ನಿಮಗೂ ಹೀಗೆ ಅನ್ನಿಸಿದ್ರೆ ಜಾಬ್ ಬದಲಿಸಿ

ಕೆಲಸ ಹುಡುಕೋದು ಸುಲಭದ ಮಾತಲ್ಲಾಈಗಾಗಲೇ ಉದ್ಯೋಗದಲ್ಲಿದ್ದೀರಿ ಎಂದಾಗ ಅದಕ್ಕಿಂತ ಹೆಚ್ಚಿನ ಸಂಬಳದ ಉದ್ಯೋಗ ಹುಡುಕೋದು ಸವಾಲಿನ ಕೆಲಸ. ಆಗ ಜನರು ಇರೋದ್ರಲ್ಲೇ ಅಡ್ಜೆಸ್ಟ್ ಮಾಡಿಕೊಳ್ಳಲು ಪ್ರಯತ್ನಿಸ್ತಾರೆಆದ್ರೆ ಅನೇಕ ಬಾರಿ ಇದು ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತೆ.

ನೌಕರಿ ಮಾಡೋದು ಬಹುತೇಕರಿಗೆ ಅನಿವಾರ್ಯ. ಕೆಲವರು ಒಂದೇ ಕೆಲಸದಲ್ಲಿ ಅಥವಾ ಒಂದೇ ಕಚೇರಿಯಲ್ಲಿ ತುಂಬಾ ವರ್ಷಗಳಿಂದ ಕೆಲಸ ಮಾಡ್ತಿರುತ್ತಾರೆ. ಸಹೋದ್ಯೋಗಿಗಳು ರಿಟೈರ್ಡ್ ಆಗೋವರೆಗೂ ಇದೆ ಆಫೀಸ್ ಫಿಕ್ಸಾ ಎಂದು ಕೇಳ್ತಿರುತ್ತಾರೆ.

ನಿಮ್ಮ ಮನಸ್ಸಿನಲ್ಲೂ ಅನೇಕ ಬಾರಿ ವಿಚಾರ ಬಂದು ಹೋಗಿರುತ್ತದೆ. ಆದ್ರೆ ಕೆಲ ದಿನಗಳಿಂದ ಯಾಕೋ ಕೆಲಸ ಬದಲಿಸಬೇಕೆಂಬ ಬಯಕೆ ಅನೇಕ ಬಾರಿ ಬಂದು ಹೋಗ್ತಿರುತ್ತದೆ. ಆದ್ರೆ ಕೆಲಸ ಬದಲಿಸಲು ಏನೋ ಒಂದು ಭಯ. ಕೆಲಸ ಸಿಗಬಹುದಾ ಎಂಬ ಒಂದು ಪ್ರಶ್ನೆ ನಿಮ್ಮನ್ನು ಕಾಡಿದ್ರೆ ಮತ್ತೊಂದೆಡೆ ಇಂಥ ಕಂಫರ್ಟ್ ಜಾಗ ಮತ್ತೆ ಸಿಗದಿರಬಹುದು ಎಂಬ ಆತಂಕ.

ಕಚೇರಿ ಹಾಗೂ ಕೆಲಸದಲ್ಲಿ ಎಷ್ಟು ಆರಾಮವಾಗಿ ಇರ್ತೀವಿ ಅಂದ್ರೆ ಬೇರೆ ಕೆಲಸ ಹುಡುಕುವ ಸಹವಾಸ ಬೇಡ ಎನ್ನಿಸುತ್ತಿರುತ್ತದೆ. ಮನಸ್ಸಿನಲ್ಲಿ ಎಷ್ಟೇ ಆತಂಕವಿರಲಿ, ಕೆಲ ಸಂಕೇತಗಳು ನಿಮಗೆ ಕಾಣಿಸಿದ್ರೆ ನೀವು ಕೆಲಸ ಬಿಡುವುದು ಒಳ್ಳೆಯದು. ಇಂದು, ನಿಮ್ಮ ಕೆಲಸ ಬದಲಿಸಲು ಇದು ಸರಿಯಾದ ಸಮಯ ಎಂಬುದನ್ನು ತೋರಿಸುವ ಸಂಕೇತ ಯಾವುದು ಎಂಬುದನ್ನು ಹೇಳ್ತೇವೆ.  

ಕೆಲಸ ಬದಲಿಸುವ ಸಂಕೇತವಿದು:

1. ಕೆಲಸದಲ್ಲಿ ಖುಷಿಯ ಕೊರತೆ:
ನೌಕರಿ ಯಲ್ಲಿ ಸಂತುಷ್ಟಿ ಹೊಂದುವುದು ಹಾಗೂ ಕೆಲಸ ಮಾಡುವ ಖುಷಿ ಎರಡೂ ಬೇರೆ ಬೇರೆ. ಕೆಲಸದಲ್ಲಿ ಖುಷಿ ಕೂಡ ಮುಖ್ಯವಾಗುತ್ತದೆ. ನೀವು ಬರೀ ಕೆಲಸದಲ್ಲಿ ಸಂತುಷ್ಟಿ ಹೊಂದಿದ್ದರೆ ನೀವು ಕೆಲಸ ಬದಲಿಸುವುದು ಒಳ್ಳೆಯದು. ಬೆಳಿಗ್ಗೆ ಏಳ್ತಿದ್ದಂತೆ ನಿಮ್ಮನ್ನು ಹುರಿದುಂಬಿಸುವ, ಕೆಲಸ ಮಾಡ್ಬೇಕೆಂಬ ಆಸಕ್ತಿ, ಖುಷಿ ಹೆಚ್ಚಿಸುವ ಕೆಲಸವನ್ನು ನೀವು ಹುಡುಕಿಕೊಳ್ಳಬೇಕು. ಕೆಲಸಕ್ಕೆ ಹೋಗ್ಬೇಕಲ್ಲ ಎಂದು ಹೋಗಿ, ಮನಸ್ಸಿಲ್ಲದ ಮನಸ್ಸಿನಲ್ಲಿ ಕೆಲಸ ಮಾಡಿದ್ರೆ ಅದು ನಿಮಗೆ ಒಳ್ಳೆಯದಲ್ಲ.

2. ಕಚೇರಿ ಕೆಟ್ಟ ವಾತಾವರಣ:
ವೃತ್ತಿ ಜೀವನದ ಯಶಸ್ಸಿಗೆ ನಾವು ಮಾಡುವ ಕೆಲಸದ ಜೊತೆ ಕಚೇರಿ ವಾತಾವರಣವೂ ಮುಖ್ಯವಾಗುತ್ತದೆ. ಜೀವನದ ಅನೇಕ ಸಮಯವನ್ನು ನಾವು ಕಚೇರಿಯಲ್ಲಿ ಕಳೆಯುತ್ತೇವೆ. ಒಳ್ಳೆಯ ಸಹೋದ್ಯೋಗಿ, ಒಳ್ಳೆಯ ವಾತಾವರಣ ಕಚೇರಿಯಲ್ಲಿದ್ದರೆ ಕೆಲಸ ಮಾಡಲು ಉತ್ಸಾಹ ಬರುತ್ತದೆ. ಪರಸ್ಪರ ಪ್ರೋತ್ಸಾಹ ಸಿಗುತ್ತದೆ. ಅದು ನಿಮ್ಮ ಏಳ್ಗೆಗೆ ಸಹಕಾರಿಯಾಗುತ್ತದೆ. ಅದೇ ಕೆಟ್ಟ ವಾತಾವರಣದಲ್ಲಿ ಕೆಲಸ ಮಾಡಲು ಮನಸ್ಸು ಇಷ್ಟಪಡುವುದಿಲ್ಲ. ಇದ್ರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕಚೇರಿ ಕಲ್ಚರ್ ನಿಮ್ಮ ಮನಸ್ಸಿನ ಆರೋಗ್ಯದ ಜೊತೆ  ದೈಹಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

3. ಮಿತಿ ಮೀರಿದ ಕೆಲಸ:
ಸ್ಟೇಬಲ್ ಜಾಬ್ ಅಂದ್ರೆ ನೀವು ನಿಗದಿಗಿಂತ ಹೆಚ್ಚು ಸಮಯ ಕೆಲಸ ಮಾಡುವುದು ಎಂದರ್ಥವಲ್ಲ. ನಿಗದಿ ಪಡಿಸಿದ ಸಮಯಕ್ಕಿಂತ ಹೆಚ್ಚು ಸಮಯ ಕೆಲಸ ಮಾಡುವಂತೆ ಒಂದರೆಡು ಬಾರಿ ಹೇಳಿದ್ರೆ ಓಕೆ. ಅದೇ ನಿಯಮವಾದ್ರೆ ಅಥವಾ ರಜಾ ದಿನಗಳಲ್ಲೂ ನಿಮ್ಮನ್ನು ಕೆಲಸಕ್ಕೆ ಕರೆಯುತ್ತಿದ್ದರೆ, ನೀವು ಕೆಲಸ ಬದಲಿಸುವುದು ಒಳ್ಳೆಯದು. ಯಾಕೆಂದ್ರೆ ನಿಮ್ಮ ಕುಟುಂಬಕ್ಕೆ ನೀವು ಸಮಯ ನೀಡಲು ಸಾಧ್ಯವಾಗುವುದಿಲ್ಲ. ಇದ್ರಿಂದ ಮನೆಯ ವಾತಾವರಣ ಹದಗೆಡುತ್ತದೆ.

ಕಚೇರಿಯಲ್ಲಿ ನಿರಂತರ ಕೆಲಸ ಮಾಡಿ ದಣಿದಿರುತ್ತೀರಿ. ಕೆಲಸ ಮಾಡಲು ಆಸಕ್ತಿ ಕಡಿಮೆಯಾಗುತ್ತದೆ. ಕೆಲಸ ಮಾಡುವ ಉತ್ಸಾಹ ಇರುವುದಿಲ್ಲ. ನಿಮ್ಮ ವೈಯಕ್ತಿಕ ಸಂತೋಷ ಕೆಲಸಕ್ಕೆ ಸಮಯ ಸಿಗದೆ ಹೋದಾಗ ಮನಸ್ಸಿಗೆ ಹಿಂಸೆಯಾಗುತ್ತದೆ. ಇದು ದೈಹಿಕ ಹಾಗೂ ಮಾನಸಿಕ ಎರಡರ ಮೇಲೂ ಪರಿಣಾಮ ಬೀರುತ್ತದೆ. ಇಂಥ ಸಂದರ್ಭದಲ್ಲಿ ಕೆಲಸ ಎಷ್ಟೇ ಸುರಕ್ಷಿತವಾಗಿದ್ದರೂ ನೀವು ಕೆಲಸ ಮುಂದುವರೆಸುವ ಬದಲು ಬದಲಿಸುವುದು ಒಳ್ಳೆಯದು.