ಮಹಾ ಶಿವರಾತ್ರಿ ದಿನಾಂಕ, ಪೂಜೆ ಸಮಯ, ಉಪವಾಸ ನಿಯಮಗಳು ತಿಳಿಯಿರಿ

ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬ. ಇದನ್ನು ವಾರ್ಷಿಕವಾಗಿ ಫಾಲ್ಗುಣ ಮಾಸದ 14ನೇ ರಾತ್ರಿ ಆಚರಿಸಲಾಗುತ್ತದೆ. ಈ ದಿನ ಭಕ್ತರು ಉಪವಾಸ ಹಾಗೂ ಶಿವ ಪೂಜೆ ಮಾಡಿ ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ. ಇದನ್ನು ಶಿವನ ಆಶೀರ್ವಾದ ಪಡೆಯಲು ಪವಿತ್ರ ಸ್ತೋತ್ರಗಳನ್ನು ಪಠಿಸುವ ಅತ್ಯಂತ ಮಂಗಳಕರ ರಾತ್ರಿ ಎಂದು ಕರೆಯಲಾಗುತ್ತದೆ. ಹಾಗಾದರೆ ಈ ಬಾರಿ ಮಹಾಶಿವರಾತ್ರಿ ಯಾವ ದಿನಾಂಕದಂದು ಆಚರಿಸಲಾಗುತ್ತದೆ? ಉಪವಾಸದ ನಿಯಮಗಳೇನು? ಶಿವರಾತ್ರಿ ಮಹತ್ವ, ಆಚರಣೆ, ಡ್ರೆಸ್ ಕೋಡ್, ತ್ಯಜಿಸಬೇಕಾದ ಆಹಾರ ಎಲ್ಲದರ ಬಗ್ಗೆ ತಿಳಿಯೋಣ.

2025ರಲ್ಲಿ ಮಹಾ ಶಿವರಾತ್ರಿಯನ್ನು ಫೆಬ್ರವರಿ 26 ಆಚರಿಸಲಾಗುತ್ತದೆ. ಮಹಾ ಶಿವರಾತ್ರಿ ಪೂಜಾ ಸಮಯಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಕರ್ನಾಟಕದಲ್ಲಿ ಮಹಾಶಿವರಾತ್ರಿ ಸಮಯವನ್ನು ಈಗ ತಿಳಿಯೋಣ. ಶಿವರಾತ್ರಿಯಂದು ಶಿವನಿಗೆ ನಾಲ್ಕು ಹಂತಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಈ ಪೂಜಾ ಸಮಯವನ್ನು ಈಗ ತಿಳಿಯೋಣ.

ಮಹಾ ಶಿವರಾತ್ರಿ 2025: ಪೂಜಾ ಸಮಯ 

*ರಾತ್ರಿ ಮೊದಲ ಪ್ರಹಾರ ಪೂಜೆ ಸಮಯ - ರಾತ್ರಿ 06:42 ರಿಂದ ರಾತ್ರಿ 09:47 (ಫೆಬ್ರವರಿ 26) 

*ರಾತ್ರಿ ಎರಡನೇ ಪ್ರಹಾರ ಪೂಜೆ ಸಮಯ - ರಾತ್ರಿ 09:47 (ಫೆಬ್ರವರಿ 26) ರಿಂದ ಬೆಳಗ್ಗೆ 12:51 (ಫೆಬ್ರವರಿ 27) 

*ರಾತ್ರಿ ಮೂರನೇ ಪ್ರಹಾರ ಪೂಜೆ ಸಮಯ - ಬೆಳಗ್ಗೆ 12:51 ರಿಂದ ಬೆಳಗ್ಗೆ 03:55 (ಫೆಬ್ರವರಿ 27)

*ರಾತ್ರಿ ನಾಲ್ಕನೇ ಪ್ರಹಾರ ಪೂಜೆ ಸಮಯ - ಬೆಳಗ್ಗೆ 03:55 ರಿಂದ ಬೆಳಗ್ಗೆ 06:59 (ಫೆಬ್ರವರಿ 27)

ಫೆಬ್ರವರಿ 27 ರಂದು ಶಿವರಾತ್ರಿ ಪಾರಣ ಸಮಯ - ಬೆಳಗ್ಗೆ 06:59 ರಿಂದ ಬೆಳಗ್ಗೆ 08:54 

ಚತುರ್ದಶಿ ತಿಥಿ ಪ್ರಾರಂಭ - ಫೆಬ್ರವರಿ 26, 2025 ರಂದು ಬೆಳಗ್ಗೆ 11:08ರಿಂದ

ಚತುರ್ದಶಿ ತಿಥಿ ಕೊನೆಗೊಳ್ಳುವುದು - ಫೆಬ್ರವರಿ 27, 2025 ರಂದು ಬೆಳಗ್ಗೆ 08:54ಕ್ಕೆ

ಮಹಾ ಶಿವರಾತ್ರಿ ಹಬ್ಬದ ಹಿಂದಿನ ದಂತಕಥೆ 
ಮಹಾ ಶಿವರಾತ್ರಿಗೆ ಸಂಬಂಧಿಸಿದ ಹಲವಾರು ಪೌರಾಣಿಕ ಕಥೆಗಳಿವೆ. ಅವುಗಳಲ್ಲಿ ಸಮುದ್ರ ಮಂಥನ ಕಥೆ ಕೂಡ ಒಂದಾಗಿದೆ. ಈ ಕಥೆಯ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಮಾರಕ ವಿಷ ಹೊರಹೊಮ್ಮಿತು. ಅದು ವಿಶ್ವವನ್ನು ನಾಶಮಾಡುತ್ತದೆ ಎಂದು ಶಿವನು ಲೋಕವನ್ನು ಉಳಿಸಲು ವಿಷವನ್ನು ಕುಡಿದನು. ವಿಷ ಕುಡಿದ ನಂತರ ದೇವಾನುದೇವತೆಗಳು ಶಿವನನ್ನು ಉಳಿಸಲು ಪಾರ್ಥನೆ ಮಾಡಿದರು. ರಾತ್ರಿ ಇಡೀ ಜಾಗರಣೆ ಮಾಡಿ ಶಿವನನ್ನು ಎಚ್ಚರಗೊಳಿಸಿದರು. ಶಿವನ ಈ ನಿಸ್ವಾರ್ಥ ಕ್ರಿಯೆಯನ್ನು ಗೌರವಿಸಲು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ.

ಮತ್ತೊಂದು ದಂತಕಥೆಯ ಪ್ರಕಾರ ಮಹಾ ಶಿವರಾತ್ರಿಯು ಶಿವ ಮತ್ತು ಪಾರ್ವತಿಯ ದೇವಿಯ ದೈವಿಕ ವಿವಾಹವನ್ನು ಸೂಚಿಸುತ್ತದೆ. ಜೊತೆಗೆ ಲಿಂಗೋದ್ಭವ ಕಥೆಯ ಪ್ರಕಾರ ಈ ದಿನ ಶಿವನು ತನ್ನ ಶ್ರೇಷ್ಠತೆಯನ್ನು ಸೂಚಿಸುವ ಅನಂತ ಬೆಳಕಿನ ಸ್ತಂಭದ (ಲಿಂಗೋದ್ಭವ) ರೂಪದಲ್ಲಿ ಕಾಣಿಸಿಕೊಂಡನು ಎಂದು ನಂಬಲಾಗಿದೆ.

ಮಹಾ ಶಿವರಾತ್ರಿಯಂದು ಏನು ಮಾಡಬೇಕು?:
ಈ ಪವಿತ್ರ ಹಬ್ಬವನ್ನು ಆಚರಿಸಲು ಭಕ್ತರು ವಿವಿಧ ಆಚರಣೆಗಳಲ್ಲಿ ತೊಡಗುತ್ತಾರೆ. ಅನೇಕ ಭಕ್ತರು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸಿದರೆ, ಕೆಲವರು ಹಣ್ಣುಗಳು, ಹಾಲು ಮತ್ತು ನೀರನ್ನು ಮಾತ್ರ ಸೇವಿಸುತ್ತಾರೆ. ಇನ್ನೂ ಕೆಲ ಭಕ್ತರು ಶಿವನ ಶಿವಲಿಂಗಕ್ಕೆ ಬಿಲ್ವಪತ್ರೆ, ಹಾಲು, ಜೇನುತುಪ್ಪ ಮತ್ತು ನೀರನ್ನು ಅರ್ಪಿಸಿ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುತ್ತಾರೆ.

ಮಂತ್ರಗಳನ್ನು ಪಠಿಸಿ ಮತ್ತು ಮಹಾ ಶಿವರಾತ್ರಿ ಹಾಡುಗಳನ್ನು ಹಾಡಲಾಗುತ್ತದೆ. ಅಲ್ಲದೆ ಈ ದಿನ "ಓಂ ನಮಃ ಶಿವಾಯ" ಪಠಿಸುವುದು ಮತ್ತು ಮಹಾ ಶಿವರಾತ್ರಿ ಹಾಡುಗಳನ್ನು ಕೇಳುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಇನ್ನೂ ಭಕ್ತರು ಶಿವನ ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿ ರಾತ್ರಿ ಇಡೀ ಶಿವನ ಧ್ಯಾನ ಮತ್ತು ಪ್ರಾರ್ಥನೆ ಮಾಡುತ್ತಾರೆ. ಈ ದಿನ ಕಾಶಿ ವಿಶ್ವನಾಥ, ಕೇದಾರನಾಥ ಮತ್ತು ಸೋಮನಾಥದಂತಹ ದೇಶ ಪ್ರಸಿದ್ಧ ಶಿವ ದೇವಾಲಯಗಳು ಶಿವ ಭಕ್ತರಿಂದ ತುಂಬಿರುತ್ತವೆ.

ಮಹಾ ಶಿವರಾತ್ರಿ ಉಪವಾಸ ನಿಯಮಗಳು: 
ಮಹಾ ಶಿವರಾತ್ರಿಯಂದು ಉಪವಾಸ ಆತ್ಮವನ್ನು ಶುದ್ಧೀಕರಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಶಿವ ಭಕ್ತರು ಈ ದಿನ ಉಪವಾಸವನ್ನು ಮಾಡುವ ಮೂಲಕ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಕೆಲವು ಪ್ರಮುಖ ಮಹಾ ಶಿವರಾತ್ರಿ ಉಪವಾಸ ನಿಯಮಗಳನ್ನು ಈಗ ತಿಳಿಯೋಣ.

ಕಟ್ಟುನಿಟ್ಟಾದ ಉಪವಾಸ:
ಕೆಲವು ಭಕ್ತರು ನೀರು ಇಲ್ಲದೆ ಉಪವಾಸ ಆಚರಿಸುತ್ತಾರೆ. ಇನ್ನೂ ಕೆಲವರು ಹಣ್ಣುಗಳು ಮತ್ತು ಹಾಲು ಸೇವಿಸುತ್ತಾರೆ. ಈ ದಿನ ಮದ್ಯ-ಮಾಂಸಾಹಾರವನ್ನು ತಪ್ಪಿಸಲೇಬೇಕು. ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ ಸೇವಿಸುವುದಿಲ್ಲ. ಪ್ರಾರ್ಥನೆ ಸಲ್ಲಿಸಿದ ನಂತರ ಮರುದಿನ ಬೆಳಿಗ್ಗೆ ಉಪವಾಸವನ್ನು ಬಿಡಲಾಗುತ್ತದೆ. 

ಮಹಾ ಶಿವರಾತ್ರಿಯ ಮಹತ್ವ:
ಹಿಂದೂ ಧರ್ಮದಲ್ಲಿ ಮಹಾ ಶಿವರಾತ್ರಿ ಅಪಾರ ಮಹತ್ವವನ್ನು ಹೊಂದಿದೆ. ಶಿವನನ್ನು ಪೂಜಿಸಲು ಇದು ಅತ್ಯಂತ ಪವಿತ್ರ ರಾತ್ರಿ ಎಂದು ಪರಿಗಣಿಸಲಾಗಿದೆ. ಈ ಹಬ್ಬ ಭಕ್ತಿ ಮತ್ತು ಸ್ವಯಂ ಶಿಸ್ತಿನ ಮೂಲಕ ಕತ್ತಲೆ ಮತ್ತು ಅಜ್ಞಾನವನ್ನು ಜಯಿಸುವುದನ್ನು ಪ್ರತಿನಿಧಿಸುತ್ತದೆ. 

ಈ ರಾತ್ರಿ ಪ್ರಾರ್ಥನೆ ಮಾಡುವುದರಿಂದ ಆಂತರಿಕ ಶಾಂತಿ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಜ್ಞಾನೋದಯವಾಗುತ್ತದೆ ಎಂಬ ನಂಬಿಕೆ ಇದೆ. 

ಮಹಾ ಶಿವರಾತ್ರಿ ಆಚರಣೆಗಳು ಈ ದಿನ ಶಿವನಿಗೆ ಮೀಸಲಾಗಿರುವ ವಿಶೇಷ ಆಚರಣೆಗಳು ನಡೆಯುತ್ತವೆ. 

*ಅಭಿಷೇಕ: ಶಿವಲಿಂಗಕ್ಕೆ ಹಾಲು, ಜೇನುತುಪ್ಪ, ನೀರು ಮತ್ತು ತುಪ್ಪದಿಂದ ಸ್ನಾನ ಮಾಡಿಸುವುದು. 

*ನೈವೇದ್ಯಗಳು: ಭಕ್ತರು ಶಿವನಿಗೆ ಬಿಲ್ವಪತ್ರೆ, ಹಣ್ಣುಗಳು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ. 

*ದೀಪಗಳನ್ನು ಬೆಳಗಿಸುವುದು: ದೈವಿಕ ವಾತಾವರಣವನ್ನು ಸೃಷ್ಟಿಸಲು ದೀಪಗಳು ಮತ್ತು ಧೂಪದ್ರವ್ಯಗಳನ್ನು ಬೆಳಗಿಸಲಾಗುತ್ತದೆ. 

*ಮಂತ್ರ ಪಠಣ: "ಓಂ ನಮಃ ಶಿವಾಯ" ಎಂಬ ಪ್ರಬಲ ಜಪವನ್ನು ರಾತ್ರಿಯಿಡೀ ಪುನರಾವರ್ತಿಸಲಾಗುತ್ತದೆ.