ಚಳಿಗಾಲದಲ್ಲಿ ಸಹಜವಾಗಿಯೇ ವಾತಾವರಣದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ದೇಹದ ಉಷ್ಣತೆ ದೇಹದಲ್ಲೇ ಉಳಿಯುತ್ತದೆ. ಈ ಕಾಲದಲ್ಲಿ ಜೀರ್ಣಶಕ್ತಿ ಹೆಚ್ಚಾಗಿ ಹಸಿವು ಹೆಚ್ಚಾಗುತ್ತದೆ. ಈ ಕಾಲದಲ್ಲಿ ಸಿಹಿ, ಹುಳಿ, ಉಪ್ಪು ಇರುವ ಆಹಾರ ಹೆಚ್ಚು ಸೇವಿಸಬೇಕು. ಬಿಸಿಯಾದ ಆಹಾರ ಸೇವನೆ ಅವಶ್ಯಕ.
ದ್ವಿದಳ ಧಾನ್ಯ
ಹೊಸ ಅಕ್ಕಿ, ಗೋಧಿ, ರಾಗಿ ಮತ್ತು ಬೇಳೆಕಾಳುಗಳ ಬಳಕೆ ಸೂಕ್ತ, ಹೊಸ ಅಕ್ಕಿ, ಗೋಧಿಯಿಂದ ತಯಾರಿಸಿದ ಇಡ್ಲಿ, ದೋಸೆ, ಚಪಾತಿ, ವಡೆ, ಪೂರಿಗಳನ್ನು ಸೇವಿಸಬಹುದು. ಉದ್ದಿನಿಂದ ತಯಾರಿಸಿದ ಉಂಡೆ ಹೆಚ್ಚು ಪುಷ್ಟಿಕರವಾಗಿರುತ್ತವೆ. ಉದ್ದಿನಬೇಳೆಯನ್ನು ಸಣ್ಣಗಿನ ಉರಿಯ ಮೇಲೆ ಚೆನ್ನಾಗಿ ಹುರಿದು ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ತುಪ್ಪ, ಸಕ್ಕರೆ ಪುಡಿ, ಏಲಕ್ಕಿ, ದ್ರಾಕ್ಷಿ, ಬಾದಾಮಿ ಕೇಸರಿ ಹಾಕಿ ಉಂಡೆ ಕಟ್ಟಬೇಕು. ಎಳ್ಳು ಹಾಕಿ ತಯಾರಿಸಿದ ಚಕ್ಕುಲಿ, ಕಜ್ಜಾಯ, ಎಳ್ಳುಂಡೆ ಪುಳಿಯೊಗರೆ, ತಂಬುಳಿಗಳ ಬಳಕೆಯು ಒಳ್ಳೆಯದು.
ಎಲ್ಲ ಬಗೆಯ ಸೊಪ್ಪುಗಳು, ಸೋರೆಕಾಯಿ, ಬೂದಗುಂಬಳ, ಎಲಕೋಸು, ಬೆಂಡೆಕಾಯಿ, ಹೂಕೋಸು, ಸೀಮೆ ಬದನೆಕಾಯಿ ಸೇವಿಸಬೇಕು. ಕಡಲೆಕಾಯಿ, ಅವರೆಕಾಯಿ, ಆಲುಗೆಡ್ಡೆ, ಗೆಣಸು, ತೊಗರಿಕಾಯಿಗಳು ನಿಸರ್ಗವೇ ನಮಗೆ ಕೊಟ್ಟಂತಹ ವರ. ಇವುಗಳಲ್ಲಿರುವ ಜಿಡ್ಡಿನ ಅಂಶವು ದೇಹಕ್ಕೆ ಅವಶ್ಯವಿರುವ ಜಿಡ್ಡಿನಾಂಶವನ್ನು ಪೂರೈಸುತ್ತದೆ. ಅವರೆಕಾಯಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಬಿಸಿಯಾಗಿಯೇ ತಿನ್ನಬೇಕು. ಅವರೆ
ಜೀರ್ಣಕ್ಕೆ ಕಷ್ಟಕರವಾದ್ದರಿಂದ ಇದನ್ನು ತಿಂದ ನಂತರ ದೈಹಿಕ ಶ್ರಮವೂ ಅಗತ್ಯ.
ದ್ರಾಕ್ಷಿ, ಕಿತ್ತಳೆ, ಸೀಬೆ, ಸೇಬುಗಳು, ಎಲಚಿಗಳು ಚಳಿಗಾಲದಲ್ಲಿ ದೊರೆಯುವ ಹಣ್ಣುಗಳು, ಕಿತ್ತಲೆ, ಸೀಬೆಯಲ್ಲಿ ಜೀವಸತ್ವ ‘ಸಿ’ ಹೆಚ್ಚಾಗಿರುತ್ತದೆ. ಶೀತದಿಂದ ಉಂಟಾಗುವ ತೊಂದರೆಗಳನ್ನು ದೂರಮಾಡುತ್ತವೆ. ಸೇಬಿನಲ್ಲಿ ‘ಬಿ’ ಜೀವಸತ್ವ, ರಂಜಕ, ಪೊಟ್ಯಾಸಿಯಂ ಹೆಚ್ಚಿನ ಪ್ರಮಾಣದಲ್ಲಿದೆ. ಇವು ನರಗಳ ಸಹಜ ಕ್ರಿಯೆಗೆ ಪೂರಕ. ಆದ್ದರಿಂದ ನರದೌರ್ಬಲ್ಯವಿರವವರಿಗೆ ಸೇಬು ಅತ್ಯುತ್ತಮ.