. ಎಣ್ಣೆ ಕಾದ ನಂತರ, ಕತ್ತರಿಸಿಟ್ಟ ಬದನೆಕಾಯಿ ಬಿಲ್ಲೆಗಳನ್ನು ಸಿದ್ಧಪಡಿಸಿದ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ, ಹಿಟ್ಟು ಬದನೆಕಾಯಿಗೆ ಸರಿಯಾಗಿ ಅಂಟಿಕೊಳ್ಳುವಂತೆ ಕೋಟಿಂಗ್ ಮಾಡಿ.

ಹಿಟ್ಟಿನಲ್ಲಿ ಅದ್ದಿದ ಬದನೆಕಾಯಿಗಳನ್ನು ಎಣ್ಣೆಯಲ್ಲಿ ಹಾಕಿ, ಅವು ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾಗುವರೆಗೆ ಚೆನ್ನಾಗಿ ಕರಿಯಿರಿ. ನಂತರ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ. ಈಗ ಬಿಸಿಬಿಸಿಯಾದ ಮತ್ತು ಕ್ರಿಸ್ಪಿಯಾದ ಬದನೆಕಾಯಿ ಬಜ್ಜಿ ಸಿದ್ಧ. ಇದನ್ನು ನಿಮ್ಮಿಷ್ಟದ ಹಸಿರು ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಸೇರಿಸಿ, ಬಿಸಿ ಚಹಾದೊಂದಿಗೆ ಮಳೆಯ ಸಂಜೆಯನ್ನು ಆನಂದಿಸಿ.