ಮಹಿಳೆಯರು ದುಡ್ಡು ಉಳಿಸಲು ಇಲ್ಲಿವೆ ಟಿಪ್ಸ್

ಇಂದು ಮಹಿಳೆ ಕೂಡ ದುಡಿಯುತ್ತಾಳೆ. ತನ್ನ ದುಡಿಮೆಯ ಸುಖ ತಾನೇ ಅನುಭವಿಸುತ್ತಿದ್ದಾಳೆ. ಹೀಗಾಗಿ ಇಂದು ಹಣಕಾಸಿನ ಯೋಜನೆ ಪುರುಷರಿಗಷ್ಟೇ ಅಲ್ಲ, ಮಹಿಳೆಯರಿಗೂ ಕೂಡ ಮುಖ್ಯ. ಆಕೆ ದುಡಿದ ಹಣವನ್ನು ಹೇಗೆ ವ್ಯಯಿಸಬೇಕು ಎಂಬುದರ ಜೊತೆಗೆ ಎಷ್ಟು, ಎಲ್ಲಿ, ಯಾವ ಉದ್ದೇಶಕ್ಕೆ ಉಳಿಸಬೇಕು ಎಂಬ ಯೋಜನೆ ಅವಶ್ಯ. 

ಕನಸಿನ ಮನೆ, ಪ್ರವಾಸ, ಇಷ್ಟದ ವಸ್ತುಗಳನ್ನು ಖರೀದಿಸಲು ಈ ಕೂಡಿಟ್ಟ ಹಣ ಒಂದು ದಿನ ನೆರವಿಗೆ ಬರಬಹುದು ಎಂಬ ಅಲೋಚನೆ ಬರುತ್ತದೆ. ಇನ್ನು ನಿವೃತ್ತಿ ನಂತರದ ಬದುಕಿನ ಬಗ್ಗೆ ಈಗಲೇ ಪ್ಲ್ಯಾನ್ ಮಾಡೋದು ಅಗತ್ಯ. ಆಗ ಕೂಡ ನೀವು ತರಕಾರಿ, ದಿನಸಿ, ಸಾರಿಗೆ, ವಿದ್ಯುತ್ ಹಾಗೂ ನೀರಿನ ಬಿಲ್ ಗಳು, ವೈದ್ಯಕೀಯ ಬಿಲ್ ಗಳಿಗೆ ಹಣ ಪಾವತಿಸಬೇಕಾಗುತ್ತದೆ. ಹೀಗಾಗಿ ಮುಂದಿನ ಆ ದಿನಗಳಿಗೆ ಇಂದೇ ಹಣಕಾಸಿನ ಯೋಜನೆ ರೂಪಿಸಿದ್ರೆ ಇಳಿ ವಯಸ್ಸಿನಲ್ಲಿ ನೆಮ್ಮದಿಯ ದಿನಗಳನ್ನು ಕಳೆಯಬಹುದು.

ಹಣಕಾಸಿನ ಯೋಜನೆ ಹೇಗೆ?

1.ಯೋಜನೆಯಲ್ಲಿ ಪಾಲ್ಗೊಳ್ಳಿ :

ನಿಮ್ಮ ಹಣಕಾಸು ಯೋಜನೆಯನ್ನು ಇನ್ಯಾರೋ  ರೂಪಿಸುವ ಬದಲು ನೀವೇ ಆ ಪ್ರಕ್ರಿಯೆಯಲ್ಲಿ ಭಾಗಿಯಾಗೋದು ಉತ್ತಮ. ಒಳ್ಳೆಯ ಸ್ನೇಹಿತ ಅಥವಾ ವೃತ್ತಿಪರರ ಜೊತೆ ಕುಳಿತು ಯೋಜನೆ ರೂಪಿಸಿ. ಅವರ ತಜ್ಞ ಅಭಿಪ್ರಾಯಗಳನ್ನು ಕೂಡ ಪರಿಗಣಿಸಿ. ಆದ್ರೆ, ನೆನಪಿಡಿ ನಿಮ್ಮ ಗಳಿಕೆಯ ಅತ್ಯುತ್ತಮ ಫೈನಾನ್ಷಿಯಲ್ ಪ್ಲ್ಯಾನರ್ ನೀವೇ ಆಗಿರುತ್ತೀರಿ. ನಿಮ್ಮ ಅಭಿರುಚಿಗಳು ಏನು, ಯಾವುದಕ್ಕೆ ಎಷ್ಟು ಹಣ ವ್ಯಯಿಸಬೇಕು? ಎಷ್ಟು ಉಳಿತಾಯ ಮಾಡಬೇಕು? ಎಂಬುದನ್ನು ನಿಮಗಿಂತ ಚೆನ್ನಾಗಿ ಬೇರೆ ಯಾರೂ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ.

2.ಗುರಿ ಹಾಕಿಕೊಳ್ಳಿ:

ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿ ನೀವು ಕಾರ್ಯನಿರ್ವಹಿಸುವಾಗ ನಿಮಗೆ ನೀವೇ ಗುರಿಗಳನ್ನು ಹಾಕಿಕೊಳ್ಳಿ. ನೆನಪಿಡಿ, ಈ ಗುರಿಗಳು ವಾಸ್ತವಕ್ಕೆ ಹತ್ತಿರವಿರಲಿ. ಇನ್ನು ಈ ಗುರಿಗಳು ನಿಮ್ಮ ಜೀವನದ ವಿವಿಧ ಹಂತಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಆದರೆ, ಗುರಿಗಳ ಲೆಕ್ಕಾಚಾರದ ಸಂದರ್ಭದಲ್ಲಿ ನಿಮಗೆ ನೀವು ಪ್ರಾಮಾಣಿಕರಾಗಿರಿ. 

3.ಉಳಿತಾಯದ ಅಭ್ಯಾಸ ರೂಢಿಸಿಕೊಳ್ಳಿ:

ಅಪರೂಪಕ್ಕೊಮ್ಮೆ ಉಳಿತಾಯ ಮಾಡೋದು ಸುಲಭ. ಆದ್ರೆ, ಪ್ರತಿ ತಿಂಗಳು ನಿಗದಿತ ಮೊತ್ತದ ಹಣ ಉಳಿತಾಯ ಮಾಡಲು ಶಿಸ್ತು ಅಗತ್ಯ. ಪ್ರತಿ ತಿಂಗಳು ನಿಮ್ಮ ಜೇಬಿನಿಂದ ಹೆಚ್ಚಿನ ಹಣ ಖರ್ಚಾಗಲು ಅನೇಕ ಕಾರಣಗಳು ಹುಟ್ಟಿಕೊಳ್ಳಬಹುದು. ಆದ್ರೆ, ಉಳಿತಾಯದ ಹಣದೊಂದಿಗೆ ಎಂದಿಗೂ ರಾಜೀ ಮಾಡಿಕೊಳ್ಳಬೇಡಿ. 

4.ಸಾಲ ಮಾಡೋದನ್ನು ಆದಷ್ಟು ತಪ್ಪಿಸಿ:

ಅನಿವಾರ್ಯ ಸಂದರ್ಭಗಳಲ್ಲಿ ಸಾಲ ಮಾಡಲೇಬೇಕಾಗುತ್ತದೆ. ಆದರೆ, ಎಷ್ಟು ಸಾಧ್ಯವೋ ಅಷ್ಟು ಸಾಲ ಮಾಡದೆ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿ.

5.ಜೀವಶೈಲಿ ಬದಲಾವಣೆಗೆ ಅನುಗುಣವಾಗಿ ಯೋಜನೆ ಬದಲಾಯಿಸಿ:

ನಿಮ್ಮ ಜೀವನಶೈಲಿ ಬದಲಾದಂತೆ ಹಣಕಾಸು ಯೋಜನೆಗಳನ್ನು ಕೂಡ ಬದಲಾಯಿಸಿಕೊಳ್ಳಿ. ನಿಮಗೆ ನೀವು ಆಯ್ಕೆ ಮಾಡಿಕೊಂಡಿರುವ ಹಾದಿ ಸರಿಯಾಗಿಲ್ಲ, ಮಾರ್ಪಾಡು ಅಗತ್ಯವೆನಿಸಿದರೆ ಯಾವುದೇ ಮುಜುಗರವಿಲ್ಲದೆ ಬದಲಾಯಿಸಿಕೊಳ್ಳಿ.