ಚಳಿಗಾಲದಲ್ಲಿ ಮಕ್ಕಳು ಕಾಯಿಲೆ ಬೀಳದಿರಬೇಕೆ? ಪೋಷಕರೇ ಹೀಗೆ ಮಾಡಿ

ಚಳಿಗಾಲದಲ್ಲಿ ಮಕ್ಕಳು ಆಗಾಗ ಕಾಯಿಲೆ ಬೀಳುತ್ತಿರುತ್ತಾರೆ. ಅದರಲ್ಲೂ 5 ವರ್ಷದೊಳಗಿನ ಮಕ್ಕಳಾದರೆ ವಾರದಲ್ಲಿ 2 ದಿನವಷ್ಟೇ ಸರಿಯಾಗಿ ಇರುತ್ತಾರೆ. ಶೀತ, ಕೆಮ್ಮು ಈ ಬಗೆಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಪೋಷಕರು ಈ ಸಮಯದಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ತೆಗೆದುಕೊಂಡರೆ ಕಾಯಿಲೆ ಬೀಳುವುದನ್ನು ತಡೆಗಟ್ಟಬಹುದು, ಹೇಗೆ? ನೋಡೋಣ ಬನ್ನಿ.
ಮಕ್ಕಳಿಗೆ ಬೆಚ್ಚಗಿನ ಉಡುಪು ಧರಿಸಿ: ಮಕ್ಕಳು ಸ್ವೆಟರ್, ಟೋಪಿ ಹಾಕಿಕೊಳ್ಳಲು ಕೇಳುವುದಿಲ್ಲ, ಆದರೂ ನೀವು ಧರಿಸಿಕೊಡಬೇಕಾಗುತ್ತದೆ. ಅವರ ಮೈಯನ್ನು ಬೆಚ್ಚಗೆ ಇಟ್ಟುಕೊಳ್ಳಿ. ಮಕ್ಕಳಿಗೆ ಸ್ವಲ್ಪ ಜೀರಿಗೆ ಹಾಕಿ ಬಿಸಿ ಮಾಡಿದ ನೀರು ಕೊಡಿ, ಜೀರ್ಣಕ್ರಿಯೆಗೆ ಒಳ್ಳೆಯದು. ಒಂದು ಎಸಳು ತುಳಸಿ ಸೇರಿಸಿದರೆ ಒಳ್ಳೆಯದು.

ಕರಿದ ಪದಾರ್ಥಗಳನ್ನು ಕೊಡಬೇಡಿ: ಮಕ್ಕಳು ಬೇಡದ ಆಹಾರಗಳನ್ನೇ ತಿನ್ನಲು ಇಷ್ಟಪಡುವುದು, ಆದರೆ ಕೊಡಲಿಕ್ಕೆ ಹೋಗಬೇಡಿ. ಮನೆಯಲ್ಲಿ ಬಿಸ್ಕೆಟ್‌, ಕುರುಕುರೆ ಇವೆಲ್ಲಾ ತಂದು ಇಡಬೇಡಿ, ಬದಲಿಗೆ ಡ್ರೈ ಫ್ರೂಟ್ಸ್‌ ತಂದಿಡಿ. ಹಠ ಮಾಡಿ ಅಳುತ್ತಾರೆ ಎಂದು ಕೊಡಲಿಕ್ಕೆ ಹೋಗಬೇಡಿ.

ಅನಗ್ಯತವಾಗಿ ಔಷಧ ಹಾಕಬೇಡಿ ಸಣ್ಣ-ಪುಟ್ಟ ಶೀತ, ಕೆಮ್ಮು ಬರುತ್ತಿದ್ದಂತೆ ಕೆಲವರು ಆ್ಯಂಟಿಬಯೋಟಿಕ್ ಹಾಕಿ ಬಿಡುತ್ತಾರೆ, ಹೀಗೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಮತ್ತಷ್ಟು ಕಡಿಮೆಯಾಗುವುದು. ಆದ್ದರಿಂದ ಅನಗ್ಯತವಾಗಿ ಹಾಕಬೇಡಿ. ವೈದ್ಯರು ಹೇಳುವಾಗ ಮಾತ್ರ ಹಾಕಿ.

ಮನೆಯ ವಾತಾವರಣ ಸ್ವಚ್ಛವಾಗಿಡಿ ಮನೆಯೊಳಗಡೆ ಸೊಳ್ಳೆ ಬರದಂತೆ ನೋಡಿಕೊಳ್ಳಿ. ಸಂಜೆ ಮತ್ತು ಬೆಳಗ್ಗೆ ಮನೆಯ ಬಾಗಿಲು-ಕಿಟಕಿ ಮುಚ್ಚಿಟ್ಟರೆ ಸೊಳ್ಳೆ ಬರುವುದು ತಡೆಗಟ್ಟಬಹುದು. ಮಕ್ಕಳನ್ನು ಮಲಗಿಸುವಾಗಲೂ ಅಷ್ಟೇ ಸೊಳ್ಳೆ ಪರದೆ ಅಡಿಯಲ್ಲಿ ಮಲಗಿಸಿ. ಆಟ ಆಡುವಾಗ ಸೊಳ್ಳೆ ಕಚ್ಚದಿರಲು ತುಂಬು ತೋಳಿನ ಬಟ್ಟೆ ಧರಿಸಿಕೊಡಿ.

ಮಕ್ಕಳ ಆಟಿಕೆಗಳನ್ನು ಸ್ವಚ್ಛವಾಗಿಡಿ ಮಕ್ಕಳು ಆಟಿಕೆಗಳನ್ನು ಕಚ್ಚುತ್ತಾ ಇರುತ್ತವೆ, ಆದ್ದರಿಂದ ಆಟಿಕೆಗಳನ್ನು ತೊಳೆದು ಸ್ವಚ್ಛವಾಗಿಡಿ.