ಶುಂಠಿ ಮಸಾಲೆಯ ಘಟು ಪರಿಮಳ, ಜ್ಯುಸ್ ಫ್ಲೇವರ್ಗೆ ಬರೀ ಅಡುಗೆ ರುಚಿ ಹೆಚ್ಚೋದು ಮಾತ್ರವಲ್ಲ, ಕಫ, ಕೆಮ್ಮು, ಶೀತಕ್ಕೂ ಮದ್ದಾಗಿ ಸೋಂಕನ್ನು ಓಡಿಸಬಲ್ಲದು. ಹೋಮಿಯೋಪತಿ ಮತ್ತು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಈ ಮಸಾಲೆಗೆ ಎಲ್ಲಿಲ್ಲದ ವಿಶೇಷ ಸ್ಥಾನ. ಈ ಮಹಾನ್ ಮಸಾಲೆಯನ್ನು ಅಡುಗೆಯಲ್ಲಿ ಮಾತ್ರ ಬಳಸಬೇಕು ಅಂತೇನೂ ಇಲ್ಲ. ಇದರ ನೀರು ಕುಡಿದರೂ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಅಷ್ಟಕ್ಕೂ ಇದರಿಂದೇನು ಲಾಭ? ಹೇಗೆ ಮಾಡಿ ಕುಡಿಯುವುದು? ಇಲ್ಲಿದೆ ವಿವರ.
ಜಿಂಜರ್ ವಾಟರ್ ಮಾಡೋ ವಿಧಾನ:
ಮೊದಲು ಶುಂಠಿಯನ್ನು ಸಣ್ಣ ಸಣ್ಣ ಹೋಳುಗಳಾಗಿ ಮಾಡಿಕೊಳ್ಳಬೇಕು. ಅವನ್ನು ನೀರಿಗೆ ಹಾಕಿ, ಕುದಿಸಬೇಕು. ಚೆನ್ನಾಗಿ ಕುದ್ದ ಬಳಿಕ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ, ಕುಡಿದರೆ ಅದ್ಭುತವಾಗಿರುತ್ತೆ. ಬೆಳಗ್ಗೆ ಎದ್ದೊಡನೆ ಹಾಗೂ ರಾತ್ರಿ ಊಟಕ್ಕೂ ಮುನ್ನ ಈ ಶುಂಠಿ ರಸ ಕುಡಿಯುವುದರಿಂದ ಪ್ರಯೋಜನಗಳು ಹಲವು.
ಬಿಪಿ ಕಂಟ್ರೋಲ್:
ಅಧಿಕ ಬಿಪಿ ಸಮಸ್ಯೆ ಇರೋರು ಈ ನೀರನ್ನು ಕುಡಿಯುವುದನ್ನು ರೂಢಿಸಿಕೊಂಡರೆ ಒಳ್ಳೆಯದು. ಒಂದು ರೀತಿ ಆಸ್ಪಿರಿನ್ ರೀತಿ ಕೆಲಸ ಮಾಡುವ ಶುಂಠಿ ರಕ್ತವನ್ನು ತೆಳುವಾಗಿಸುತ್ತದೆ. ಅಷ್ಟೇ ರಕ್ತ ಗಂಟು ಕಟ್ಟುವುದನ್ನೂ ಕಂಟ್ರೋಲ್ ಮಾಡುತ್ತೆ. ರಕ್ತಿ ಸಂಚಾರ ಸರಾಗವಾಗಿ ಆದರೆ ಯಾವ ಯಾವ ರೋಗಗಳನ್ನು ನಿಯಂತ್ರಿಸಬಹುದು ಎಂಬುವುದು ಎಲ್ಲರಿಗೂ ಗೊತ್ತಿರೋ ವಿಷಯ.
ಕೊಬ್ಬು ಕರಗಿಸುತ್ತೆ:
ಎಲ್ಡಿಎಲ್ ಅಧಿಕ ಮಟ್ಟ ಹಾಗೂ ಬೇಡದ ಬೊಜ್ಜನ್ನು ಈ ಶುಂಠಿ ರಸ ಕಡಿಮೆ ಮಾಡುತ್ತೆ. ಸಹಜವಾಗಿ ಬೇಡದ ಬೊಜ್ಜು ದೇಹದಲ್ಲಿ ಇಲ್ಲವೆಂದರೆ ಹೃದಯವೂ ಆರೋಗ್ಯವಾಗಿರುತ್ತೆ. 2014ರಲ್ಲಿ ನಡೆದ ಅಧ್ಯಯನದಂತೆ ಶುಂಠಿ ನಮ್ಮ ಕೊಲೆಸ್ಟೆರಾಲ್ ಹಾಗೂ ಟ್ರೈಗ್ಲಿಸೆರೈಡ್ಸ್ ಮಟ್ಟ ಕುಸಿಯುವಂತೆ ಮಾಡುತ್ತದೆ. ಹೀಗಾಗಿ, ಹೃದ್ರೋಗದಿಂದ ಬಳಲುತ್ತಿರುವವರು ಶುಂಠಿ ಸೇವಿಸದರೆ ಒಳ್ಳೆಯದು.
ಸೋಂಕು ನಿವಾರಣೆ:
ತಾಜಾ ಶುಂಠಿಯಿಂದ ಕುದಿಸಿದ ನೀರಿನಿಂದ ಬ್ಯಾಕ್ಟೀರಿಯಾ ವೃದ್ಧಿಗೊಳ್ಳುವುದನ್ನು ತಡೆಯಬಹುದು. ಪ್ರತಿದಿನ ಇದನ್ನು ಸೇವಿಸುವುದರಿಂದ ಹಲವು ಸೋಂಕು ದೂರವಿಡಬಹುದು. ಇನ್ನು ಉಸಿರಾಟಕ್ಕೆ ಸಂಬಂಧಿಸಿದ ಸೋಂಕಿಗೂ ಇದು ರಾಮಬಾಣ. ರೆಸ್ಪಿರೇಟರಿ ಸಿನ್ಸಿಟಿಕಲ್ ವೈರಸ್ ವಿರುದ್ಧವೂ ಶುಂಠಿ ಪರಿಣಾಮಕಾರಿಯಾಗಿ ಹೋರಾಡುತ್ತದೆ.
ಆ್ಯಂಟಿ ಆಕ್ಸಿಡೆಂಟ್ಗಳು:
ಜಿಂಜೆರಾಲ್ ಎಂಬ ರಾಸಾಯನಿಕ ಅಂಶ ಈ ಶುಂಠಿಯಲ್ಲಿ ಅಧಿಕವಾಗಿದ್ದು, ಎಲ್ಲ ಆ್ಯಂಟಿಆಕ್ಸಿಡೆಂಟ್ಗಳನ್ನೂ ಇದು ಹೊಂದಿದೆ. ಈ ಆ್ಯಂಟಿಆಕ್ಸಿಡೆಂಟ್ಗಳು ದೇಹದಲ್ಲಿ Free Radical ವಿರುದ್ಧ ಹೋರಾಡಿ, ಎಲ್ಲಿಯೂ ಗಡ್ಡೆಯಾಗದಂತೆ ಎಚ್ಚರ ವಹಿಸುತ್ತದೆ. ಆ್ಯಂಟಿಆಕ್ಸಿಡೆಂಟ್ಗಳು ದೇಹದಲ್ಲಿ ಹೆಚ್ಚಿದ್ದಷ್ಟೂ ಚರ್ಮ ಹೊಳಪು ಪಡೆಯುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದರೊಂದಿಗೆ ಸೌಂದರ್ಯವನ್ನೂ ಹೆಚ್ಚಿಸಬಲ್ಲದು ಈ ಜಿಂಜರ್ ಜೂಸ್.
ರಕ್ತ ಸಂಚಲನ:
ಜಿಂಕ್ ಹಾಗೂ ಮೆಗ್ನೀಶಿಯಂ ರಕ್ತ ಸಂಚಾರ ಚೆನ್ನಾಗಿ ಆಗುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಎರಡೂ ಶುಂಠಿಯಲ್ಲಿ ಅಧಿಕವಾಗಿವೆ. ಹೀಗಾಗಿ ಪ್ರತಿ ದಿನ ಜಿಂಜರ್ ವಾಟರ್ ಸೇವನೆಯಿಂದ ರಕ್ತ ಸಂಚಾರ ವೃದ್ಧಿಯಾಗುತ್ತದೆ. ಇದರಿಂದ ಹೃದಯ ಆರೋಗ್ಯ ಸಹಜವಾಗಿಯೆ ಚೆನ್ನಾಗಿರುತ್ತದೆ.
ನ್ಯೂಟ್ರಿಯೆಂಟ್ಸ್:
ಪ್ರತಿದಿನ ಜಿಂಜರ್ ವಾಟರ್ ಸೇವನೆಯಿಂದ ಆರೋಗ್ಯ ಬಹಳಷ್ಟು ಮಟ್ಟಿಗೆ ಚೆನ್ನಾಗಿ ಆಗುತ್ತದೆ. ಏಕೆಂದರೆ, ಶುಂಠಿ ಹೊಟ್ಟೆಯಲ್ಲಿ ಬೈಲ್ ಜ್ಯೂಸ್ ಹೆಚ್ಚು ಉತ್ಪಾದನೆಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಎಲ್ಲ ಆಹಾರಗಳ ಪೋಷಕ ಸತ್ವಗಳನ್ನು ದೇಹ ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.
ಫ್ಲೂ ವಿರುದ್ಧ ಹೋರಾಟ:
ದಿನವೂ ಶುಂಠಿ ನೀರು ಸೇವಿಸಿದರೆ, ಜ್ವರ ಹಾಗೂ ಶೀತವನ್ನು ದೂರವಿಡಲು ಸಹಕರಿಸುತ್ತದೆ. ಎದೆ ಹಾಗೂ ಗಂಟಲು ಕಟ್ಟುವುದನ್ನು ಶುಂಠಿ ತಡೆಯುತ್ತದೆ. ಜೊತೆಗೆ ಅತಿಯಾದ ಸಿಂಬಳವು ಒಣಗಿ, ಕಟ್ಟಿಕೊಳ್ಳದಂತೆಯೂ ನೋಡಿಕೊಳ್ಳಬಹುದು.
ಕೈಕಾಲು ನೋವು:
ಆ್ಯಂಟಿ ಇನ್ಫ್ಲಮೇಟರಿ ಗುಣದಿಂದಾಗಿ ಶುಂಠಿ ಸ್ನಾಯು ಹಾಗೂ ಗಂಟುಗಳಲ್ಲಿ ನೋವು ಬರದಂತೆ ನೋಡಿಕೊಂಡು ಕಂಫರ್ಟ್ ಆಗಿಡುತ್ತದೆ. ಇದೇನು ತಕ್ಷಣ ಸಾಧ್ಯವಾಗುವ ವಿಷಯವಲ್ಲ. ಆದರೆ ಜಿಂಜರ್ ವಾಟರ್ ಸೇವಿಸುವುದು ರೂಢಿಯಾದಲ್ಲಿ ಇದು ಕ್ರಮೇಣ ಗಮನಕ್ಕೆ ಬರುತ್ತದೆ.