ಹೆರಿಗೆಯ ಬಳಿಕ ಕೂದಲು ವಿಪರೀತ ಉದುರುತ್ತಿದೆಯೇ?

ಗರ್ಭಿಣಿಯಾಗಿದ್ದಾಗ ಸೊಂಪಾಗಿ, ಉದ್ದವಾಗಿ ಬೆಳೆದಿದ್ದ ಕೂದಲು ಮಗುವಾದ ಮೇಲೆ ಉದುರುವುದನ್ನು ನೋಡಿ ಗಾಬರಿಯಾಗುತ್ತೆ. ಕೂದಲು ಬಾಚುವಾಗ ಬಾಚಣಿಗೆಯಲ್ಲಿ ಇಷ್ಟಿಷ್ಟು ಕೂದಲು ಇರೋದನ್ನು ನೋಡಿ ಅಯ್ಯೋ ಇದ್ಯಾಕೆ ಇಷ್ಟೊಂದು ಕೂದಲು ಉದುರುತ್ತೆ ಎನ್ನುವ ಆತಂಕವಾಗುತ್ತೆ. ಹೆರಿಗೆಯಾದ ಮೇಲೆ ಎಲ್ಲಾ ತಾಯಂದಿರುವ ಎದುರಿಸುವ ಸಮಸ್ಯೆ ಇದೇನೆ. ಯಾಕೆ ಬಾಣಂತಿಯರಲ್ಲಿ ಕೂದಲು ಉದುರುತ್ತೆ, ಇದಕ್ಕೇನು ಪರಿಹಾರ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಸವಾನಂತರ ಕೂದಲು ಉದುರುವಿಕೆ ಕಾರಣವಿದು:
ಕೂದಲು ಉದುರುವುದು ಬಾಣಂತಿಯರಲ್ಲಿ ಮಾತ್ರವಲ್ಲ ಪ್ರತಿಯೊಬ್ಬರಲ್ಲೂ ಸಾಮಾನ್ಯ. ಆದರೆ ಗರ್ಭಧಾರಣೆಯಾದ ನಂತರ ಸಾಕಷ್ಟು ಹಾರ್ಮೋನ್ ಬದಲಾವಣೆಗಳು ನಡೆಯುತ್ತಿರುತ್ತದೆ. ಆ ಹಾರ್ಮೋನ್ಗಳ ಬದಲಾವಣೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಂದರೆ ಗರ್ಭಾವಸ್ಥೆಯ ಹಾರ್ಮೋನುಗಳು ಕೂದಲು ಉದುರುವುದನ್ನು ತಡೆಯುತ್ತದೆ. ಪ್ರಸವಾನಂತರ ಹಾರ್ಮೋನುಗಳು ಸಾಮಾನ್ಯ ಸ್ಥಿತಿಗೆ ಬಂದ ನಂತರ ಈಸ್ಟ್ರೋಜೆನ್ನಲ್ಲಿ ಇಳಿಕೆ ಕಂಡುಬರುತ್ತದೆ. ಇದು ಹೆಚ್ಚು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ತಜ್ಞರೂ ಕೂಡಾ ಗರ್ಭಾವಸ್ಥೆಯಲ್ಲು ಹಲವಾರು ತಿಂಗಳುಗಳಿಂದ ತಲೆಯಲ್ಲೇ ಇದ್ದ ಕೂದಲು ಉದುರಿ ಹೋಗಲೇಬೇಕು ಎನ್ನುತ್ತಾರೆ. ವೈದ್ಯಕೀಯ ವಿಜ್ಞಾನದಲ್ಲಿ ಇದನ್ನು ಟೆಲೋಜೆನ್ ಎಫ್ಲುವಿಯಮ್ ಎಂದು ಕರೆಯುತ್ತಾರೆ.

ಪ್ರಸವಾನಂತರ ಯಾವಾಗ ಕೂದಲು ಉದುರಲು ಪ್ರಾರಂಭವಾಗುತ್ತೆ?
ಹೆರಿಗೆಯಾದ ಮೂರು ತಿಂಗಳ ನಂತರ ಕೂದಲು ಉದುರಲು ಪ್ರಾರಂಭವಾಗುತ್ತೆ ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ತಲೆಯ ಸುತ್ತಲಿರುವ ಕೂದಲು ಉದುರಬಹುದು, ಬಾಚುವಾಗ, ಸ್ನಾನಮಾಡುವಾಗ ಕೂದಲು ಹೆಚ್ಚಾಗಿ ಉದುರುತ್ತದೆ. ಕೆಲವರು ತಮ್ಮ ಕೂದಲಿನ ಸುತ್ತ ಕೆಲವು ಎಳೆಗಳನ್ನು ಕಳೆದುಕೊಳ್ಳುತ್ತಾರೆ. ಮುಂಭಾಗದಲ್ಲಿ ಕೂದಲು ಇದ್ದಂತೆ ಕಂಡರೂ ತಲೆಯ ಮೇಲ್ಭಾಗ, ಬದಿಯಲ್ಲೆಲ್ಲಾ ಬೋಳಾದಂತೆ ಅನಿಸಬಹುದು. ಆದರೆ ಆಂತಕ ಪಡಬೇಡಿ. ಪ್ರಸವಾನಂತರ ಕೂದಲು ಉದುರುವುದು ಕೆಲವು ಅವಧಿಯವರೆಗೆ ಮಾತ್ರ.

ಗರ್ಭಿಣಿಯಾಗಿದ್ದಾಗ ದಪ್ಪವಾಗಿ, ಸೊಂಪಾಗಿದ್ದ ಕೂದಲು ನಂತರದಲ್ಲಿ ಸ್ವಲ್ಪ ತೆಳುವಾಗಬಹುದು. ಪ್ರತಿಯೊಬ್ಬರ ಹಾರ್ಮೋನುಗಳ ಬದಲಾವಣೆಯೂ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರಿಗೆ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿಯೂ ಕೂದಲು ಉದುರಬಹುದು. ಇದು ನೈಸರ್ಗಿಕ ಪ್ರಕ್ರಿಯೆ. ನಿಮ್ಮ ಕೂದಲು ಹೆಚ್ಚು ತೆಳುವಾಗಲು ಪ್ರಾರಂಭಿಸಿದರೆ ಚಿಂತಿಸಬೇಡಿ. ಕೆಲವರಲ್ಲಿ ಹೆಚ್ಚಿನ ಸಮಯ ಕೂದಲು ಉದುರುವಿಕೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಕೆಲವರಲ್ಲಿ ಇದು ಮೂರು ತಿಂಗಳುಗಳು, ಕೆಲವರಲ್ಲಿ ಆರು ತಿಂಗಳುಗಳು ಅಥವಾ ಒಂದು ವರ್ಷದವರೆಗೂ ಕೂದಲು ಉದುರುವುದು ಸಾಮಾನ್ಯ.

ಕೂದಲು ಉದುರುವುದನ್ನು ತಡೆಗಟ್ಟುವುದು ಹೇಗೆ:
ಹೆರಿಗೆಯಾದ ನಂತರ ಕೂದಲು ಉದುರವುದನ್ನು ನಿಲ್ಲಿಸುವುದು ಕಷ್ಟ. ಆದರೆ ಕೂದಲು ಉದುರುವ ಪ್ರಮಾಣವನ್ನು ನಿಯಂತ್ರಿಸಬಹುದು. ಹೆರಿಗೆಯಾದ ನಂತರ ಉತ್ತಮ ಪ್ರೋಟಿನ್ ಹಾಗೂ ಕಬ್ಬಿಣಾಂಶದ ಸೇವನೆಯನ್ನು ಕಡಿಮೆ ಮಾಡಬೇಡಿ. ಉತ್ತಮ ಆಹಾರ ಸೇವನೆ, ಪೋಷಣೆಯಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದಲ್ಲದೇ, ಕೂದಲನ್ನು ಸ್ಟ್ರಾಂಗ್ ಆಗಿ ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬಹುದು. ಪೋಷಣೆಯ ನಂತರೂ ಕೂದಲು ಉದುರುವುದು ಕಡಿಮೆಯಾಗದಿದ್ದಲ್ಲಿ, ಹೆಚ್ಚು ಉದುರುತ್ತಿದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ. ಯಾಕೆಂದರೆ ಥೈರಾಯ್ಡ್ ಸಮಸ್ಯೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು.

ಪ್ರಸವಾನಂತರ ಕೂದಲು ಉದುರುತ್ತಿದ್ದರೆ ಹೀಗೆ ಮಾಡಿ:
ಮಗುವಾದ ಮೇಲೆ ಕೂದಲು ಉದುರುವುದನ್ನು ನೋಡಿ ಕೆಲವರು ಹತಾಶರಾಗಬಹುದು. ಆದರೆ ಚಿಂತೆ ಮಾಡಬೇಡಿ. ಇರುವಷ್ಟು ಕೂದಲನ್ನು ಅಂದಗಾಣಿಸುವುದು ಹೇಗೆ ಎನ್ನುವುದನರ ಬಗ್ಗೆ ಗಮನ ಹರಿಸಿ. ನೀವೂ ಪ್ರಸವಾನಂತರ ಚೇಂಜ್ ಬಯಸಿದಲ್ಲಿ ಈ ಟಿಪ್ಸ್ ಖಂಡಿತಾ ಟ್ರೈ ಮಾಡಬಹುದು, ಅದೇನೆಂದರೆ,

ಹೇರ್ಕಟ್, ಕಲರಿಂಗ್ ಮಾಡಿಸಿ:
ಹೆರಿಗೆಯಾದ ನಂತರ ಕೂದಲು ಉದುರುವ ಸಮಸ್ಯೆಗೆ ಪರಿಹಾರವಾಗಿ ಮತ್ತು ಚೇಂಜ್ಗಾಗಿ ಹೇರ್ ಸಲೂನ್ಗೆ ಭೇಟಿ ನೀಡಿ. ನಿಮಗೊಪ್ಪುವಂತಹ ಹೇರ್ಸ್ಟೈಲ್ಗಾಗಿ ಸ್ಟೈಲಿಸ್ಟ್ ಅವರೊಂದಿಗೆ ಮಾತನಾಡಿ, ನಿಮ್ಮ ಮುಖಕ್ಕೊಪ್ಪುವಂತಹ ಶಾರ್ಟ್ ಹೇರ್ ಅಥವಾ ಲೇಯರ್ಡ್ ಕಟ್ ಮಾಡಿಸಿ. ಇದರ ಜೊತೆಗೆ ಕಲರಿಂಗ್ ಮಾಡುವುದರಿಂದ ಕೂದಲಿಗೆ ಹಾಗೂ ನಿಮ್ಮ ವ್ಯಕ್ತಿತ್ವಕ್ಕೂ ಹೊಸ ಲುಕ್ ನೀಡುತ್ತದೆ. ನೀವು ಕಪ್ಪು ಕೂದಲು ಹೊಂದಿದ್ದರೆ ಹೈಲೈಟ್ ಮಾಡಿಸಿ ಅಥವಾ ಗ್ಲೋಸಿಂಗ್ ಮಾಡಿಸಿ, ಇದು ಕೂದಲಿಗೆ ಹೊಳಪನ್ನು ನೀಡುತ್ತದೆ.

ಕೂದಲನ್ನು ತೇವವಾಗಿ ಇರಿಸಿಕೊಳ್ಳಿ: 
ಕೂದಲಿಗೆ ಬಳಸುವಂತಹ ಉತ್ಪನ್ನ ಅಂದರೆ ಶ್ಯಾಂಪೂ, ಕಂಡೀಷನರ್ಗಳ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ. ಕೂದಲಿಗೆ ಶ್ಯಾಂಪೂ ಹಾಕಿ ತೊಳೆದ ನಂತರ ಯಾವಾಗಲೂ ಕಂಡೀಷನರ್ ಅಥವಾ ಲೀವ್ ಇನ್ ಕಂಡೀಷನರ್ ಬಳಸಿ.

ಹೇರ್ಸ್ಟೈಲ್ ಬದಲಾಯಿಸಿ:
ಸಾಮಾನ್ಯವಾಗಿ ನೀವು ತಲೆಯ ಮಧ್ಯ ಬೈತಲೆ ತೆಗೆದು ಕೂದಲು ಬಾಚುತ್ತಿದ್ದರೆ, ಮಧ್ಯಬಾಗದಲ್ಲಿ ಕೂದಲು ಉದುರಿದಂತೆ ಕಾಣುವುದನ್ನು ಅಥವಾ ತಲೆಯು ಬೊಳಾದಂತೆ ಕಾಣುವುದನ್ನು ತಪ್ಪಿಸಲು ಪಾರ್ಶ್ವಭಾಗ ಅಂದರೆ ಸೈಡ್ ಹೇರ್ಸ್ಟೈಲ್ ಮಾಡಿ.

ಕೇಶವಿನ್ಯಾಸ ಬದಲಾಯಿಸಿ: 
ಸಾಮಾನ್ಯವಾಗಿ ಕೂದಲು ನೇರವಾಗಿದ್ದವರಲ್ಲಿ ಕೂದಲು ಉದುರಿರುವುದು ಬೇಗ ಗೊತ್ತಾಗುತ್ತೆ. ಆದರೆ ಗುಂಗುರು ಕೂದಲು ಅಥವಾ ವೇವಿ ಹೇರ್ ಇರುವವರಲ್ಲಿ ಇದು ಗೊತ್ತಾಗೊದಿಲ್ಲ. ಸಾಧ್ಯವಾದರೆ ನೈಸರ್ಗಿಕವಾಗಿ ಕೂದಲನ್ನು ಕರ್ಲಿ ಮಾಡಿ ಅಥವಾ ವೆಲ್ಕ್ರೋ ರೋಲರ್ ಅಥವಾ ಹೇರ್ ಕರ್ಲರ್ ಬಳಸಿ. 

ಹೇರ್ ಆಕ್ಸೆಸ್ಸರೀಸ್ ಬಳಸಿ:
ಹೇರ್ಸ್ಟೈಲ್ ಜೊತೆಗೆ ಕೂದಲಿನ ನೋಟ ಬದಲಾಯಿಸುವ ಮಾತ್ರವಲ್ಲ ನಿಮ್ಮ ಸೌಂದರ್ಯವನ್ನೂ ಹೆಚ್ಚಿಸುವ ಹೆಡ್ಬ್ಯಾಂಡ್, ಸ್ಕಾರ್ಫ್, ಹೇರ್ಬ್ಯಾಂಡ್ಗಳನ್ನು ಧರಿಸಿ. ಇದು ಸ್ಟೈಲಿಷ್ ಲುಕ್ ನೀಡುತ್ತದೆ. ಇತ್ತೀಚೆಗೆ ವಿವಿಧ ಹೇರ್ಆಕ್ಸೆಸ್ಸರೀಸ್ ಧರಿಸುವ ಟ್ರೆಂಡ್ ಆಗಿದೆ. ಕೀಳರಿಮೆ ಬಿಟ್ಟು ನಿಮ್ಮನ್ನು ನೀವು ಅಂದಗಾಣಿಸುವಂತಹ ದಾರಿಗಳನ್ನು ಹುಡುಕಿ. ಕೂದಲಿನ ಆರೋಗ್ಯಕ್ಕೆ ಮಾನಸಿಕ ಆರೋಗ್ಯವೂ ಮುಖ್ಯ. ಹಾಗಾಗಿ ಕೂದಲು ಉದುರುವ ಬಗ್ಗೆ ಚಿಂತೆ ಮಾಡದೇ ಆರೋಗ್ಯದ ಬಗ್ಗೆ ಗಮನವಹಿಸಿ.