ಏಕಾಗ್ರತೆ ಹೆಚ್ಚಿಸಿಕೊಳ್ಳಲು ಕೆಲವೊಂದು ಉಪಾಯಗಳನ್ನು ಪಾಲನೆ ಮಾಡಿ


ಏಕಾಗ್ರತೆ ಹೇಳಿದಷ್ಟು ಸುಲಭವಾಗಿ ಸಿಗುವುದಿಲ್ಲಾ. ಅದಕ್ಕೂ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ಸುತ್ತಲಿನ ಪರಿಸರ ನಮ್ಮನ್ನು ಚಂಚಲಗೊಳಿಸುತ್ತದೆ. ನಮ್ಮಲ್ಲಿರುವ ಅನೇಕ ಸಮಸ್ಯೆಗಳು ಒಂದು ವಿಷಯದ ಬಗ್ಗೆ ಮನಸ್ಸು ಕೇಂದ್ರೀಕರಿಸಲು ಬಿಡ್ತಿಲ್ಲ. ಇದ್ರಿಂದ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಏಕಾಗ್ರತೆಯಿಲ್ಲದ ಬದುಕಿನಿಂದ ಯಶಸ್ಸು ದೂರ ಓಡುತ್ತದೆ.

ನಾವು ಒಂದು ಕೆಲಸ ಮಾಡುವಾಗ ಸಂಪೂರ್ಣ ಗಮನ ಏಕಾಗ್ರತೆ ಮೇಲಿರಬೇಕು ಆಗ ಮಾತ್ರ ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಪಾಲನೆ ಮಾಡಬೇಕಾಗುತ್ತದೆ.

ನೀನು ಮಾಡಬಲ್ಲೆ:
ಯಾವುದೇ ಕೆಲಸವಿರಲಿ ಆರಂಭದಲ್ಲಿ ಅನುಮಾನ ಬರುವುದು ಸಹಜ. ಇದು ನನ್ನಿಂದ ಸಾಧ್ಯವಿಲ್ಲವೆಂದೇ ಅನೇಕರು ಕೆಲಸ ಶುರು ಮಾಡ್ತಾರೆ. ಹಾಗಾದಾಗ ಕೆಲಸದ ಮೇಲೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಮೊದಲೇ ಸೋಲುಪ್ಪಿಕೊಳ್ಳಬಾರದು. ಇದು ನನ್ನಿಂದ ಸಾಧ್ಯ. ನಾನು ಮಾಡಬಲ್ಲೆ ಎಂಬ ನಿಶ್ಚಲ ಮನಸ್ಸಿನೊಂದಿಗೆ ನೀವು ಕೆಲಸ ಶುರು ಮಾಡ್ಬೇಕು

ನಿಧಾನವೇ ಪ್ರಧಾನ:
ಯಾವುದೇ ಕೆಲಸವನ್ನಾದ್ರೂ ನಿಧಾನವಾಗಿ ಕಲಿಯಬೇಕು. ಸ್ಕೂಟರ್ ಕಲಿಯುತ್ತಿದ್ದೀರಿ ಎಂದಿಟ್ಟುಕೊಳ್ಳೋಣ, ಮೊದಲ ದಿನವೇ ನೀವು ಸ್ಕೂಟಿ ಚಲಾಯಿಸಲು ಹೋದ್ರೆ ಬೀಳೋದು ನಿಶ್ಚಿತ. ಆರಂಭದಲ್ಲಿ ಸ್ಟ್ಯಾಂಡ್ ಹಾಕೋದ್ರಿಂದ ಕಲಿಯಬೇಕಾಗುತ್ತದೆ. ಹಾಗೆಯೇ ಏಕಾಗ್ರತೆ ಕೂಡ. ಆರಂಭದಲ್ಲಿ ನೀವು ಕಚೇರಿ ಕೆಲಸ ಅಥವಾ ಓದಿನಲ್ಲಿ ಏಕಾಗ್ರತೆ ಕಂಡುಕೊಳ್ಳಲು ಸಾಧ್ಯವಿಲ್ಲ. ಮೊದಲು ದಿನನಿತ್ಯದ ಕೆಲಸದಲ್ಲಿ ಏಕಾಗ್ರತೆ ತರಲು ಪ್ರಯತ್ನಿಸಿ. ಅಡುಗೆ ಮಾಡ್ತಿದ್ದರೆ ನಿಮ್ಮ ಸಂಪೂರ್ಣ ಗಮನ ಅಡುಗೆ ಮೇಲಿಡಲು ಪ್ರಯತ್ನಿಸಿ.

ಏಕಾಗ್ರತೆ ಹಾಳುವ ಮಾಡುವ ಕೆಲಸವನ್ನು ಪಟ್ಟಿ ಮಾಡಿ:
ಕೆಲವೊಂದು ಕೆಲಸದಲ್ಲಿ ಎಷ್ಟು ಪ್ರಯತ್ನಿಸಿದ್ರೂ ಏಕಾಗ್ರತೆ ಕಷ್ಟವಾಗುತ್ತದೆ. ಅದಕ್ಕೆ ಮೊಬೈಲ್, ಸಾಮಾಜಿಕ ಜಾಲತಾಣದ ನೋಟಿಫಿಕೇಷನ್ ಅಥವಾ ಟಿವಿ ಕಾರ್ಯಕ್ರಮವಿರಬಹುದು. ನಿಮ್ಮ ಏಕಾಗ್ರತೆ ಹಾಳು ಮಾಡುವ ಅಂಶಗಳನ್ನು ಪಟ್ಟಿ ಮಾಡಿ ಮತ್ತು ಅದ್ರಿಂದ ದೂರವಿರಲು ಪ್ರಯತ್ನಿಸಿ.

ಧ್ಯಾನದಿಂದ
  ಏಕಾಗ್ರತೆ ಸಾಧ್ಯ
:
ಧ್ಯಾನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಪ್ರತಿ ದಿನ ಧ್ಯಾನ ಮಾಡುವುದು ಮುಖ್ಯ. ದಿನದಲ್ಲಿ 10 – 20 ನಿಮಿಷ ಧ್ಯಾನ ಮಾಡಿದ್ರೆ ಸಾಕಾಗುತ್ತದೆ. ಇದಕ್ಕೆ ಸಮಯ ನಿಗದಿಯಾಗಿಲ್ಲ. ನಿಮಗೆ ಬಿಡುವಾದಾಗ ನೀವು ಮಾಡ್ಬಹುದು. ರಾತ್ರಿ ಮಲಗುವ ಮೊದಲು ದೇವರ ನಾಮ ಹೇಳ್ತಾ ನೀವು ಧ್ಯಾನ ಮಾಡ್ಬಹುದು. ದೇವರ ನಾಮ ಹೇಳುವಾಗ ಸಂಪೂರ್ಣ ಗಮನ ದೇವರ ನಾಮದ ಮೇಲಿರಬೇಕು. ಇಲ್ಲವೆ ಯಾವುದೋ ಒಂದೇ ವಿಷ್ಯದ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸಲು ಧ್ಯಾನದಲ್ಲಿ ಪ್ರಯತ್ನಿಸಬೇಕು.

ಹೊಸ ಕೆಲಸಕ್ಕೆ ಆದ್ಯತೆ:
ಪ್ರತಿ ದಿನ ನಿಮ್ಮ ಕೆಲಸದ ಜೊತೆ ಹೊಸದನ್ನು ಮಾಡಲು ಪ್ರಯತ್ನಿಸಿ, ಹೊಸ ಪ್ರಯತ್ನ ನಿಮ್ಮ ಆಸಕ್ತಿ ಹೆಚ್ಚಿಸುತ್ತದೆ. ಆಸಕ್ತಿ ಹೆಚ್ಚಾದಂತೆ ಏಕಾಗ್ರತೆ ಹೆಚ್ಚುತ್ತದೆ.

ವ್ಯಾಯಾಮ
:
ವ್ಯಾಯಾಮ ಕೂಡ ಏಕಾಗ್ರತೆ ಸುಧಾರಿಸುತ್ತದೆ.  ವ್ಯಾಯಾಮ ದೇಹವನ್ನು ಆರೋಗ್ಯವಾಗಿಡುವ ಜೊತೆಗೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಮನಸ್ಸಿನ ದ್ವೇಗ ಕಡಿಮೆಯಾಗುತ್ತದೆ. ಇದ್ರಿಂದ ಏಕಾಗ್ರತೆ ತಾನಾಗಿಯೇ ನಿರ್ಮಾಣವಾಗುತ್ತದೆ.