ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ವ್ಯಾಯಾಮ ಮಾಡಬಹುದೇ? ಇದರಿಂದ ಗರ್ಭಧಾರಣೆಗೆ ತೊಂದರೆಯಾಗಬಹುದೇ?


ಮಗು ಬೇಕು ಎನ್ನುವ ಸಮಯದಲ್ಲಿ ಮಹಿಳೆಯರು ವ್ಯಾಯಾಮ ಮಾಡಬಹುದೇ? ಈ ಪ್ರಶ್ನೆ ಬಹುತೇಕ ಮಹಿಳೆಯರಲ್ಲಿ ಕಾಡುತ್ತದೆ. ನಾವು ದೈಹಿಕ ವ್ಯಾಯಾಮ ಮಾಡುವುದರಿಂದ ಗರ್ಭಧಾರಣೆಗೆ ತೊಂದರೆಯಾಗುವುದೇ ಅಥವಾ ಗರ್ಭ ನಿಲ್ಲುವುದಿಲ್ಲ ಎಂಬ ಭಯ ಇರುತ್ತದೆ. ಈ ರೀತಿ ಭಯ ಪಡುವ ಅವಶ್ಯಕತೆ ಇದೆಯೇ? ಎಂದು ನೋಡೋಣ ಬನ್ನಿ:

ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಗರ್ಭಧಾರಣೆಗೆ ತೊಂದರೆಯಾಗುವುದೇ? ಹಾಗೆ ನೋಡಿದರೆ ವ್ಯಾಯಾಮ ಮಾಡಿದರೆ ಗರ್ಭಧಾರಣೆಗೆ ಸಹಕಾರಿ. ದೈಹಿಕ ವ್ಯಾಯಾಮ ಮಾಡುವುದರಿಂದ ಮೈ ತೂಕ ಕಡಿಮೆಯಾಗುವುದು, ಇದರಿಂದಾಗಿ ಗರ್ಭಧಾರಣೆಗೆ ಸಹಕಾರಿಯಾಗುವುದು. ಅಲ್ಲದೆ ಗರ್ಭಿಣಿಯಾದ ಮೇಲೆ ಮಧುಮೇಹದ ಸಮಸ್ಯೆ ಬರುವುದನ್ನು ತಡೆಗಟ್ಟಲು ಸಹಕಾರಿಯಾಗುವುದು. ಆದ್ದರಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದಾಗ ವ್ಯಾಯಾಮ ಮಾಡಲು ಭಯ ಪಡಬೇಕಾಗಿಲ್ಲ. ವ್ಯಾಯಾಮ ಮಾಡುವುದರಿಂದ ಒಬೆಸಿಟಿ ಸಮಸ್ಯೆ ಕಡಿಮೆಯಾಗುವುದು, ಇದು ಕೂಡ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುವುದು.

ಗರ್ಭಧಾರಣೆಗೆ ಕೆಲವೊಂದು ವ್ಯಾಯಾಮ ತುಂಬಾನೇ ಸಹಕಾರಿ:
ಯೋಗದಲ್ಲಿ ಬಟರ್‌ಫ್ಲೈ ಪೋಸ್‌, ಚಿಕ್ಕಿ ಆಸನ ಹೀಗೆ ಕೆಲವೊಂದು ಆಸನಗಳಿವೆ, ಈ ಆಸನಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಾಗುವುದು. ಅಲ್ಲದೆ ವ್ಯಾಯಾಮ ಮಾಡಿದಾಗ ಮಾನಸಿಕ ಒತ್ತಡ ಕೂಡ ಕಡಿಮೆಯಾಗುವುದು, ಇದು ಕೂಡ ಗರ್ಭಧಾರಣೆಯ ಮೇಲೆ ಪರಿಣಾಮ ಬೀರುವುದು. ಬೇಗನೆ ಗರ್ಭಧರಿಸುವಲ್ಲಿ ಸಹಕಾರಿಯಾಗುವುದು. ನೀವು ಗರ್ಭಧರಿಸುವವರೆಗೆ ದಿನಾ ಮಾಡುವ ಎಲ್ಲಾ ಚಟುವಟಿಕೆ, ಕೆಲಸವನ್ನು ಮಾಡಬಹುದು, ಭಯ ಪಡಬೇಕಾಗಿಲ್ಲ.

ದೇಹಕ್ಕೆ ಕಠಿಣ ದಂಡನೆ ಬೇಡ:
ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದಾಗ ನಡೆಯುವುದು, ಯೋಗ ಈ ಬಗೆಯ ವ್ಯಾಯಾಮ ತುಂಬಾನೇ ಒಳ್ಳೆಯದು, ಆದರೆ ಈ ಅವಧಿಯಲ್ಲಿ ದೇಹವನ್ನು ಅತಿಯಾಗಿ ದಂಡಿಸುವುದು ಬೇಡ. ಅಲ್ಲದೆ ಮುಟ್ಟಾಗದಿದ್ದಾಗ ನಿಮಗೆ ಗರ್ಭಿಣಿ ಇರಬಹುದೇ ಎಂದು ದೌಟು ಬಂದಾಗ ಕೂಡ ಅತಿಯಾದ ವ್ಯಾಯಾಮ ಮಾಡಬೇಡಿ. ಪ್ರೆಗ್ನೆಟ್‌ ಕಿಟ್‌ ಮೂಲಕ ಗರ್ಭಧಾರಣೆಯಾಗಿದೆ ಎಂದು ತಿಳಿದು ಬಂದರೆ ವೈದ್ಯರನ್ನು ಭೇಟಿಯಾಗಿ ಖಚಿತಪಡಿಸಿ ಅವರ ಸಲಹೆ ಸೂಚನೆ ಪಡೆಯಿರಿ.

ಗರ್ಭಿಣಿಯಾಗಿದ್ದಾಗ ವ್ಯಾಯಾಮ ಮಾಡಬಹುದೇ?
ಗರ್ಭಿಣಿಯಾಗಿದ್ದಾಗ ಕೂಡ ವ್ಯಾಯಾಮ ಮಾಡಬಹುದು, ಆದರೆ ವ್ಯಾಯಾಮ ಮಾಡುವ ಮುನ್ನ ನಿಮಗೆ ಯಾವ ಬಗೆಯ ವ್ಯಾಯಾಮ ಒಳ್ಳೆಯದೆಂದು ಎಕ್ಸ್‌ಪರ್ಟ್ ಬಳಿ ಕೇಳಿದ ಬಳಿಕವಷ್ಟೇ ವ್ಯಾಯಾಮ ಮಾಡಬೇಕು. ವೈದ್ಯರು ನಿಮಗೆ ಚೆನ್ನಾಗಿ ರೆಸ್ಟ್‌ ತೆಗೆದುಕೊಳ್ಳಬೇಕು ಎಂದು ಹೇಳಿದರೆ ಸಂಪೂರ್ಣ ರೆಸ್ಟ್ ತೆಗೆದುಕೊಳ್ಳಬೇಕು, ಆವಾಗ ವ್ಯಾಯಾಮದ ಚಿಂತೆ ಬಿಡಿ.

ಎಲ್ಲಾ ಗರ್ಭಿಣಿಯರು ವ್ಯಾಯಾಮ ಮಾಡಬಹುದೇ?
ಪ್ರತಿಯೊಬ್ಬ ಗರ್ಭಿಣಿಯ ದೇಹದ ಸ್ಥಿತಿ ಭಿನ್ನವಾಗಿರುತ್ತದೆ. ಕೆಲವರು ಗರ್ಭಾವಸ್ಥೆಯಲ್ಲಿ ತುಂಬಾನೇ ಚಟುವಟಿಕೆಯಿಂದ ಇರುತ್ತಾರೆ, ಕೆಲಸ-ಕಾರ್ಯಕ್ಕೆ ಓಡಾಡುತ್ತಾ ಇರುತ್ತಾರೆ, ಇನ್ನು ಕೆಲವರು ಬೆಡ್‌ ರೆಸ್ಟ್‌ನಲ್ಲಿ ಇರುತ್ತಾರೆ. ಆದ್ದರಿಂದ ಒಬ್ಬರನ್ನು ಮತ್ತೊಬ್ಬರಿಗೆ ಹೋಲಿಸಲು ಹೋಗಬಾರದು. ನೀವು ನಿಮ್ಮ ವೈದ್ಯರ ಸಲಹೆ ಸೂಚನೆ ಪಾಲಿಸಿ, ಅವರು ನಿಮ್ಮ ಶರೀರದ ಸ್ಥಿತಿ ನೋಡಿ ಕೆಲವೊಂದು ಸೂಚನೆ ನೀಡಿರುತ್ತಾರೆ, ಅದನ್ನು ಪಾಲಿಸಿ ಬದಲಿಗೆ ಬೇರೆಯವರು ವ್ಯಾಯಾಮ ಮಾಡುತ್ತಿದ್ದಾರೆ ಎಂದು ವ್ಯಾಯಾಮ ಮಾಡಲು ಹೋಗಬಾರದು.

ಮೊದಲು ನಿಮ್ಮ ದೇಹ ಏನು ಹೇಳುತ್ತದೆ ಅದನ್ನು ಕೇಳಬೇಕು, ದೇಹಕ್ಕೆ ಆಗುವುದಿಲ್ಲ ಎಂದಾದರೆ ಕಠಿಣ ವ್ಯಾಯಾಮ ಮಾಡಲು ಹೋಗಬಾರದು.

ವ್ಯಾಯಾಮ ಸಹಜ ಹೆರಿಗೆಗೆ ಸಹಕಾರಿ?:
ವೈದ್ಯರು ಏನೂ ತೊಂದರೆಯಿಲ್ಲ ನೀವು ವ್ಯಾಯಾಮ ಮಾಡಬಹುದು ಎಂದು ಹೇಳಿದರೆ ನೀವು ಧೈರ್ಯವಾಗಿ ವ್ಯಾಯಾಮ ಮಾಡಬಹುದು, ಗರ್ಭಾವಸ್ಥೆಯಲ್ಲಿ ದೈಹಿಕವಾಹಿ ಚಟುವಟಿಕೆಯಿಂದ ಇರುವುದು ಸಹಜ ಹೆರಿಗೆಗೆ ಸಹಕಾರಿ.