ಸಂಬಂಧದಲ್ಲಿ ಸಣ್ಣಗಿನ ಮನಸ್ಥಿತಿ ಸೃಷ್ಟಿಯಾದರೆ ಸಂಗಾತಿಗಳ ನಡುವೆ ದೂರ ಹೆಚ್ಚಾಗುತ್ತದೆ. ಎಂದೆಂದಿಗೂ ಮತ್ತೆ ಸೇರಬಾರದು ಎನ್ನುವ ಆಲೋಚನೆ ಬರುತ್ತದೆ. ಹೀಗಾಗಿ, ಆರಂಭದಲ್ಲೇ ಎಚ್ಚರಿಕೆ ವಹಿಸಬೇಕು. ಸಂಗಾತಿಯ ಭಾವನೆಗಳನ್ನು ಅರಿತು ಅವರೊಂದಿಗೆ ಮಾತುಕತೆ ನಡೆಸಬೇಕು.
ಸಂಬಂಧಗಳು ಯಾವಾಗಲೂ ಒಂದೇ
ರೀತಿ ಇರುವುದಿಲ್ಲ. ಅತಿಯಾಗಿ ಪ್ರೀತಿಸಿದ್ದ ವ್ಯಕ್ತಿಯೊಂದಿಗೇ ಭಿನ್ನಾಭಿಪ್ರಾಯ ಮೂಡುವುದು ವಿಚಿತ್ರವೆನಿಸಿದರೂ ಬದುಕಿನ ಸತ್ಯವೆನ್ನುವುದು ಅನುಭವಕ್ಕೆ ಬರುತ್ತಿರುತ್ತದೆ. ಅವರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದುಕೊಂಡಿದ್ದ ಮನಸ್ಸು, ಕ್ರಮೇಣ ಅವರು ದೂರವಿದ್ದರೆ ಸಾಕು ಎಂದು ಬಯಸುವಂತೆ ಆಗಿಬಿಡುತ್ತದೆ. ಹೀಗಾಗಿ, ಸಂಬಂಧವನ್ನು ನಾಜೂಕಾಗಿ ನಿಭಾಯಿಸಬೇಕಾಗುತ್ತದೆ.
ಮನಸ್ಸಿನಲ್ಲಿ ಪ್ರತ್ಯೇಕತೆ ಮೂಡಿಸಿಕೊಂಡು ತಮ್ಮಷ್ಟಕ್ಕೆ ತಾವಿರಲು ಆರಂಭಿಸುತ್ತಾರೆ. ಇದನ್ನು ನಿಭಾಯಿಸುವುದು ಹೇಗೆ? ಈ ರೀತಿಯ ಪ್ರತಿಕ್ರಿಯೆ ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೇ ಇರಬೇಕು ಎಂದಿಲ್ಲ. ನಮಗೆ ತಿಳಿಯದೇ ಅಂಥದ್ದೊಂದು ಶೀತಲತೆ ಅಥವಾ ಕಲ್ಲಿನಂತಹ ಮನಸ್ಥಿತಿ ಸೃಷ್ಟಿಯಾಗಬಹುದು. ಆದರೆ, ಸಂಬಂಧದಲ್ಲಿ ಮತ್ತೆ ಚಿಗುರು ಮೂಡಲು ನಾವು ಉದ್ದೇಶಪೂರ್ವಕವಾಗಿ ಪ್ರಯತ್ನ ಪಡಬೇಕು. ಇಲ್ಲವಾದಲ್ಲಿ ಸಂಬಂಧ ಖಂಡಿತವಾಗಿ ಹಾಳಗುತ್ತದೆ.
ಮನಸ್ಸಿಗೆ ತೀವ್ರವಾಗಿ ನೋವಾದಾಗ ಆಘಾತವಾದಾಗ ಹೀಗಾಗುವುದು ಸಹಜ:
ನಮ್ಮ ಮನಸ್ಸನ್ನು ನಾವೇ ಸಂತೈಸಿಕೊಳ್ಳಬೇಕು ಸಂಗಾತಿ ಯೊಂದಿಗೆ ಭಾವನಾತ್ಮಕ ಆಪ್ತತೆ ಉಂಟಾಗದಂತೆ, ಅಂತಹ ಅನುಭವ ಆಗದಂತೆ ನಮ್ಮನ್ನು ನಾವೇ ತಡೆದುಕೊಳ್ಳಲು ಯತ್ನಿಸುವ ಅಗತ್ಯವಿಲ್ಲ. ಒಂದೊಮ್ಮೆ ನಿಮ್ಮ ಸಂಗಾತಿಗೆ ಇಂಥದ್ದೊಂದು ಅಭ್ಯಾಸವಿದ್ದರೆ ಅವರೊಂದಿಗೆ ನೀವಾಗಿಯೇ ಮಾತುಕತೆ ಆರಂಭಿಸಬೇಕಾಗುತ್ತದೆ. ಹಾಗೆಯೇ ಬಿಡುವುದು ಸರಿಯಲ್ಲ. ಅಂತಹ ಸಮಯದಲ್ಲಿ ಏನು ಮಾಡಬೇಕೆಂದು ಅರಿತುಕೊಳ್ಳಿ.
ಸಂಗಾತಿಯ ಭಾವನೆಗಳನ್ನು ಒಪ್ಪಿಕೊಳ್ಳಿ:
ನಿಮ್ಮ ಸಂಗಾತಿ ನಿಮ್ಮಿಂದ ಭಾವನಾತ್ಮಕವಾಗಿ ದೂರವಾಗುವಂತೆ, ನಿಮ್ಮಿಬ್ಬರ ನಡುವೆ ಗೋಡೆ ಎದ್ದಿರುವಂತೆ ವರ್ತಿಸುತ್ತಿದ್ದರೆ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಅವರ ಭಾವನೆಗಳನ್ನು ಒಪ್ಪಿಕೊಳ್ಳಿ. “ಅವರಿಗೆ ಸೊಕ್ಕು, ಅದಕ್ಕಾಗಿ ಹಾಗೆ ಮಾಡುತ್ತಾರೆ, ಸೊಕ್ಕು ಕಡಿಮೆಯಾದರೆ ಸರಿಹೋಗುತ್ತಾರೆ’
ಎನ್ನುವ ಧೋರಣೆ ಬೇಡ. ಅದು ಖಂಡಿತವಾಗಿಯೂ ಸೊಕ್ಕಿನ ಮನಸ್ಥಿತಿಯಲ್ಲ. ಅದು ಕುಗ್ಗಿರುವ ಮನಸ್ಸು ಏನೂ ಬೇಡ, ಯಾರೂ ಬೇಡವೆಂದು ತಳ್ಳುವ ಸ್ಥಿತಿ. ಹೀಗಾಗಿ, ನಿಮ್ಮಿಂದ ನೋವಾಗಿದ್ದರೆ ಅರಿತುಕೊಳ್ಳಿ.
ಹೊಂದಾಣಿಕೆಗೆ ನೀವೇ ಮುಂದಾಗಬೇಕೇ?:
ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮೊಂದಿಗೆ ಮಾತನಾಡುವುದನ್ನು ಅವಾಯ್ಡ್ ಮಾಡುತ್ತಿದ್ದರೆ ಸದಾಕಾಲ ನೀವೇ ಮುಂದಾಗಬೇಕೆಂದಿಲ್ಲ. ಅವರು
ಸಹ ಮತಾನಾಡಲು ಪ್ರಯತ್ನ ಪಡಬೇಕು. ನಿಮ್ಮ ನಡುವೆ ನಡೆದಿರುವ ಸಂಘರ್ಷದ ಬಗ್ಗೆ ಮಾತುಕತೆ ನಡೆಸಬೇಕು ಮತ್ತು ಅದಕ್ಕೆ ಯಾರಾದರೂ ಒಬ್ಬರು ಮುಂದಾಗಲೇ ಬೇಕು. ಆದರೆ, ಪ್ರತಿಬಾರಿಯೂ ನೀವೇ ಅದನ್ನು ಮಾಡುತ್ತಿರುವುದರಿಂದ ಅವರಿಗೆ ಪರಿಸ್ಥಿತಿ ಅರ್ಥವಾಗುವುದಾದರೂ ಹೇಗೆ? ನಿಮಗೆಷ್ಟೇ ಬೇಸರವಾಗುತ್ತಿದ್ದರೂ ಅವರಿಂದ ದೂರವೇ ಇದ್ದುಬಿಡಿ.
ಏಕಾಏಕಿ ಸಂಗಾತಿ ಬದಲಿಸಲು ಯತ್ನಿಸಬೇಡಿ:
ಸಂಗಾತಿ ಕಲ್ಲುಮನಸ್ಸನ್ನು ಹೊಂದಿದರೂ ಸಂಗಾತಿಯನ್ನು ಬದಲಿಸುವುದು ನಿಮ್ಮ ಉದ್ದೇಶವಾಗದಿರಲಿ. ಬದಲಿಗೆ, ವರ್ತನೆಯ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಿ.
ಆಪ್ತಸಮಾಲೋಚಕರಲ್ಲಿ ಚರ್ಚಿಸಿ:
ಸಂಬಂಧದಲ್ಲಿ ಒಮ್ಮತ ಮೂಡದೇ ಇರುವಾಗ, ಪರಸ್ಪರ ದೂರ ಹೆಚ್ಚುತ್ತಿರುವಾಗ ಆಪ್ತಸಮಾಲೋಚಕರೊಂದಿಗೆ ಸಮಾಲೋಚನೆ ನಡೆಸುವುದು ಅತ್ಯುತ್ತಮ. ಆಗ ಮಾಡಿಕೊಳ್ಳಬೇಕಾದ ಸುಧಾರಣೆಯ ಬಗ್ಗೆ ಅರಿವಾಗುತ್ತದೆ ಅಥವಾ ಪರಸ್ಪರ ದೂರವಾಗುವ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.