ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಬಾರದು?

ಮಹಿಳೆಯರನ್ನು ಅತೀ ಹೆಚ್ಚಾಗಿ ಕಂಡು ಬರುತ್ತಿರುವ ಆರೊಗ್ಯ ಸಮಸ್ಯೆಗಳಲ್ಲೊಂದು ಸ್ತನ ಕ್ಯಾನ್ಸರ್. ಸ್ತನಗಳು ಚಿಕ್ಕದಾಗಿರಲಿ, ದೊಡ್ಡದಾಗಿರಲಿ, ಜೋತು ಬಿದ್ದಿರಲಿ ಅಥವಾ ಯೌವನದ ಕಳೆ ಎದ್ದು ತೋರಿಸುವಂತಿರಲಿ ಸ್ತನಗಳು ಆರೋಗ್ಯವಾಗಿದ್ದರೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. 

ಕೆಲವೊಮ್ಮೆ ಸ್ತನಗಳಲ್ಲಿ ನೋವು ಕಂಡು ಬರುತ್ತದೆ, ಇದು ಸಹಜ ನೋವು ಆಗಿದೆಯೇ ಅಥವಾ ಏನಾದರೂ ಆರೋಗ್ಯ ಸಮಸ್ಯೆಯಿಂದಾಗಿ ಈ ರೀತಿಯಾಗುತ್ತಿದೆಯೇ ಎಂದು ಕೆಲವರು ಗಾಬರಿ ಬೀಳುತ್ತಾರೆ. ಗಾಬರಿ ಇದ್ದವರು ವೈದ್ಯರಿಗೆ ತೋರಿಸಬೇಕು.

ಆರೋಗ್ಯಕರ ಸ್ತನಗಳ ಲಕ್ಷಣಗಳೇನು? ಸ್ತನಗಳಲ್ಲಿ ಯಾವ ಬದಲಾವಣೆ ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಬೇಕು ಎಂದು ನೋಡೋಣ.

ಆರೋಗ್ಯಕರ ಸ್ತನದ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ಆರೋಗ್ಯಕರ ಸ್ತನದ ಲಕ್ಷಣಗಳು: 

* ನಿಮ್ಮ ಎರಡು ಸ್ತನಗಳು ಗಾತ್ರದಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರೂ ನೋಡಲು ಒಂದೇ ರೀತಿ ಇರಬೇಕು. 

* ಸ್ತನದ ಮೇಲಿನ ತ್ವಚೆ ಮೃದುವಾಗಿರಬೇಕು ಹಾಗೂ ಕ್ಲೀನ್ ಆಗಿರಬೇಕು. 

* ನಿಮ್ಮ ಸ್ತನ ಉಷ್ಣತೆ ಹಾಗೂ ದೇಹದ ಇತರ ಭಾಗದ ಉಷ್ಣತೆ ಒಂದೇ ರೀತಿ ಇರಬೇಕು. 

* ಸ್ತನತೊಟ್ಟುವಿನಿಂದ ಯಾವುದೇ ದ್ರವ ಬರಬಾರದು. (ಗರ್ಭಿಣಿಯಾಗಿದ್ದಾಗ ಹಾಗೂ ಹೆರಿಗೆಯ ಬಳಿಕ ಹಾಲು ಬರುವುದು ಸಹಜ, ಅಲ್ಲದೇ ಇದ್ದರೆ ಯಾವುದೇ ದ್ರವ ಬರಬಾರದು) 

* ಸ್ತನಗಳನ್ನು ಮುಟ್ಟುವಾಗ ನೋವಾಗಬಾರದು.

ಯಾವಾಗ ನಿರ್ಲಕ್ಷ್ಯ ಮಾಡಬಾರದು? 

1. ಸ್ತನಗಳಲ್ಲಿ ಗಂಟುಗಳು ಗೋಚರಿಸಿದರೆ: 
ನೀವು ಸ್ತನಗಳ ಮೇಲೆ ಕೈಯಾಡಿಸಿದಾಗ ಯಾವುದಾದರೂ ಗಂಟು ಇದ್ದಂತೆ ಅನಿಸಿದರೆ ಅವು ನೋವಿಲ್ಲದಿದ್ದರೂ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸುವುದು ಒಳ್ಳೆಯದು. ಏಕೆಂದರೆ ಕ್ಯಾನ್ಸರ್ ಗಡ್ಡೆಗಳಲ್ಲಿ ಕೂಡ ಆರಂಭದಲ್ಲಿ ಯಾವುದೇ ನೋವು ಕಂಡು ಬರುವುದಿಲ್ಲ. ಗಡ್ಡೆ ಗೋಚರಿಸಿದರೆ ಆತಂಕ ಪಡಬೇಡಿ, ವೈದ್ಯರು ಪರೀಕ್ಷಿಸಿ ನಿಮಗೆ ಸೂಕ್ತ ಸಲಹೆ-ಸೂಚನೆ ನೀಡುತ್ತಾರೆ. 

2. ಸ್ತನದತೊಟ್ಟುಗಳು ಒಳಕ್ಕೆ ಹೋಗುವುದು: 
ಕೆಲವರಿಗೆ ಜನಿಸಿದಾಗ ಸ್ತನತೊಟ್ಟುಗಳು ಒಳಕ್ಕೆ ಹೋಗಿರುತ್ತದೆ, ಹಾಗಾದರೆ ತೊಂದರೆಯಿಲ್ಲ, ಆದರೆ ಸರಿಯಾಗಿದ್ದ ಸ್ತನತೊಟ್ಟುಗಳು ಒಳಕ್ಕೆ ಹೋದರೆ ವೈದ್ಯರಿಗೆ ತೋರಿಸಿ.

3. ಸ್ತನಗಳ ಗಾತ್ರದಲ್ಲಿ ವ್ಯತ್ಯಾಸವಾದರೆ: 
ನಿಮ್ಮ ಎರಡು ಸ್ತನಗಳಲ್ಲಿ ತುಂಬಾನೇ ವ್ಯತ್ಯಾಸ ಗೋಚರಿಸಿದರೆ ಅವೆರಡು ಒಂದೇ ರೀತಿ ಕಾಣುತ್ತಿಲ್ಲ ಎಂದನಿಸಿದರೆ ವೈದ್ಯರಿಗೆ ತೋರಿಸಿ. 

4. ಸ್ತನಗಳಲ್ಲಿ ದ್ರವ ಬಂದರೆ: 
ಸ್ತನಗಳಲ್ಲಿ ನೀರು ಅಥವಾ ಇತರ ಬಣ್ಣದ ದ್ರವಾಂಶ ಬಂದರೆ ನಿರ್ಲಕ್ಷ್ಯ ಮಾಡಬಾರದು. ವೈದ್ಯರು ಪರೀಕ್ಷಿಸಿ ನಿಮಗಿರುವ ಸಮಸ್ಯೆಯನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುತ್ತಾರೆ.

5. ಸ್ತನಗಳು ಕೆಂಪಾಗುವುದು: 
ನಿಮ್ಮ ಸ್ತನಗಳು ಕೆಂಪಾಗುವುದಾದರೆ ಅದು ಅನಾರೋಗ್ಯಕರ ಸ್ತನದ ಲಕ್ಷಣವಾಗಿದೆ, ಸ್ತನಗಳಲ್ಲಿ ಬದಲಾವಣೆ ಕಂಡು ಬಂದರೆ ಆತಂಕ ಪಡಬೇಡಿ. ವೈದ್ಯರ ಪ್ರಕಾರ ಸ್ತನಗಳಲ್ಲಿ ಸಮಸ್ಯೆ ಪ್ರಾರಂಭದಲ್ಲಿಯೇ ಗುರುತಿಸಿದರೆ ಚಿಕಿತ್ಸೆ ನೀಡಿ ಗುಣಪಡಿಸುವುದು ಸುಲಭ. ಪ್ರತಿಯೊಬ್ಬ ಮಹಿಳೆಯೂ 20 ವರ್ಷದ ಬಳಿಕ mammogram ಅಥವಾ ಸ್ವತಃ ಸ್ತನಗಳನ್ನು ಪರೀಕ್ಷಿಸುವ ಮೂಲಕ ಸ್ತನಗಳ ಆರೋಗ್ಯದ ಕಡೆಗೆ ಗಮನಹರಿಸಬೇಕು.

ಆರೋಗ್ಯಕರ ಸ್ತನ ಪಡೆಯಲು ಟಿಪ್ಸ್:*

 * ಆರೋಗ್ಯಕರ ಮೈ ತೂಕ ಹೊಂದಿ: ಅಧಿಕ ಮೈ ತೂಕ ಹೊಂದಿದವರಿಗೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು. 

* ಪ್ರತಿದಿನ ವ್ಯಾಯಾಮ ಮಾಡಿ: ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡುವುದು ಒಳ್ಳೆಯದು. ವಾರದಲ್ಲಿ ಕನಿಷ್ಠ 5 ದಿನ ವ್ಯಾಯಾಮ ಮಾಡಬೇಕು. 

* ಮದ್ಯಪಾನ ಮಿತಿಯಲ್ಲಿರಬೇಕು: ಅತಿಯಾದ ಮದ್ಯಪಾನ ಮಹಿಳೆಯರಿಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆ ತರುತ್ತದೆ.

* ಅಧಿಕ ತರಕಾರಿ ಸೇವಿಸಿ: ಬ್ರೊಕೋಲಿ, ಕ್ಯಾಬೇಜ್, ಹೂಕೋಸ, ಸೊಪ್ಪು ಈ ಬಗೆಯ ಆಹಾರ ಹೆಚ್ಚಾಗಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುವುದು.

* ಧೂಮಪಾನ ಮಾಡಬೇಡಿ: ಧೂಮಪಾನದಿಂದ ಸ್ತನಕ್ಯಾನ್ಸರ್ ಜೊತೆಗೆ ಇತರ ಆರೋಗ್ಯ ಸಮಸ್ಯೆ ಹೆಚ್ಚುವುದು. 

* 40-50 ವರ್ಷದ ಮಹಿಳೆಯರು ಪ್ರತೀವರ್ಷmammogram ಪರೀಕ್ಷೆ ಮಾಡಿಸಿ. 

* 50 ವರ್ಷ ಮೇಲ್ಪಟ್ಟವರು 2 ವರ್ಷಕ್ಕೊಮ್ಮೆ ಮಾಡಿಸಿ. 

ಸ್ತನ ಕ್ಯಾನ್ಸರ್ ತಡೆಗಟ್ಟಲು ಈ ಆಹಾರ ಬಳಸಬೇಡಿ: 

* ಕರಿದ ಪದಾರ್ಥಗಳು 

* ಫಾಸ್ಟ್ ಫುಡ್ಸ್ 

* ಸಂಸ್ಕರಿಸಿದ ಆಹಾರ 

* ಕೃತಕ ಸಿಹಿಯಂಶವಿರುವ ಆಹಾರ ಅಥವಾ ಪಾನೀಯ 

* ಕಾರ್ಬ್ಸ್ ಸೋಯಾ ಪದಾರ್ಥಗಳು ಸೋಯಾ ಪದಾರ್ಥಗಳು ಕ್ಯಾನ್ಸರ್ಗೆ ಹೇಗೆ ಕಾರಣವಾಗುವುದು ಎಂದು ಹಲವರಿಗೆ ಅಚ್ಚರಿ ಉಂಟಾಗಬಹುದು.