ಮುರಿದು ಬಿದ್ದ ಸ್ನೇಹ, ನೋವಿನಿಂದ ಹೊರಗೆ ಬರಲು ಕೆಲವು ಸಲಹೆ

ಸ್ನೇಹ ಅಮೂಲ್ಯವಾದ ರತ್ನ. ನಮಗೆ ಸಾಕಷ್ಟು ಸ್ನೇಹಿತರು ಸಿಗಬಹುದು. ಆದರೆ ಒಂದೊಳ್ಳೆ ಸ್ನೇಹವನ್ನು ಕಾಪಾಡಿಕೊಂಡು ಹೋಗುವುದು ಬಹಳ ಕಷ್ಟ. ಚಪ್ಪಾಳೆ ತಟ್ಟುವ ನೂರಾರು ಸ್ನೇಹಿತರ ಬದಲು, ತಪ್ಪು ತಿದ್ದಿ ಹೇಳುವ ಒಬ್ಬ ಸ್ನೇಹಿತ ನಮ್ಮ ಜೊತೆ ಇದ್ದರೆ ಅಲ್ಲೊಂದು ಸ್ವರ್ಗ ಸೃಷ್ಟಿಯಾಗುತ್ತದೆ. ಪರಸ್ಪರ ಸ್ನೇಹಿತರು ನೋವನ್ನು ತೋಡಿಕೊಳ್ಳುತ್ತಾರೆ.

ಸ್ನೇಹಿತರ ಪ್ರತಿಯೊಂದು ವಿಷಯವು ಇನ್ನೊಬ್ಬ ಸ್ನೇಹಿತನಿಗೆ ತಿಳಿದಿರುತ್ತದೆ. ಆದರೆ ಈ ಅಧ್ಬುತ ಸ್ನೇಹ ಕೆಲವು ಬಾರಿ ಅನೇಕ ಕಾರಣಕ್ಕೆ ಮುರಿದು ಬೀಳುತ್ತದೆ. ಒಂದೊಳ್ಳೆ ಸ್ನೇಹಿತ ದೂರ ಹೋದಾಗ ಮನಸ್ಸು ಖಾಲಿಯಾಗುತ್ತದೆ. ಆ ದುಃಖವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಪ್ರೀತಿಯಲ್ಲಿ ಬ್ರೇಕಪ್ ಆದಾಗ ಅನುಭವಿಸುವ ಸಂಕಷ್ಟ, ನೋವಿಗಿಂತ ಎರಡು ಪಟ್ಟು ಹೆಚ್ಚು ನೋವು ಸ್ನೇಹಿತರನ್ನು ಕಳೆದುಕೊಂಡಾಗ ಆಗುತ್ತದೆ ಎಂಬುದನ್ನು ನೀವು ಒಪ್ಪಲೇಬೇಕು. ಸ್ನೇಹಿತರು ದೂರವಾದಾಗ ಏನು ಮಾಡಬೇಕು? ಅದರಿಂದ ಹೊರಗೆ ಬರಲು ಯಾವ ದಾರಿ ಅನುಸರಿಸಬೇಕೆಂಬ ಸಲಹೆ ಇಲ್ಲಿದೆ.

ಸ್ನೇಹ ಕಳೆದುಕೊಂಡಾಗ ಏನು ಮಾಡ್ಬೇಕು?
ನೋವನ್ನು ಗುರುತಿಸಿ:
ಏಕಾಏಕಿ ಸ್ನೇಹಿತರು ದೂರವಾದಾಗ ಆಕಾಶ ತಲೆ ಮೇಲೆ ಬಿದ್ದ ಅನುಭವವಾಗುತ್ತದೆ. ಪ್ರತಿಯೊಂದು ಕೆಲಸದಲ್ಲಿ ಜೊತೆಗಿರುತ್ತಿದ್ದ ವ್ಯಕ್ತಿ, ಈಗ ನಮ್ಮ ಜೊತೆ ಇಲ್ಲಾವೆಂದರೆ ನೋವು ಅರಗಿಸಿಕೊಳ್ಳುವುದು ಕಷ್ಟ. ಆದರೆ ಅತಿ ಹೆಚ್ಚು ಗಾಬರಿಯಾಗಬೇಡಿ. ಮೊದಲಿಗೆ ನಿಮ್ಮ ದುಃಖ ಸಾಮಾನ್ಯವಾಗಿದೆ ಎಂದು ತಿಳಿಯಿರಿ. ನಂತರ ಶಾಂತವಾಗಿ ಅದನ್ನು ಹೇಗೆ ಬಗೆಹರಿಸಬೇಕೆಂಬ ಬಗ್ಗೆ ಆಲೋಚನೆ ಮಾಡಿ.

ಸ್ವಯಂ ಕಾಳಜಿ:
ಸ್ನೇಹ ಕಳೆದುಹೋದ ಮೇಲೆ ನೀವು ರೂಮಿನಲ್ಲಿ ಬಂಧಿಯಾಗಬೇಡಿ. ಮನೆಯಿಂದ ಹೊರಗೆ ಬನ್ನಿ. ಜನರ ಜೊತೆ ಬೆರಯಿರಿ. ದೈನಂದಿನ ಹಾಗೂ ಸಾಪ್ತಾಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ನಿಮಗೆ ತೃಪ್ತಿ ಅಥವಾ ಸಂತೋಷವನ್ನು ನೀಡುವ ಚಟುವಟಿಕೆಗಳಲ್ಲಿ ಭಾಗವಹಿಸಿ. ಓದು, ಸಂಗೀತ, ಕಲೆ, ಪ್ರವಾಸ ಯಾವುದು ನಿಮಗೆ ಸಂತೋಷ ನೀಡುತ್ತದೆಯೋ ಅದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ನೀಡಿ. ಅವರ ನೆನಪಿನಲ್ಲಿ ಆಹಾರ, ಊಟ ಬಿಡಬೇಡಿ.

ನೆನಪುಗಳನ್ನು ದೂರ ಮಾಡಿ:
ಸ್ನೇಹ ಮತ್ತೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದರೆ ಅವರ ನೆನಪುಗಳನ್ನು ಅಳಿಸುವ ಪ್ರಯತ್ನ ಮಾಡಿ. ನಿಮ್ಮ ಬಳಿ ಇರುವ ಅವರ ಫೋಟೋ, ಉಡುಗೊರೆಗಳನ್ನು ಕಣ್ಣಿಗೆ ಕಾಣದಂತಿಡಿ. ವಸ್ತುಗಳಿಗಿಂತ ಮನಸ್ಸಿನಲ್ಲಿರುವ ನೆನಪುಗಳನ್ನು ಹೊರಗೆ ಹಾಕಬೇಕು.

ವ್ಯಾಯಾಮ:
ಹೊಸ ಜಿಮ್‌ಗೆ ಸೇರಿ. ಯೋಗ ಅಥವಾ ಇತರ ತರಬೇತಿಯನ್ನು ಅಭ್ಯಾಸ ಮಾಡಿ. ದೈಹಿಕ ಸಾಮರ್ಥ್ಯವು ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಅದ್ಭುತ ಪ್ರಯೋಜನಗಳನ್ನು ಬೀರುತ್ತದೆ. ಇದು ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. 

ಆಪ್ತರೊಂದಿಗೆ ಮಾತನಾಡಿ:
ಸ್ನೇಹ ಮುರಿದು ಬಿದ್ದಾಗ ಇನ್ನೊಬ್ಬರ ಆಸರೆಯನ್ನು ಮನಸ್ಸು ಬಯಸುತ್ತದೆ. ಆಗ ನಿಮಗೆ ಆಪ್ತರೆನಿಸಿದವರ ಜೊತೆ ಮಾತನಾಡಿ. ಅದು ನಿಮ್ಮ ಸ್ನೇಹಿತರಾಗಬೇಕೆಂದೇನಿಲ್ಲ. ನಿಮ್ಮ ತಂದೆ-ತಾಯಿ, ಸಂಬಂಧಿಯಾಗಿರಬಹುದು. ಅವರ ಮುಂದೆ ನಿಮ್ಮ ನೋವು ಹೇಳಿಕೊಂಡು ಮನಸ್ಸನ್ನು ಶಾಂತಗೊಳಿಸಿಕೊಳ್ಳಿ.

ಸಾಮಾಜಿಕ ಜಾಲತಾಣ:
ಸಾಮಾಜಿಕ ಜಾಲತಾಣಗಳು ನಮ್ಮ ಮನಸ್ಸನ್ನು ಕೆಣಕುತ್ತವೆ. ಅದ್ರಲ್ಲೂ ನಮ್ಮ ಹಳೆ ಸ್ನೇಹಿತರ ಫೋಟೋಗಳು ಮನಸ್ಸಿಗೆ ಘಾಸಿಯುಂಟು ಮಾಡುತ್ತವೆ. ಅವರು ನಮ್ಮನ್ನು ಬಿಟ್ಟು ಎಂಜಾಯ್ ಮಾಡ್ತಿದ್ದಾರೆ ಎಂಬ ಸಂಗತಿ ಮತ್ತಷ್ಟು ನೋವುಂಟು ಮಾಡುತ್ತದೆ. ಹಾಗಾಗಿ ಆದಷ್ಟು ಮಾಜಿ ಸ್ನೇಹಿತರ ಸಾಮಾಜಿಕ ಜಾಲತಾಣ ಅಕೌಂಟ್ ಬ್ಲಾಕ್ ಮಾಡಿ. 

ಸ್ನೇಹದಲ್ಲಿ ಏನು ತಪ್ಪಾಗಿದೆ ಎಂಬುದನ್ನು ಪರಿಶೀಲಿಸಿ:
ಕೆಲವೊಮ್ಮೆ ಸಣ್ಣ ತಪ್ಪಿಗೆ ಸ್ನೇಹ ಹಾಳಾಗುತ್ತದೆ. ಹಾಗಾಗಿ ಎಲ್ಲಿ ಏನು ತಪ್ಪಾಗಿದೆ ಎಂಬುದನ್ನು ನೋಡಿ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿ. ನಿಮ್ಮಿಂದ ತಪ್ಪಾಗಿದೆ ಎಂದಾದ್ರೆ ತಕ್ಷಣ ಯಾವುದೇ ಅಹಂ ಇಲ್ಲದೆಯೇ ಅವರ ಮುಂದೆ ಕ್ಷಮೆ ಕೇಳಿ. 

 ಅನೇಕ ಬಾರಿ ಸ್ನೇಹ ಹಾಳಾಗಲು ಮೂರನೇಯವರ ಆಗಮನ: ಸ್ನೇಹಿತರ ಮಧ್ಯೆ ಮತ್ತೊಬ್ಬ ಸ್ನೇಹಿತ ಅಥವಾ ಪ್ರೇಮಿ ಬಂದಾಗ ಸ್ನೇಹ ದೂರವಾಗುತ್ತದೆ. ನಮ್ಮ ಆಪ್ತರು, ಇನ್ನೊಬ್ಬರಿಗೆ ಆದ್ಯತೆ ನೀಡ್ತಿದ್ದಾರೆಂಬುದು ಗೊತ್ತಾದಾಗ ನೋವಾಗುತ್ತದೆ. ಅವರ ಕಡೆಗಣನೆ ಮನಸ್ಸನ್ನು ಚುಚ್ಚುತ್ತದೆ. ಇಂಥ ಸಂದರ್ಭದಲ್ಲಿ ವಾಸ್ತವವನ್ನು ಅರಿಯಬೇಕು. ಅವರಿಗೂ ಇನ್ನೊಂದು ಪ್ರಪಂಚವಿದೆ. ನಮ್ಮಷ್ಟೇ ಅವರು ಬೇರೆಯವರನ್ನೂ ಪ್ರೀತಿಸುತ್ತಾರೆಂಬುದನ್ನು ಅರಿಯಬೇಕು. ಅವರು ಎಲ್ಲ ಸಮಯ ನಮಗೆ ಮೀಸಲಿಡಬೇಕು ಎಂಬ ಮನೋಭಾವ ಬಿಟ್ಟಲ್ಲಿ ಸಮಸ್ಯೆ ಬೇಗ ದೂರವಾಗುತ್ತದೆ.