ತಪ್ಪು ಮಾಡಿದವರನ್ನು ಕ್ಷಮಿಸುವುದರಲ್ಲಿದೆ ಸಂತೋಷದ ಗುಟ್ಟು

ದ್ವೇಷ ಮನಸ್ಸಿಗೆ ನೋವು ನೀಡುತ್ತದೆ  ಹಾಗೂ ಶಾಂತಿ ಹಾಳು ಮಾಡುತ್ತದೆ. ಸಂಬಂಧ ಕೆಡಿಸುವ ಜೊತೆಗೆ ಕೋಪಕ್ಕೆ ದಾರಿಮಾಡಿ ಕೊಡುತ್ತದೆ. ಅದೇ ಕ್ಷಮೆ ಇಡೀ ಜೀವನವನ್ನು ಬದಲಿಸುತ್ತದೆ. ನೋವುಂಟು ಮಾಡಿದ ಜನರನ್ನು ಕ್ಷಮಿಸಲು ಕಲಿತರೆ  ಆ ನೋವಿನಿಂದ ಹೊರಬರಲು ಸುಲಭವಾಗುತ್ತದೆ. ಸಂಬಂಧಗಳಲ್ಲಿ ಯಾವುದೇ ಸಮಸ್ಯೆ ಸೃಷ್ಟಿಯಾಗುವುದಿಲ್ಲ. ಅನೇಕ ಬಾರಿ ಕ್ಷಮಿಸಲು ಮನಸ್ಸು ಒಪ್ಪುವುದಿಲ್ಲ. ಇದು ಇಬ್ಬರ ಮಧ್ಯೆ ದ್ವೇಷ ಹುಟ್ಟು ಹಾಕುತ್ತದೆ. ನಾವು ತಪ್ಪು ಮಾಡಿದವರನ್ನು ಕ್ಷಮಿಸುವುದು ಹೇಗೆ ಎಂಬುದನ್ನು ಹೇಳುತ್ತೆವೆ.

ಸ್ವೀಕಾರ ಬಹಳ ಮುಖ್ಯ : 

ಕೆಲವು ಜನರು ತಮ್ಮದೇ ಆದ ನಿಯಮಗಳನ್ನು ಹಾಕಿಕೊಂಡು ಅದ್ರಲ್ಲಿ ಬದುಕುತ್ತಿರುತ್ತಾರೆ. ಈ ವೇಳೆ ಯಾರು ಸಣ್ಣ ತಪ್ಪು ಮಾಡಿದ್ರೂ ಅದನ್ನು ಅವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಹಾಗೆ ಅವರ ನಿಯಮ ಮುರಿದವರೆಲ್ಲ ತಪ್ಪು ಮಾಡಿದವರು ಎಂದು ಅವರು ಭಾವಿಸ್ತಾರೆ. ಆದ್ರೆ ತಪ್ಪನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಮಾಡ್ತಾರೆ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ನೀವು ಇದನ್ನು ಮನಸ್ಸಿನಲ್ಲಿಟ್ಟುಕೊಂಡಾಗ ನೀವು ಯಾರನ್ನು ಬೇಕಾದ್ರೂ ಕ್ಷಮಿಸಬಹುದು. ಸಣ್ಣದಿರಲಿ, ದೊಡ್ಡದಿರಲಿ ವಿಷ್ಯವನ್ನು ನಿಮ್ಮಲ್ಲಿಯೇ ಹಿಡಿದಿಟ್ಟುಕೊಂಡು  ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರನ್ನು ಕ್ಷಮಿಸಿ ಮುನ್ನಡೆಯುವುದು ಜಾಣತನ.

ಬೇರೆಯವರ ಪರಿಸ್ಥಿತಿ ಅರ್ಥಮಾಡಿಕೊಳ್ಳಿ : 

ಮೊದಲೇ ಹೇಳಿದಂತೆ ಎಲ್ಲರೂ ಎಲ್ಲ ಸಂದರ್ಭದಲ್ಲೂ ಒಂದೇ ರೀತಿ ಇರುವುದಿಲ್ಲ. ಹಾಗೂ ಕೆಟ್ಟ ಪರಿಸ್ಥಿತಿಯಲ್ಲಿ ಅವರು ತಿಳಿಯದೆ ನಿಮಗೆ ನೋವುಂಟು ಮಾಡಿದರೆ ಮೊದಲು ಆ ವ್ಯಕ್ತಿಯ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಿ. ಆತನಿಗೆ ಯಾವುದೋ ತೊಂದರೆಯಾಗಿದೆ ಎಂಬುದು ನಿಮಗೆ ತಿಳಿದಾಗ ನೀವು ಅವರನ್ನು ಕ್ಷಮಿಸುತ್ತೀರಿ.   

ಇತರರನ್ನು ಕ್ಷಮಿಸಿದ್ರೆ ಇಷ್ಟೆಲ್ಲ ಪ್ರಯೋಜನಗಳಿವೆ : 

ನೀವು ಇತರರನ್ನು ಕ್ಷಮಿಸಿದ್ರೆ  ಯಾವುದೇ ದ್ವೇಷ ಹೊಂದುವುದಿಲ್ಲ. ನಿಮ್ಮ ಮನಸ್ಸು ಅತ್ಯಂತ ಶಾಂತವಾಗಿರುತ್ತದೆ. ನೀವು ಅನೇಕ ಕೆಟ್ಟ ಆಲೋಚನೆಗಳಿಂದ ದೂರವಿರಬೇಕು. ಇದು ನಿಮ್ಮ ಕೆಲಸದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಸಾಧ್ಯವಾದಷ್ಟು ಜನರನ್ನು ಕ್ಷಮಿಸಲು ಪ್ರಯತ್ನಿಸಿ ಮತ್ತು ನಿಮ್ಮ ಸಂಬಂಧವನ್ನು ಸಿಹಿಯಾಗಿರಿಸಲು ಪ್ರಯತ್ನಿಸಿ. 

ಸ್ನೇಹಿತರ ಸಹಾಯ ಪಡೆಯಿರಿ :

 ನಿಮ್ಮನ್ನು ನೋಯಿಸಿದ ವ್ಯಕ್ತಿಯ ಮೇಲೆ ನೀವು ತುಂಬಾ ಕೋಪಗೊಂಡಿದ್ದರೆ ಮತ್ತು ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಭಾವಿಸಿದರೆ, ಸ್ನೇಹಿತರು ಅಥವಾ ನಿಮಗೆ ಹತ್ತಿರವಿರುವ ಜನರ ಸಹಾಯವನ್ನು ಪಡೆಯಿರಿ. ಅಂತಹ ಜನರು ನಿಮ್ಮನ್ನು ಪ್ರೇರೇಪಿಸುತ್ತಾರೆ ಮತ್ತು ನಿಮಗೆ ಸರಿಯಾದ ದಿಕ್ಕನ್ನು ತೋರಿಸುತ್ತಾರೆ. ದ್ವೇಷವನ್ನು ಉತ್ತೇಜಿಸುವ ಮಾತುಗಳನ್ನು ಅವರು ಎಂದೂ ಆಡುವುದಿಲ್ಲ. ಅವರ ಸಹಾಯದಿಂದ ನೀವು ನಿಮ್ಮ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು.