ಪೋಷಕರೇ, ಮಕ್ಕಳಿಗೆ ಈ ರೀತಿಯ ಆಹಾರ ನೀಡಿದರೆ ಆಗಾಗ ಕಾಯಿಲೆ ಬೀಳುತ್ತಾರೆ

ಮಕ್ಕಳ ಆರೋಗ್ಯಕ್ಕೆ ಉತ್ತಮವಲ್ಲದ ಆಹಾರ ಕೊಡೋದು, ಅನಾರೋಗ್ಯಕರ ಆಹಾರ ಕೊಡೋದು, ಅದರಲ್ಲೂ ಚಾಕಲೇಟ್‌, ಕ್ಯಾಂಡಿ, ಐಸ್‌ಕ್ರೀಂ ಮಕ್ಕಳ  ಕಣ್ಣಿಗೆ ಬಿದ್ದರೆ ಅವುಗಳು ಹಠಮಾಡಿದ ತಕ್ಷಣ ಕೊಡುತ್ತೀರಿ. ಹೀಗೆ ಮಾಡಿದರೆ ನಿಮ್ಮ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಕೆಲವು ಪೋಷಕರ ಅಂತು ಮಕ್ಕಳು ಅತ್ತಾಗ, ಹಠಮಾಡಿದಾಗ ನಿನಗೆ ಚಾಕಲೇಟ್‌, ಐಸ್‌ಕ್ರೀಂ ಕೊಡಿಸ್ತೀನಿ ಎಂದು ಮಕ್ಕಳು ಕೇಳಿದ್ದೆಲ್ಲವನ್ನೂ ಕೊಟ್ಟುಬಿಡುತ್ತಾರೆ.

ಆದರೆ ಪೋಷಕರೇ ಇಲ್ಲಿ ಕೇಳಿ ಮಕ್ಕಳ ಬೆಳವಣಿಗೆಗೆ ನೀವು ಕೊಡಿಸುವ ಕೆಲವೊಂದು ಆಹಾರ ವಸ್ತುಗಳೇ ಆಪತ್ತು ತಂದಿಡುತ್ತೆ. ಮಕ್ಕಳಿಗೆ ಕೊಡಬಾರದಂತಹ ಆ ಆಹಾರ ವಸ್ತುಗಳು ಯಾವುವು ಎನ್ನುವುದನ್ನು ನೋಡೋಣ.

1. ಸಕ್ಕರೆ ಮಿಶ್ರಿತ ಪಾನೀಯಗಳು:
ಜ್ಯೂಸ್‌ ಎಂದರೆ ಮಕ್ಕಳಿಗೂ ಇಷ್ಟ. ಅದರಲ್ಲೂ ಪ್ಯಾಕ್ಡ್‌ ಜ್ಯೂಸ್‌ ಕಂಡರಂತೂ ಮಕ್ಕಳು ಕೇಳದೆ ಬಿಡುವವರಲ್ಲ. ಆದರೆ ಈ ಸಕ್ಕರೆ ಮಿಶ್ರಿತ ಜ್ಯೂಸ್‌ ಅಥವಾ ಪಾನೀಯಗಳು ಮಕ್ಕಳ ಆರೋಗ್ಯಕ್ಕೆ ಒಂದಿಷ್ಟೂ ಉತ್ತಮವಲ್ಲ. ಹೆಚ್ಚು ಸಕ್ಕರೆಯ ಸೇವನೆಯು ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಅದರಲ್ಲಿ ಅನಾರೋಗ್ಯಕರವಾಗಿ ತೂಕದಲ್ಲಿ ಹೆಚ್ಚಳ, ಬೊಜ್ಜು, ಹೃದಯದ ಸಮಸ್ಯೆ, ಹಲ್ಲಿನ ಸಮಸ್ಯೆ, ಫ್ಯಾಟಿ ಲಿವರ್‌ ಮಾತ್ರವಲ್ಲ ಟೈಪ್‌-2 ಡಯಾಬಿಟೀಸ್‌ಗೂ ಕಾರಣವಾಗಬಹುದು. ಹಾಗಾಗಿ ಮಕ್ಕಳ ಕೈಗೆ ಅಂಗಡಿಯಲ್ಲಿ ಸಿಗುವ ಮೊದಲೇ ತಯಾರಿಸಿದ ಪ್ಯಾಕ್ಡ್‌ ಜ್ಯೂಸ್‌ ಕೊಡುವ ಮುನ್ನ ಒಂದು ಬಾರಿ ಯೋಚಿಸಿ. ಇಷ್ಟು ಮಾತ್ರವಲ್ಲ ತಾಜಾ ಹಣ್ಣಿನ ರಸ, ಮನೆಯಲ್ಲೇ ಮಾಡಿಕೊಟ್ಟರೆ ಒಳ್ಳೆಯದಲ್ಲವೇ ಅಂತ ನೀವಂದುಕೊಂಡರೆ, ಅದೂ ಕೂಡಾ ಮಿತಿಯಲ್ಲಿಯೇ ಕೊಡಬೇಕು. ಯಾಕಂದ್ರೆ ತಾಜಾ ಹಣ್ಣಿನ ರಸದಲ್ಲಿಯೂ ಸಕ್ಕರೆಯ ಅಂಶ ಹೆಚ್ಚಿರುತ್ತದೆ. ಹಾಗಾಗಿ ತಾಜಾ ಹಣ್ಣಿನ ರಸ ಕೊಡುವಾಗಲೂ ಅಗತ್ಯಕ್ಕಿಂತ ಹೆಚ್ಚು ನೀಡಬೇಡಿ.

2. ಸಂಸ್ಕರಿಸಿದ ತಿಂಡಿಗಳು:
ಮಕ್ಕಳಲ್ಲಿ ಜೀರ್ಣಕ್ರಿಯೆ ಬೇಗನೆ ಆಗುವುದರಿಂದ ಮಕ್ಕಳಲ್ಲಿ ಹಸಿವು ಹೆಚ್ಚು. ಹೀಗಿದ್ದಾಗ ಮನೆಯಲ್ಲಿ ಮಕ್ಕಳಿಗೆ ಬೇಗನೆ ಕೊಡಬಹುದಾದ ತಿನ್ನುವ ಆಹಾರವೆಂದರೆ ಪ್ಯಾಕ್ಡ್‌ ಸ್ನ್ಯಾಕ್ಸ್. ಒಮ್ಮೆ ತಿಂದ ಮೇಲೆ ಅದರ ರುಚಿಯೂ ಮಕ್ಕಳಿಗೆ ಹತ್ತುವುದರಿಂದ ಇಂತಹ ಸಂಸ್ಕರಿಸಿದ ತಿಂಡಿಗಳನ್ನೇ ಹೆಚ್ಚು ಹೆಚ್ಚು ಕೇಳುತ್ತಾರೆ. ಮನೆಯಲ್ಲಿ ಬಿಸಿ ಬಿಸಿಯಾಗಿ ಮಾಡಿದ ಆಹಾರವಂತೂ ರುಚಿಸುವುದೇ ಇಲ್ಲ. ಯಾಕೆಂದರೆ ಈ ಪ್ಯಾಕ್ಡ್‌ ಸ್ನ್ಯಾಕ್ಸ್‌ಗಳಲ್ಲಿನ ರುಚಿಕಾರಕಗಳು ಮಕ್ಕಳಿಗೆ ಹೆಚ್ಚಾಗಿ ಹಿಡಿಸಿಬಿಡುತ್ತದೆ. ಟೈಂಪಾಸ್‌ಗೆ ಅಥವಾ ಮಕ್ಕಳಿಗೆ ಬೇಗ ಕೊಡಬಹುದಾದ ತಿಂಡಿ ಎಂದು ಈ ಪ್ಯಾಕ್ಡ್‌ ಸ್ಯ್ನಾಕ್ಸ್‌ ಕೊಡದಿರಿ ಯಾಕಂದ್ರೆ ಇದರಿಂದ ಮಕ್ಕಳ ಆರೋಗ್ಯ ಹಾಳಾಗೋದಂತೂ ಖಚಿತ. ಇದರಿಂದಾಗಿ ಬೊಜ್ಜಿನ ಸಮಸ್ಯೆ, ಹಲ್ಲಿನ ಸಮಸ್ಯೆ ಮಾತ್ರವಲ್ಲ ಇತರ ಆರೋಗ್ಯ ಸಮಸ್ಯೆಳೂ ಉಂಟಾಗಬಹುದು.

3. ಕೆಫಿನ್‌ಯುಕ್ತ ಆಹಾರ ಮತ್ತು ಪಾನೀಯ:
ನೀವು ಗಮನಿಸಿರೋ ಹಾಗೆ ಮಕ್ಕಳ ದಿನಚರಿ ಯಾವಾಗಲೂ ಒಂದೇ ರೀತಿ ಇರುತ್ತೆ. ಅವರು ಎದ್ದೇಳುವ ಸಮಯ, ಅವರ ಬ್ರೇಕ್‌ಫಾಸ್ಟ್‌, ಸ್ಯ್ನಾಕ್ಸ್‌, ಮಧ್ಯಾಹ್ನದ ಊಟ, ಮಧ್ಯಾಹ್ನದ ನಿದ್ದೆ, ಸಂಜೆಯ ಸ್ಕ್ನ್ಯಾಕ್ಸ್‌ ಹೀಗೆ ಪ್ರತಿದಿನದ ದಿನಚರಿ ಮಕ್ಕಳದ್ದು. ಆದರೆ ನೀವು ಯಾವಾಗ ಅವರಿಗೆ ಕೆಫಿನ್‌ಯುಕ್ತ ಪಾನೀಯ ಅಂದರೆ ಚಹಾ, ಎನರ್ಜಿಡ್ರಿಂಕ್ಸ್‌ ಅಥವಾ ಕಾಫಿ ಆಗಿರಬಹುದು ಇದು ಮಕ್ಕಳ ದಿನಚರಿಯನ್ನು ಬದಲಾಯಿಸಿಬಿಡುತ್ತೆ. ಇದು ಮಕ್ಕಳ ಬೆಳವಣಿಗೆಯ ಮೇಲೂ ಪ್ರಭಾವ ಬೀರುತ್ತೆ. ಮಕ್ಕಳಿಗೆ ಕೆಫಿನ್‌ಯುಕ್ತ ಪಾನೀಯಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಂಶವೇನೂ ಸಿಗದು ಜೊತೆಗೆ ಅದರಿಂದ ಅಡ್ಡಪರಿಣಾಮಗಳೇ ಹೆಚ್ಚು. ಇದರಿಂದ ಮಕ್ಕಳ ಉದ್ವೇಗ ಹೆಚ್ಚಾಗಬಹುದು, ಡಿಹೈಡ್ರೇಷನ್‌, ಬೇಧಿ, ರಕ್ತದೊತ್ತಡದ ಏರುಪೇರು, ಹೃದಯ ಬಡಿತದ ವೇಗ ಹೆಚ್ಚಳ, ನಿದ್ರಾಹೀನತೆ, ವಾಂತಿ, ವಾಕರಿಕೆ ಕಾಣಿಸಿಕೊಳ್ಳಬಹುದು. ಅತಿಯಾಗಿ ಕೆಫಿನ್‌ಯುಕ್ತ ಕಾಫಿ, ಚಹಾ ಅಥವಾ ಎನರ್ಜಿಡ್ರಿಂಕ್‌ ಮಕ್ಕಳಿಗೆ ನೀಡುವುದು ಅದೊಂದು ರೀತಿಯ ಅಡಿಕ್ಷನ್‌ಗೆ ಕಾರಣವಾಗಬಹುದು. ಮುಂದೊಂದು ದಿನ ಅದರ ಸೇವನೆ ನಿಲ್ಲಿಸಿದರೆ ತಲೆನೋವು ಮತ್ತು ಏನೋ ಕಳೆದುಕೊಂಡಿರುವಂತೆ ಭಾವನೆ ಆವರಿಸಬಹುದು.

4. ಫಾಸ್ಟ್‌ ಫುಡ್‌:
ಮಕ್ಕಳಿಗೆ ಫಾಸ್ಟ್‌ಫುಡ್‌ ರುಚಿ ಹಿಡಿದರಂತೂ ಮೂರು ಹೊತ್ತು ಅದನ್ನೇ ಕೇಳುತ್ತಾರೆ. ಪಿಜ್ಜಾ, ಬರ್ಗರ್‌, ಗೋಬಿಮಂಚೂರಿ ಇನ್ನೂ ಮುಂತಾದ ಫಾಸ್ಟ್‌ ಫುಡ್‌ಗಳು ಇನ್ನೂ ಬೆಳವಣಿಗೆ ಹೊಂದುತ್ತಿರುವ ಮಕ್ಕಳ ಆರೋಗ್ಯಕ್ಕಂತೂ ಒಳ್ಳೆಯದೇ ಅಲ್ಲ. ಇದರಲ್ಲಿ ಅಧಿಕ ಪ್ರಮಾಣದ ಕೊಬ್ಬು, ಸೋಡಿಯಂ ಮತ್ತು ಅಧಿಕ ಪ್ರಮಾಣದ ಕ್ಯಾಲೊರಿಗಳು ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆಯನ್ನುಂಟು ಮಾಡುತ್ತದೆ. ಮಾತ್ರವಲ್ಲ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನೂ ಉಂಟು ಮಾಡಬಹುದು. ಮಕ್ಕಳು ಫಾಸ್ಟ್‌ಫುಡ್‌ ಅತಿಯಾಗಿ ತಿಂದರೆ ಹೆಚ್ಚು ಕೊಲೆಸ್ಟ್ರಾಲ್‌, ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ, ಟೈಪ್‌ 2 ಡಯಾಬಿಟೀಸ್‌, ಮೂಳೆ ಮತ್ತು ಕೀಲುಗಳ ನೋವು ಮತ್ತು ನಿದ್ದೆಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿ ಮಾತ್ರವಲ್ಲ ಮಕ್ಕಳ ಕಲಿಕೆ ಹಾಗೂ ಅಭಿವೃದ್ಧಿಯಲ್ಲೂ ಕುಂಠಿತ ಬೆಳವಣಿಗೆಯನ್ನು ಕಾಣಬಹುದು.

5. ಸಿಹಿ ತಿಂಡಿಗಳು ಮತ್ತು ಚಾಕಲೇಟುಗಳು:
ಅಪರೂಪಕ್ಕೊಮ್ಮೆ ಮಕ್ಕಳಿಗೆ ಸಿಹಿತಿಂಡಿಯನ್ನು ಕೊಡೊದು ಓಕೆ. ಆದ್ರೆ ಆಗಾಗ, ಮಕ್ಕಳು ಕೇಳಿದಾಗಲೆಲ್ಲಾ ಸಿಹಿ ತಿಂಡಿ, ಚಾಕಲೇಟುಗಳನ್ನು ಕೊಡುವುದು ಮುಂದೆ ಸಮಸ್ಯೆಗೆ ಕಾರಣವಾಗಬಹುದು. ಹಲ್ಲಿನ ಹುಳುಕು ಮಾತ್ರವಲ್ಲ ಇದರಿಂದ ಮಕ್ಕಳಲ್ಲಿ ಇತರ ಸಮಸ್ಯೆಗಳನ್ನೂ ಉಂಟು ಮಾಡುತ್ತದೆ. ಅಧಿಕ ಸಕ್ಕರೆಯಂಶವಿರುವ ಸಿಹಿ ಪದಾರ್ಥ, ಚಾಕಲೇಟು, ಕ್ಯಾಂಡಿಗಳ ಸೇವನೆಯಿಂದ ಮಕ್ಕಳಲ್ಲಿ ಇನ್ಸುಲಿನ್‌ ಪ್ರತಿರೋಧ, ಪ್ರಿಡಯಾಬಿಟೀಸ್‌, ಟೈಪ್‌ 2 ಡಯಾಬಿಟೀಸ್‌ನ ಅಪಾಯ ಹೆಚ್ಚಿರುತ್ತದೆ. ಬೊಜ್ಜು, ಅಧಿಕ ರಕ್ತದೊತ್ತಡದೊಂದಿಗೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕೂಡಾ ಕುಸಿಯುತ್ತೆ. ಹೀಗಾದಾಗ ಮಕ್ಕಳಿಗೆ ಆಗಾಗ ಹುಷಾರಿಲ್ಲದೇ ಆಗುವುದು ಸಾಮಾನ್ಯವಾಗಿಬಿಡುತ್ತದೆ. ಹೆಚ್ಚಿನ ಸಿಹಿಪದಾರ್ಥಗಳನ್ನು ತಿನ್ನುವುದರಿಂದ ಮಕ್ಕಳಲ್ಲಿ ಮೂಡ್‌ ಬದಲಾವಣೆಗಳು, ಕಿರಿಕಿರಿ, ಹಠ ಮಾಡುವುದೂ ಹೆಚ್ಚಾಗುತ್ತದೆ. ಇದು ಮಾತ್ರವಲ್ಲದೇ ಮಗು ಹೆಚ್ಚು ಹೈಪರ್‌ ಆಕ್ಟೀವ್‌ ಆಗಬಹುದು ಅಥವಾ ಏನೂ ಚಟುವಟಿಕೆಯಲ್ಲಿ ತೊಡಗದೇ ಮೂಡಿ ಆಗಬಹುದು. ಒಟ್ಟಿನಲ್ಲಿ ಹೆಚ್ಚು ಸಕ್ಕರೆಯಂಶದ ಸೇವನೆ ಮಕ್ಕಳ ಮನಸ್ಥಿತಿ, ಚಟುವಟಿಕೆ ಮತ್ತು ಹೈಪರ್‌ ಆಕ್ಟಿವಿಟಿ ಮೇಲೆ ಪರಿಣಾಮ ಬೀರುತ್ತದೆ.

6. ಕರಿದ ಆಹಾರ ತಿನಿಸು:
ಎಣ್ಣೆಯಲ್ಲಿ ಕರಿದ ತಿನಿಸುಗಳು ಮಕ್ಕಳಿಗೆ ಬೇಗನೆ ಇಷ್ಟವಾಗುವ ಇನ್ನೊಂದು ಆಹಾರ ತಿನಿಸು. ಕುರುಂ ಕುರುಂ ಎನ್ನುವ ಎಣ್ಣೆಯಲ್ಲಿ ಕರಿದ ತಿಂಡಿಗಳು ಮಕ್ಕಳ ಬಾಯಿಗೆ ರುಚಿಯಾದರೂ, ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ನೆನಪಿಡಿ. ನಾವು ಹೊರಗಡೆಯಿಂದ ತಂದ ತಿಂಡಿ ಕೊಡೋದಿಲ್ಲ, ಮನೆಯಲ್ಲೇ ಮಾಡಿ ಎಣ್ಣೆಯಲ್ಲಿ ಕರಿದ ತಿಂಡಿಯನ್ನು ಕೊಡ್ತೇವೆ ಎಂದರೂ ಅತಿಯಾದ ಎಣ್ಣೆಯಲ್ಲಿ ಕರಿದ ತಿಂಡಿಯನ್ನು ಮಕ್ಕಳು ತಿನ್ನೋದರಿಂದ ಮಕ್ಕಳಲ್ಲಿ ಎಳವೆಯಲ್ಲೇ ಹೃದಯದ ಸಮಸ್ಯೆಗಳು ಉಂಟಾಗಬಹುದು. ಪೊಟ್ಯಾಟೋ ಚಿಪ್ಸ್‌, ಫ್ರೆಂಚ್‌ ಫ್ರೈಸ್‌ನಲ್ಲಿ ಹೆಚ್ಚಾಗಿರುವ ಸೋಡಿಯಂ ಮತ್ತು ಹಾನಿಕಾರಕ ಕೊಬ್ಬಿನಾಂಶವು ಮಕ್ಕಳ ಹೊಟ್ಟೆಗೆ ಸೇರಿದರೆ ಅದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಅತಿಯಾಗಿ ತಿಂದರೆ ಹೊಟ್ಟೆಯ ಸಮಸ್ಯೆ ಬರುವುದಂತೂ ಖಂಡಿತ. ಅದಲ್ಲದೇ ವಾಕರಿಕೆ, ವಾಂತಿ, ಅಜೀರ್ಣವೂ ಉಂಟಾಗಬಹುದು ಜೊತೆಗೆ ಮನೆಯೂಟ ಮಕ್ಕಳಿಗೆ ರುಚಿಸದೇ ಇರಬಹುದು.

7. ಹೆಚ್ಚು ಉಪ್ಪಿನಂಶವಿರುವ ಸ್ನ್ಯಾಕ್ಸ್‌:
ಹೆಚ್ಚು ಉಪ್ಪಿನಂಶವಿರುವ ಸ್ನ್ಯಾಕ್ಸ್‌ಗಳ ಸೇವನೆ ಮಕ್ಕಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಉಪ್ಪಿನಂಶವಿರುವ ಆಹಾರವನ್ನು ತಿಂದರೆ ಹೆಚ್ಚು ನೀರು ಕುಡಿಯುವ ಮಕ್ಕಳಲ್ಲಿ ಹೊಟ್ಟೆ ಉಬ್ಬರ ಅಥವಾ ಪಫಿನೆಸ್‌ ಉಂಟಾಗಬಹುದು. ರಕ್ತದೊತ್ತಡದ ಹೆಚ್ಚಳದ ಜೊತೆಗೆ ಹೃದಯದ ಖಾಯಿಲೆಗೂ ದಾರಿ ಮಾಡಿಕೊಡುತ್ತದೆ. ಹೆಚ್ಚು ಉಪ್ಪಿನಂಶವಿರುವ ಆಹಾರ ಸೇವನೆಯಿಂದ ತೀವ್ರವಾದ ಬಾಯಾರಿಕೆ ಅಥವಾ ಬಾಯಿ ಒಣಗಬಹುದು. ತೂಕದಲ್ಲಿ ಹೆಚ್ಚಳ, ಚರ್ಮದ ಸಮಸ್ಯೆ, ತಲೆನೋವು, ನಿದ್ದೆ ಸರಿಯಾಗಿ ಮಾಡದೇ ಇರಬಹುದು. ಹಾಗಾಗಿ ಮಕ್ಕಳಿಗೆ ಉಪ್ಪಿನಂಶವಿರುವ ಸ್ನ್ಯಾಕ್ಸ್‌ ಹೆಚ್ಚು ಕೊಡಬೇಡಿ.

8. ಪಾಶ್ಚೀಕರಿಸದ ಹಾಲಿನ ಉತ್ಪನ್ನಗಳು:
ಕೆಲವರು ನೇರವಾಗಿ ಹೈನುಗಾರರಿಂದಲೇ ಹಾಲಿನ ಉತ್ಪನ್ನಗಳನ್ನು ಕೊಂಡು ಮಕ್ಕಳಿಗೆ ನೀಡುತ್ತಾರೆ. ಆದರೆ ಇದರಿಂದಾನೂ ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಂಡುಬರಬಹುದು ಎನ್ನಲಾಗುತ್ತೆ. ಸ್ಥಳೀಯವಾಗಿ ಉತ್ಪಾದಿಸುವ ಡೈರಿ ಉತ್ಪನ್ನಗಳಾದ ಹಾಲು, ಬೆಣ್ಣೆ, ಚೀಸ್, ಮೊಸರು, ಐಸ್ ಕ್ರೀಮ್ ಪಾಶ್ಚರೀಕರಿಸಿದ ಹಾಲಿನಿಂದ ತಯಾರಿಸಿದ್ದಾದರೆ ಮಾತ್ರವೇ ಕೊಡಬೇಕು. ಪಾಶ್ಚರೀಕರಿಸದ ಡೈರಿಯಿಂದ ಅನಾರೋಗ್ಯದ ಲಕ್ಷಣಗಳು ವಾಂತಿ, ಅತಿಸಾರ, ಹೊಟ್ಟೆ ನೋವು, ಜ್ವರ, ತಲೆನೋವು ಮತ್ತು ಮೈಕೈನೋವು ಕಂಡುಬರಬಹುದು. ಪಾಶ್ಚೀಕರಿಸದ ಹಾಲಿನಿಂದ ಮಕ್ಕಳು ಅನಾರೋಗ್ಯಕ್ಕೊಳಗಾದರೆ ತಕ್ಷಣವೇ ಮಕ್ಕಳ ತಜ್ಞರನ್ನು ಭೇಟಿ ಮಾಡಿ.

9. ಹಸಿ ಮತ್ತು ಸರಿಯಾಗಿ ಬೇಯಿಸದ ಮೊಟ್ಟೆ ಮತ್ತು ಮಾಂಸ:
ಕೆಲವರು ಹಸಿ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ಅಥವಾ ಮಕ್ಕಳು ತಿನ್ನುತ್ತಾರೆಂದು ಹಸಿ ಮೊಟ್ಟೆಯನ್ನು ಕೊಡುತ್ತಾರೆ. ಇದು ತಪ್ಪು ಇದರಿಂದ ಗಂಭೀರ ಸಮಸ್ಯೆಗಳಾಗಬಹುದು. ಹಸಿ ಮೊಟ್ಟೆ ಮಾತ್ರವಲ್ಲ ಅರ್ಧಂಬರ್ಧ ಬೇಯಿಸಿದ ಮೊಟ್ಟೆ ಅಥವಾ ಮಾಂಸವನ್ನೂ ಮಕ್ಕಳಿಗೆ ಕೊಡಬಾರದು. ಸಾಮಾನ್ಯವಾಗಿ ಸಾಲ್ಮೊನೆಲ್ಲಾ ಎನ್ನುವ ಬ್ಯಾಕ್ಟೀರಿಯಾ ಹಸಿ ಮತ್ತು ಅರೆಬರೆ ಬೇಯಿಸಿದ ಮೊಟ್ಟೆ ಮತ್ತು ಮಾಂಸದಲ್ಲಿರುತ್ತದೆ. ಈ ರೀತಿಯ ಮೊಟ್ಟೆ, ಮಾಂಸವನ್ನು ಮಕ್ಕಳು ತಿಂದಾಗ ಅದು ಸಾಲ್ಮೊನೆಲ್ಲಾ ಸೋಂಕಿಗೆ ಕಾರಣವಾಗಬಹುದು. ಇದರಿಂದ ಮಕ್ಕಳಲ್ಲಿ ಡಯೇರಿಯಾ, ಹೊಟ್ಟೆನೋವು, ಜ್ವರ, ವಾಂತಿ, ಚಳಿಜ್ವರ, ತಲೆನೋವು ಹಾಗೂ ಮಲದಲ್ಲಿ ರಕ್ತವೂ ಕಾಣಿಸಿಕೊಳ್ಳಬಹುದು. ಹೀಗಾಗಿ ಹಸಿ ಅಥವಾ ಅರೆಬರೆ ಬಂದ ಮಾಂಸ, ಮೊಟ್ಟೆಯನ್ನು ಮಕ್ಕಳಿಗೆ ಕೊಡಲೇಬೇಡಿ.

ಈ ಮೇಲೆ ವಿವರಿಸಿರುವ ಆಹಾರ ವಸ್ತುಗಳು ಒಂದಲ್ಲಾ ಒಂದು ರೀತಿಯಲ್ಲಿ ಮಕ್ಕಳ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಅಪರೂಪಕ್ಕೊಮ್ಮೆ ಚಾಕಲೇಟು ಕೊಟ್ಟರೆ ಅಭ್ಯಂತರವಿಲ್ಲ. ಆದರೆ ಪ್ಯಾಕ್ಡ್‌ ಸ್ನ್ಯಾಕ್ಸ್‌, ಜಂಕ್‌ ಫುಡ್‌, ಫಾಸ್ಟ್‌ ಫುಡ್‌, ಕೋಲ್ಡ್‌ ಡ್ರಿಂಕ್ಸ್‌ಗಳ ಚಟ ಮಕ್ಕಳಿಗೆ ಹತ್ತದಿರುವಂತೆ ನೋಡಿಕೊಳ್ಳಿ. ಇವೆಲ್ಲವೂ ಬೆಳವಣಿಗೆ ಹೊಂದುತ್ತಿರುವ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಉತ್ತಮವಲ್ಲ..!