ಹೆಣ್ಣುಮಕ್ಕಳ ಜೀವನದಲ್ಲಿ ಈ
ಎರಡೂ ವಿಚಾರಗಳು ಬಹಳ ಮುಖ್ಯ. ಒಂದು, ತಿಂಗಳು ಸರಿಯಾಗಿ ಋತುಚಕ್ರ ಆಗುವುದು. ಇನ್ನೊಂದು ಗರ್ಭಿಣಿಯಾಗುವುದು.
ಇವೆರಡೂ ಮಹಿಳೆಯ ಜೀವನದ ಒಂದು ಭಾಗ. ಆದರೆ ಇವೆರಡೂ ಒಂದಕ್ಕೊಂದು ಸಂಬಂಧ ಹೊಂದಿದೆ ನೋಡಿ.
ಯಾರಿಗೆ ಪ್ರತಿ ತಿಂಗಳೂ ಸರಿಯಾದ
ಸಮಯಕ್ಕೆ ಮುಟ್ಟು ಸಂಭವಿಸುವುದಿಲ್ಲವೋ ಆಗ ಗರ್ಭಿಣಿ ಆಗುವುದು ಕೂಡಾ ಒಂದು ಸವಾಲೇ ಆಗಿರುತ್ತದೆ. ಹಾಗಂದ
ಮಾತ್ರಕ್ಕೆ ಅನಿಯಮಿತ ಅವಧಿ ಇರುವ ಹೆಣ್ಣುಮಕ್ಕಳೂ ಕೂಡ ಮಗುವನ್ನು ಹಡೆಯಲು ಸಾಧ್ಯವಿಲ್ಲ ಎಂದಲ್ಲ.!
ಅನಿಯಮಿತ ಪೀರಿಯಡ್ಸ್ ಅಂದರೆ
ಏನು:
ಸಾಮಾನ್ಯವಾಗಿ ಮಹಿಳೆಯರು ತಿಂಗಳಿಗೆ ಒಮ್ಮೆ ಋತುಚಕ್ರ ದಿನಗಳನ್ನು ಅನುಭವಿಸುತ್ತಾರೆ. ತಿಂಗಳಿನಲ್ಲಿ
ನಾಲ್ಕು ದಿನ ಋತುಚಕ್ರದ ಅವಧಿಯಲ್ಲಿ ರಕ್ತಸ್ರಾವ ಉಂಟಾಗುವುದು ಸಾಮಾನ್ಯ. ಈ ತಿಂಗಳಿನಲ್ಲಿ ಯಾವ ದಿನಕ್ಕೆ
ಪಿರಿಯಡ್ಸ್ ಆಗಿತ್ತೋ, ಮುಂದಿನ ತಿಂಗಳು ಕೂಡ ಋತುಚಕ್ರ ಅದೇ ದಿನ ಅಥವಾ ಒಂದೆರಡು ದಿನದ ಅಂತರದಲ್ಲಿ
ಸಂಭವಿಸಿದರೆ ಅದು ಸರಿಯಾದ ಋತುಚಕ್ರ ಕ್ರಮ ಎನ್ನಬಹುದು. ಅದೇ ತಿಂಗಳಿನಲ್ಲಿ ಸರಿಯಾದ ಸಮಯಕ್ಕೆ ಬಾರದೇ,
ಒಂದುವರೆ ತಿಂಗಳು ಅಥವಾ ಎರಡು ತಿಂಗಳಿಗೆ ಸಂಭವಿಸುವುದು ಅನಿಯಮಿತ ಚಕ್ರ ಎನಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ
ಉಂಟಾಗುವ ಹಾರ್ಮೋನ್ ಬದಲಾವಣೆಯಿಂದ ಇದು ಸಂಭವಿಸುತ್ತದೆ. ಈ ರೀತಿ ಅನಿಯಮಿತ ಋತುಚಕ್ರದ ಸಮಯದಲ್ಲಿ
ಅಧಿಕ ರಕ್ತಸ್ರಾವ ಉಂಟಾಗುವುದು, ಸುಸ್ತು, ತಲೆನೋವು, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
21 ದಿನಗಳಿಗಿಂತ ಕಡಿಮೆ ಅಂತರದಲ್ಲಿ ಋತುಚಕ್ರ ಉಂಟಾದರೆ ಅದನ್ನು ನಿಯಮಿತ ಋತುಚಕ್ರ ಎನ್ನಲಾಗುತ್ತದೆ.
ಮೊಟ್ಟ ಮೊದಲನೇದಾಗಿ ಮಹಿಳೆಯರಲ್ಲಿ ಆಗುವ ಹಾರ್ಮೋನ್ ಬದಲಾವಣೆಯಿಂದ ಅನಿಯಮಿತ ಋತುಚಕ್ರ ಉಂಟಾಗುತ್ತದೆ.
ಅದೇ ರೀತಿ ಅನಾರೋಗ್ಯಕರ ಆಹಾರ ಕ್ರಮ, ಸರಿಯಾದ ನಿದ್ದೆ ಇಲ್ಲದೆ ಇರುವುದು ಅತಿಯಾದ ಒತ್ತಡದ ಜೀವನ ಮೊದಲಾದವು
ಅನಿಯಮಿತ ಋತುಚಕ್ರಕ್ಕೆ ಕಾರಣಗಳಾಗಿರುತ್ತವೆ. ಕೆಲವರಿಗೆ ಕೆಲವೊಂದು ತಿಂಗಳಿನಲ್ಲಿ ಮಾತ್ರ ಅನಿಯಮಿತ
ಋತು ಚಕ್ರ ಉಂಟಾಗಬಹುದು ಆದರೆ ಕೆಲವರಿಗೆ ದೀರ್ಘಕಾಲದವರೆಗೆ ಈ ಸಮಸ್ಯೆ ಇರುತ್ತದೆ. ಅಧಿಕ ತೂಕ ಇರುವವರು,
ಅತೀ ಕಡಿಮೆ ತೂಕ ಇರುವವರು, ಥೈರಾಯ್ಡ್ ಸಮಸ್ಯೆ ಇರುವವರು ಅಥವಾ ಯಾವುದಾದರೂ ಕಾಯಿಲೆಗೆ ನಿರಂತರ ಮಾತ್ರೆ
ತೆಗೆದುಕೊಳ್ಳುತ್ತಿರುವವರಿಗೆ ಕೂಡ ಋತುಚಕ್ರದ ಸಮಸ್ಯೆ ಕಾಡುತ್ತದೆ. ದೀರ್ಘಕಾಲದ ಅನಿಯಮಿತ ಋತುಚಕ್ರದ
ಸಮಸ್ಯೆ ಇದ್ದರೆ ಅದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆಗೂ ಕಾರಣವಾಗಬಹುದು ಇದರಿಂದ ಗರ್ಭಧಾರಣೆಯ
ಸಮಸ್ಯೆ ಉಂಟಾಗುತ್ತದೆ. ಅಂದ್ರೆ ಅನಿಯಮಿತ ಋತುಚಕ್ರದಿಂದ ಅಂಡಾಶಯದ ಕಾರ್ಯ ಚಟುವಟಿಕೆಗೆ ಅಡಚಣೆ ಉಂಟಾಗಿ
ಗರ್ಭಧರಿಸುವುದು ಕಷ್ಟವಾಗುತ್ತದೆ.
ನಿಮ್ಮ ಋತುಚಕ್ರ ಸರಿಯಾದ ಸಮಯಕ್ಕೆ
ಆಗುತ್ತಿಲ್ಲ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ?:
ಮುಖ್ಯವಾಗಿ ನೀವು ಋತುಚಕ್ರದ ಅವಧಿಯ ದಿನಾಂಕವನ್ನು ಟ್ರ್ಯಾಕ್ ಮಾಡಿಡಬೇಕು. ಸಾಮಾನ್ಯವಾಗಿ 28ರಿಂದ
30 ದಿನಗಳ ಸರಾಸರಿಯಲ್ಲಿ ಋತುಚಕ್ರ ಸಂಭವಿಸುತ್ತದೆ. ಈ ಅವಧಿಯಲ್ಲಿ ತುಂಬಾನೇ ವ್ಯತ್ಯಾಸಗಳಿದ್ದರೆ
ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಋತುಚಕ್ರ ಇರುವವರಿಗೆ ಗರ್ಭಧಾರಣೆ
ಸಾಧ್ಯವೇ?:
ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಋತುಚಕ್ರ ಆಗದೇ ಇದ್ದಲ್ಲಿ ಅದು ಹೆಣ್ಣುಮಕ್ಕಳ ಗರ್ಭಧಾರಣೆಯ ಮೇಲೆ
ಗಾಢವಾದ ಪರಿಣಾಮ ಬೀರುವುದಿಲ್ಲ. ಅನಿಯಮಿತ ಋತುಚಕ್ರ ಹೊಂದಿರುವ ಅದೆಷ್ಟೋ ಮಹಿಳೆಯರು ಗರ್ಭ ಧರಿಸಿ
ತಾಯಂದಿರಾಗಿರುವ ಉದಾಹರಣೆಗಳು ಇವೆ. ಅನಿಯಮಿತ ಋತುಚಕ್ರದಿಂದ ಗರ್ಭಧಾರಣೆಯಾಗಲು ಕೆಲವರಿಗೆ ಸ್ವಲ್ಪ
ಕಷ್ಟವಾಗಬಹುದು ಯಾಕೆಂದರೆ ಹಾರ್ಮೋನು ಬದಲಾವಣೆಗಳು ಗರ್ಭ ಧರಿಸುವಲ್ಲಿ ಅಡಚಣೆ ಉಂಟು ಮಾಡಬಹುದು ಆದರೆ
ಅನಿಯಮಿತ ಋತುಚಕ್ರ ಎನ್ನುವುದು ಹೆಣ್ಣು ಮಕ್ಕಳ ಬಂಜೆತನಕ್ಕೆ ಕಾರಣವಾಗುವುದಿಲ್ಲ.
ಅನಿಯಮಿತ ಋತುಚಕ್ರದಿಂದ ಗರ್ಭ
ಧರಿಸಲು ಕಷ್ಟವಾಗಲು ಮುಖ್ಯ ಕಾರಣ ಏನೆಂದರೆ ನೀವು ನಿಮ್ಮ ಮುಟ್ಟಿನ ಅವಧಿಯನ್ನು ಟ್ರ್ಯಾಕ್ ಮಾಡುವುದು
ಕಷ್ಟವಾಗುತ್ತದೆ. ಹೀಗಾಗಿ ಯಾವಾಗ ಗರ್ಭಿಣಿಯಾಗಲು ಪ್ರಯತ್ನಿಸಬೇಕು ಎಂಬುದರ ಬಗ್ಗೆಯೂ ಕೂಡ ಗೊಂದಲಗಳು
ಇರುತ್ತವೆ. ಒಂದುವರೆ ತಿಂಗಳು ಎರಡು ತಿಂಗಳುಗಳ ಕಾಲ ರಕ್ತಸ್ರಾವವೇ ಆಗದೆ ದೀರ್ಘಾವಧಿಯ ನಂತರ ಮತ್ತೆ
ಮುಟ್ಟಾಗುವುದು ಗರ್ಭ ಧರಿಸುವ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತವೆ. ಅನಿಯಮಿತ ಋತುಚಕ್ರದಿಂದ ಯಾವಾಗ
ಮಗುವನ್ನು ಪಡೆಯಲು ಸಂಭೋಗ ನಡೆಸಬೇಕು ಎಂಬುದು ತಿಳಿಯುವುದಿಲ್ಲ.
ಅನಿಯಮಿತ ಋತುಚಕ್ರಕ್ಕೆ ಇದೆಯಾ
ಚಿಕಿತ್ಸೆ?:
ನಿಮಗೆ ಕಾಡುತ್ತಿರುವ ಅನಿಯಮಿತ ಋತುಚಕ್ರ ದೀರ್ಘಕಾಲದಾಗಿದ್ದರೆ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಬೇಕು.
ಒಂದು ವೇಳೆ ಗರ್ಭ ಧರಿಸಲು ಕಷ್ಟವಾಗುತ್ತಿದ್ದರೆ ನಿಮ್ಮ ಅನಿಯಮಿತ ಋತುಚಕ್ರವನ್ನು ಕೂಡ ಹೇಗೆ ಟ್ರ್ಯಾಕ್
ಮಾಡುವುದು ಎಂಬುದರ ಬಗ್ಗೆ ವೈದ್ಯ ಸಲಹೆ ಪಡೆದುಕೊಳ್ಳಬೇಕು. ಹಾರ್ಮೋನ್ ನಿಯಂತ್ರಿಸಲು ಅಲ್ಟ್ರಾ ಸೌಂಡ್
ಪರೀಕ್ಷೆಯನ್ನು ಮಾಡಿ ಗರ್ಭದರಿಸಲು ನಿಮ್ಮಲ್ಲಿ ಇರುವ ಸಮಸ್ಯೆಯ ಬಗ್ಗೆ ವೈದ್ಯರು ಪರಿಹಾರವನ್ನು ತಿಳಿಸುತ್ತಾರೆ.
ಥೈರಾಯ್ಡ್ ಪಿ ಸಿ ಓ ಎಸ್ ಇಂತಹ ಯಾವುದೇ ಸಮಸ್ಯೆಇದ್ದರೂ ಅದಕ್ಕೆ ಚಿಕಿತ್ಸೆ ನೀಡುತ್ತಾರೆ. ಇಲ್ಲಿ
ವೈದ್ಯರ ಪ್ರಯತ್ನ ಮಾತ್ರವಲ್ಲ. ನೀವು ನಿಮ್ಮ ಯೋಚನಾಲಹರಿಯನ್ನು ಬದಲಾಯಿಸಿಕೊಳ್ಳಬೇಕು. ಹೆಚ್ಚು ಒತ್ತಡವನ್ನು
ತೆಗೆದುಕೊಳ್ಳಬಾರದು. ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ನಿಯಮಿತವಾಗಿ ವ್ಯಾಯಾಮ
ಮಾಡುವುದು, ಉತ್ತಮ ಆಹಾರ ಸೇವನೆ, ಉತ್ತಮ ವಾತಾವರಣದಲ್ಲಿ ವಾಸಿಸುವುದು ಈ ಎಲ್ಲಾ ಕಾರಣಗಳಿಂದ ನಿಮ್ಮ
ಅನಿಯಮಿತ ಅವಧಿಗೆ ಗುಡ್ ಬೈ ಹೇಳಬಹುದು. ಜೊತೆಗೆ ನೀವು ಬೇಕೆನಿಸಿದಾಗ ಮಗುವನ್ನು ಪಡೆಯಲು ಕೂಡ ಸಹಾಯವಾಗುತ್ತದೆ.