ಜೀವನದ ಪ್ರತಿಯೊಂದು ಹಂತದಲ್ಲಿ ಮಕ್ಕಳು ಜಯಗಳಿಸಲಿ ಎಂದು ಪಾಲಕರು ಆಶಿಸ್ತಾರೆ. ಮಕ್ಕಳಿಗೆ ಸೋಲನ್ನು ಜಯಿಸಿ, ಜಯದ ಹಾದಿಯನ್ನು ಹೇಗೆ ತಲುಪಬೇಕೆಂಬುದನ್ನು ಪಾಲಕರು ಹೇಳಿಕೊಡಬೇಕು. ಒಂದು ಬಾರಿ ಮಗು ಸೋತಾಗ ಅವರನ್ನು ನಿರುತ್ಸಾಹಗೊಳಿಸಬಾರದು. ಸೋತರೂ ಗೆಲ್ಲುವವರೆಗೆ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಿರಲು ಮಗುವಿಗೆ ಪಾಲಕರು ತಿಳಿಸಬೇಕು. ಪಾಲಕರಾದವರು ಮಗುವಿನಲ್ಲಿ ಆತ್ಮವಿಶ್ವಾಸ ತುಂಬಲು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಮಗುವಿಗೆ ಜವಾಬ್ದಾರಿ ನೀಡಿ:
ಮಕ್ಕಳಿಗೆ ಮಕ್ಕಳಾದ್ರು ಪಾಲಕರಿಗೆ ಅವರು ಮಕ್ಕಳೇ. ಆದ್ರೆ ಮಕ್ಕಳಿಗೆ ಪಾಲಕರು ಕಲಿಯಲು ಬಿಡಬೇಕು. ಮಕ್ಕಳು ಇನ್ನೂ ಚಿಕ್ಕವರು ಎನ್ನುವ ಕಾರಣಕ್ಕೆ ಅವರನ್ನು ಹಿಂದೆ ತಳ್ಳಬಾರದು. ಜಗತ್ತನ್ನು ನೋಡುವ ಅವಕಾಶವನ್ನು ಮಕ್ಕಳಿಗೆ ನೀಡಬೇಕು. ಬಿದ್ದಾಗ ಎದ್ದು ಮುನ್ನಡೆಯಲು ಪ್ರೋತ್ಸಾಹಿಸಬೇಕು. ತಪ್ಪುಗಳಾದಾಗ ಅದನ್ನು ಅರಿಯಲು ಅವಕಾಶ ನೀಡಬೇಕು. ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಕ್ಕಳಿಗೆ ನೀಡಬೇಕು.
ಆತ್ಮವಿಶ್ವಾಸ ಹೆಚ್ಚಿಸಿ:
ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಪಾಲಕರು ಮಾಡಬೇಕು. ಅವರು ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಪ್ರೋತ್ಸಾಹಿಸಬೇಕು. ತಪ್ಪು ಮಾಡಿದಾಗ ಅದನ್ನು ತಿದ್ದಬೇಕು. ಕೆಲವೊಂದು ಸಣ್ಣಪುಟ್ಟ ವಿಷ್ಯಗಳಿಂದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆತ್ಮವಿಶ್ವಾಸ ಬಂದ್ರೆ ಮಕ್ಕಳು ಅಂಜುಬುರುಕರಾಗುವುದಿಲ್ಲ. ಎಲ್ಲ ಕೆಲಸವನ್ನು ಅವರು ಮಾಡಲು ಸಿದ್ಧರಾಗ್ತಾರೆ.
ಆಯ್ಕೆ ಅವರಿಗೆ ಇರಲಿ:
ಪೋಷಕರು ಯಾವಾಗ್ಲೂ ಮಕ್ಕಳ ಜೀವನದಲ್ಲಿ ಮಧ್ಯ ಪ್ರವೇಶ ಮಾಡ್ತಾರೆ. ಮಕ್ಕಳನ್ನು ಸರಿದಾರಿಗೆ ತರುವುದ್ರಲ್ಲಿ ತಪ್ಪೇನು ಇಲ್ಲ. ಆದ್ರೆ ಎಲ್ಲ ಮಕ್ಕಳ ನಿರ್ಧಾರದಲ್ಲಿ ನೀವು ಮೂಗು ತೂರಿಸುವುದು ಸರಿಯಲ್ಲ. ನಮ್ಮ ಆಯ್ಕೆ ಸರಿಯಿಲ್ಲ ಎಂಬುದು ಮಕ್ಕಳಿಗೆ ಗೊತ್ತಾಗಬೇಕು. ಹಾಗೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಮಕ್ಕಳೇ ಕಲಿಯಬೇಕು. ಆಗ ಅವರು ಸರಿಯಾದ ದಾರಿ ಆಯ್ಕೆ ಮಾಡಿಕೊಳ್ತಾರೆ. ತಪ್ಪು ಅವರಿಗೆ ಅತ್ಯುತ್ತಮವಾದದ್ದನ್ನು ಕಲಿಯಲು ಅವಕಾಶ ಮಾಡಿಕೊಡುತ್ತದೆ.
ಭಾವನಾತ್ಮಕ ಬೆಳವಣಿಗೆ:
ಜೀವನದಲ್ಲಿ ಭಾವನೆಗಳು ಬಹಳ ಮುಖ್ಯ. ಮಗುವಿನ ಬೆಳವಣಿಗೆಯಲ್ಲಿ ಭಾವನಾತ್ಮಕ ಬೆಳವಣಿಗೆಯೂ ಮುಖ್ಯವಾಗಿದೆ. ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮಗುವಿಗೆ ಕಲಿಸಬೇಕು. ನಕಾರಾತ್ಮಕ ಮತ್ತು ಸಕಾರಾತ್ಮಕ ಚಿಂತನೆ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಬೇಕು.
ಈ ಮಾತುಗಳನ್ನು ಆಡ್ಬೇಡಿ:
ಮಕ್ಕಳ ಮನಸ್ಸಿನ ಮೇಲೆ ಗಾಢವಾಗಿ ಪರಿಣಾಮ ಬೀರುವ ವಿಷ್ಯಗಳನ್ನು ಹೇಳಬೇಡಿ. ನಾವು ಬಡವರು, ಹಾಗಾಗಿ ಎಲ್ಲ ಸೌಲಭ್ಯವಿಲ್ಲ. ಕೌಟುಂಬಿಕ ಸಮಸ್ಯೆಯಿಂದಾಗಿ ನಮಗೆ ಇತರರಂತೆ ಎಂಜಾಯ್ ಮಾಡಲು ಆಗ್ತಿಲ್ಲ, ಹೀಗೆ ಇಂಥ ವಿಷ್ಯಗಳನ್ನು ಮಕ್ಕಳಿಗೆ ಹೇಳಬಾರದು. ಅದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮಗು ಕೂಡ ನಿಮ್ಮಂತೆ ಕಾರಣ ಹೇಳಲು ಶುರು ಮಾಡುತ್ತದೆ.
ಶಿಕ್ಷೆ ಎಲ್ಲದಕ್ಕೂ ಮದ್ದಲ್ಲ:
ಅನೇಕ ಪಾಲಕರು ಶಿಕ್ಷೆ ನೀಡಿದ್ರೆ ಮಕ್ಕಳು ಸುಧಾರಿಸ್ತಾರೆಂದು ಭಾವಿಸ್ತಾರೆ. ಆದ್ರೆ ಇದು ತಪ್ಪು. ಎಲ್ಲ ಸಮಯದಲ್ಲೂ ಶಿಕ್ಷೆ ಪರಿಣಾಮ ಬೀರುವುದಿಲ್ಲ. ಮಕ್ಕಳಿಗೆ ಅವರ ತಪ್ಪನ್ನು ಪ್ರೀತಿಯಿಂದ ಹೇಳಿ. ತಾಳ್ಮೆಯಿಂದ ಎಲ್ಲವನ್ನೂ ವಿವರಿಸಿ. ಇದು ಮಗುವಿನ ಆತ್ಮವಿಶ್ವಾಸ ಹೆಚ್ಚಿಸುವ ಜೊತೆಗೆ ಅದು ಮುಂದೆ ತಪ್ಪು ಮಾಡುವುದನ್ನು ತಪ್ಪಿಸುತ್ತದೆ.