ನಿಶ್ಚಿತಾರ್ಥ–ಮದುವೆ ಮಧ್ಯೆ ಸಿಗುವ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ!

ಜೀವನದಲ್ಲಿ ಮದುವೆ ಆಗೋದು ಒಂದು ದೊಡ್ಡ ಬದಲಾವಣೆ ಹಾಗೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಅನಿವಾರ್ಯ. ಆದರೆ  ಮದುವೆ ಹಾಗೂ ನಿಶ್ಚಿತಾರ್ಥದ ಮಧ್ಯೆ ಇರುವ ಸಮಯ ಅಮೂಲ್ಯವಾದದ್ದು. ಕನಸಿನಂತಿರುವ ಈ ಸಮಯವನ್ನು ವ್ಯರ್ಥ ಮಾಡಬಾರದು. ಹಾಗಾದ್ರೆ ಈ ಸಮಯದಲ್ಲಿ ನೀವೇನು ಮಾಡಬಹುದು.

ನಿಶ್ಚಿತಾರ್ಥವಾಗಿ, ಮದುವೆ ಫಿಕ್ಸ್ ಆಗಿದೆ ಅಂದ್ರೆ ಎಲ್ಎಲ್ಆರ್  ಸಿಕ್ಕಿದ ಹಾಗೆ. ಜೀವನದ ಅತ್ಯಂತ ಸುಂದರ ಸಮಯ ಎಂದರೆ ತಪ್ಪಾಗಲಾರದು. ಮದುವೆಗೆ ಒಂದರಿಂದ ಎರಡು ತಿಂಗಳು ಕಾಯ್ಬೇಕು ಅಂದಾಗ ಬೇಸರಪಟ್ಟುಕೊಳ್ಳಬೇಡಿ. ಭಾವಿ ಸಂಗಾತಿ ಜೊತೆ ಸಮಯ ಕಳೆಯಲು ಒಳ್ಳೆ ಅವಕಾಶ ಸಿಕ್ಕಿದೆ ಅಂದ್ಕೊಳ್ಳಿ.

ಈ ಸುಂದರ ಸಮಯವನ್ನು ಎಂದಿಗೂ ವ್ಯರ್ಥ್ಯ ಮಾಡಿಕೊಳ್ಳಬೇಡಿ. ಈ ಸಮಯವನ್ನು ನೀವು ಸಿನಿಮಾದಲ್ಲಿ ತೋರಿಸಿದಂತೆ ಕಳೆಯಬಹುದು. ನಿಶ್ಚಿತಾರ್ಥ ಮಾಡಿಕೊಂಡ ನಿಮ್ಮ ಹುಡುಗ ಅಥವಾ ಹುಡುಗಿಯನ್ನು ನೀವು ಹತ್ತಿರದಿಂದ ನೋಡಲು ಅವಕಾಶ ಸಿಗುತ್ತದೆ. ಮದುವೆ ಮುನ್ನವೇ ಅವರ ಸ್ವಭಾವವನ್ನು ನೀವು ಸ್ವಲ್ಪ ಮಟ್ಟಿಗೆ ತಿಳಿಯಲು ಅವಕಾಶ ಸಿಗುತ್ತದೆ. ಮದುವೆ ನಂತರದ ಹೊಂದಾಣಿಕೆಗೆ ಇದು ಸಹಾಯವಾಗುತ್ತದೆ. 

ಈ ಸಮಯದಲ್ಲಿ ಭಾವಿ ಸಂಗಾತಿ ಜೊತೆ ಡೇಟಿಂಗ್ ಸ್ವಲ್ಪ ಕಷ್ಟ ನಿಜ. ಯಾಕೆಂದ್ರೆ ಮದುವೆ ತಯಾರಿ ಈ ಸಂದರ್ಭದಲ್ಲಿ ಜೋರಾಗಿರುತ್ತದೆ. ಮದುವೆ ಬಟ್ಟೆ, ವಸ್ತುಗಳ ಖರೀದಿ, ಮದುವೆಗೆ ಸಿದ್ಧತೆ ಮಾಡಿಕೊಳ್ತಿರುವಾಗ ಸಮಯ ಹೊಂದಿಸುವುದು ಕಷ್ಟ. ಆದರೆ ನೀವು  ಭಾವಿ ಸಂಗಾತಿ ಜೊತೆ ಸಮಯ ಕಳೆಯಲು ಸಮಯ ಹೊಂದಿಸಿಕೊಳ್ಳುವುದು ಬಹಳ ಮುಖ್ಯ. ನಿಶ್ಚಿತಾರ್ಥ ವಾದ್ಮೇಲೆ ನೀವು ಏನೆಲ್ಲ ಮಾಡ್ಬಹುದು ಗೊತ್ತಾ?

ಬೇರೆ ವಿಷ್ಯದ ಬಗ್ಗೆ ಚರ್ಚೆ ನಡೆಸಿ:
ಮದುವೆ ಸಂದರ್ಭದಲ್ಲಿ ಮದುವೆ ಬಗ್ಗೆ ಚರ್ಚೆ ಸಾಮಾನ್ಯ. ಸಂಬಂಧ ಗಟ್ಟಿಯಾಗ್ಬೇಕೆಂದ್ರೆ ಬರೀ ಮದುವೆ ದಿನದ ಬಗ್ಗೆ ಮಾತ್ರ ಮಾತನಾಡಬೇಡಿ. ಹನಿಮೂನ್ ಗೆ ಎಲ್ಲಿ ಹೋಗಬೇಕು ಎನ್ನುವ ಬಗ್ಗೆಯೂ ನೀವು ಚರ್ಚೆ ನಡೆಸಬಹುದು. ಮನಸ್ಸಿಗೆ ರಿಲ್ಯಾಕ್ಸ್ ಎನ್ನಿಸುವ ಮಾತುಗಳನ್ನು ಕೂಡ ನೀವು ಆಡಬಹುದು. ಸಮಯ ಸಿಕ್ಕಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಅವರ ಇಷ್ಟ – ಕಷ್ಟಗಳನ್ನು ನೀವು ಕೇಳಿ ತಿಳಿಯಬಹುದು.

ಭವಿಷ್ಯದ ಬಗ್ಗೆ ಪ್ಲಾನ್ ಮಾಡಿ:
ಇಬ್ಬರು ಜೀವನ ಪರ್ಯಂತ ಒಟ್ಟಿಗೆ ಬಾಳ್ವೆ ನಡೆಸಬೇಕು. ಈ ಸಂದರ್ಭದಲ್ಲಿ ಪರಸ್ಪರ ಆಸೆಗಳನ್ನು ತಿಳಿಯುವುದು ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ ಸಣ್ಣ ಅಥವಾ ದೊಡ್ಡ ಆಸೆಗಳನ್ನು ಹೊಂದಿರುತ್ತಾರೆ. ಅದನ್ನು ಸಂಗಾತಿ ಮುಂದೆ ಚರ್ಚೆ ನಡೆಸಿದಾಗ ಅವರಿಗೊಂದು ಕ್ಲಾರಿಟಿ ಸಿಗುತ್ತದೆ. ಜೀವನದಲ್ಲಿ ನಿಮ್ಮ ಆಸೆ ಈಡೇರಿಸಲು, ಗುರಿ ಮುಟ್ಟಲು ಅವರು ನಿಮಗೆ ಸಹಾಯ ಮಾಡ್ತಾರೆ.

ಸಂಗಾತಿಯನ್ನು ಸರಿಯಾಗಿ ಅರ್ಥ ಮಾಡ್ಕೊಳ್ಳಿ:
ನಿಶ್ಚಿತಾರ್ಥದ ನಂತರ ಭಾವಿ ಸಂಗಾತಿಯನ್ನು ಚೆನ್ನಾಗಿ ತಿಳಿದುಕೊಳ್ಳಲು ನೀವು ಪ್ರಯತ್ನಿಸಬೇಕು. ಇದು ಸಂಬಂಧ ಬಲಪಡಿಸಲು ನಿಮಗೆ ನೆರವಾಗುತ್ತದೆ. ಭಾವಿ ಸಂಗಾತಿ ಅರ್ಥ ಮಾಡಿಕೊಳ್ಳಬೇಕೆಂದ್ರೆ ಅವರ ಜೊತೆ ಹೆಚ್ಚು ಸಮಯ ಕಳೆಯಬೇಕು. ಅವರ ಜೊತೆ ಮಾತನಾಡಬೇಕು. ಆಗ ಮಾತ್ರ ಅವರನ್ನು ಹೆಚ್ಚೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಾಮಾಣಿಕತೆ ಇಲ್ಲಿ ಮುಖ್ಯ:
ಇಬ್ಬರೂ ಪ್ರಾಮಾಣಿಕವಾಗಿರುವುದು ಮುಖ್ಯವಾಗುತ್ತದೆ. ಮದುವೆ, ಪ್ರೀತಿ ಎಲ್ಲವೂ ನಂಬಿಕೆ ಮತ್ತು ಪ್ರಾಮಾಣಿಕತೆ ಮೇಲೆ ನಿಂತಿರುತ್ತದೆ. ನಿಮ್ಮಲ್ಲಿರುವ ಸಮಸ್ಯೆ ಅಥವಾ ತೊಂದರೆಯನ್ನು ನೀವು ನಿಮ್ಮ ಸಂಗಾತಿ ಮುಂದೆ ಪ್ರಾಮಾಣಿಕವಾಗಿ ಹೇಳಿಕೊಳ್ಳುವುದು ಮುಖ್ಯ. ಇದ್ರಿಂದ ಸಂಗಾತಿ ಜೊತೆ ನಿಮ್ಮ ಬಂಧ ಗಟ್ಟಿಯಾಗುತ್ತದೆ.

ಈ ಪ್ರಶ್ನೆಗೆ ಉತ್ತರ ಪಡೆಯಿರಿ:
ಅನೇಕ ಬಾರಿ ಕುಟುಂಬಸ್ಥರ ಒತ್ತಾಯಕ್ಕೆ ಮಣಿದು ಮದುವೆಯಾಗುವವರಿದ್ದಾರೆ. ಅವರಿಗೆ ಈ ಸಂಬಂಧದಲ್ಲಿ ಆಸಕ್ತಿಯಿರೋದಿಲ್ಲ. ನೀವು ನಿಶ್ಚಿತಾರ್ಥವಾದ್ಮೇಲೆ  ಕೂಡ ಈ ವಿಷ್ಯ ತಿಳಿಯುವ ಪ್ರಯತ್ನ ನಡೆಸಿ. ಇಷ್ಟವಿಲ್ಲದ ಸಂಬಂಧ ದೀರ್ಘಕಾಲ ಉಳಿಯುವುದಿಲ್ಲ ಎಂಬುದು ನೆನಪಿರಲಿ.

ಕುಟುಂಬಸ್ಥರ ಬಗ್ಗೆ ತಿಳಿಯಿರಿ:
ನಿಶ್ಚಿತಾರ್ಥ ಮಾಡಿಕೊಂಡ ವ್ಯಕ್ತಿಗಳ ಬಗ್ಗೆ ಮಾತ್ರವಲ್ಲ ಅವರ ಕುಟುಂಬಸ್ಥರ ಬಗ್ಗೆಯೂ ನೀವು ಮಾತನಾಡಬಹುದು. ಅವರ ಸ್ವಭಾವ, ಇಷ್ಟದ ಬಗ್ಗೆ ನೀವು ತಿಳಿಯಬಹುದು.