ಮನುಷ್ಯನಿಗೆ ನೆನಪಿನ ಶಕ್ತಿ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಹುಟ್ಟಿದಾಗಲೇ ಯಾವುದೇ ಕೌಶಲ್ಯಗಳಾಗಲಿ ಅಥವಾ ಅಲೋಚನೆಗಳಾಗಲಿ ನಮಗೆ ಬಳುವಳಿಯಾಗಿ ಬಂದಿರೋದಿಲ್ಲ. ಹಾಗಾಗಿ ಚಿಕ್ಕಮಕ್ಕಳಿರುವಾಗಲೇ ವಿಶೇಷ ಕೌಶಲ್ಯಗಳನ್ನು ಕಲಿಸಿಕೊಡಬೇಕು. ಉದಾಹರಣೆಗೆ ಇವತ್ತು ಏನಾಗಿತ್ತು ಅಂತ ಒಂದೆರಡು ವಾರ ಬಿಟ್ಟು ಕೇಳಿದರೆ ಹೇಳೋದಕ್ಕೆ ತಡ ಮಾಡತ್ತವೆ. ಯಾಕಂದ್ರೆ ಮಕ್ಕಳಿಗೆ ಸರಿಯಾಗಿ ನೆನಪಿರೋದಿಲ್ಲ.
ಸಾಮಾನ್ಯವಾಗಿ ಎಲ್ಲಾ ಚಿಕ್ಕವಯಸ್ಸಿನ
ಮಕ್ಕಳಿಗೂ ನೆನಪಿನ ಶಕ್ತಿ ತುಂಬಾನೇ ಕಡಿಮೆ ಇರುತ್ತದೆ. ಅದನ್ನು ನಾವು ನೈಸರ್ಗಿಕವಾಗಿ ಹೆಚ್ಚು ಮಾಡೋದಕ್ಕೆ
ಪ್ರಯತ್ನಿಸಬೇಕು. ಕೆಲವೊಂದು ನೈಸರ್ಗಿಕ ಚಟುವಟಿಕೆಗಳನ್ನು ಮಾಡೋದ್ರ ಮೂಲಕ ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು
ಹೆಚ್ಚು ಮಾಡಬಹುದು. ಕೆಲವೊಂದು ಚಟುವಟಿಕೆಗಳು ಯಾವುದು ಅನ್ನೋದನ್ನು ತಿಳಿಯೋಣ.
1. ಪೋಷಕಾಂಶಯುಕ್ತ ಆಹಾರಗಳು:
ಪೋಷಕಾಂಶಯುಕ್ತ ಆರೋಗ್ಯಕರ ಆಹಾರ ಸೇವನೆಯು ಮೆದುಳಿನ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಅಷ್ಟೇ
ಅಲ್ಲದೇ, ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರಗಳನ್ನೇ
ನೀಡಿ. ಒಮೆಗಾ-3, ಉತ್ಕರ್ಷಣ ನಿರೋಧಕಗಳು ಮತ್ತು ಫ್ಲೇವನಾಯ್ಡ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳು
ಮೆದುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಕುರುಕಲು ತಿಂಡಿ, ಎಣ್ಣೆ ಪದಾರ್ಥಗಳನ್ನು ಮಕ್ಕಳಿಗೆ ಅಭ್ಯಾಸ
ಮಾಡಿಸಬೇಡಿ.
2. ಬಣ್ಣಗಳು:
ಚಿಕ್ಕ ಮಕ್ಕಳಿಗೆ ಯಾವುದಾದರೂ ಒಂದು ಸಣ್ಣ ವಿಚಾರವನ್ನು ಕಲಿಸೋದು ಕೂಡ ಪೋಷಕರಿಗೆ ದೊಡ್ಡ ಕೆಲಸ ಇದ್ದ
ಹಾಗೆ. ಯಾಕಂದ್ರೆ ಆ ಪುಟ್ಟ ತಲೆಯಲ್ಲಿ ಎಲ್ಲಾ ವಿಚಾರಗಳು ಉಳಿಯೋದಿಲ್ಲ. ಹೀಗಾಗಿ ನೀವು ಅವರಿಗೆ ಯಾವುದೇ
ವಿಚಾರವನ್ನು ಕಲಿಸಬೇಕೆಂದಿದ್ದರೆ ಮೊದಲು ಬಣ್ಣಗಳ ಮೂಲಕವೇ ಕಲಿಸಬೇಕು. ಬಣ್ಣಗಳನ್ನು ಅವರು ಸುಲಭವಾಗಿ
ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ನೀವು ಹೇಳಿ ಕೊಟ್ಟ ಹಾಗೆಯೇ ಅವರ ಮೆದುಳಿನಲ್ಲಿ ಉಳಿಯುತ್ತದೆ.
3. ಅವರಿಂದ ನೀವು ಕಲಿತುಕೊಳ್ಳಿ:
ನಮಗೆ ಯಾವುದಾದರೂ ಒಂದು ವಿಚಾರ ಚೆನ್ನಾಗಿ ಅರ್ಥ ಆಗಿದ್ದರೆ ನಾವು ಅದನ್ನು ಬೇರೆಯವರಿಗೆ ಸುಲಭವಾಗಿ
ಅರ್ಥ ಮಾಡಿಸಬಹುದು. ಅದೇ ರೀತಿ ನಿಮ್ಮ ಮಕ್ಕಳು ಹೊಸ ವಿಚಾರವನ್ನು ಕಲಿತುಕೊಂಡಾಗ ಅದನ್ನು ನಿಮಗೆ ಕಲಿಸಿಕೊಡೋದಕ್ಕೆ
ಹೇಳಿ. ಆಗ ಆ ವಿಚಾರ ಅವರ ತಲೆಯಲ್ಲಿ ಗಟ್ಟಿಯಾಗಿ ಕೂರುತ್ತದೆ ಹಾಗೂ ಎಂದಿಗೂ ಅವರು ಮರೆಯೋದಿಲ್ಲ. ಹೀಗೆ
ಮಾಡುತ್ತಿದ್ದರೆ ಅವರ ಬುದ್ಧಿಶಕ್ತಿ ಮತ್ತಷ್ಟು ಚುರುಕಾಗುತ್ತದೆ.
4. ವ್ಯಾಯಾಮ:
ಪೋಷಕರಿಗೆ ನಿತ್ಯ ವ್ಯಾಯಾಮ ಮಾಡುವ ಅಭ್ಯಾಸ ಇದ್ದರೆ ನಿಮ್ಮ ಮಕ್ಕಳನ್ನು ಈ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ
ಮಾಡಿ. ಈ ರೀತಿ ಮಾಡೋದ್ರಿಂದ ಅವರು ಆರೋಗ್ಯವಾಗಿರೋದು ಮಾತ್ರವಲ್ಲ ಜೊತೆಗೆ ಅವರ ಮೆದುಳು ಚುರುಕಾಗುತ್ತದೆ.
ಜೊತೆಗೆ ಮೆದುಳಿನ ಕಾರ್ಯ ಚಟುವಟಿಕೆಯೂ ಉತ್ತಮಗೊಳ್ಳುತ್ತದೆ.
5. ಧ್ಯಾನ:
ಚಿಕ್ಕ ವಯಸ್ಸಿನಲ್ಲೇ ಧ್ಯಾನ ಮಾಡುವುದು ಹೇಗೆ ಎಂದು ನಿಮ್ಮ ಮಕ್ಕಳಿಗೆ ಕಲಿಸುವುದು ಉತ್ತಮ. ಧ್ಯಾನವು
ನಿಮ್ಮ ಮಗುವನ್ನು ಶಾಂತವಾಗಿರಿಸುತ್ತದೆ. ಮತ್ತು ಏಕಾಗ್ರತೆ ಹೆಚ್ಚಾಗುವಂತೆ ಮಾಡುತ್ತದೆ. ಅಷ್ಟೇ ಅಲ್ಲ,
ಸ್ಮರಣಾ ಶಕ್ತಿ ಕೂಡ ಉತ್ತಮವಾಗುತ್ತದೆ. ಆರಂಭದಲ್ಲಿ ಮಕ್ಕಳಿಗೆ ಧ್ಯಾನ ಮಾಡೋದು ಕಷ್ಟ ಆದರೂ ಕೂಡ ಆಮೇಲೆ
ರೂಢಿಯಾಗುತ್ತದೆ.
6. ಮಕ್ಕಳಿಗೆ ಗೆಜೆಟ್ ಗಳನ್ನು
ಹೆಚ್ಚು ಹೊತ್ತು ನೀಡಬೇಡಿ:
ಈ ಡಿಜಿಟಲ್ ಯುಗದಲ್ಲಿ ಮಕ್ಕಳು ಕೂಡ ಟಿವಿ, ಫೋನ್, ಟ್ಯಾಬ್ ಅಂತ ಅಡಿಕ್ಟ್ ಆಗಿದ್ದಾರೆ. ಇದು ನಿಮ್ಮ
ಮಗುವಿನ ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಅವರ ಸ್ಮರಣಾ ಶಕ್ತಿ ಕಡಿಮೆ ಆಗೋದು ಮಾತ್ರವಲ್ಲದೇ,
ಯಾವುದೇ ವಿಚಾರ ಅವರ ತಲೆಯಲ್ಲಿ ಹೆಚ್ಚು ಹೊತ್ತು ನಿಲ್ಲದಂತೆ ಮಾಡಿ ಬಿಡುತ್ತದೆ.
7. ವೈಯಕ್ತಿಕ ಉದಾಹರಣೆಗಳನ್ನು ನೀಡಿ:
ನಮಗೆ ಯಾರಾದರೂ ಬಂದು ಸಿನಿಮಾ ಕಥೆ ಹೇಳೋದಕ್ಕಿಂತಲೂ ನಾವೇ ಹೋಗಿ ಸಿನಿಮಾ ನೋಡಿದ್ರೆ ನಮಗೆ ಚೆನ್ನಾಗಿ
ಅರ್ಥ ಆಗುತ್ತದೆ. ಅದೇ ರೀತಿ ನಿಮ್ಮ ಪುಟ್ಟ ಮಗುವಿನ ತಲೆ ಅಷ್ಟು ಬೇಗ ವಿಚಾರಗಳು ಹೊಕ್ಕೋದಿಲ್ಲ. ಹೀಗಾಗಿ
ವೈಯಕ್ತಿಕ ಉದಾಹರಣೆಗಳನ್ನು ನೀಡೋದರ ಮೂಲಕ ಅವರಿಗೆ ಅರ್ಥ ಮಾಡಿಸಿ.