ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಮಕ್ಕಳಿಗೆ ಅನೇಕ ವಿಷ್ಯಗಳನ್ನು ಕಲಿಸ್ತಾರೆ. ಎಲ್ಲರ ಮುಂದೆ ಮಕ್ಕಳು ತಲೆ ಎತ್ತಿ ನಡೆಯಬೇಕೆಂದು ಪಾಲಕರು ಇಚ್ಛೆ ಹೊಂದಿರುತ್ತಾರೆ. ಇದೇ ವೇಳೆ ಮಕ್ಕಳನ್ನು ತಿಳಿದೋ ಅಥವಾ ತಿಳಿಯದೆಯೋ ಅವಮಾನಿಸುತ್ತಾರೆ. ಇದು ಮಗುವಿನ ಆತ್ಮವಿಶ್ವಾಸದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಕ್ಕಳ ಆತ್ಮವಿಶ್ವಾಸ ಕುಗ್ಗಿದ್ರೆ ಅವರು ಜೀವನದಲ್ಲಿ ಮುನ್ನಡೆಯುವುದು ಕಷ್ಟವಾಗುತ್ತದೆ.
ಮಕ್ಕಳು ಸರಿದಾರಿಯಲ್ಲಿ ಸಾಗಬೇಕೆಂದು ಪಾಲಕರು ಅವರನ್ನು ಬೈಯ್ಯುತ್ತಾರೆ. ಆದ್ರೆ ಪಾಲಕರ ಮಾತು ಮಕ್ಕಳಿಗೆ ಮುಜುಗರವನ್ನುಂಟು ಮಾಡುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುತ್ತದೆ. ಮಕ್ಕಳು ಪಾಲಕರ ಮುಂದೆ ತಲೆತಗ್ಗಿಸುತ್ತಾರೆ. ಪಾಲಕರು ಮಕ್ಕಳಿಗೆ ಏನು ಹೇಳಬೇಕು ಮತ್ತು ಏನು ಹೇಳಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಅವರ ಸಣ್ಣ ಮಾತುಗಳು ಸಹ ಮಗುವಿಗೆ ನೋವುಂಟು ಮಾಡುತ್ತದೆ. ಮಗುವಿನ ಆತ್ಮವಿಶ್ವಾಸ ಇದ್ರಿಂದ ಕುಸಿಯುತ್ತದೆ. ಮಕ್ಕಳಿಗೆ ನಾಚಿಕೆಯುಂಟು ಮಾಡುವ ಮಾತುಗಳ ಬಗ್ಗೆ ಪಾಲಕರು ಕಾಳಜಿ ವಹಿಸಬೇಕು. ಮಕ್ಕಳ ಮುಂದೆ ಪಾಲಕರು ಯಾವ ಮಾತನ್ನ ಆಡಬಾರದು ಎಂಬುದನ್ನು ನಾವಿಂದು ಹೇಳ್ತೇವೆ.
ತಪ್ಪು ಮಾಡಬೇಡ: ತಪ್ಪು ಮಾಡಬೇಡ. ಎಲ್ಲವನ್ನೂ ಸರಿಯಾಗಿ ಮಾಡು, ಇದು ಸಾಮಾನ್ಯವಾಗಿ ಪಾಲಕರು ಮಕ್ಕಳಿಗೆ ಹೇಳುವ ಮಾತು. ತಪ್ಪು ಮಾಡಿದ್ರೆ ಮಕ್ಕಳು ಹೆಚ್ಚೆಚ್ಚು ಕಲಿಯುತ್ತಾರೆ. ಪಾಲಕರು ಕೂಡ ಸಾಕಷ್ಟು ತಪ್ಪು ಮಾಡ್ತಾರೆ. ಆದ್ರೆ ಮಕ್ಕಳು ತಪ್ಪು ಮಾಡ್ಬಾರದು ಎಂಬುದು ಪಾಲಕರ ಆಸೆ. ಮಕ್ಕಳಿಗೆ ತಪ್ಪು ಮಾಡಲು ಬಿಡಬೇಕು. ಅವರನ್ನು ತಪ್ಪು ಮಾಡಿದಾಗ ನಿರುತ್ಸಾಹಗೊಳಿಸಬಾರದು. ತಪ್ಪನ್ನು ತಿದ್ದಿಕೊಳ್ಳುವುದು ಹೇಗೆ ಎಂಬುದನ್ನು ಮಕ್ಕಳಿಗೆ ಹೇಳಬೇಕು.
ಸ್ವಾರ್ಥಿಗಳಾಗ್ತಾರೆ ಮಕ್ಕಳು:
ಪಾಲಕರು ಮಕ್ಕಳಿಗೆ ಪದೇ ಪದೇ ಅವಮಾನ ಮಾಡ್ತಿದ್ದರೆ ಮಕ್ಕಳ ಸ್ವಭಾವದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಮಕ್ಕಳು ಸ್ವಾರ್ಥಿಗಳಾಗ್ತಾರೆ. ಮಕ್ಕಳು ಯಾರಿಗೂ ನೆರವಾಗುವುದಿಲ್ಲ. ಮಕ್ಕಳು ಯಾವುದೇ ಸಹಾನುಭೂತಿ ಹೊಂದಿರುವುದಿಲ್ಲ. ಇದ್ರಿಂದ ಅವರ ಭವಿಷ್ಯಕ್ಕೆ ದೊಡ್ಡ ಹೊಡೆತ ಬೀಳುತ್ತದೆ.
ಅಭ್ಯಾಸಗಳನ್ನು ಮುಚ್ಚಿಡ್ತಾರೆ ಮಕ್ಕಳು:
ಪಾಲಕರು ಮಕ್ಕಳನ್ನು ಪದೇ ಪದೇ ಅವಮಾನಿಸಿದಾಗ ಮಕ್ಕಳು ಯಾವುದೇ ವಿಷ್ಯವನ್ನು ಪಾಲಕರಿಗೆ ಹೇಳುವುದಿಲ್ಲ. ಮಕ್ಕಳು ಮಾಡಿರುವ ಕೆಲಸವನ್ನು ಪಾಲಕರು ಪ್ರೋತ್ಸಾಹಿಸದೆ ಇದ್ದಾಗ ಅಥವಾ ಮಕ್ಕಳ ಹವ್ಯಾಸದ ಬಗ್ಗೆ ಅಪಮಾನ ಮಾಡಿದಾಗ ಮಕ್ಕಳು ವಿಷ್ಯವನ್ನು ಮುಚ್ಚಿಡುತ್ತಾರೆ. ಮಕ್ಕಳು ತಮ್ಮ ಅಭ್ಯಾಸಗಳನ್ನು ಮರೆಮಾಚಲು ಪ್ರಾರಂಭಿಸುತ್ತಾರೆ. ಇದರಿಂದ ಪೋಷಕರು ಮತ್ತು ಮಗುವಿನ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ.
ಹೋಲಿಕೆ ಮಾಡಿ ಮಕ್ಕಳ ಆತ್ಮವಿಶ್ವಾಸ ತಗ್ಗಿಸಬೇಡಿ:
ಬೇರೆ ಮಕ್ಕಳ ಜೊತೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡುವುದು ಕೂಡ ಅವರ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟು ಮಾಡುತ್ತದೆ. ಯಾವುದೇ ಕೆಲಸ ಮಾಡಿದ್ರೂ ಪಾಲಕರು ನಮ್ಮನ್ನು ಹೊಗಳುವುದಿಲ್ಲ ಎಂಬ ಕಾರಣಕ್ಕೆ ಮಕ್ಕಳು ನಿರಾಶೆಗೊಳಗಾಗ್ತಾರೆ. ಹಾಗೆಯೇ ಮಕ್ಕಳಲ್ಲಿ ಬೇರೆ ಮಕ್ಕಳ ಮೇಲೆ ದ್ವೇಷ ಬೆಳೆಯಲು ಶುರುವಾಗುತ್ತದೆ. ಹಾಗಾಗಿ ಮಕ್ಕಳನ್ನು ಮಕ್ಕಳಾಗಿ ಬಿಡಬೇಕು.
ಮಕ್ಕಳನ್ನು ನೋಡಿಕೊಳ್ಳೋದು ಹೇಗೆ?:
ಮಕ್ಕಳನ್ನು ಪಾಲಕರು ಸೂಕ್ಷ್ಮ ರೀತಿಯಲ್ಲಿ ನೋಡಿಕೊಳ್ಳಬೇಕು. ಆತುರದಲ್ಲಿ ಮಕ್ಕಳ ಮುಂದೆ ಮನಸ್ಸಿಗೆ ಬಂದಿದ್ದನ್ನು ಹೇಳಬಾರದು. ಮಕ್ಕಳಿಗೆ ಯಾವುದೇ ಸಲಹೆ ನೀಡುವ ವೇಳೆ ಅದು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಬೇಕು.