ಮಕ್ಕಳು ಓದಿನ ಕಡೆ ಗಮನ ಹರಿಸಲು ಕೆಲವು ಸಿಂಪಲ್ ಟಿಪ್ಸ್‌ ಪೋಲೋ ಮಾಡಿ.!

ಪರೀಕ್ಷಾ ದಿನಗಳು ಹತ್ತಿರ ಬಂತೆಂದರೆ ಮಕ್ಕಳಿಗಿಂತ ಪೋಷಕರೇ ಹೆಚ್ಚು ಆತಂಕಕ್ಕೆ ಒಳಗಾಗಿರುತ್ತಾರೆ. ಏಕೆಂದರೆ ಮಕ್ಕಳು ಚೆನ್ನಾಗಿ ಓದದಿದ್ದರೆ ಒಳ್ಳೆಯ ಅಂಕ ಗಳಿಸಲು ಸಾಧ್ಯವಿಲ್ಲ ಮತ್ತು ಒಳ್ಳೆಯ ಅಂಕ ಬಾರದಿದ್ದರೆ ಮುಂದೆ ಸರಿಯಾಗಿ ಕಾಲೇಜಿನಲ್ಲಿ ಸೀಟು ಸಿಗುವುದಿಲ್ಲ ಎಂಬ ಆಲೋಚನೆಗಳು ತುಂಬಾ ಬರುತ್ತದೆ.

ಆದರೆ ಮಕ್ಕಳನ್ನು ಓದಿನ ಕಡೆ ಗಮನ ಹರಿಸುವಂತೆ ಮಾಡುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿದೆ. ಏಕೆಂದರೆ ಇಂದಿನ ಮಕ್ಕಳು ಓದು ಒಂದನ್ನು ಬಿಟ್ಟು ಬೇರೆಲ್ಲ ವಿಷಯದ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಪೋಷಕರು ಮಕ್ಕಳಿಗೆ ಹೊಡೆಯುವುದು, ಬಯ್ಯುವುದು, ಒತ್ತಾಯವಾಗಿ ಓದುವಂತೆ ಮಾಡುವುದು, ಅವರ ಮೊಬೈಲ್ ಕಸಿದುಕೊಳ್ಳುವುದು, ಊಟ, ತಿಂಡಿ ಕೊಡುವುದಿಲ್ಲ ಎಂದು ಬೆದರಿಸುವುದು ಹೀಗೆ ಹತ್ತಾರು ರೀತಿಯ ಪ್ರಯತ್ನವಂತೂ ಮಾಡಿರುತ್ತಾರೆ. ಹೀಗಾಗಿ ಮಕ್ಕಳು ಹೆಚ್ಚು ಹೊತ್ತು ಓದಿನಲ್ಲಿ ಕಳೆಯುವಂತ ಮಾಡಲು ಪೋಷಕರು ನಾನಾ ರೀತಿಯ ಪ್ರಯತ್ನ ಮಾಡುತ್ತಾರೆ.

ಆದ್ರೆ ಇದೆಲ್ಲವೂ ಮಕ್ಕಳಿಗೆ ಮಾನಸಿಕ ಕಿರಿ ಕಿರಿ ಉಂಟು ಮಾಡಬಹುದೇ ಹೊರತು ಓದಿನ ಕಡೆ ಹೆಚ್ಚು ಗಮನ ಕೊಡುವಂತೆ ಮಾಡಲು ಸಾಧ್ಯವಿಲ್ಲ. ಹಾಗಾದರೆ ಮಕ್ಕಳು ಓದಿನ ಕಡೆ ಹೆಚ್ಚು ಗಮನ ಹರಿಸುವಂತೆ ಮಾಡುವುದು ಹೇಗೆ? ಮಕ್ಕಳು ಓದಿನಲ್ಲಿ ತೊಡಗಬೇಕು ಎಂದಾದರೆ ಪೋಷಕರು ಯಾವ ರೀತಿ ಅವರೊಂದಿಗೆ ಬೆರೆಯಬೇಕು ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.

ಮಕ್ಕಳ ಓದಿನ ಸಮಯ ನೀವೆ ನಿರ್ಧರಿಸಿ:
ಮಕ್ಕಳು ದಿನದ ಎಲ್ಲಾ ಸಮಯ ಓದಿನಲ್ಲಿ ಮುಳುಗಲು ಸಾಧ್ಯವಿಲ್ಲ. ಅವರಿಗೂ ಒಂದಿಷ್ಟು ಸಮಯ ಆಟದಲ್ಲಿ ಇಲ್ಲವೆ ದೈಹಿಕ ಚಟುವಟಿಕೆಯಲ್ಲಿ ಕಳೆಯಬೇಕಾಗುತ್ತದೆ. ಆದರೆ ಮಕ್ಕಳು ಯಾವ ಸಮಯದಲ್ಲಿ ಓದಬೇಕು ಎಂಬುದನ್ನು ನೀವೆ ನಿರ್ಧರಿಸಿ. ಏಕೆಂದರೆ ಓದಿನ ಸಮಯ ಬಿಟ್ಟು ಉಳಿದ ಸಮಯದಲ್ಲಿ ಅವರನ್ನು ಯಾವುದೇ ಕಾರಣಕ್ಕೂ ಓದಿಕೊಳ್ಳುವಂತೆ ಒತ್ತಾಯಿಸಬೇಡಿ. ಓದಿನ ಸಮಯ ಆರಂಭವಾದ ಕೂಡಲೇ ಮಕ್ಕಳಿಗೆ ಓದಿಕೊಳ್ಳುವಂತೆ ನೆನಪಿಸಿ. ಈ ವೇಳೆ ಅವರು ಮಾತು ಕೇಳದಿದ್ದರೆ, ನಾಳೆಯಿಂದ ಈ ಓದಲೇಬೇಕು ಎಂದು ಕಡ್ಡಾಯ ನಿಯಮ ರೂಪಿಸಿ.

ಓದಿಗಾಗಿ ಹೊಸ ಗ್ಯಾಜೆಟ್ ನೀಡಿ:
ಮೊಬೈಲ್, ಟ್ಯಾಬ್ಲೆಟ್‌ಗಳು ಕೇವಲ ಆಟದ ಉದ್ದೇಶದಿಂದ ಮಾತ್ರವಲ್ಲ ಓದಿಗೂ ಸಹಾಯಕಾರಿ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಿ. ಇಂಟರ್‌ನೆಟ್ ಅನ್ನು ಓದಿಗೆ ಯಾವ ರೀತಿ ಬಳಸಬಹುದು ಎಂಬುದನ್ನು ಅವರಿಗೆ ತಿಳಿಸಿಕೊಡಿ. ಇದರಿಂದ ಅವರಲ್ಲಿ ಓದಿನ ಕಡೆ ಹೆಚ್ಚು ಗಮನ ಹರಿಯಬಹುದು.

ಓದಿನ ನಡುವೆ ವಿರಾಮ ತೆಗೆದುಕೊಳ್ಳಲು ನೀವೇ ಉತ್ತೇಜಿಸಿ:
ಮಕ್ಕಳು ಓದಿನಲ್ಲಿ ಹೆಚ್ಚು ಗಮನವಿಟ್ಟಿದ್ದರೆ ಓದಿನ ನಡುವೆ ಆಗಾಗ ವಿರಾಮ ತೆಗೆದುಕೊಳ್ಳಲು ನೀವೇ ಅವರಿಗೆ ಹೇಳಿ. ಈ ರೀತಿ ಹೇಳುವುದರಿಂದ ಅವರಲ್ಲೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಮಾತನ್ನು ಅವರು ಪಾಲಿಸುತ್ತಾರೆ ಜೊತೆಗೆ ಮುಂದೊಂದು ಬಾರಿ ನೀವು ಹೇಳಿದ ಎಲ್ಲಾ ಮಾತನ್ನು ಅನುಸರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಕ್ಕಳ ಓದಿಗೆ ನೀವು ಸಹಕರಿಸಿ:
ಮಕ್ಕಳು ಓದುತ್ತಿದ್ದಾರೆ ಎಂದು ನಿರ್ಲಕ್ಷಿಸದೆ ಅವರು ಏನು ಓದುತ್ತಿದ್ದಾರೆ, ಎಷ್ಟು ಓದಿದ್ದಾರೆ? ಇನ್ನೂ ಎಷ್ಟು ಓದಿನ ಅಗತ್ಯವಿದೆ? ಯಾವ ವಿಷಯವನ್ನು ಹೆಚ್ಚಿಗೆ ಓದಬೇಕು ಎಂಬೆಲ್ಲಾ ಕುರಿತು ನೀವೆ ತಿಳಿದುಕೊಂಡು ಅವರಿಗೂ ಮನವರಿಕೆ ಮಾಡಿಕೊಡಿ. ಅವರ ಬುಕ್, ನೋಟ್ ಬುಕ್‌ಗಳನ್ನು ನೀವು ಹಿಡಿದು ಓದುವ ಯತ್ನ ಮಾಡಿ. ನಿಮ್ಮ ಜ್ಞಾನಕ್ಕೆ ಅದು ಕಷ್ಟವಾಗಿದ್ದರೂ ಅವರಿಂದಲೇ ಆ ಬಗ್ಗೆ ಮಾಹಿತಿ ಪಡೆಯಿರಿ. ನಿಮಗೆ ಮಾಹಿತಿ ಹೇಳುವ ಉದ್ದೇಶದಿಂದ ಆದರು ಅವರು ಓದಿನ ಕಡೆ ಹೆಚ್ಚು ಗಮನ ಹರಿಸುತ್ತಾರೆ.

ಓದಿಗಾಗಿ ಅವರಿಗೆ ಅಗತ್ಯವಿರುವುದನ್ನು ಅರಿತುಕೊಳ್ಳಿ:
ನಿಮ್ಮ ಮಕ್ಕಳು ಓದಿನಲ್ಲಿ ಹೆಚ್ಚು ಸಮಯ ಕಳೆಯದಿದ್ದರೆ ಅವರಲ್ಲಿ ಏನೋ ಕೊರತೆಯಾದಂತಹ ಮನೋಭಾವ ಹೊಂದಿರುತ್ತಾರೆ. ಅಂದರೆ ಟೇಬಲ್, ಆಟಿಕೆ ವಸ್ತು, ಟೇಬಲ್ ಲ್ಯಾಂಪ್, ನೋಟ್ ಬುಕ್, ಹೀಗೆ ಯಾವುದಾದರು ವಸ್ತು ಅವರಿಗೆ ಅಗತ್ಯವಿದ್ದರೆ ಅದನ್ನು ಆದಷ್ಟು ನೀಡುವ ಯತ್ನ ಮಾಡಿ, ಅವರ ಓದಿಗಾಗಿ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದರೆ ಅವರಿಗೂ ಓದಬೇಕು ಎಂಬ ಮನಸ್ಸು ಬರುತ್ತದೆ.