ನಿಮ್ಮ ಮಗುವಿಗೆ ಶಿಸ್ತು ಕಡಿಮೆಯಾಗ್ತಿದೆ, ಮುದ್ದು ಹೆಚ್ಚಾಗ್ತಿದೆ ಅಂತ ತಿಳ್ಕೊಳ್ಳೋದು ಹೇಗೆ?

ಮಕ್ಕಳ ಲಾಲನೆ, ಪೋಷಣೆ ಮಾಡೋದು ತುಂಬಾನೇ ಕಷ್ಟದ ಕೆಲಸ. ಹೆಚ್ಚು ಮುದ್ದು ಮಾಡಿದರೆ ಮಕ್ಕಳು ಶಿಸ್ತು ಮರೆತು ಬಿಡುತ್ತಾರೆ. ಹೆಚ್ಚು ಸಿಟ್ಟು ಮಾಡಿದರೆ ತಪ್ಪುಗಳನ್ನು ಮಾಡುತ್ತಾರೆ. ಹಾಗಿದ್ರೆ ಮಕ್ಕಳ ಜೊತೆ ಹೇಗಿರಬೇಕು? ನಿಮ್ಮ ಮಗುವಿಗ ಡಿಸಿಪ್ಲಿನ್ ಕಡಿಮೆಯಾಗ್ತಿದೆ, ಮುದ್ದು ಹೆಚ್ಚಾಗ್ತಿದೆ ಅಂತ ತಿಳ್ಕೊಳ್ಳೋದು ಹೇಗೆ ? ಇಲ್ಲಿದೆ ಕೆಲವೊಂದು ಟಿಪ್ಸ್.

ಪ್ರತಿಯೊಬ್ಬ ಪೋಷಕರು ಸಹ ತಮ್ಮ ಮಕ್ಕಳನ್ನು ಶಿಸ್ತುಬದ್ಧವಾಗಿ ಹಾಗೂ  ಉತ್ತಮ ಗುಣ ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಾರೆ.  ಆದರೆ ಪೇರೆಟಿಂಗ್ ಸ್ಟೈಲ್ ವ್ಯಕ್ತಿಯಿಂದ ಭಿನ್ನವಾಗಿರುತ್ತದೆ. ಇದು ಸ್ಪಲ್ಪ ಹೆಚ್ಚು ಕಡಿಮೆಯಾದರೂ ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ಪೋಷಕರು ಅಶಿಸ್ತಿನ, ಕೆಟ್ಟ ನಡತೆಯ ಮಕ್ಕಳನ್ನು ಬೆಳೆಸಲು ಬಯಸುವುದಿಲ್ಲ. ಆದರೆ ಕೆಲವೊಮ್ಮೆ ಮಕ್ಕಳಲ್ಲಿ ಸಂಪೂರ್ಣ ಅಶಿಸ್ತಿನ ವರ್ತನೆ ಕಂಡು ಬಂದಾಗ ಪೋಷಕರು ಕಂಗಾಲಾಗುತ್ತಾರೆ. ಅತಿಯಾದ ಮುದ್ದು ಮಕ್ಕಳನ್ನು ದುರ್ವರ್ತನೆಯನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತದೆ. ಈ ನಿರಂತರ ಮಾದರಿಯು ನಿಮ್ಮ ಮಗುವನ್ನು ನಿಯಂತ್ರಣದಿಂದ ಹೊರಗಿಡುತ್ತದೆ ಮತ್ತು ನಿರ್ವಹಿಸಲು ಕಷ್ಟವಾಗುತ್ತದೆ. 

ಮಕ್ಕಳಲ್ಲಿ ಅಶಿಸ್ತಿನ ಸೂಕ್ಷ್ಮ ಲಕ್ಷಣಗಳನ್ನು ಗುರುತಿಸುವುದು ಮತ್ತು ಅದನ್ನು ನಿಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ ವಿಧಾನವಾಗಿದೆ. ಹಾಗಿದ್ರೆ ಮಕ್ಕಳಿಗೆ ನೀವು ಮುದ್ದು ಮಾಡುವುದು ಹೆಚ್ಚಾಗ್ತಿದೆ, ಮಕ್ಕಳಲ್ಲಿ ಇನ್ ಡಿಸಿಪ್ಲಿನ್ ಹೆಚ್ಚಾಗ್ತಿದೆ ಅನ್ನೋ ಸೂಚನೆಗಳು ಯಾವುವು? ಇಲ್ಲಿದೆ ಮಾಹಿತಿ.

ಮಗುವಿಗೆ ದಯೆ, ಸಹಾನುಭೂತಿ ಅರ್ಥವಾಗುವುದಿಲ್ಲ:
ಸಹಾನುಭೂತಿ ಮನುಷ್ಯನ ವಿನಮ್ರ ಲಕ್ಷಣವಾಗಿದೆ. ಪ್ರತಿಯೊಬ್ಬರಿಗೂ ಪರಸ್ಪರ ದಯೆ, ಸಹಾನೂಭೂತಿ ಇರಬೇಕು. ಇದು ನಾವು ವ್ಯಕ್ತಿತ್ವಕ್ಕೆ ಕೊಡುವ ಗೌರವ. ಆದರೆ ನೀವು ಮಗುವಿಗೆ ಯಾವುದೇ ವಿಚಾರದ ಬಗ್ಗೆ ದಯೆ ಅಥವಾ ಸಹಾನುಭೂತಿ ಇಲ್ಲವೇ ಎಂಬುದನ್ನು ಗಮನಿಸಿಕೊಳ್ಳಿ. ಅವರು ತಮ್ಮ ಸ್ವಂತ ಆಸಕ್ತಿಗಳು ಮತ್ತು ಯೋಗಕ್ಷೇಮದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಉಳಿದವರನ್ನು ಡೋಂಟ್ ಕೇರ್ ಮಾಡುತ್ತಾರೆ ಎಂದಾದರೆ ನಿಮ್ಮ ಮಗು ಅಶಿಸ್ತಿನ ಗುಣಗಳನ್ನು ರೂಢಿಸಿಕೊಂಡಿದೆ ಎಂದರ್ಥ. ಇದು ಮಕ್ಕಳನ್ನು ತಿದ್ದಲು ಸರಿಯಾದ ಸಮಯವಾಗಿದೆ. ಸಾಮಾಜಿಕ ಜೀವನ ನಡೆಸಲು ದಯೆ ಹಾಗೂ ಸಹಾನೂಭೂತಿ ಎಷ್ಟು ಮುಖ್ಯ ಅನ್ನೋದನ್ನು ನೀವು ಅವರಿಗೆ ಕಲಿಸಿಕೊಡಬೇಕು.

ಹಕ್ಕು ಚಲಾಯಿಸುತ್ತಾರೆ:
ಪೋಷಕರು ಮಕ್ಕಳಿಗೆ ಪ್ರೀತಿಯಿಂದ ಎಲ್ಲವನ್ನೂ ಕೊಡಿಸುತ್ತಾರೆ. ಆದರೆ ಅದಲ್ಲದೆ, ಮಕ್ಕಳು ಅದನ್ನು ಹಕ್ಕಿನಂತೆ ಪಡೆಯುತ್ತಾರೆ ಎಂದಾದರೆ ಮಕ್ಕಳು ಶಿಸ್ತಾಗಿ ಬೆಳೆಯುತ್ತಿಲ್ಲ ಎಂದು ನೀವು ತಿಳಿದುಕೊಳ್ಳಬಹುದು. ಸವಲತ್ತು ಪಡೆಯುವುದು ಒಂದು ವಿಷಯ, ಆದರೆ ಅರ್ಹತೆಯಿಂದ ನಟಿಸುವುದು ಇನ್ನೊಂದು. ಮಗುವು ನೀವು ಹೊಂದಿರುವ ಎಲ್ಲದಕ್ಕೂ ಹಕ್ಕನ್ನು ಹೊಂದಿರುವಂತೆ ವರ್ತಿಸಿದರೆ ಮತ್ತು ಇತರರಿಗೆ ಅಗೌರವ ತೋರಲು ಆರಂಭಿಸಬಹುದು. ನನ್ನಲ್ಲಿ ಎಲ್ಲವೂ ಇದೆ ಅನ್ನೋ ಅಹಂ ಬೆಳೆಸಿಕೊಳ್ಳಬಹುದು,

ಇಲ್ಲ ಎಂದು ಕೇಳಲು ಇಷ್ಟಪಡುವುದಿಲ್ಲ:
ಕೆಲವೊಂದು ಮಕ್ಕಳು ಏನು ಕೇಳಿದರೂ ಪೋಷಕರು ಅದನ್ನು ಕೊಡಿಸಬೇಕೆಂದು ಬಯಸುತ್ತಾರೆ. ಅದು ಎಷ್ಟು ದುಬಾರಿಯಾಗಿದೆ, ಇಲ್ಲಿ ಲಭ್ಯವಿದೆಯೇ ಎಂಬುದನ್ನು ಸಹ ಗಮನಿಸುವುದಿಲ್ಲ. ಅಂಥಾ ಮಕ್ಕಳು ಯಾವುದೇ ಕಾರಣಕ್ಕೂ ಮಕ್ಕಳಿಂದ ನೋ ಎಂಬ ಉತ್ತರವನ್ನು ಸಹ ಬಯಸುವುದಿಲ್ಲ. ಅವರು ಕೇಳಿದ ಕೆಲವು ಸವಲತ್ತುಗಳು ಮತ್ತು ಸೌಕರ್ಯಗಳನ್ನು ನಿರಾಕರಿಸಿದಾಗ ಸಿಟ್ಟಿಗೇಳುತ್ತಾರೆ. ನಿಮ್ಮ ಮಗು ಸಹ ಇದೇ ರೀತಿ ಮಾಡುತ್ತಿದ್ದರೆ, ಅದು ಅವರಿಗೆ ಮುದ್ದಿಸುವುದಕ್ಕಿಂತ ಹೆಚ್ಚಿನ ಶಿಸ್ತು ಬೇಕು ಎಂಬುದರ ಸಂಕೇತವಾಗಿರಬಹುದು.

ಮಾಡಿದ ತಪ್ಪುಗಳಿಗಾಗಿ ಪಶ್ಚಾತ್ತಾಪ ಪಡುವುದಿಲ್ಲ:
ಹೆಚ್ಚಾಗಿ, ಅಶಿಸ್ತಿನ ಮಕ್ಕಳು ಉತ್ತಮ ನಡವಳಿಕೆಗಾಗಿ ಪ್ರತಿಫಲವನ್ನು ನಿರೀಕ್ಷಿಸುತ್ತಾರೆ. ಏಕೆಂದರೆ ಅವರು ಯಾವಾಗಲೂ ಅಶಿಸ್ತಿನ ನಡವಳಿಕೆಯನ್ನು ಹೊಂದಿರುತ್ತಾರೆ. ಶಿಸ್ತಿನ ನಡವಳಿಕೆಯನ್ನು ಹೊಂದುವುದು ಅವರ ಪ್ರಕಾರ ಪೋಷಕರಿಗೆ ಮಾಡುವ ಉಪಕಾರವಾಗಿದೆ. ಹೀಗಾಗಿಯೇ ಅವರು ತಪ್ಪುಗಳನ್ನು ಮಾಡಿದಾಗಲೂ ಪಶ್ಚಾತ್ತಾಪ ಪಡುವುದಿಲ್ಲ. ಯಾವಾಗಲೂ ತಮ್ಮ ತಪ್ಪುಗಳಿಂದ ರಕ್ಷಿಸಲ್ಪಡುತ್ತಾರೆ ಎಂದು ನಿರೀಕ್ಷಿಸುತ್ತಾರೆ. ಮಕ್ಕಳು ಈ ರೀತಿ ವರ್ತಿಸಿದಾಗ ನೀವು ಅವರ ತಪ್ಪನ್ನು ತಿದ್ದಬೇಕು. 

ಮತ್ತೊಬ್ಬರ ಮೇಲೆ ಆಪಾದನೆ ಹೊರಿಸುವುದು:
ಅಶಿಸ್ತಿನ ಗುಣವಿರುವ ಮಕ್ಕಳು ಮಾಡುವ ಇನ್ನೊಂದು ವಿಷಯವೆಂದರೆ ಅವರು ತಪ್ಪು ಆಯ್ಕೆಗಳನ್ನು ಮಾಡಿದ್ದಾರೆಂದು ತಿಳಿದಾಗ ಇತರರ ಮೇಲೆ ಆಪಾದನೆಯನ್ನು ಹೊರಿಸುವುದು. ಇಂಥಾ ಮಕ್ಕಳು ತಮ್ಮ ತಪ್ಪಿನ ಮೇಲಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಮಾತ್ರವಲ್ಲ ತಾವು ಕ್ಷಮೆ ಯಾಚಿಸುವುದಿಲ್ಲ. ಬದಲಿಗೆ ಇನ್ನೊಬ್ಬರ ಮೇಲೆ ತಪ್ಪನ್ನು ಹೊರಿಸಿಬಿಡುತ್ತಾರೆ. ಮಕ್ಕಳು ತಮ್ಮ ತಪ್ಪಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧವಾಗಿಲ್ಲದಿದ್ದರೆ, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.