ಮೇಕಪ್‌ಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ನಂಬಲೇಬೇಡಿ!


ಹೆಣ್ಣುಮಕ್ಕಳ ನೆಚ್ಚಿನ ವಿಚಾರಗಳಲ್ಲಿ ಮೇಕಪ್ ಕೂಡ ಒಂದು. ನಮ್ಮ ಅಂದವನ್ನು ಹೆಚ್ಚಿಸಿ, ಮನದಲ್ಲಿ ಒಂದು ಆತ್ಮವಿಶ್ವಾಸವನ್ನು ತುಂಬುವ ಶಕ್ತಿ ಈ ಮೇಕಪ್‌ಗೆ ಇದೆ. ಆದರೆ, ಈ ಮೇಕಪ್ ಬಗ್ಗೆ ಕೂಡ ಹಲವಾರು ಸುಳ್ಳು ಪುರಾಣಗಳಿವೆ. ಇದನ್ನೇ ಜನ ನಿಜ ಎಂದು ನಂಬಿಕೊಂಡು, ಅದನ್ನು ಅನುಸರಿಸುವವರೂ ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ.

ಹಾಗಾದರೆ, ಮೇಕಪ್‌ಗೆ ಸಂಬಂಧಿಸಿದಂತೆ ಇರುವ ಸುಳ್ಳು ಅಥವಾ ಅಪನಂಬಿಕೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ:

ಎಣ್ಣೆಯುಕ್ತ ತ್ವಚೆಗೆ ಮಾಯಿಶ್ಚರೈಸರ್ ಅಗತ್ಯವಿಲ್ಲ: 
ನಿಮ್ಮ ತ್ವಚೆ ಡ್ರೈ ಆಗಿರಲಿ ಅಥವಾ ಎಣ್ಣೆಯುಕ್ತವಾಗಿರಲಿ, ಅದನ್ನು ನಿಯಮಿತವಾಗಿ ಹೈಡ್ರೀಕರಿಸುವುದು ಅತ್ಯಗತ್ಯ. ಚರ್ಮವು ಸೆಬಮ್ ಎಂಬ ನೈಸರ್ಗಿಕ ತೈಲವನ್ನು ಬಿಡುಗಡೆ ಮಾಡುತ್ತದೆ. ತ್ವಚೆಯನ್ನು ಹೈಡ್ರೇಟ್ ಆಗಿ ಇಡಲು ಇದು ಮುಖ್ಯವಾಗಿದ್ದು, ಚರ್ಮವು ಸ್ರವಿಸುವ ನೈಸರ್ಗಿಕ ತೈಲವನ್ನು ಸೆಬಮ್ ಎಂದು ಕರೆಯಲಾಗುತ್ತದೆ. ಮಾಯಿಶ್ಚರೈಸರ್ ಚರ್ಮದ ಹೊರ ಪದರದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಮೇದೋಗ್ರಂಥಿಗಳ ಸ್ರಾವವನ್ನು ನಿಯಂತ್ರಿಸುತ್ತದೆ. ಏಕೆಂದರೆ, ಈ ಗ್ರಂಥಿಗಳ ಅತಿಯಾದ ಸ್ರಾವ ಅಥವಾ ಕಡಿಮೆ ಸ್ರಾವ ಎರಡೂ ಸಹ ಹಾನಿಕಾರಕವೇ. ಆದ್ದರಿಂದ ಇದನ್ನು ನಿಯಂತ್ರಿಸುವುದು ಮುಖ್ಯ. ಈ ಕಾರ್ಯಗಳಿಗೆ ಮಾಯಿಶ್ಚರೈಸರ್ ಅತ್ಯಗತ್ಯ.

ಮೇಕಪ್ ಮೊಡವೆಗೆ ಕಾರಣವಾಗಬಹುದು:
ಇದೊಂದು ಸಾಮಾನ್ಯವಾಗಿ ಹೆಚ್ಚಿನವರು ಸತ್ಯವೆಂದು ನಂಬಿಕೊಂಡಿರುವ ಸುಳ್ಳು. ಮೇಕಪ್ ಮೊಡವೆಗಳಿಗೆ ಕಾರಣವಾಗಬಹುದು, ಅದು ಯಾವಾಗ ಅಂದರೆ, ಮೇಕಪ್ ಮುಖದಲ್ಲಿ ಗಂಟೆಗಟ್ಟಲೆ ಬಿಡುವುದರಿಂದ ಜೊತೆಗೆ, ಮೇಕಪ್ ತೆಗೆಯದೇ ರಾತ್ರಿಯಿಡೀ ಬಿಡುವುದರಿಂದ ಮೊಡವೆಗಳು ಅಗಬಹುದು. ಜೊತೆಗೆ ಯಾವುದಾದರೂ ಉತ್ಪನ್ನಗಳಿಗೆ ಅಲರ್ಜಿಯನ್ನು ಹೊಂದಿದ್ದರೆ ಮಾತ್ರ ಮೊಡವೆ ಉಂಟಾಗಬಹುದೇ ಹೊರತು, ಫ್ರೆಶ್ ಮುಖವು ಎಂದಿಗೂ ಮೊಡವೆಗಳನ್ನು ಉಂಟುಮಾಡುವುದಿಲ್ಲ. ಇದರ ಜೊತೆಗೆ ಗಮನ ಕೊಡಬೇಕಾದ ಇನ್ನೊಂದು ವಿಷಯವೆಂದರೆ ನಿಮ್ಮ ಮೇಕಪ್ ಬ್ರಷ್ಗಳ ನೈರ್ಮಲ್ಯ.

ಮೇಕಪ್ ಉತ್ಪನ್ನಗಳು ಅವಧಿ ಮೀರುವುದಿಲ್ಲ:
ಪ್ರತಿಯೊಂದು ಉತ್ಪನ್ನವು ಮುಕ್ತಾಯ ದಿನಾಂಕ (ಎಕ್ಸ್ಪೈಯರ್ ಡೇಟ್) ಹೊಂದಿರುತ್ತದೆ. ಅದರಲ್ಲೂ ಕಾಸ್ಮೆಟಿಕ್ ಉತ್ಪನ್ನಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ ಏಕೆಂದರೆ, ಅವುಗಳಲ್ಲಿ ಬಹಳಷ್ಟು ರಾಸಾಯನಿಕಗಳಿರುವುದರಿಂದ, ಮುಕ್ತಾಯ ದಿನಾಂಕದ ನಂತರ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಜೊತೆಗೆ ಅವಧಿ ಮೀರಿದ ಮೇಕಪ್ ಉತ್ಪನ್ನಗಳು ಚರ್ಮದ ಸೋಂಕನ್ನು ಉಂಟುಮಾಡಬಹುದು, ಏಕೆಂದರೆ ಅವೆಲ್ಲವೂ ನಿರ್ದಿಷ್ಟ ಜೀವಿತಾವಧಿಯೊಂದಿಗೆ ಬರುತ್ತವೆ.


ಮೇಕಪ್ ಹಾಕಿಕೊಂಡರೆ ಸನ್ಸ್ಕ್ರೀನ್ ಅಗತ್ಯವಿಲ್ಲ ಎಂಬುದು:

ಇದು ಸುಳ್ಳು. ಏಕೆಂದರೆ ಸನ್ಸ್ಕ್ರೀನ್ ಯಾವಾಗಲೂ ಅಗತ್ಯ. ಕಾಲ ಯಾವುದೇ ಇರಲಿ, ಏನೇ ಮುಖಕ್ಕೆ ಬಳಸಿರಲಿ ಸನ್ಸ್ಕ್ರೀನ್ ಬೇಕೇಬೇಕು. ಇದು ನಿಮ್ಮ ತ್ವಚೆಯನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಣೆ ನೀಡುವುದು. ಆದ್ದರಿಂದ ಮೇಕಪ್ ಹಚ್ಚಿಕೊಳ್ಳುವ ಮುನ್ನ ಸನ್ಸ್ಕ್ರೀನ್ ಹಚ್ಚಿಕೊಳ್ಳುವುದು ಮುಖ್ಯವಾಗಿದೆ.

ಕೆಂಪು ಲಿಪ್ಸ್ಟಿಕ್ನಲ್ಲಿ ಎಲ್ಲರೂ ಚೆನ್ನಾಗಿ ಕಾಣುವುದಿಲ್ಲ:
ಹೆಚ್ಚಿನವರು ಹೇಳುವುದುಂಟು, ಕೆಂಪು ಲಿಪ್ಸ್ಟಿಕ್ ನಿರ್ದಿಷ್ಟ ಚರ್ಮದ ಟೋನ್ಗೆ ಸರಿಹೊಂದುವುದಿಲ್ಲ ಎಂಬುದು. ಇದು ಸುಳ್ಳು. ಎಲ್ಲಾ ರೀತಿಯ ಸ್ಕಿನ್ ಟೋನ್ ಹೊಂದಿರುವವರಿಗೆ ಸೂಕ್ತವಾಗಿ ಹೊಂದಿಕೊಳ್ಳುವ ಕೆಂಪು ಬಣ್ಣದ ಹಲವಾರು ಶೇಡ್ಗಳಿವೆ. ಆದರೆ ಅದನ್ನು ಸರಿಯಾಗಿ, ನಿಮ್ಮ ತ್ವಚೆಗೆ ಸೂಕ್ತವಾಗಿರುವಂತಹ ಶೇಡ್ ಆಯ್ಕೆ ಮಾಡಬೇಕಷ್ಟೆ. ನಿಮ್ಮ ಸ್ಕಿನ್ ಟೋನ್ ಗಮನದಲ್ಲಿಟ್ಟುಕೊಂಡು, ಕೆಂಪು ಬಣ್ಣದ ಬೇರೆ ಬೇರೆ ಶೇಡ್ ಆಯ್ಕೆ ಮಾಡಿಕೊಳ್ಳಬೇಕು.

ದುಬಾರಿ ಉತ್ಪನ್ನಗಳು ಮಾತ್ರ ಉತ್ತಮ ಗುಣಮಟ್ಟದ್ದಾಗಿರುತ್ತವೆ:
ಇದು ಹೆಚ್ಚಾಗಿ ಎಲ್ಲರೂ ನಂಬುವಂತಹ ವಿಚಾರವಾಗಿದೆ. ಇದು ಸ್ವಲ್ಪ ಮಟ್ಟಿಗೆ ನಿಜ ಕೂಡ. ಆದರೆ ಎಲ್ಲದಕ್ಕೂ ಸೂಕ್ತವಲ್ಲ. ಕೆಲವೊಂದು ಕಡಿಮೆ ಬೆಲೆ ಉತ್ಪನ್ನಗಳು ಸಹ ಉತ್ತಮ ಗುಣಮಟ್ಟವನ್ನು ಹೊಂದಿರುತ್ತವೆ. ಇನ್ನೂ ಕೆಲವು ದುಬಾರಿ ಉತ್ಪನ್ನಗಳು ಸಹ, ಒಳ್ಳೆಯ ಗುಣಮಟ್ಟ ಹೊಂದಿರದೇ ಇರಬಹುದು ಅಥವಾ ಅದು ನಿಮ್ಮ ತ್ವಚೆಗೆ ಹೊಂದಿಕೊಳ್ಳದೇ ಇರಬಹುದು. ಆದ್ದರಿಂದ ಇಲ್ಲಿ ಬೆಲೆ ಯಾವುದೇ ವ್ಯತ್ಯಾಸನವನ್ನು ತರಲಾರದು. ಆದರೆ ಉತ್ಪನ್ನದ ಗುಣಮಟ್ಟ ಅಷ್ಟೇ ನಿಮ್ಮ ಮೇಕಪ್ಗೆ ಮುಖ್ಯವಾದುದಾಗಿದೆ.