ಕೆಲವೊಬ್ರನ್ನು ನೋಡಿದ್ರೆ ಆಕಾಶನೇ ತಲೆಮೇಲೆ ಬಿದ್ದಂಗೆ ಇರತ್ತಾರೆ. ಪಾರ್ಟಿಯಿರಲಿ, ಹಬ್ಬಯಿರಲಿ ಯಾವಗಲೂ ಮೂಖ ಡಲ್ ಆಗಿ ಇರತ್ತೆ. ಅವ್ರದ್ದು ಬರೀ ಅದೇ ಗೋಳಗಾರಿತ್ತದೆ. ನೀವು ಹೀಗೆನಾ ? ಯಾವಾಗ್ಲೂ ಡಲ್ ಆಗಿರ್ತೀರಾ?
ಪ್ರತಿಯೊಬ್ಬ ವ್ಯಕ್ತಿಯು ಬೇರೆ ಬೇರೆ ರೀತಿಯಲ್ಲಿ ಯೋಚನೆ ಮಾಡುತ್ತಾರೆ. ಆದರೆ ಕೆಲವೊಬ್ಬರು ಅತಿಯಾಗಿ ಆಲೋಚನೆ ಮಾಡುತ್ತಾರೆ. ಈಗಾಗಲೇ ನಡೆದಿರುವ ಘಟನೆ, ಮುಂದೆ ನಡೆಯಬಹುದಾದ ಘಟನೆಗಳ ಬಗ್ಗೆ ಊಹಿಸಿ ತಲೆಕೆಡಿಸಿಕೊಳ್ಳುತ್ತಾರೆ. ಇಂಥಹಾ ಆಲೋಚನೆಗಳು ಮಾನಸಿಕವಾಗಿ ನಮ್ಮನ್ನು ದಣಿಯುವಂತೆ ಮಾಡುತ್ತದೆ. ಇದು ದಿನವಿಡೀ ನಾವು ಡಲ್ ಆಗಿರಲು ಕಾರಣವಾಗುತ್ತದೆ. ಖುಷಿಯ ಕ್ಷಣಗಳನ್ನು ಸಹ ಆಸ್ವಾದಿಸಲು ಸಾಧ್ಯವಾಗುವುದಿಲ್ಲ.
ಪ್ರತಿಯೊಬ್ಬರ ಜೀವನಶೈಲಿಯೂ ವಿಭಿನ್ನವಾಗಿರುತ್ತದೆ ಆದರೆ ಕೆಲವರು ವಿವಿಧ ರೀತಿಯ ಚಟುವಟಿಕೆಗೆಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಲವೊಬ್ಬರನ್ನು ನೀವು ಗಮನಿಸಿರಬಹುದು. ದಿನಪೂರ್ತಿ ಉತ್ಸುಕರಾಗಿರುತ್ತಾರೆ. ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಮಾತುಕತೆಯಲ್ಲಿ ಭಾಗವಹಿಸುತ್ತಾರೆ. ಆದರೆ ಇನ್ನು ಕೆಲವರು ಎಂಥಾ ಹಬ್ಬವಿರಲಿ ಫುಲ್ ಡಲ್ ಆಗಿರುತ್ತಾರೆ. ಉದಾಸೀನ ಮನೋಭಾವವನ್ನು ಹೊಂದಿರುತ್ತಾರೆ. ಇದಕ್ಕೇನು ಕಾರಣ ಎಂದು ತಿಳಿಯೋಣ.
ಕಳೆದುಹೋದ ಕ್ಷಣದ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಡಿ:
ಜೀವನದಲ್ಲಿ ಈ ಹಿಂದೆ ಮಾಡಿರುವ ತಪ್ಪುಗಳಿಂದ ನಾವು ಪಾಠ ಕಲಿಯಬಹುದಷ್ಟೇ. ಕಾಲವನ್ನು ಹಿಂದಕ್ಕೆ ಸರಿಸಿ ತಪ್ಪನ್ನು ಸರಿಪಡಿಸಲು ಸಾಧ್ಯವಿಲ್ಲ. ಹೀಗಾಗಿ ಈ ಹಿಂದೆ ಮಾಡಿರುವ ತಪ್ಪಿನ ಬಗ್ಗೆ, ಅದರಿಂದಾದ ಪರಿಣಾಮಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು ಬಿಡಿ. ಆ ತಪ್ಪಿನಿಂದ ಕಲಿತ ಪಾಠವಷ್ಟೇ ನಿಮ್ಮ ಮನದಲ್ಲಿರಲಿ.
ಭವಿಷ್ಯದ ಬಗ್ಗೆ ವಿನಾಕಾರಣ ಚಿಂತೆ ಮಾಡಬೇಡಿ:
ಭವಿಷ್ಯದಲ್ಲಿ ಎದುರಾಗುವ ಅಪಾಯವನ್ನು ನಾವು ಈಗಲೇ ಊಹಿಸಿ ಭಯಪಡುವುದು ಸೂಕ್ತವಲ್ಲ. ಭವಿಷ್ಯದ ಬಗ್ಗೆ ವಿನಾಕಾರಣ ಆಲೋಚನೆ ಮಾಡುವುದು ಚಿಂತೆ ಮತ್ತು ಆತಂಕವನ್ನು ಉಂಟುಮಾಡುತ್ತದೆ. ಭವಿಷ್ಯದಲ್ಲಿ ಏನಾಗಲಿದೆಯೋ ಅದೇ ಆಗಲಿದೆ. ಅದನ್ನು ಬದಲಾಯಿಸಲು ನಿಮ್ಮ ಪರಿಶ್ರಮ ಪಡಬಹುದಷ್ಟೇ. ವಿನಾಕಾರಣ ಅದರ ಬಗ್ಗೆಯೇ ಯೋಚಿಸಿ ಇಂದಿನ ಖುಷಿಯನ್ನು ಸಹ ಕಳೆದುಕೊಳ್ಳುವುದು ಮೂರ್ಖತನ.
ಒತ್ತಡದಲ್ಲಿಯೇ ಸಮಯ ಕಳೆಯುವುದು:
ಅತಿಯಾಗಿ ಆಲೋಚಿಸುವುದರಲ್ಲೇ ಹಲವರು ಅದೆಷ್ಟೋ ಗಂಟೆಗಳನ್ನು ವ್ಯರ್ಥ ಮಾಡುತ್ತಾರೆ. ಇದು ಆತಂಕವನ್ನು ಹೆಚ್ಚಿಸಬಹುದು. ನೀವು ಅತಿಯಾಗಿ ಆಲೋಚಿಸುತ್ತಿರುವಾಗ ಕೆಲಸದ ಮೇಲೆ ನಿಮ್ಮ ಗಮನವು ಕಡಿಮೆಯಾಗುವುದಲ್ಲದೆ, ತಲೆನೋವು, ದೇಹನೋವು ಮತ್ತು ಜೀರ್ಣಕಾರಿ ಸಮಸ್ಯೆಗಳಂತಹ ದೈಹಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಅನೇಕ ಜನರು ತಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳ ಬಗ್ಗೆ ಚಿಂತೆ ಮಾಡುತ್ತಾರೆ. ಅತಿಯಾಗಿ ಯೋಚಿಸುವ ಅಭ್ಯಾಸವು ವ್ಯಕ್ತಿಗಳ ಸಮಯ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಇದರ ಬದಲು ಸಮಯವನ್ನು ನಾವು ಎದುರಿಸುತ್ತಿರುವ ಸವಾಲುಗಳಿಗೆ ಸೃಜನಶೀಲ ಪರಿಹಾರಗಳನ್ನು ಹುಡುಕಲು ಬಳಸಿಕೊಳ್ಳಬಹುದು.
ಹೊಸತನ್ನು ಕಲಿಯದಿರುವುದು:
ರೊಟೀನ್ ಜೀವನಕ್ರಮವನ್ನು ಅನುಸರಿಸುವುದು ವ್ಯಕ್ತಿ ಡಲ್ ಆಗಿರುವಂತೆ ಮಾಡುತ್ತದೆ. ಜೀವನದಲ್ಲಿ ಹೊಸತೇನು ಇಲ್ಲದಿದ್ದಾಗ ಪ್ರತಿದಿನವೂ ನೀರಸವಾಗಿರುತ್ತದೆ. ಸೃಜನಶೀಲತೆ ಮತ್ತು ಕಲಿಕೆಯ ವ್ಯಾಪ್ತಿಯಿಲ್ಲದ ಏಕತಾನತೆಯ ದೈನಂದಿನ ದಿನಚರಿಯನ್ನು ಅನುಸರಿಸುವುದು ನಮ್ಮನ್ನು ಅತೃಪ್ತಿ ಮತ್ತು ಮಂದಗೊಳಿಸುತ್ತಿರುವ ವಿಷಯವಾಗಿದೆ. ಹೀಗಾಗಿ ಯಾವತ್ತೂ ಹೊಸ ಹೊಸತನ್ನು ಕಲಿಯುತ್ತಿರಿ. ಹೊಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
ಹೊಸ ಹವ್ಯಾಸ ಅಥವಾ ಹೊಸ ಕೌಶಲ್ಯಗಳನ್ನು ಕಲಿಯಿರಿ:
ಇದು ಮನಸ್ಸನ್ನು ಚುರುಕಾಗಿಸುತ್ತದೆ, ಮನಸ್ಸಿಗೆ ಖುಷಿ ನೀಡುತ್ತದೆ ಮತ್ತು ಸಮಯವನ್ನು ಅರ್ಥಪೂರ್ಣವಾದ ರೀತಿಯಲ್ಲಿ ಕಳೆಯಲು ಸಹಾಯ ಮಾಡುತ್ತದೆ. ದಿನವಿಡೀ ಖುಷಿಯಾಗಿರಲು ನೆರವಾಗುತ್ತದೆ.