ಮನೆಗೊಂದು ಪುಟಾಣಿ ಪಾಪು ಬರ್ತಿದೆ ಅಂದ್ರೆ ಎಲ್ಲರಿಗೂ ಖುಷಿಯ ವಿಷಯವೇ ಆಗಿರುತ್ತದೆ. ಮೊದಲ ಬಾರಿ ತಾಯಿಯಾಗ್ತಿರುವ ಮಹಿಳೆಗೆ ಆ ಖುಷಿಯನ್ನು ಹಂಚಿಕೊಳ್ಳಲು ಪದ ಸಾಲುವುದಿಲ್ಲ. ಆದ್ರೆ ಗರ್ಭಿಣಿ ಮಹಿಳೆ ಅನೇಕ ಸವಾಲುಗಳನ್ನು ಎದುರಿಸ್ತಾಳೆ.
ಗರ್ಭಿಣಿಯರಿಗೆ ದೇಹದಲ್ಲಿ ಬಹಳ ಬದಲಾವಣೆಯಾಗ್ತಿರುತ್ತದೆ. ಇದನ್ನು ಆಕೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆಕೆ ಮಾತ್ರವಲ್ಲ ಮೊದಲ ಬಾರಿ ತಂದೆಯಾಗ್ತಿರುವ ಪುರುಷನಿಗೂ ಅನೇಕ ಪ್ರಶ್ನೆಗಳಿರುತ್ತವೆ. ಆತನಿಗೆ ಪತ್ನಿಯ ಜೊತೆ ಹೇಗೆ ನಡೆದುಕೊಳ್ಳಬೇಕೆಂಬುದು ತಿಳಿಯೋದಿಲ್ಲ. ಮೂರು ತಿಂಗಳವರೆಗೆ ನಿರಂತರ ವಾಂತಿ ಮಾಡುವ ಮಹಿಳೆಯರಿದ್ದಾರೆ. ಆ ಸಂದರ್ಭದಲ್ಲಿ ಪತ್ನಿಗೆ ಹೇಗೆ ಸಹಾಯ ಮಾಡಬೇಕು ಎಂಬುದು ಪತಿಯಾದವನಿಗೆ ತಿಳಿಯುವುದಿಲ್ಲ.
ಪತ್ನಿಯ ಕೆಲ ನಡವಳಿಕೆ ಆತನಿಗೆ ವಿಚಿತ್ರವೆನ್ನಿಸುತ್ತದೆ. ಪತ್ನಿಯ ಬದಲಾದ ವರ್ತನೆಗೆ ಹೊಂದಿಕೊಳ್ಳುವುದು ಹಾಗೂ ಆಕೆ ಅಗತ್ಯತೆಗಳನ್ನು ಅರಿತು ಆಕೆಗೆ ನೆರವಾಗುವುದು ಹೇಗೆ ಎಂಬ ಪ್ರಶ್ನೆ ಆತನನ್ನು ಕಾಡುತ್ತದೆ. ನಾವಿಂದು ಗರ್ಭಿಣಿ ಪತ್ನಿ ಹೊಂದಿರುವ ಪುರುಷರು ತಿಳಿಯಲೇಬೇಕಾದ ಕೆಲ ವಿಷಯವನ್ನು ಹೇಳ್ತೇವೆ.
ಹಸಿವು:
ಗರ್ಭಿಣಿಯರಿಗೆ ಹಸಿವು ಸಾಮಾನ್ಯ. ಯಾವುದೇ ಸಮಯದಲ್ಲಿ ಬೇಕಾದ್ರೂ ಗರ್ಭಿಣಿ ಆಹಾರ ಕೇಳಬಹುದು. ಕೆಲ ಮಹಿಳೆಯರು ಮಧ್ಯರಾತ್ರಿ ಆಹಾರ ಕೇಳುವುದಿದೆ. ಪತಿಯಾದವನು ಗರ್ಭಿಣಿಯ ಈ ವಿಷ್ಯವನ್ನು ತಿಳಿದಿರಬೇಕು. ಹಾಗೆ ಕೈಲಾದಷ್ಟು ಪತ್ನಿಯ ಹಸಿವನ್ನು ನೀಗಿಸುವ ಪ್ರಯತ್ನ ನಡೆಸಬೇಕು. ಆಕೆಗೆ ಇಷ್ಟವಾದದ್ದನ್ನು ತಂದುಕೊಡುವ ಪ್ರಯತ್ನ ಮಾಡಬೇಕು.
ವಿಚಿತ್ರ ಆಸೆ:
ಗರ್ಭಿಣಿಯರು ದಿನ ನಿತ್ಯದ ಆಹಾರ ಮಾತ್ರವಲ್ಲ ವಿಚಿತ್ರ ಆಹಾರ ತಿನ್ನುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ಪತಿಯಾದವನಿಗೆ ಈ ಸಂಗತಿ ತಿಳಿದಿರಬೇಕು. ಪತ್ನಿ ವಿಚಿತ್ರ ಆಹಾರವನ್ನು ಕೇಳಿದಾಗ ಅದನ್ನು ತಮಾಷೆ ಮಾಡಬಾರದು. ಆಕೆಯ ಮನಸ್ಥಿತಿ ಅರಿಯುವ ಪ್ರಯತ್ನ ನಡೆಸಬೇಕು.
ತೂಕ ಹೆಚ್ಚಾಗೋದು ಕಾಮನ್:
ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತದೆ. ಹಾರ್ಮೋನ್ ಬದಲಾವಣೆಯಿಂದ ತೂಕ ಹೆಚ್ಚಾಗುತ್ತದೆ. ಪತ್ನಿಯಾದವಳ ತೂಕ ಹೆಚ್ಚಾಗ್ತಿದ್ದಂತೆ ಅದನ್ನು ಆಡಿಕೊಳ್ಳಬೇಡಿ. ಗರ್ಭಾವಸ್ಥೆಯಲ್ಲಿ ಇದು ಸಾಮಾನ್ಯ ಎಂಬ ಅರಿವು ಪತಿಗೆ ಇರಬೇಕು. ಗರ್ಭಿಣಿ ತೂಕ ಹೆಚ್ಚಾಗ್ತಿದ್ದಂತೆ ನೀವು ಅದನ್ನು ತಮಾಷೆ ಮಾಡಿದ್ರೆ ಅಥವಾ ತೂಕ ನಿಯಂತ್ರಣಕ್ಕೆ ಸೂಚನೆ ನೀಡ್ತಿದ್ದರೆ ಅದು ಪತ್ನಿ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.
ಪತ್ನಿ ಜೊತೆ ಕೈ ಜೋಡಿಸಿ:
ಇಷ್ಟು ದಿನ ಬೇರೆ, ಇನ್ಮುಂದೆ ಬೇರೆ ಎಂಬುದು ನಿಮಗೆ ತಿಳಿದಿರಲಿ. ಪತ್ನಿ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ ಎಂಬ ವಿಷ್ಯ ಎಷ್ಟು ಸಂತೋಷ ನೀಡುತ್ತದೆಯೋ ಅಷ್ಟೆ ಜವಾಬ್ದಾರಿ ಹೆಚ್ಚಿಸುತ್ತದೆ. ಪತ್ನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುವುದು ಈ ಸಮಯದಲ್ಲಿ ಅನಿವಾರ್ಯವಾಗುತ್ತದೆ. ಆಕೆಯೊಬ್ಬಳೆ ಎಲ್ಲ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಇದ್ರಿಂದ ಆಕೆ ಆರೋಗ್ಯದಲ್ಲಿ ಏರುಪೇರಾಗಬಹುದು ಎಂಬುದು ನಿಮಗೆ ನೆನಪಿರಲಿ. ಆಕೆಗೆ ವಿಶ್ರಾಂತಿ ನೀಡಲು ಪ್ರಯತ್ನಿಸಿ.
ನಿದ್ರೆಗೆ ಆದ್ಯತೆ ನೀಡಿ:
ಗರ್ಭಿಣಿಗೆ ಹೆಚ್ಚು ನಿದ್ರೆಯ ಅವಶ್ಯಕತೆಯಿರುತ್ತದೆ. ಆಕೆ ಹೊತ್ತಲ್ಲದ ಹೊತ್ತಲ್ಲಿ ನಿದ್ರೆ ಮಾಡಲು ಬಯಸಬಹುದು. ಆಕೆ ನಿದ್ರೆಗೆ ಯಾವುದೇ ಭಂಗ ಬರದಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ನಿದ್ರೆ ಮಾಡಲು ಆಕೆಗೆ ಅವಕಾಶ ನೀಡಿ.
ಬದಲಾಗುವ ಮೂಡ್:
ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆ ನಂತರ ಹಾರ್ಮೋನ್ ನಲ್ಲಿ ಬದಲಾವಣೆಯಾಗುತ್ತದೆ. ಇದ್ರಿಂದ ಮಹಿಳೆಯ ಮೂಡ್ ಸ್ವಿಂಗ್ ಆಗ್ತಿರುತ್ತದೆ. ಸಣ್ಣ ವಿಷ್ಯಕ್ಕೂ ಆಕೆ ಗಲಾಟೆ ಮಾಡಬಹುದು ಇಲ್ಲವೆ ಕಿರುಚಾಡಬಹುದು. ಇದನ್ನು ಪುರುಷ ಅರ್ಥ ಮಾಡಿಕೊಂಡು, ತಾಳ್ಮೆಯಿಂದ ಎದುರಿಸಬೇಕು. ಆಕೆ ಜೊತೆ ಜಗಳಕ್ಕೆ ಇಳಿಯುವ ಬದಲು ಶಾಂತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು.