ದೇಶದಾದ್ಯಂತ ಹೋಳಿ ಹಬ್ಬವನ್ನ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲೂ ಹೋಳಿ ಬಣ್ಣಗಳ ಹಬ್ಬವಾಗಿದೆ. ಇದು ಒಗ್ಗಟ್ಟು, ಪ್ರೀತಿ, ಭ್ರಾತೃತ್ವದ ಸಂಕೇತವಾಗಿದೆ. ಹೋಳಿಯ ದಿನ ಬಣ್ಣಗಳ ಮೂಲಕ ಇಡೀ ದೇಶ ರಂಗಾಗುತ್ತದೆ. ಎಲ್ಲರು ಹೋಳಿ ಬಣ್ಣದಿಂದ ಒಬ್ಬರ ಮೇಲೊಬ್ಬರು ಬಣ್ಣ ಎರಚುತ್ತಾರೆ.
ಹೋಳಿಯನ್ನು ಭಾರತ ಮಾತ್ರವಲ್ಲ ವಿದೇಶದಲ್ಲೂ ಆಚರಿಸುತ್ತಾರೆ. ಸಿಹಿ ಹಂಚಿ, ಪರಸ್ಪರ ಬಣ್ಣಗಳ ಹಚ್ಚುತ್ತಾರೆ. ಈ ಹಬ್ಬಕ್ಕೆ ತನ್ನದೇ ಆಗಿರುವ ಇತಿಹಾಸವಿದೆ. ಅದರಲ್ಲೂ ಪುರಾತನ ಹಿಂದೂ ಗ್ರಂಥಗಳಲ್ಲೂ ಕೂಡ ಉಲ್ಲೇಖಗಳಿರುವುದು ನಾವು ನೋಡಬಹುದು. ಶ್ರೀಕೃಷ್ಣ ಗೋಪಿಕೆಯರ ಜೊತೆಗೆ ದಾಂಡಿಯ ಜೊತೆಗೆ ಹೋಳಿ ಆಡುತ್ತಿದ್ದ ಎಂದು ಹೇಳುವುದು ಕೇಳಿರಬಹುದು.
ಇತ್ತಿಚಿಗೆ ಹೋಳಿ ತನ್ನ ಪ್ರಾಮುಖ್ಯತೆಯ ಜೊತೆಗೆ ಆರೋಗ್ಯದ ಕುರಿತ ಆತಂಕಕ್ಕೂ ಕಾರಣವಾಗುತ್ತಿದೆ. ಹೋಳಿಯ ಬಣ್ಣವು ನಮಗೆ ಮಾತ್ರವಲ್ಲ ಪ್ರಾಣಿಗಳ ಪಾಲಿಗೂ ಕಂಟಕವಾಗುತ್ತಿದೆ ಎಂಬುದು ನಿಮಗೆ ಗೊತ್ತಾ? ಹೌದು ಇತ್ತೀಚಿಗೆ ಹೋಳಿಯ ಬಣ್ಣ ಹೆಚ್ಚು ರಾಸಾಯನಿಕ ಮಿಶ್ರಣದಿಂದಾಗಿ ವಿಪರೀತ ಅನಾರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ.
ಹೋಳಿಯ ಈ ಬಣ್ಣವು ಉಸಿರಾಟ ಸಮಸ್ಯೆ, ಅಲರ್ಜಿ, ಅಸ್ತಮಾದಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿರುವುದು ನೋಡಬಹುದು. ಅದರಲ್ಲೂ ಶ್ವಾಸಕೋಶವು ನೇರವಾಗಿ ಹಾನಿಯಾಗಬಹುದು. ಹಾಗಾದ್ರೆ ಈ ಹೋಳಿಯನ್ನು ಅತ್ಯಂತ ಸುರಕ್ಷಿತವಾಗಿ, ಆರೋಗ್ಯಕರ ರೀತಿಯಲ್ಲಿ ಆಚರಿಸುವ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ.
ಈ ಬಣ್ಣಗಳಲ್ಲಿ ಬಳಸುವ ರಾಸಾಯನಿಕವು ನಿಮ್ಮ ಚರ್ಮಕ್ಕೆ ಕಿರಿಕಿರಿ ಉಂಟು ಮಾಡುತ್ತದೆ. ಇದರಲ್ಲಿ ಅನಾಫಿಲ್ಯಾಕ್ಸಿನ್ಗೆ ಕಾರಣವಾಗುವ ಅಂಶಗಳ ಹೊಂದಿರಲಿದೆ. ಅದರಲ್ಲೂ ಈ ಕೃತಕ ಬಣ್ಣಗಳು ಚರ್ಮದಲ್ಲಿ ಕಿರಿಕಿರಿ, ಅಲರ್ಜಿ, ತುರಿಗೆ, ಕೆಂಪಾಗುವುದು, ದದ್ದುಗಳಿಗೆ ಕಾರಣವಾಗುವುದು ನೋಡಬಹುದು.
ಹೋಳಿ ಬಣ್ಣದಿಂದ ಚರ್ಮವನ್ನು ರಕ್ಷಿಸುವುದು ಹೇಗೆ?
ನೈಸರ್ಗಿಕ ಬಣ್ಣಗಳ ಬಳಕೆ:
ಸಾಮಾನ್ಯವಾಗಿ ಈಗ ಮಾರುಕಟ್ಟೆಯಲ್ಲಿ ಸಿಗುವಂತಹ ಎಲ್ಲಾ ಬಣ್ಣಗಳು ಕೂಡ ರಾಸಾಯನಿಕ ಹೊಂದಿರುತ್ತವೆ. ಅವು ನೋಡಲು ಗಾಢವಾದ ಬಣ್ಣ ಹೊಂದಿರುವ ಕಾರಣ ಎಲ್ಲರ ಗಮನ ತನ್ನತ್ತ ಬಹುಬೇಗ ಸೆಳೆಯುತ್ತವೆ. ಹೀಗಾಗಿ ಎಲ್ಲರು ಇಂತಹ ಬಣ್ಣವನ್ನೇ ಬಳಸಲು ಮುಂದಾಗುವುದು ನೋಡಬಹುದು. ಆದ್ರೆ ಈ ಬಣ್ಣಗಳು ನಿಮ್ಮ ದೇಹಕ್ಕೆ ಹಾನಿ ಮಾಡುತ್ತವೆ. ಹೀಗಾಗಿ ನೈಸರ್ಗಿಕ ಬಣ್ಣ ಬಳಸುವುದು ಬಹಳ ಉತ್ತಮ. ಹೂವುಗಳು, ಮರ, ಕೆಲ ಮಸಾಲೆ ಪದಾರ್ಥಗಳಿಂದ ಮಾಡಿರುವ ನೈಸರ್ಗಿಕ ಬಣ್ಣ ಬಳಸುವುದು ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ.
ಮೈ ತುಂಬುವಂತಹ ಬಟ್ಟೆ ಧರಿಸುವುದು:
ರಾಸಾಯನಿಕ ತುಂಬಿರುವ ಬಣ್ಣಗಳಿಂದ ನಿಮ್ಮ ಚರ್ಮ ರಕ್ಷಿಸಿಕೊಳ್ಳಲು ಮೈ ತುಂಬ ಬಟ್ಟೆ ಧರಿಸಿ. ಏಕೆಂದರೆ ಬಣ್ಣಗಳು ನಿಮ್ಮ ದೇಹದ ಮೇಲೆ ಅಥವಾ ಚರ್ಮದ ಮೇಲೆ ಎಷ್ಟು ಕಡಿಮೆ ನೇರ ಸಂಪರ್ಕ ಮಾಡುತ್ತವೆಯೋ ಅಷ್ಟು ಉತ್ತಮ. ಉದ್ದ ತೋಳಿನ ಬಟ್ಟೆ, ಮಾಸ್ಕ್, ಪ್ಯಾಂಟ್ ಧರಸಿ ಹೋಳಿ ಆಡುವುದು ಉತ್ತಮ. ಹಾಗೆ ಈ ಸಮಯದಲ್ಲಿ ಮೈಗೆ ಅಥವಾ ಕೈ ಕಾಲು ಮುಖಕ್ಕೆ ದಪ್ಪವಾಗಿ ತೆಂಗಿನ ಎಣ್ಣೆ ಅಥವಾ ಮಾಯಿಶ್ಚರೈಸರ್ ಹಚ್ಚಿಕೊಳ್ಳುವುದು ಉತ್ತಮ. ಸ್ನಾನ ಮಾಡಿದಾಗ ಇದು ಸಂಪೂರ್ಣ ತೊಳೆದು ಹೋಗುತ್ತದೆ. ಹಾಗೆ ಚರ್ಮಕ್ಕೂ ಹಾನಿಯಾಗುವುದಿಲ್ಲ.
ಬಣ್ಣಗಳು ಹೆಚ್ಚು ಸಮಯ ದೇಹದ ಮೇಲೆ ಇರದಂತೆ ನೋಡಿಕೊಳ್ಳಿ:
ಬಣ್ಣಗಳ ಆಟವು ನಿಮ್ಮ ದೇಹದ ಮೇಲೆ ಹೆಚ್ಚು ಸಮಯ ಇರದಂತೆ ನೋಡಿಕೊಳ್ಳಿ. ಬಣ್ಣ ಹಚ್ಚಿಕೊಂಡ ಬಳಿಕ ತಕ್ಷಣವೇ ತೊಳೆದುಕೊಳ್ಳುವುದು ಬಃಲ ಉತ್ತಮ ಈ ಬಣ್ಣಗಳು ರಾಸಾಯನಿಕ ಬಿಟ್ಟು ನಿಮ್ಮ ಚರ್ಮಕ್ಕೆ ಹಾನಿ ಮಾಡುವ ಮುನ್ನ ಅದನ್ನು ತೊಳೆಯುವುದು ಮುಖ್ಯ. ತಕ್ಷಣ ಸ್ನಾನ ಮಾಡಿದರೆ ಮೈ ಮೇಲಿನ ಬಣ್ಣ ಹೋಗಲಿದೆ.
ತುಟಿಗೆ ಲಿಪ್ಬಾಮ್ ಹಚ್ಚಿ:
ತುಟಿಯು ಅತ್ಯಂತ ಮೃದುವಾದ ಅಂಗ ಹೀಗಾಗಿ ಹೋಳಿ ಕಲರ್ನಿಂದ ಬಹುಬೇಗ ಹಾನಿಗೊಳಗಾಗಬಹುದು ಹೀಗಾಗಿ ನೀವು ತುಟಿಗಳಿಗೆ ಲಿಪ್ಬಾಮ್ ಹಚ್ಚಿಕೊಳ್ಳುವುದು ಬಹಳ ಮುಖ್ಯ. ಹಾಗೆ ಉಗುರುಗಳಿಗೂ ಕೂಡ ನೈಲ್ ಪಾಲಿಶ್ ಹಚ್ಚಿಕೊಂಡರೆ ಉತ್ತಮ, ಇಲ್ಲದಿದ್ದರೆ ಉಗುರುಗಳ ಬದಿಯಲ್ಲಿ ಬಣ್ಣಗಳು ಉಳಿದುಬಿಡಬಹುದು.
ಹೋಳಿಗೂ ಮುನ್ನ ಯಾವುದಾದರು ಫೇಶಿಯಲ್ ಬಳಸಿದ್ದರೆ ಬಣ್ಣಗಳಿಂದ ದೂರವಿರಿ:
ನೀವು ಪಾರ್ಲರ್ಗೆ ಹೋಗಿ ಫೇಶಿಯಲ್ ಮಾಡಿಸಿದ್ದರೆ ಈ ಸಮಯದಲ್ಲಿ ಹೋಳಿ ಸಮಯದಲ್ಲಿ ಬಣ್ಣಗಳಿಂದ ದೂರ ಇರುವುದು ಬಹಳ ಮುಖ್ಯ. ಇದರಿಂದ ಮುಖದಲ್ಲಿ ಕೆಮಿಕಲ್ ರಿಯಾಕ್ಷನ್ ಆಗಬಹುದು. ಏಕೆಂದರೆ ಫೇಶಿಯಲ್ ಸಮಯದಲ್ಲಿ ಮುಖಕ್ಕೆ ಹಲವು ರೀತಿ ಅಂಶಗಳು, ರಾಸಾಯನಿಕಗಳ ಬಳಸಿರುತ್ತಾರೆ. ಈ ರಾಸಯಾನಿಕವು ಬಣ್ಣಗಳಲ್ಲಿರುವ ಪರಿಣಾಮಕಾರಿ ಕೆಮಿಕಲ್ ಜೊತೆಗೆ ಬೆರೆಯುವುದು ನಿಮ್ಮ ಮುಖಕ್ಕೆ ಹಾನಿ ಮಾಡಬಹುದು.
ಹೋಳಿ ಬಣ್ಣಗಳಿಂದ ಉಸಿರಾಟದ ಸಮಸ್ಯೆ ಕಾಡಬಹುದೇ?:
ಹೋಳಿ ಬಣ್ಣಗಳು ಉಸಿರಾಟದ ಸಮಸ್ಯೆಯನ್ನು ಉಂಟು ಮಾಡುವ ಕಡೆ ಗಮನಾರ್ಹ ಪರಿಣಾಮ ಬೀರುತ್ತವೆ. ಅಸ್ತಮಾವೂ ಹಲವು ರೀತಿಯ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗಬಹುದು. ಹಾಗೆ ಇದು ಉಸಿರಾಟ ಸಂಬಂಧಿ ಸಮಸ್ಯೆಗಳ ಹೆಚ್ಚಳಕ್ಕೂ ಕಾರಣವಾಗಲಿದೆ. ಹಲವು ಹೋಳಿ ಬಣ್ಣಗಳು ಸೀಸ, ಕ್ರೋಮಿಯಂ ಮತ್ತು ಕ್ಯಾಡ್ಮಿಯಂನಂತಹ ಭಾರ ಲೋಹಗಳನ್ನು ಹೊಂದಿರುತ್ತವೆ ಎಂದು ತಿಳಿದುಬಂದಿದೆ.