ಪುರುಷರು ತಮ್ಮ ಸಂಗಾತಿ ಜೊತೆಗೆ ಪ್ರೀತಿ ಹಂಚಿಕೊಳ್ಳಲು ಹಿಂದೇಟು ಹಾಕುದಿಲ್ಲಾ. ಸಂಗಾತಿಗೆ ನಿಕ್ ನೇಮ್ ನಿಂದ ಕರೆಯುವುದು, ರೋಮ್ಯಾಂಟಿಕ್ ಹಾಡು ಕೇಳಿಸುವುದು ಅವರ ಅಭ್ಯಾಸವಾಗಿದೆ. ಆದರೆ, ಇಂಥವುಗಳನ್ನೆಲ್ಲ ಮಹಿಳೆಯರು ಗುಟ್ಟಾಗಿ ಇಷ್ಟಪಡುತ್ತಾರೆ.
ಪ್ರೀತಿಯ ಸಂಕೇತಗಳು ಮನಸ್ಸಿಗೆ ಭಾರೀ ಖುಷಿ ನೀಡುತ್ತವೆ ಹಾಗೂ ಜೀವನದ ಸಂಕಷ್ಟ, ಸವಾಲುಗಳನ್ನು ಮರೆಸುವಂತೆ ಮಾಡುತ್ತವೆ. ಸಾಮಾನ್ಯವಾಗಿ ಎಲ್ಲರೂ ತಮ್ಮ ಪ್ರೀತಿಪಾತ್ರರನ್ನು ಏನಾದರೊಂದು ಹೆಸರಿನಿಂದ ಕರೆಯುತ್ತಾರೆ. ಪುರುಷರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ವಿಧದ ಸಂಕೇತ ಅಥವಾ ಮಾರ್ಗಗಳನ್ನು ಅನುಸರಿಸುವುದು ಹೆಚ್ಚು.
ಮಹಿಳೆಯರೂ ಪ್ರೀತಿಯನ್ನು ತೋರಿಸಿಕೊಳ್ಳುತ್ತಾರೆ ಇಲ್ಲವೆಂದಲ್ಲ. ಕೆಲವೊಮ್ಮೆ ಮಹಿಳೆಯರು ಅವುಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವುದಿಲ್ಲ ಎನಿಸಿದರೂ ಅವರೂ ಗುಟ್ಟಾಗಿ ಕೆಲವು ಸಂಕೇತಗಳನ್ನು ಇಷ್ಟಪಡುತ್ತಾರೆ. ಸಂಗಾತಿ ತಮ್ಮೊಂದಿಗೆ ಸೇರಿ ಕೆಲವು ವಿನೋದಮಯ ಚಟುವಟಿಕೆಯಲ್ಲಿ ಭಾಗಿಯಾದರೆ ಖುಷಿ ಪಡುತ್ತಾರೆ. ಅವುಗಳನ್ನು ಪ್ರತಿಯೊಬ್ಬರೂ ಅನುಸರಿಸಿದರೆ ತಮ್ಮ ಸಂಗಾತಿಯನ್ನು ಹೆಚ್ಚು ಖುಷಿಯಾಗಿಡಲು ಸಾಧ್ಯವಾಗಬಹುದು, ಯತ್ನಿಸಿ.
ಮುದ್ದಾದ ಹೆಸರಿಟ್ಟು ಕರೆಯುವುದು:
ಸಂಗಾತಿ ತಮ್ಮನ್ನು ಯಾವುದಾದರೂ ಮುದ್ದಾದ ಹೆಸರಿನೊಂದಿಗೆ ಕರೆಯುವುದು ಬಹಳಷ್ಟು ಮಹಿಳೆಯರಿಗೆ ಇಷ್ಟವಾಗುತ್ತದೆ. ಸಾಮಾನ್ಯವಾಗಿ, ಪ್ರೀತಿಯಲ್ಲಿರುವಾಗ ಪರಸ್ಪರ ಕ್ಯೂಟಾದ ಹೆಸರಿಟ್ಟು ಕೂಗುವುದು ಅಭ್ಯಾಸ. ಮಹಿಳೆಯರಿಗೆ ಈ ಅಭ್ಯಾಸ ಭಾರೀ ಖುಷಿ ಕೊಡುತ್ತದೆ. ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ನಿಕ್ ನೇಮ್ ನಲ್ಲಿಯೇ ಕರೆದಾಗ ಅವರು ಹೆಮ್ಮೆ ಪಡುತ್ತಾರೆ. ಇತರರು ಏನೆಂದುಕೊಳ್ಳುತ್ತಾರೋ ಎನ್ನುವ ಮುಜುಗರವೂ ಅವರಿಗೆ ಕಾಡುವುದಿಲ್ಲ.
ಲವ್ ಸಾಂಗ್ ಹಂಚಿಕೊಳ್ಳುವುದು ಮಹಿಳೆಯರಿಗೆ ಇಷ್ಟ:
ಮಹಿಳೆಯರು ರೋಮ್ಯಾಂಟಿಕ್ ಹಾಡುಗಳ ಮೂಡಿನಲ್ಲಿರುವುದನ್ನು ಇಷ್ಟಪಡುತ್ತಾರೆ. ಹಾಗೆಯೇ, ತಮ್ಮ ಸಂಗಾತಿ ರೋಮ್ಯಾಂಟಿಕ್ ಹಾಡುಗಳನ್ನು ಕೇಳುವಾಗಲಾದರೂ ಜತೆಯಾಗಲಿ ಎಂದು ಬಯಸುತ್ತಾರೆ. ಅವರೊಂದಿಗೆ ಹಾಡನ್ನು ಕೇಳಲು, ನೋಡಲು ಸಾಧ್ಯವಾಗದಿದ್ದರೂ ಅಟ್ ಲೀಸ್ಟ್, ಅವರಿಗೆ ಹಾಡುಗಳ ಲಿಂಕ್ ಕಳಿಸಿದರೂ ಸಾಕು, ಖುಷಿಯಾಗುತ್ತಾರೆ. ಅವರನ್ನು ಹೀಲ್ ಮಾಡಲು ಈ ನಡೆಯೊಂದೇ ಸಾಕಾಗುತ್ತದೆ. ಅವರಲ್ಲಿ ಪ್ರೀತಿಯ ಭಾವನೆ ಮತ್ತಷ್ಟು ಜಾಗೃತವಾಗುತ್ತದೆ. ಸಂಗಾತಿ ತಮ್ಮ ಬಗ್ಗೆ ಗಮನ ನೀಡುತ್ತಾರೆ ಎನ್ನುವ ಭಾವನೆ ಅವರಲ್ಲಿ ಮೂಡುತ್ತದೆ. ಹಾಡುಗಳಲ್ಲಿರುವ ಸಾಲುಗಳು ಎಲ್ಲರ ಭಾವನೆಗಳಿಗೂ ಹೋಲುವ ಕಾರಣ ತಮ್ಮನ್ನು ನೇರವಾಗಿ ಅಟ್ಯಾಚ್ ಮಾಡಿಕೊಳ್ಳುತ್ತಾರೆ.
ಸುಮ್ಮನೆ ಸಂಗಾತಿಯ ಫೋಟೊ ಕ್ಲಿಕ್ಕಿಸುವುದು:
ಮಹಿಳೆಯರಿಗೆ ಆಗಾಗ ತಮ್ಮ ಫೋಟೊ ಕ್ಲಿಕ್ಕಿಸುವ ಅಭ್ಯಾಸ ಸಾಮಾನ್ಯವಾಗಿ ಇರುತ್ತದೆ. ಇದನ್ನೇ ನೀವು ಮಾಡಿದರೆ ಅವರು ಸಂತಸ ಪಡುತ್ತಾರೆ. ಎಲ್ಲಾದರೂ ಹೊರಗೆ ಹೋದಾಗ ಅವರ ಫೋಟೊ ತೆಗೆದರೆ ನೀವು ನಿರಂತರವಾಗಿ ಅವರೊಂದಿಗೆ ಪ್ರೀತಿಯಲ್ಲಿರುವ ಭಾವನೆ ಅನುಭವಿಸುತ್ತಾರೆ. ಅವರಲ್ಲಿ ಇದರಿಂದ ಸುರಕ್ಷಿತ ಭಾವನೆ ಮೂಡುತ್ತದೆ. ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಅವರೊಂದಿಗಿನ ಫೋಟೊ ಅಥವಾ ಅವರದ್ದೇ ಫೋಟೊ ಹಾಕಿದರೂ ಖುಷಿ ಪಡುತ್ತಾರೆ. ಇನ್ನು, ಪ್ರವಾಸದ ದಿನಗಳ ಫೋಟೊವನ್ನು ಫ್ರೇಮ್ ಹಾಕಿ ತಂದು ಮನೆಯಲ್ಲಿಟ್ಟರಂತೂ ಇನ್ನಷ್ಟು ವಿಶೇಷ ಎನಿಸುತ್ತೀರಿ.
ಇಂತಹ ಕ್ರಿಯೆಗಳಿಂದ ಮಾತ್ರವೇ ನಿಮ್ಮ ಪ್ರೀತಿ ಸಾಬೀತಾಗುತ್ತದೆ ಎಂದಲ್ಲ. ಆದರೆ, ಇವುಗಳಿಂದ ನಿಮ್ಮ ಪ್ರೀತಿ ವ್ಯಕ್ತವಾಗುವುದಂತೂ ನಿಜ. ಇದರಿಂದ ಬಾಂಧವ್ಯದಲ್ಲಿ ನವಿರಾದ ಮಧುರ ಅನುಭವ ಆಗುತ್ತಲೇ ಇರುವುದು ಸತ್ಯ.