ಸ್ತನ ಕ್ಯಾನ್ಸರ್ ನಿರ್ಲಕ್ಷಿಸಿದರೆ ಆಪತ್ತು

ಸ್ತನ ಕ್ಯಾನ್ಸರ್ ಪ್ರಪಂಚದಾದ್ಯಂತ ಮಹಿಳೆಯರನ್ನು ಕಾಡುವ ದೊಡ್ಡ ಕಾಯಿಲೆಯಾಗಿದೆ. ಮಹಿಳೆಯರು ಮತ್ತು ಪುರುಷರು ಶೇ.18.2ರಷ್ಟು ಜನರು ಸ್ತನ ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ.

ಸ್ತನ ಕ್ಯಾನ್ಸರ್‌ನ ಲಕ್ಷಣಗಳು:
ಸಾಮಾನ್ಯವಾಗಿ ಮಹಿಳೆಯರ ಸ್ತನದ ಅಂಗಾಂಶ ದಪ್ಪವಾಗುತ್ತದೆ ಅಥವಾ ಗಡ್ಡೆ ಕಾಣಿಸಿಕೊಳ್ಳುತ್ತದೆ. ಆದರೆ ಹೆಚ್ಚಿನ ಗಡ್ಡೆಗಳೆಲ್ಲ ಕ್ಯಾನ್ಸರ್ ಗಡ್ಡೆಗಳಾಗಿರುವುದಿಲ್ಲ. ಆದರೂ ಮಹಿಳೆಯರು ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು.

ಈ ಕೆಲವು ಲಕ್ಷಣಗಳು ಕಂಡು ಬಂದರೆ ವೈದ್ಯರ ಬಳಿ ಹೇಳಬೇಕು. ಸ್ತನದಲ್ಲಿ ಗಡ್ಡೆ, ಕಂಕುಳ ಮತ್ತು ಸ್ತನದಲ್ಲಿ ನೋವು- ಇದು ಋತುಚಕ್ರದ ನೋವು ಆಗಿರದು, ಸ್ತನದ ತೊಟ್ಟಿನ ಸುತ್ತ ಗುಳ್ಳೆಗಳು, ಕಂಕುಳಲ್ಲಿ ಊತ (ಗಡ್ಡೆ), ಸ್ತನದ ಸುತ್ತದ ಅಂಗಾಂಶ ಊದಿಕೊಳ್ಳುವುದು, ಸ್ತನದ ತೊಟ್ಟಿನಿಂದ ದ್ರವ ಸೋರಿಕೆಯಾಗುವುದು- ಕೆಲವು ಬಾರಿ ರಕ್ತ ಮಿಶ್ರಿತವಾಗಿರುವುದು, ಸ್ತನದ ತೊಟ್ಟಿನಲ್ಲಿ ವ್ಯತ್ಯಾಸ-ಇದು ಮುದುರಿಕೊಂಡು ಅಥವಾ ಒಳಕ್ಕೆ ಹೋಗಿರುವುದು, ಸ್ತನದ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ, ಸ್ತನದ ತೊಟ್ಟು ಅಥವಾ ಸ್ತನದ ಚರ್ಮವು ಸಿಪ್ಪೆಯಂತೆ ಏಳುವುದು.

 ಸ್ತನ ಕ್ಯಾನ್ಸರ್‌ಗೆ ನಿರ್ದಿಷ್ಟ ಕಾರಣವೇನು?

ವಯಸ್ಸಾಗುವುದು:
ವಯಸ್ಸಾಗುತ್ತಿದ್ದಂತೆಯೇ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಹೆಚ್ಚು. 50 ವರ್ಷ ಮೇಲ್ಪಟ್ಟ ಶೆ.80 ರಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.

ಅನುವಂಶಿಕತೆ:
ಮಹಿಳೆಯರ ಅತಿ ಹತ್ತಿರದ ಸಂಬಂಧಿಗಳಲ್ಲಿ ಸ್ತನ ಅಥವಾ ಅಂಡಾಶಯದ ಕ್ಯಾನ್ಸರ್ ಇದ್ದಲ್ಲಿ ಇವರಿಗೂ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಬಿಆರ್‌ಸಿಎ1 ಮತ್ತು ಬಿಆರ್‌ಸಿಎ2 ಜೀನ್ ಹೊಂದಿರುವ ಮಹಿಳೆಯರಲ್ಲಿ ಸ್ತನ ಅಥವಾ ಅಂಡಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಈ ವಂಶವಾಹಿಗಳು ಅನುವಂಶಿಕವಾಗಿ ಬರಬಹುದು. ಟಿಪಿ53, ಇದು ಇನ್ನೊಂದು ವಂಶವಾಹಿಯಾಗಿದ್ದು, ಸ್ತನ ಕ್ಯಾನ್ಸರ್ ಬರುವ ಅಪಾಯ ಅಧಿಕವಾಗಿದೆ.

ಸ್ತನ ಕ್ಯಾನ್ಸರ್‌ನ ಇತಿಹಾಸ:
ಕುಟುಂಬದ ಇತಿಹಾಸವಿಲ್ಲದ ಮಹಿಳೆಯರಿಗೆ ಹೋಲಿಸಿದರೆ ಆಕ್ರಮಣಕಾರಿಯಲ್ಲದ ಕ್ಯಾನ್ಸರ್ ಇತರ ಮಹಿಳೆಯರಿಗೆ ಬಂದರೆ ಈ ಕಾಯಿಲೆ ಮತ್ತೆ ಬರುವ ಸಾಧ್ಯತೆ ಹೆಚ್ಚು. ಕ್ಯಾನ್ಸರ್‌ರಹಿತ ಗಡ್ಡೆ ಹೊಂದಿದ ಮಹಿಳೆಯರಲ್ಲಿ ಭವಿಷ್ಯದಲ್ಲಿ ಕ್ಯಾನ್ಸರ್ ಅಭಿವೃದ್ಧಿ ಹೊಂದುವ ಸಾಧ್ಯತೆ ಹೆಚ್ಚು.

ಈಸ್ಟ್ರೋಜನ್‌ಗೆ ಒಡ್ಡಿಕೊಳ್ಳುವಿಕೆ:
ಸಣ್ಣ ಪ್ರಾಯದಲ್ಲಿ ಋತುಮತಿಯಾದವರಲ್ಲಿ ಅಥವಾ ತಡವಾಗಿ ಋತುಚಕ್ರನಿಂತ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಪ್ರಮಾಣ ಹೆಚ್ಚು. ಇದಕ್ಕೆ ಕಾರಣವೆಂದರೆ ಇವರ ದೇಹವು ದೀರ್ಘಾವಧಿವರೆಗೆ ಈಸ್ಟ್ರೋಜನ್‌ಗೆ ಎಕ್ಸ್‌ಪೋಸ್ ಆಗುತ್ತದೆ. ಈಸ್ಟ್ರೋಜನ್‌ಗೆ ಎಕ್ಸ್‌ಪೋಸ್ ಆಗುವ ಅವಧಿಯು ಮಹಿಳೆಯು ಋತುಮತಿಯಾದಲ್ಲಿಂದ ಆರಂಭವಾಗುತ್ತದೆ ಮತ್ತು ಋತುಚಕ್ರ ನಿಲ್ಲುವಾಗ ಇದು ಕೂಡ ನಿಲ್ಲುತ್ತದೆ.

ಬೊಜ್ಜು:
ಋತುಚಕ್ರನಿಂತ ಬಳಿಕ ಬೊಜ್ಜು ಮತ್ತು ಅತಿ ತೂಕ ಹೊಂದಿದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಮುಟ್ಟುನಿಲ್ಲುತ್ತಿರುವ ಸಂದರ್ಭದಲ್ಲಿ ಬೊಜ್ಜು ಹೊಂದಿದ ಮಹಿಳೆಯರಲ್ಲಿ ಈಸ್ಟ್ರೋಜನ್ ಮಟ್ಟವು ಅಧಿಕವಾಗಿರುತ್ತದೆ. ಹೀಗಾಗಿ ಇವರಲ್ಲಿ ಅಪಾಯ ಕೂಡ ಹೆಚ್ಚು.

ಎತ್ತರ:
ಸರಾಸರಿ ಮಟ್ಟಕ್ಕಿಂತ ಕಡಿಮೆ ಗಿಡ್ಡ ಹೊಂದಿದ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚು ಉದ್ದವಿದ್ದವರಲ್ಲಿ ಕೊಂಚಮಟ್ಟಿನ ಅಪಾಯ ಇದೆ. ಆದರೆ ಇದಕ್ಕೆ ಕಾರಣವೇನು ಎಂದು ತಜ್ಞರಿಗೆ ಗೊತ್ತಿಲ್ಲ.

ಮದ್ಯಪಾನ:
ಪ್ರತಿನಿತ್ಯ ಅತಿಯಾಗಿ ಮದ್ಯ ಸೇವಿಸುವ ಮಹಿಳೆಯರಿಗೆ ಅಪಾಯ ಹೆಚ್ಚು.ರೇಡಿಯೇಷನ್‌ಗೆ ಒಡ್ಡುವಿಕೆ, ಹಾರ್ಮೋನ್ ರೀಪ್ಲೇಸ್‌ಮೆಂಟ್ ಥೆರಪಿ, ಕೆಲವು ಉದ್ಯೋಗ, ಕಾಸ್ಮೆಟಿಕ್ ಇಂಪ್ಲಾಂಟ್ ಮಾಡಿಸಿಕೊಂಡವರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.