ಇವಾಗಿನ
ಮಕ್ಕಳಿಗೆ ಎಷ್ಟೊತ್ತಿಗೂ ಕೈಯಲ್ಲಿ ಏನಿಲ್ಲಾ
ಅಂದ್ರು ಮೊಬೈಲ್ ಅಂತೂ ಇದ್ದೇ ಇರುತ್ತೆ. ಪುಟ್ಟ ಮಕ್ಕಳಿಗಂತೂ ಊಟ ಮಾಡಬೇಕಾದರೆ ಕೈಯಲ್ಲಿ ಮೊಬೈಲ್ ಇರ್ಲೇಬೇಕು. ಸ್ಪಲ್ಪ ದೊಡ್ಡ ಮಕ್ಕಳಂತೂ ಮೂರು ಹೊತ್ತು ಮೊಬೈಲ್ನಲ್ಲಿ ಗೇಮ್ ಆಡ್ತಾ ಇರ್ತಾರೆ. ಹಾಗಿದ್ರೆ ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿಯನ್ನು ಹೆಚ್ಚಿಸುವಂತೆ ಮಾಡುವುದು ಹೇಗೆ?
ಇವಾಗಿನ ಕಾಲದ ಮಕ್ಕಳಂತು ಯಾವಾಗ್ಲೂ ಮೊಬೈಲ್‍ಗಾಗಿ ಹಠ ಮಾಡುತ್ತಲೇ ಇರುತ್ತಾರೆ. ತೊದಲು ಮಾತನಾಡುವ ಮಕ್ಕಳು ಸಹ ಮೊಬೈಲ್ನಲ್ಲಿ ವೀಡಿಯೋ ಹಾಕಿಕೊಟ್ರೇನೆ ಊಟ ಮಾಡೋದು. ಟಿವಿ, ಮೊಬೈಲ್ ಬಂದಾಗಿನಿಂದ ಮಕ್ಕಳು ಅದಕ್ಕೇ ಅಡಿಕ್ಟ್ ಆಗಿ ಬಿಟ್ಟಿದ್ದಾರೆ. ಅದರಲ್ಲೂ ಕೊರೋನಾದಿಂದ ಆನ್ಲೈನ್ ಕ್ಲಾಸ್ ಶುರುವಾದ ಮೇಲೆ ವೈದ್ಯ ಹೇಳಿದ್ದೂ ಹಾಲು, ರೋಗಿ ಬಯಸಿದ್ದೂ ಹಾಲು ಎಂಬಂತಾಗಿದೆ ಮಕ್ಕಳ ಕಥೆ. ಕ್ಲಾಸ್ ನೆಪದಲ್ಲಿ ಯಾವಾಗ್ಲೂ ಮೊಬೈಲ್ ಕೈಗೆ ತೆಗೆದುಕೊಂಡ್ರೆ ಮತ್ತೆ ಪುಸ್ತಕದ ಬಗ್ಗೆ
ಯೋಜನೆಯೇ ಇಲ್ಲ. ನಮ್ಮ ಮನೆಯ ಗೋಳು ಕೂಡಾ ಇದೇರಿ ಅಂತಿದ್ದೀರಾ? ಹಾಗಿದ್ರೆ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುವುದು ಹೇಗೆ ನಾವ್ ಹೇಳ್ತೀವಿ.
ಓದುವಿಕೆಯನ್ನು ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಿ:
ಪ್ರತಿದಿನ ಓದಲು ಸ್ಪಲ್ಪ ಸಮಯವನ್ನು ಮೀಸಲಿಡಿ. ಹಗಲಿನಲ್ಲಿ ಸ್ವಲ್ಪ ಸಮಯ ಅಥವಾ ಮಲಗುವ ಮುನ್ನ ಮಕ್ಕಳೊಂದಿಗೆ ಜತೆಯಲ್ಲಿ ಕುಳಿತು ಪುಸ್ತಕಗಳನ್ನು ಓದಿ. ಮನೆಯಲ್ಲಿ ಇತರ ಮಕ್ಕಳಿದ್ದರೆ ಅವನು ಅಥವಾ ಅವಳು ಓದುತ್ತಿರುವ ಪುಸ್ತಕದ ಕುರಿತು ನೀವು ಚರ್ಚಿಸಬಹುದು. ಪುಸ್ತಕದ ಕುರಿತಾದ ಪ್ರಶ್ನೆಗಳನ್ನು ಕೇಳುವುದು ಮಕ್ಕಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತದೆ, ಹೀಗಾಗಿ ಅವರು ಹೆಚ್ಚು ಓದಲು ಸಾಧ್ಯವಾಗುತ್ತದೆ. ಇನ್ನೂ ಓದಲು ಕಲಿಯುತ್ತಿರುವ ಮಕ್ಕಳೊಂದಿಗೆ, ಅವರೊಂದಿಗೆ ಕುಳಿತು ಕಥೆಪುಸ್ತಕವನ್ನು ಗಟ್ಟಿಯಾಗಿ ಓದಿ. ಇಂಥಾ ಚಟುವಟಿಕೆ ಮಕ್ಕಳಿಗೆ ಇಷ್ಟವಾಗುತ್ತದೆ.
ಮಕ್ಕಳನ್ನು ಕಥಾನಾಯಕರನ್ನಾಗಿಸಿ:
ಕಥೆಯನ್ನು ವಿವರಿಸಿ ಹೇಳುವಾಗ ಮಕ್ಕಳನ್ನು ಕಥೆಯ ಹೀರೋ ಎಂದು ಉಲ್ಲೇಖಿಸಿ. ಈ ರೀತಿತ ಕಥೆಗಳು ನಿಮ್ಮ ಮಗುವಿನ ಕಲ್ಪನೆಯನ್ನು ಪ್ರಚೋದಿಸುತ್ತದೆ ಮತ್ತು ಕುತೂಹಲವನ್ನು ಉತ್ತೇಜಿಸುತ್ತದೆ. ದೃಶ್ಯ ಚಿತ್ರಣಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ಓದುವುದು ಮಗುವಿಗೆ ಪಠ್ಯವನ್ನು ದೃಶ್ಯದೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ.
ಓದುವ ತಂತ್ರಗಳು:
ನಿಮ್ಮ ಮಗು ಏಕೆ ಓದಲು ಇಷ್ಟಪಡುವುದಿಲ್ಲ ಎಂಬುದನ್ನು ಗಮನಿಸಿ. ಇದು ಅವಳಿಗೆ ಕಠಿಣವೆಂದು ತೋರುವ ಪದಗಳಿಂದಾಗಿರಬಹುದೇ ಅಥವಾ ಅವಳು ನಿಮಗೆ ಪ್ರಶ್ನೆಯನ್ನು ಕೇಳಿದಾಗ ನೀವು ಉತ್ತರಿಸಲು ಅಲಭ್ಯರಾಗಿದ್ದೀರಾ? ಎಂಬುದನ್ನು ತಿಳಿದುಕೊಳ್ಳಿ.ನಿಮ್ಮ ಮಗುವಿನ ಆಸಕ್ತಿಯನ್ನು ಕೆರಳಿಸಲು ಪುಸ್ತಕ ಸರಣಿಗಳು ಉತ್ತಮ ಮಾರ್ಗವಾಗಿದೆ. ಈ ರೀತಿಯ ಪುಸ್ತಕಗಳ ಓದುವಕೆಯಿಂದ ಮುಂದೆ ಏನಾಗುತ್ತದೆ ಎಂಬ ಕುತೂಹಲ ಮಕ್ಕಳಲ್ಲಿ ಮೂಡುತ್ತದೆ.
ಒಂದೇ ಕಥೆಯನ್ನು ಹಲವು ಬಾರಿ ಓದುವುದು:
ನಿಮ್ಮ ಮಗು ಅದೇ ಕಥೆಯನ್ನು ಹಲವು ಬಾರಿ ಪುನಃ ಓದಲು ಕೇಳಿದರೆ, ನಿರಾಕರಿಸಬೇಡಿ. ಈ ಕ್ರಿಯೆಯು ಪದಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಅವರ ಶಬ್ದಕೋಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಲವು ಬಾರಿ ಓದಿ ಕೇಳಿ ಮತ್ತೆ ಮಕ್ಕಳಲ್ಲೂ ಅದನ್ನೇ ಪುನರಾವರ್ತಿಸಲು ಹೇಳಿ.
ಹತ್ತಿರದ ಲೈಬ್ರರಿಗೆ ಮಕ್ಕಳನ್ನು ಪರಿಚಯಿಸಿ:
ರಜೆಯಲ್ಲಿ ಮಕ್ಕಳನ್ನು ಪಾರ್ಕ್, ಮಾಲ್ ಎಂದು ಸುತ್ತಾಡಲು ಕರೆದೊಯ್ಯುವ ಬದಲುಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ. ಪುಸ್ತಕಗಳನ್ನು ಆಯ್ಕೆ ಮಾಡಲು ಹೇಳಿ. ಶೈಕ್ಷಣಿಕ ಅಥವಾ ಶೈಕ್ಷಣಿಕೇತರ ಯಾವುದೇ ರೀತಿಯ ಓದುವಿಕೆ ಒಳ್ಳೆಯದು.
ಪುಸ್ತಕ ಕ್ಲಬ್ಗಳನ್ನು ರಚಿಸಲು ಪ್ರೋತ್ಸಾಹಿಸಿ:
ನಿಮ್ಮ ಮಕ್ಕಳನ್ನು ಅವರ ಸ್ನೇಹಿತರೊಂದಿಗೆ ಪುಸ್ತಕ ಕ್ಲಬ್ಗಳನ್ನು ರಚಿಸಲು ಪ್ರೋತ್ಸಾಹಿಸಿ ಮತ್ತು ಅವರು ಇತ್ತೀಚೆಗೆ ಓದಿದ ಪುಸ್ತಕವನ್ನು ಚರ್ಚಿಸಿ. ಮಕ್ಕಳು ಅಧ್ಯಯನ ಮಾಡುವಾಗ ವಿವಿಧ ಹಂತಗಳನ್ನು ಅನುಸರಿಸುತ್ತಾರೆ. ಕೆಲವೊಬ್ಬರು ಒಂದೇ ಸಿಟ್ಟಿಂಗ್ನಲ್ಲಿ ಪುಸ್ತಕ ಓದಿ ಮುಗಿಸಿರುತ್ತಾರೆ. ಇನ್ನು ಕೆಲವೊಬ್ಬರು ಕೆಲವು ದಿನಗಳ ಕಾಲ ಪುಸ್ತಕ ಓದುತ್ತಲೇ ಇರುತ್ತಾರೆ. ಯಾವ ರೀತಿ ಓದಿದರೂ ಸರಿ ಮಕ್ಕಳನ್ನು ದೂರಲು ಹೋಗಬೇಡಿ. ಪುಸ್ತಕಗಳನ್ನು ಓದಲು ತಾಳ್ಮೆ ಮತ್ತು ಸ್ಥಿರತೆ ಮುಖ್ಯ. ಅವರನ್ನು ಓದುವಂತೆ ಉತ್ತೇಜಿಸುವ ಮಾರ್ಗಗಳನ್ನು ನಾವು ಪ್ರಯತ್ನಿಸುತ್ತಲೇ ಇರಬೇಕು. ಓದುವಿಕೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ.
ನೆನಪಿಡಿ, ನಿಮ್ಮ ಮಗುವು ಯಾವುದೇ ಕೌಶಲ್ಯದೊಂದಿಗೆ ಹೋರಾಡುತ್ತಿದ್ದರೆ ಅವರನ್ನು ಬೆಂಬಲಿಸಿ, ಪ್ರೋತ್ಸಾಹಿಸಿ. ಇಲ್ಲದಿದ್ದರೆ, ಅದು ಅವರಿಗೆ ಕೀಳರಿಮೆಯನ್ನು ಉಂಟುಮಾಡಬಹುದು. ಹೊಸ ಪದವನ್ನು ಕಲಿಯುವುದು ಅಥವಾ ಸಂಪೂರ್ಣ ಸಾಲನ್ನು ತಾವಾಗಿಯೇ ಓದುವುದು ಮುಂತಾದ ಅವರ ಸಣ್ಣ ಗೆಲುವುಗಳನ್ನು ಅವರೊಂದಿಗಿದ್ದು ಖುಷಿಪಡಿ.