ಗರ್ಭಧಾರಣೆ ಪ್ರತಿ ಮಹಿಳೆಗೆ ಅತೀ ಮುಖ್ಯವಾದ ಘಟ್ಟ. ಆದರೆ ಗರ್ಭಾವಸ್ಥೆಯಲ್ಲಿ ಕಚೇರಿಗೆ ಹೋಗೋದು ಗರ್ಭಿಣಿಯರಿಗೆ ಸವಾಲಾಗಿ ಪರಿಣಮಿಸಬಹುದು. ಉದ್ಯೋಗಸ್ಥ ಮಹಿಳೆಯರು ಗರ್ಭಾವಸ್ಥೆಯಲ್ಲಿ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.
ಗರ್ಭಿಣಿ ಮಹಿಳೆ ತನ್ನ ಆರೋಗ್ಯ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಬೇಕು. ಗರ್ಭಾವಸ್ಥೆಯಲ್ಲಿ ಒಂದು ಸಣ್ಣ ತಪ್ಪು ಸಹ ಮಗುವಿಗೆ ಅಪಾಯಕಾರಿಯಾಗಬಹುದು. ಜೊತೆಗೆ ಈ ಸಮಯದಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಹಾಗಾಗಿ, ಗರ್ಭಾವಸ್ಥೆಯಲ್ಲಿ ಕಚೇರಿಗೆ ಹೋಗೋದು ಉದ್ಯೋಗಸ್ಥ ಮಹಿಳೆಯರಿಗೆ ಸವಾಲಾಗಿದೆ. ನೀವು ದುಡಿಯುವ ಮಹಿಳೆ ಮತ್ತು ಗರ್ಭಿಣಿಯಾಗಿದ್ದರೆ, ಆಗ ನೀವು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರ ತೆಗೆದುಕೊಳ್ಳೋದು ಬಹಳ ಮುಖ್ಯ. ಗರ್ಭಿಣಿ ಮಹಿಳೆಯ ದೇಹಕ್ಕೆ ಅನೇಕ ಪೋಷಕಾಂಶಗಳು ಬೇಕಾಗುತ್ತವೆ. ಇದಕ್ಕಾಗಿ, ಆಹಾರದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಭರಿತ ಆಹಾರಗಳನ್ನು ಸೇರಿಸಿ.
ಪೌಷ್ಠಿಕ ಆಹಾರವು ದೇಹದಲ್ಲಿ ಶಕ್ತಿ ಮತ್ತು ರಕ್ತದ ಕೊರತೆಯನ್ನು ಉಂಟುಮಾಡೋದಿಲ್ಲ. ನೀವು ಆಫೀಸ್ ಗೆ ಹೋಗುವವರಾದ್ರೆ, ಮಧ್ಯಾಹ್ನದ ಊಟವನ್ನು ಮನೆಯಿಂದ ತೆಗೆದುಕೊಳ್ಳಿ. ಹಾಗೇ ಜಂಕ್ ಫುಡ್(Junk food) ಮತ್ತು ಕರಿದ ವಸ್ತು ತಿನ್ನೋದನ್ನು ತಪ್ಪಿಸಿ. ಆದ್ದರಿಂದ ಮಖಾನಾ, ಸಲಾಡ್, ಹಣ್ಣು, ಬೀಜ ಇತ್ಯಾದಿಗಳನ್ನು ಆರೋಗ್ಯಕರ ತಿಂಡಿಯಾಗಿ ತಿನ್ನಬಹುದು
ಒತ್ತಡ ಮುಕ್ತವಾಗಿರಲು ಪ್ರಯತ್ನಿಸಿ: ಗರ್ಭಾವಸ್ಥೆಯಲ್ಲಿ ಒತ್ತಡವು ನಿಮ್ಮ ಮತ್ತು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕಚೇರಿಗೆ ಹೋಗುವ ಗರ್ಭಿಣಿಯರು ಒತ್ತಡದಿಂದ ಮುಕ್ತವಾಗಿರಲು ಪ್ರಯತ್ನಿಸಬೇಕು. ಒತ್ತಡ ಇಲ್ಲದಿದ್ದರೆ ಮಾತ್ರ ನೀವು ಆರೋಗ್ಯಯುತ ಮಗುವನ್ನು ಪಡೆಯಲು ಸಾಧ್ಯವಾಗುತ್ತೆ.
ಬೆಳಗಿನ ಉಪಾಹಾರ(Breakfast) ಬಿಟ್ಟುಬಿಡಬೇಡಿ: ಆಫೀಸಿಗೆ ಹೋಗುವ ಆತುರದಲ್ಲಿ ಉಪಾಹಾರವನ್ನು ಬಿಟ್ಟುಬಿಡಬೇಡಿ. ಬೆಳಿಗ್ಗೆ ಆರೋಗ್ಯಕರ ಉಪಾಹಾರ ಸೇವಿಸೋದು ನಿಮಗೆ ಮತ್ತು ನಿಮ್ಮ ಮಗುವಿಗೆ ಪೋಷಣೆ ನೀಡುತ್ತೆ. ನಿಮ್ಮ ಉಪಾಹಾರದಲ್ಲಿ ಹಣ್ಣು, ಓಟ್ಸ್, ಜ್ಯೂಸ್, ಹಾಲು ಇತ್ಯಾದಿಗಳನ್ನು ಸೇರಿಸಬಹುದು. ಇದು ದಿನದ ಕೆಲಸಕ್ಕೆ ಶಕ್ತಿ ನೀಡುತ್ತೆ ಮತ್ತು ತಲೆನೋವು ಮತ್ತು ವಾಕರಿಕೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ಹೆಚ್ಚು ನೀರು(Water) ಕುಡಿಯಿರಿ: ಗರ್ಭಾವಸ್ಥೆಯಲ್ಲಿ ಯಥೇಚ್ಛವಾಗಿ ನೀರು ಕುಡಿಯಿರಿ. ದೇಹದಲ್ಲಿ ನೀರಿನ ಕೊರತೆಯು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿ ಡಿಹೈಡ್ರೇಷನ್ ತಪ್ಪಿಸಲು, ಆಫೀಸ್ನಲ್ಲಿ ಆಗಾಗ ನೀರು ಕುಡಿಯೋದನ್ನು ಮುಂದುವರಿಸಿ. ಇದರ ಜೊತೆಗೆ ಜ್ಯೂಸ್, ಮಜ್ಜಿಗೆ, ಲಸ್ಸಿ ಇತ್ಯಾದಿಗಳನ್ನು ಸಹ ಸೇವಿಸಬಹುದು. ಆಗ ಗರ್ಭಾವಸ್ಥೆಯಲ್ಲಿನ ತೊಡಕುಗಳನ್ನು ತಪ್ಪಿಸಬಹುದು.
ನಿರಂತರವಾಗಿ ಕೆಲಸ ಮಾಡಬೇಡಿ: ಕಚೇರಿಯಲ್ಲಿ ನಿರಂತರವಾಗಿ ಕೆಲಸ ಮಾಡೋದನ್ನು ತಪ್ಪಿಸಿ. ಕೆಲಸದ ನಡುವೆ ಸಣ್ಣ ವಿರಾಮಗಳನ್ನು (Rest) ತೆಗೆದುಕೊಳ್ಳುತ್ತಲೇ ಇರಿ. ಪ್ರತಿ ಗಂಟೆಗೊಮ್ಮೆ ಸ್ವಲ್ಪ ಹೊತ್ತು ಎದ್ದು ಒಂದು ಸಣ್ಣ ವಾಕಿಂಗ್ ಮಾಡಿ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತೆ ಮತ್ತು ಕೈ ಹಾಗೂ ಕಾಲುಗಳಲ್ಲಿ ಊತವನ್ನು ಕಡಿಮೆ ಮಾಡುತ್ತೆ. ಕೆಲಸದ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳುವಾಗ ಸ್ಟ್ರೆಚಿಂಗ್ ಮಾಡಿ. ಇದು ಸ್ನಾಯುಗಳನ್ನು ಸಡಿಲಗೊಳಿಸುತ್ತೆ.