ಮನುಷ್ಯನ ದೇಹದಲ್ಲಿ ಲಿವರ್ (ಯಕೃತ್, ಪಿತ್ತಜನಕಾಂಗ) ಕೊಲೆಸ್ಟ್ರಾಲ್ ಮತ್ತು ವಿಶೇಷ ಪ್ರೋಟೀನ್‌ಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಇದು ದೇಹದ ಮೂಲಕ ಕೊಬ್ಬನ್ನು ಸಾಗಿಸಲು ಸಹಾಯ ಮಾಡುತ್ತದೆ. ಆಹಾರದ ಜೀರ್ಣಕ್ರಿಯೆಯಿಂದ ತ್ಯಾಜ್ಯವನ್ನು ಸಾಗಿಸಲು ಪಿತ್ತರಸದ ಉತ್ಪಾದನೆ, ಸಣ್ಣ ಕರುಳಿನಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಒಡೆಯುವುದು, ರಾಸಾಯನಿಕಗಳನ್ನು ನಿಯಂತ್ರಿಸುವುದು ಸೇರಿದಂತೆ ಲಿವರ್ ನಮ್ಮ ದೇಹದಲ್ಲಿ ಹಲವು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಹಾಗಾಗಿ, ಯಾವುದೇ ವ್ಯಕ್ತಿ ಆರೋಗ್ಯವಂತನಾಗಿರಲು ಎಲ್ಲಾ ಅಂಗಗಳ ಜೊತೆಗೆ ಲಿವರ್ ಆರೋಗ್ಯವಾಗಿರುವುದು ಬಹಳ ಮುಖ್ಯ. ಆದರೆ, ಅನಾರೋಗ್ಯಕರ ಆಹಾರ ಪದ್ಧತಿ, ಅತಿಯಾದ ಮದ್ಯಪಾನ ಸೇವನೆಯಿಂದಾಗಿ ಲಿವರ್ ಹಾನಿಗೊಳಗಾಗುತ್ತದೆ. ಆದಾಗ್ಯೂ, ಆರೋಗ್ಯಕರ ಜೀವನಶೈಲಿ ಅನುಸರಿಸುವ ಮೂಲಕ ನಮ್ಮ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆರೋಗ್ಯಕರ ಯಕೃತ್ತಿಗೆ ನಿಮ್ಮ ಡಯಟ್ನಲ್ಲಿರಲಿ ಈ ಆಹಾರಗಳು
ವಾಸ್ತವವಾಗಿ, ಅನಾರೋಗ್ಯಕರ ಯಕೃತ್ತು ಅನೇಕ ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ಅದರಲ್ಲಿ ಟೈಪ್ -2 ಮಧುಮೇಹವು ತುಂಬಾ ಸಾಮಾನ್ಯ ಸಮಸ್ಯೆ ಆಗಿದೆ. ಆದಾಗ್ಯೂ, ಅನೇಕ ಆರೋಗ್ಯಕರ ಆಹಾರಗಳ ಸಹಾಯದಿಂದ ಪಿತ್ತಜನಕಾಂಗದ ದೌರ್ಬಲ್ಯವನ್ನು ನಿವಾರಿಸಬಹುದು. ಆಹಾರ ತಜ್ಞರ ಪ್ರಕಾರ ನಮ್ಮ ದೈನಂದಿನ ಆಹಾರದಲ್ಲಿ ಕೆಲವು ಆರೋಗ್ಯಕರ ಆಹಾರಗಳನ್ನು ತೆಗೆದುಕೊಳ್ಳುವುದರಿಂದ ಲಿವರ್ ಆರೋಗ್ಯ ಉತ್ತಮವಾಗಿರುತ್ತದೆ. ಅಂತಹ ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಹಸಿರು ಸೊಪ್ಪು
ಹಸಿರು ಸೊಪ್ಪು-ತರಕಾರಿಗಳು ಆರೋಗ್ಯಕ್ಕೆ ಬಹಳ ಮುಖ್ಯ. ನಿತ್ಯವೂ ನಿಮ್ಮ ಆಹಾರದಲ್ಲಿ ಹಸಿರು ಸೊಪ್ಪು-ತರಕಾರಿಗಳನ್ನು ಸೇರ್ವಿಸುವುದರಿಂದ ಇದು ನಿಮ್ಮ ಆರೋಗ್ಯಕ್ಕ ಅದರಲ್ಲೂ ಲಿವರ್ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ
ಬೀಟ್ರೂಟ್
ಬೀಟ್ರೂಟ್ನಲ್ಲಿ ಫೈಬರ್, ಫೋಲೇಟ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಕೆಲವು ಸಂಶೋಧನೆಗಳ ಪ್ರಕಾರ, ಬೀಟ್ರೂಟ್ ಜ್ಯೂಸ್ ಲಿವರ್ ರಕ್ಷಿಸುವಲ್ಲಿ ಬಹಳ ಪರಿಣಾಮಕಾರಿ ಎಂದು ತಿಳಿದುಬಂದಿದೆ.
ಗ್ರೀನ್ ಟೀ
ಸಾಮಾನ್ಯವಾಗಿ ಸಣ್ಣ ಆಗಲು, ತೂಕ ನಷ್ಟಕ್ಕಾಗಿ ಜನರು ಗ್ರೀನ್ ಟೀ ಸೇವಿಸುವುದನ್ನು ನೀವು ನೋಡಿರಬಹುದು. ಆದರೆ, ನಿತ್ಯ 2 ಕಪ್ ಗ್ರೀನ್ ಟೀ ಸೇವನೆಯು ಯಕೃತ್ ಕ್ಯಾನ್ಸರ್ ಬರದಂತೆ ತಡೆಯುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಹಾಗಂತ ಹೆಚ್ಚು ಗ್ರೀನ್ ಟೀ ಸೇವಿಸಿದರೆ, ಅದು ವ್ಯತಿರಿಕ್ತ ಪರಿಣಾಮ ಬೀರಬಹುದು, ಎಚ್ಚರ.