ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್ ಯೋಗ ಎಂಬ ಟ್ರೆಂಡ್

ಫೇಶಿಯಲ್ ಯೋಗ ಎನ್ನುವುದು ಇತ್ತೀಚಿನ ಟ್ರೆಂಡ್ . ಮುಖಕ್ಕೆ ಸಂಬಂಧ ಪಟ್ಟ ಈ ನಿರ್ದಿಷ್ಟ ಕ್ರಿಯೆಯಿಂದ  ಮುಖದ ಚರ್ಮದಲ್ಲಿ ಹೊಳಪು,  ಮುಖದ ಮಾಂಸಖಂಡಗಳು  ರಿಲ್ಯಾಕ್ಸ್ ಆಗುವ ಜತೆಗೆ ಸುಕ್ಕುಗಳು ಕಡಿಮೆ ಆಗುತ್ತವೆ. 

ಸಲೂನ್ ಹಾಗೂ ಚರ್ಮರೋಗ ತಜ್ಞರ ಹೊರತಾಗಿ ಮುಖದ ಯೋಗಾಸನವು   ಸೌಂದರ್ಯವನ್ನು ಎತ್ತಿ ಹಿಡಿಯುತ್ತದೆ. ಫೇಶಿಯಲ್ ಯೋಗದಲ್ಲಿ ಹಲವು ವಿಧಗಳಿವೆ.  ಮೀನಿನಂತೆ ಮುಖವನ್ನು ಉದ್ದ ಮಾಡುವುದು, ನಸುನಗುತ್ತ ಓಂ ಪಠಣ ಮಾಡುವುದು, ಹುಬ್ಬುಗಳನ್ನು ಮೇಲಕ್ಕೆ ಎತ್ತರಿಸುವುದು, ಕಣ್ಣಿನ ರೆಪ್ಪೆಗಳನ್ನು ಪಕ್ಕಕ್ಕೆ ಎಳೆದು ವಿಸ್ತರಿಸುವುದು . ಇದರ ಜೊತೆಗೆ  ಉಸಿರಾಟದ ವ್ಯಾಯಾಮಗಳು ಮುಖಕ್ಕೆ ವಿಶೇಷ ಕಳೆ ನೀಡಬಲ್ಲವು. ಇವುಗಳಿಂದ ಮುಖದ ಚರ್ಮ ಕುಸಿಯುವುದಿಲ್ಲ, ನೆರಿಗೆ ಉಂಟಾಗುವುದಿಲ್ಲ. ಮುಖದ ಚರ್ಮ ಬಿಗಿಯನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೆ, ಮುಖದ ಮಾಂಸಖಂಡಗಳು ರಿಲ್ಯಾಕ್ಸ್ ಹೊಂದುತ್ತವೆ.

ಫೇಶಿಯಲ್ ಯೋಗದಿಂದ ಹಲವಾರು ಪ್ರಯೋಜನಗಳಿವೆ. ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ.  ಮುಖದ ಚರ್ಮದಲ್ಲಿ ಕಳೆ ತುಂಬುವ ಕೊಲಾಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ನಾವು ದಿನವೂ ಮಾತನಾಡುವಾಗ, ನಗುವಾಗ, ವಿವಿಧ ಭಂಗಿಗಳನ್ನು ಮಾಡುವಾಗ ಮುಖಕ್ಕೆ ವ್ಯಾಯಾಮ ತನ್ನಿಂತಾನೇ ಆಗುತ್ತಿರುತ್ತದೆ. ಆದರೆ, ಯೋಗದಿಂದ ಇನ್ನಷ್ಟು ಪ್ರಯೋಜನವಿದೆ. 

ಮುಖದ ಒತ್ತಡ ಕಡಿಮೆ ಮಾಡುತ್ತದೆ:

ಕೆಲವೊಮ್ಮೆ ನಿಮ್ಮ ಅನುಭವಕ್ಕೆ  ಬಂದಿರಬಹುದು. ಕೋಪ  ಬಂದಾಗ, ಮನಸ್ಸಿನ ಭಾವನೆಗಳು ಏರಿಳಿತ ಆದಾಗ ಮುಖದ ಮಾಂಸಖಂಡಗಳು  ಸೋಲುತ್ತವೆ. ಅವುಗಳಲ್ಲಿ ಏನೋ ವಿಚಿತ್ರ ಸಂಚಲನ ಆಗುತ್ತಿರುತ್ತದೆ. ಆದರೆ, ಫೇಶಿಯಲ್ ಯೋಗ  ಮಾಡುವುದರಿಂದ ಮಾಂಸಖಂಡಗಳು ರಿಲ್ಯಾಕ್ಸ್ ಹೊಂದುತ್ತವೆ. ನರವ್ಯೂಹದ ಪ್ರಭಾವ ಕಡಿಮೆಗೊಳಿಸುತ್ತವೆ. 

ಚರ್ಮಕ್ಕೆ ಬಣ್ಣ ಬರುತ್ತದೆ, ಸುಕ್ಕುಗಳು ಮೃದುವಾಗುತ್ತವೆ:

ವಯಸ್ಸಾಗುತ್ತಿದ್ದಂತೆ ಸಹಜವಾಗಿ ಕೊಲಾಜನ್ ಮಟ್ಟ ಕಡಿಮೆ ಆಗುತ್ತದೆ. ಇದರಿಂದಾಗಿ ಚರ್ಮ ಸಡಿಲವಾಗುತ್ತದೆ, ಕುಸಿಯುತ್ತದೆ ಹಾಗೂ ಸುಕ್ಕುಗಳು ಮೂಡುತ್ತವೆ. ನಿರ್ದಿಷ್ಟ ವ್ಯಾಯಾಮದಿಂದ ಕೊಲಾಜನ್ ಉತ್ಪಾದನೆಯ ಎಲ್ಲ ಕೊರತೆಗಳು ನಿವಾರಣೆ ಆಗುತ್ತವೆ. ಮಾಂಸಖಂಡಗಳಲ್ಲಿ ಸಡಿಲತೆ ಮಾಯವಾಗಿ ಸುಕ್ಕುಗಳು ಕಡಿಮೆ ಆಗುತ್ತವೆ.  ನಿಯಮಿತವಾಗಿ ಫೇಶಿಯಲ್ ವ್ಯಾಯಾಮ ಮಾಡಿದರೆ ಚರ್ಮದ ಬಣ್ಣದಲ್ಲಿ ಹೊಳಪು  ಹೆಚ್ಚುತ್ತದೆ.

ಮುಖದಲ್ಲಿ ಹೊಸ ಹೊಳಪು ಮತ್ತು ಖಚಿತತೆ :

ಫೇಶಿಯಲ್ ಯೋಗ ಜೀವಕೋಶಗಳಿಗೆ  ಆಮ್ಲಜನಕ ತಲುಪುವುಂತೆ ಮಾಡುತ್ತದೆ. ಹಾಗೂ ಮೈಕ್ರೊಸರ್ಕ್ಯುಲೇಷನ್ ಪ್ರಕ್ರಿಯೆ ಹೆಚ್ಚಾಗುತ್ತದೆ. ಪರಿಣಾಮವಾಗಿ ಮುಖದ ಕಾಂಪ್ಲೆಕ್ಷನ್  ಹೆಚ್ಚುತ್ತದೆ, ಮುಖದ ಚರ್ಮಕ್ಕೆ ಖಂಡಿತವಾಗಿ ಹೊಳಪು ಬರುತ್ತದೆ ಹಾಗೂ ಮೃದುತ್ವ ಹೆಚ್ಚುತ್ತದೆ. 

ಉಸಿರಾಟದ ವ್ಯಾಯಾಮ :

ಉಸಿರಾಟದ ವ್ಯಾಯಾಮಗಳಲ್ಲಿ ಭಾವನೆಗಳನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುತ್ತದೆ. ಆಗ ಮುಖದಲ್ಲಿ ಸೌಂದರ್ಯ, ಶಾಂತಿ  ಮತ್ತು ಸ್ಥಿರತೆ ಕಾಣುತ್ತದೆ.  ಕಣ್ಣುಗಳಲ್ಲೂ ಮೃದುತ್ವ ಮೂಡುತ್ತದೆ. ವಿಶ್ವಾಸಾರ್ಹ ಭಾವನೆ ಮೂಡಲು ಸಹಕಾರಿ ಆಗುತ್ತದೆ. ಪ್ರಾಣಾಯಾಮದಂತಹ ವಿವಿಧ ಉಸಿರಾಟದ ವ್ಯಾಯಾಮಗಳು ದೇಹ ಮತ್ತು ಮನಸ್ಸಿನ ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗುತ್ತವೆ. ಇವುಗಳಿಂದ ಮುಖದಲ್ಲಿ ಆತ್ಮವಿಶ್ವಾಸ  ಹೆಚ್ಚು ಮೂಡುತ್ತದೆ.