ಮದುವೆ ನಂತರ ಪ್ರೀತಿ ಕಡಿಮೆಯಾಗ್ಬಾರದು ಅಂದ್ರೆ ಲವ್‌ ಬಗ್ಗೆ ತಿಳಿದುಕೊಳ್ಳಿ

ಪ್ರೀತಿಯು ಒಂದು ಸುಂದರವಾದ ಅನುಭವ. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪ್ರೀತಿಗೆ ಬಿದ್ದವರು ಜಗತ್ತು ಮರೆಯುತ್ತಾರೆ ಎನ್ನುವ ಮಾತಿದೆ. ಪ್ರೀತಿಗೆ ಯಾವುದೇ ಜಾತಿ, ಧರ್ಮ, ದೇಶ, ಭಾಷೆ ಅಡ್ಡಿಯಾಗುವುದಿಲ್ಲ. ಪರಸ್ಪರ ಪ್ರೀತಿಸಿ ಮದುವೆಯಾದವರು ಜೀವನ ಪರ್ಯಂತ ಜೊತೆಗಿರ್ತೇನೆ ಎಂದು ಆಣೆ ಮಾಡ್ತಾರೆ.

ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗಲು ಜನರು ಹಾತೊರೆಯುತ್ತಾರೆ. ಪ್ರೀತಿಸಿದ ವ್ಯಕ್ತಿ ಬಾಳ ಸಂಗಾತಿಯಾಗಿ ಸಿಕ್ಕರೆ ಸ್ವರ್ಗ ಸುಖ ಸಿಕ್ಕಂತೆ ಎಂದು ಭಾವಿಸುತ್ತಾರೆ. ಆದ್ರೆ ಎಲ್ಲವೂ ಅಂದುಕೊಂಡಂತೆ ಆಗಲು ಸಾಧ್ಯವಿಲ್ಲ. ಪ್ರೀತಿಸಿ ಮದುವೆಯಾದ ಜೋಡಿ ಮದುವೆಯಾದ ವರ್ಷದೊಳಗೆ ದೂರವಾಗುವುದಿದೆ.

ಇತ್ತೀಚಿನ ದಿನಗಳಲ್ಲಿ ಮದುವೆ ನಂತರ ಇಬ್ಬರ ಮಧ್ಯೆ ಪ್ರೀತಿ ವೇಗವಾಗಿ ಕಡಿಮೆಯಾಗುತ್ತಿದೆ. ಇದಕ್ಕೆ ಅನೇಕ ಕಾರಣವಿದೆ. ಪ್ರೀತಿ ಮಾಡಿದ ವ್ಯಕ್ತಿ ವಾಸ್ತವ  ಅರಿಯುವ ಅಗತ್ಯವಿದೆ.

ಮದುವೆಯ ನಂತರ ಜೀವನದಲ್ಲಿ ಅನೇಕ ಬದಲಾವಣೆಯಾಗುತ್ತದೆ. ನವವಿವಾಹಿತರ ಬಯಕೆ ಮತ್ತು ನಿರೀಕ್ಷೆಗಳು ಹೆಚ್ಚಾಗುತ್ತವೆ. ಸಂಗಾತಿಯಲ್ಲಿ ಈ ಬದಲಾವಣೆಗಳನ್ನು ಅವರು ನೋಡಲು ಬಯಸ್ತಾರೆ. ಆದ್ರೆ ಅದು ಕಾಣದೆ ಹೋದಾಗ ಇಬ್ಬರು ದೂರವಾಗ್ತಾರೆ.

ಬ್ರಿಟಿಷ್ ಸಂಶೋಧನಾ ಸಂಸ್ಥೆ ಜಿಂಜರ್ ಈ ಬಗ್ಗೆ ಸಮೀಕ್ಷೆ ನಡೆಸಿದೆ.  ನವ ವಿವಾಹವಾದ ದಂಪತಿ ಮೇಲೆ ಸಮೀಕ್ಷೆ ನಡೆದಿದೆ. ಈ ಸಮೀಕ್ಷೆಯಲ್ಲಿ ಹಲವು ಕುತೂಹಲಕಾರಿ ಮತ್ತು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ.

ಈ ಸಮೀಕ್ಷೆಯಲ್ಲಿ ಕೆಲವು ಆಘಾತಕಾರಿ ಸಂಗತಿ  ಬಹಿರಂಗವಾಗಿದೆ ಎಂದು ಮನಶ್ಶಾಸ್ತ್ರಜ್ಞ ಡೊನ್ನಾ ಡಾಸನ್ ಹೇಳಿದ್ದಾರೆ. ಸಮೀಕ್ಷೆ ವರದಿ ಪ್ರಕಾರ, ಪತ್ನಿ ಪತಿಯಿಂದ ಸಾಕಷ್ಟನ್ನು ನಿರೀಕ್ಷೆ ಮಾಡ್ತಾಳಂತೆ. ಪತಿ, ಮದುವೆಗಿಂತ ಮೊದಲಿದ್ದ ಎಲ್ಲ ಚಟವನ್ನು ಮದುವೆಯಾದ್ಮೇಲೆ ಬಿಡಲಿ ಎಂದು ಬಯಸ್ತಾಳೆ. ಹಾಗೆಯೇ ಆತನ ಕೆಲ ಸ್ನೇಹಿತರನ್ನು ದೂರ ಮಾಡಲು ಮುಂದಾಗ್ತಾಳೆ. ಪತಿ ಮಾತು ಮಾತಿಗೂ ಕೋಪ ಮಾಡಿಕೊಳ್ಳಬಾರದು, ತನ್ನ ಮಾತುಗಳನ್ನು ಎಚ್ಚರಿಕೆಯಿಂದ ಕೇಳಬೇಕೆಂದು ಪತ್ನಿ ಬಯಸ್ತಾಳೆ. ಅಷ್ಟೇ ಅಲ್ಲ ಪತಿ ತನ್ನನ್ನು ಪ್ರೀತಿ ಮಾಡುವ ಸಮಯದಲ್ಲಿ ಹೊಗಳಿದಂತೆ ಹೊಗಳಲಿ ಎಂದು ಬಯಸ್ತಾಳೆ. ಪತಿ ಸದಾ ತನ್ನ ಜೊತೆಗಿರಬೇಕು, ತನಗೆ ಸಮಯ ನೀಡಬೇಕು, ಪತಿ ಪ್ರೀತಿಸುವ ಸಮಯದಲ್ಲಿ ಇದ್ದಂತೆ ಖುಷಿ ಖುಷಿಯಾಗಿರಬೇಕು, ಉಡುಗೊರೆ ನೀಡ್ತಾ ಸರ್ಪ್ರೈಸ್ ಮಾಡ್ಬೇಕೆಂದು ಆಕೆ ಬಯಸ್ತಾಳೆ.

ಸಮೀಕ್ಷೆ ಪ್ರಕಾರ, ಮಹಿಳೆಯರಿಗಿಂತ ಪುರುಷರು ತಮ್ಮ ಸಂಗಾತಿಯಿಂದ ಹೆಚ್ಚು ಪ್ರೀತಿಯನ್ನು ಬಯಸುತ್ತಾರಂತೆ. ಹೆಂಡತಿ ತನ್ನನ್ನು ಹೆಚ್ಚು ಪ್ರೀತಿಸಬೇಕೆಂದು ಅವರು ಸದಾ ಆಸೆಪಡ್ತಾರಂತೆ. ಬೇರೆಯವರ ಹೆಂಡತಿಗಿಂತ ತನ್ನ ಹೆಂಡತಿ ಹೆಚ್ಚು ಗ್ಲಾಮರ್ ಕಾಣ್ಬೇಕು ಎಂಬುದು ಅವರ ಆಸೆಯಂತೆ. ಇಷ್ಟೇ ಅಲ್ಲ ಬೇರೆಯವರ ಹೆಂಡತಿಯನ್ನು ತನ್ನ ಹೆಂಡತಿ ಜೊತೆ ಹೋಲಿಕೆ ಮಾಡಿಕೊಳ್ಳೋದು ಹೆಚ್ಚಂತೆ.

ತನ್ನ ಹೆಂಡತಿ, ಇತರ ಮಹಿಳೆಯರಿಗಿಂತ ಚುರುಕಾಗಿರಬೇಕೆಂದು ಪತಿ ಬಯಸುತ್ತಾನಂತೆ. ಹೆಂಡತಿ ದಣಿದಂತೆ ಕಾಣಬಾರದು ಎಂದು ಅವನು ಆಸೆಪಡ್ತಾನಂತೆ. ತನ್ನೆಲ್ಲ ಕೆಲಸ, ಸೇವೆಯನ್ನು ಪತ್ನಿ ಮಾಡಬೇಕೆಂದು ಪತಿ ಬಯಸ್ತಾನಂತೆ.

ಪ್ರೀತಿಸುವ ದಿನಗಳು ಬೇರೆ ಮದುವೆಯಾದ ನಂತರ ಜೀವನ ಬೇರೆ ಎಂದು ನವಜೋಡಿ ಭಾವಿಸ್ತಾರೆ. ಮದುವೆಯಾದ ತಕ್ಷಣ ಪರಸ್ಪರರಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಲು ಬಯಸುತ್ತಾರೆ. ಆದ್ರೆ ಈ ಎಲ್ಲ ಬದಲಾವಣೆಗಳನ್ನು ಕಾಣುವುದು ಕಷ್ಟ. ಬಯಸಿದಂತೆ ಪತಿ, ಪತ್ನಿ ಇರಲು ಸಾಧ್ಯವಾಗುವುದಿಲ್ಲ. ಅಂದುಕೊಂಡಿದ್ದು ಸಂಗಾತಿಯಲ್ಲಿ ಇಲ್ಲ ಎಂದಾಗ, ಕೊರತೆ ಕಾಣಿಸಿಕೊಂಡಾಗ ಅವರು ನಿರಾಶೆ ಅನುಭವಿಸುತ್ತಾರೆ. ಅದು ಕ್ರಮೇಣ ಕಿರಿಕಿರಿಗೆ ತಿರುಗುತ್ತದೆ. ಸಣ್ಣ ಸಣ್ಣ ವಿಷ್ಯಕ್ಕೆ ಗಲಾಟೆ ಶುರುವಾಗುತ್ತದೆ. ಪರಸ್ಪರರಲ್ಲಿ ತಪ್ಪು ಹುಡುಕುತ್ತ ಜಗಳ ಮಾಡುವ ದಂಪತಿ ದೂರವಾಗ್ತಾರೆ.  ಪ್ರೀತಿಗೆ ಮಾತ್ರ ಮಹತ್ವ ನೀಡಿ, ನಿರೀಕ್ಷೆಯನ್ನು ದೂರವಿಟ್ಟರೆ ದಾಂಪತ್ಯ ದೀರ್ಘಕಾಲ ಬಾಳಲು ಸಾಧ್ಯವೆನ್ನುತ್ತಾರೆ ತಜ್ಞರು.