ಬಿಸಿಲಿನ ಸಮಯದಲ್ಲಿ ದೇಹಕ್ಕೆ ಬಹಳ ನೀರಿನ ಅಗತ್ಯ ಇರುವ ಕಾರಣ ನೀವು ಮನೆಯಲ್ಲಿ ಜ್ಯೂಸ್, ಮಿಲ್ಕ್ ಶೇಕ್ ಮಾಡಿ ಸವಿಯುವುದು ಅತ್ಯಂತ ರುಚಿ ನೀಡಲಿದೆ. ಅದರಲ್ಲೂ ಮನೆ ಮಂದಿಗೆಲ್ಲಾ ಮನೆಯಲ್ಲೇ ಜ್ಯೂಸ್, ಮಿಲ್ಕ್ ಶೇಕ್ ಮಾಡಿ ಸವಿಯುವುದು ಎಲ್ಲರಿಗೂ ಇಷ್ಟವಾಗಲಿದೆ, ಹಾಗೆ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಬೇಕಾದರೆ ನಿಮ್ಮ ದೇಹಕ್ಕೆ ಆಗಾಗ ನೀರಿನ ಅವಶ್ಯಕತೆ ಇದ್ದೇ ಇರುತ್ತದೆ. ಹೀಗಾಗಿ ನಾವಿಂದು ಬೇಸಿಗೆಯ ಸಮಯದಲ್ಲಿ ಸುಲಭವಾಗಿ ಎಳನೀರಿನಿಂದ ಮಿಲ್ಕ್ ಶೇಕ್ ಹಾಗೆ ನಿಂಬೆ ಹಣ್ಣು ಹಾಗೂ ಪುದಿನ ಹಾಕಿ ಅದ್ಭುತವಾದ ತಂಪಿನ ಜ್ಯೂಸ್ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮೊದಲಿಗೆ ಸುಲಭವಾಗಿ ಮನೆಯಲ್ಲೆ ಎಳನೀರಿನಿಂದ ರುಚಿ ರುಚಿಯ ಮಿಲ್ಕ್ ಶೇಕ್ ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ಎಳನೀರು ಮಿಲ್ಕ್ ಶೇಕ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ಎಳನೀರು- 1
ವೆನಿಲ್ಲಾ ಐಸ್ ಕ್ರೀಮ್ - 1 ಕಪ್
ಹಾಲು - 1/2 ಕಪ್
ಬಾದಾಮಿ
ಪಿಸ್ತಾ
ಐಸ್ ಕ್ಯೂಬ್ಸ್
ಎಳನೀರು ಮಿಲ್ಕ್ ಶೇಕ್ ಮಾಡುವುದು ಹೇಗೆ?
ಮೊದಲು ಎಳನೀರನ್ನು ತೆಗೆದುಕೊಂಡು ಅದರಿಂದ ನೀರು ಬೇರ್ಪಡಿಸಿ ಒಂದು ಗ್ಲಾಸ್ಗೆ ಹಾಕಿಟ್ಟುಕೊಳ್ಳಿ. ಬಳಿಕ ಎಳನೀರಿನ ಒಳಗಿರುವ ಗಂಜಿಯನ್ನು ಕೂಡ ತೆಗೆದು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಅದಕ್ಕೆ ಎಳನೀರಿನ ನೀರು ಸಹ ಹಾಕಿಕೊಳ್ಳಿ. ನಂತರ ಯಾವುದಾದರು ಐಸ್ ಕ್ರೀಮ್ ಹಾಕಿಕೊಳ್ಳಿ. ವೆನಿಲ್ಲಾ ಫ್ಲೇವರ್ ಮಾತ್ರ ಬಳಸಬೇಕು ಎಂದೇನಿಲ್ಲ.
ಹಾಗೆ ಇದೇ ಮಿಕ್ಸಿ ಜಾರ್ಗೆ ಬಾದಾಮಿ, ಪಿಸ್ತಾ, ಬಾದಾಮಿ, ಹಾಲು, ಐಸ್ ಕ್ಯೂಬ್ ಇದ್ದರೆ ಅದನ್ನು ಕೂಡ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಸಕ್ಕರೆ ಬಳಸಬೇಕು ಎಂದೇನಿಲ್ಲ ಹಾಗೆ 2 ನಿಮಿಷ ರುಬ್ಬಿಕೊಳ್ಳಬೇಕು, ಚೆನ್ನಾಗಿ ರುಬ್ಬಿದ ಬಳಿಕ ಇದನ್ನು ಒಂದು ಗ್ಲಾಸ್‌ಗೆ ಹಾಕಿಕೊಳ್ಳಿ.
ಇಷ್ಟಾದರೆ ಅದ್ಭುತ ರುಚಿಯ ಎಳನೀರಿನ ಮಿಲ್ಕ್ ಶೇಕ್ ರೆಡಿಯಾಗುತ್ತದೆ. ಇದು 5 ನಿಮಿಷದಲ್ಲಿ ಮಾಡಬಹುದು, ಹಾಗೆ ಇದಿಷ್ಟು ವಸ್ತುಗಳಿದ್ದರೆ ಸಾಕಾಗುತ್ತದೆ. ಸಿಹಿ ಬಳಸದೆ ಮಾಡುವುದರಿಂದ ದೇಹಕ್ಕೆ ಮತ್ತು ಆರೋಗ್ಯಕ್ಕೆ ಬಹಳ ಉತ್ತಮ. ದೇಹ ಬಹಳ ಹೀಟ್ ಆಗಿದ್ದರೆ ಇದನ್ನು ಬಳಸಿ ಒಂದು ಮಿಲ್ಕ್ ಶೇಕ್ ಮಾಡಿ ಕುಡಿದರೆ ದೇಹ ತಂಪಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.
ಈಗ ಎಳನೀರು ಮಿಲ್ಕ್ ಮಾಡುವುದು ಹೇಗೆ ಎಂದು ನೋಡಿದ್ದೀರಿ. ಆದ್ರೆ ಈಗ ನಿಂಬೆ ಹಣ್ಣು ಹಾಗು ಪುದಿನ ಹಾಕಿ ಮಾಡುವಂತಹ ರುಚಿ ರುಚಿ ದೇಹಕ್ಕೆ ತಂಪಾಗಿರುವ ನಿಂಬೆ ಹಣ್ಣಿನ ಜ್ಯೂಸ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಕೂಡ ಮನೆಯಲ್ಲಿ ನಿಂಬೆ ಜ್ಯೂಸ್ ಮಾಡಿ ಕುಡಿದಿರುತ್ತೀರಿ. ಆದ್ರೆ ಯಾವಾಗಲು ಒಂದೇ ರೀತಿ ಜ್ಯೂಸ್ ಮಾಡುವುದಕ್ಕಿಂತ ಈ ರೀತಿ ವಿಭಿನ್ನ ರೀತಿಯಲ್ಲಿ ಮಾಡಿ ನೋಡಿ.
ಈ ನಿಂಬೆ ಜ್ಯೂಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನಿಂಬೆ ಪುದಿನ ಜ್ಯೂಸ್ ಮಾಡಲು ಬೇಕಾಗುವ ವಸ್ತುಗಳು
ನಿಂಬೆ ಹಣ್ಣು - 2
ಶುಂಠಿ - 1/4 ಇಂಚು
ಪುದಿನ ಎಲೆಗಳು
ತೆಂಗಿನ ಕಾಯಿ
ಸಕ್ಕರೆ - 4 ಚಮಚ
ಐಸ್ ಕ್ಯೂಬ್
ನಿಂಬೆ ಪುದಿನ ಜ್ಯೂಸ್ ಮಾಡುವ ವಿಧಾನ
ಮೊದಲಿಗೆ ನಿಂಬೆ ಹಣ್ಣುಗಳನ್ನು ಕತ್ತರಿಸಿಕೊಂಡು ಅದರ ರಸವನ್ನು ಒಂದು ಬೌಲ್ಗೆ ಹಿಂಡಿಕೊಂಡು ಇಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ನಿಂಬೆ ರಸ ಹಾಕಿ, ನಿಂಬೆ ಬೀಜ ಬೀಳದಂತೆ ನೋಡಿಕೊಳ್ಳಿ, ಬೀಜವಿದ್ದರೆ ಜ್ಯೂಸ್ ಕಹಿಯಾಗುತ್ತದೆ. ಮಿಕ್ಸಿ ಜಾರ್ಗೆ ನಿಂಬೆ ರಸ್ ಹಾಕಿದ ಬಳಿಕ ಇದಕ್ಕೆ ಶುಂಠಿ, ಪುದಿನ ಎಲೆಗಳು, ಸಕ್ಕರೆ, ತೆಂಗಿನ ಕಾಯಿಯ ಬಿಳಿಯ ಭಾಗವನ್ನು ಸ್ವಲ್ಪ ಹಾಕಿ, ತಣ್ಣಗಿರುವ ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
ಹಾಗೆ ನೀರು ಹಾಕಿ ಮತ್ತೆ ರುಬ್ಬಿ ಜರಡಿ ಹಿಡಿದು ಶೋಧಿಸಿಕೊಳ್ಳಿ. ನಂತರ ಇದಕ್ಕೆ ಬೇಕಿದ್ದರೆ ಏಲಕ್ಕಿ ಪುಡಿ, ಹಾಗೆ ಕತ್ತರಿಸಿದ ಪುದಿನ ಎಲೆಯನ್ನು ಮೇಲೆ ಹಾಕಿ ಗ್ಲಾಸ್ಗೆ ಹಾಕಿ ಕುಡಿಯಲು ನೀಡಬಹುದು. ಇಷ್ಟಾದರೆ ತಂಪು ತಂಪಿನ ನಿಂಬೆ ಹಣ್ಣಿನ ಜ್ಯೂಸ್ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯಾಗಿ ಜ್ಯೂಸ್ ಮಾಡಿ ನೋಡಿ.
ಸಾಮಾನ್ಯವಾಗಿ ನಾವು ನಿಂಬೆಯನ್ನು ಹಿಂಡಿ ಕೊಂಡು ಮಾಡುತ್ತೇವೆ, ಆದ್ರೆ ಮಿಕ್ಸಿಯಲ್ಲಿ ಈ ವಿಧಾನದಲ್ಲಿ ರುಬ್ಬಿ ಮಾಡುವುದು ಅದರ ರುಚಿ ಬದಲಾಯಿಸಲಿದೆ. ಅದರಲ್ಲೂ ಬೇಸಿಗೆಯ ಬಿಸಿಲಿನಲ್ಲಿ ಈ ರೀತಿ ಜ್ಯೂಸ್ ನಿಮ್ಮ ದೇಹವನ್ನು ತಂಪಾಗಿರಿಸಲಿದೆ. ನೀವು ಕೂಡ ಈ ರೀತಿ ಎರಡು ವಿಧಾನದ ಜ್ಯೂಸ್ ಅನ್ನು ಟ್ರೈ ಮಾಡಿ ನೋಡಿ.
ಈ ಬೇಸಿಗೆಯ ಸಮಯದಲ್ಲಿ ನಿಮ್ಮ ದೇಹಕ್ಕೆ ಅತ್ಯಧಿಕ ನೀರಿನ ಅವಶ್ಯಕತೆ ಇರಲಿದೆ. ಈ ಸಮಯದಲ್ಲಿ ಮನೆಯಲ್ಲಿಯೇ ಜ್ಯೂಸ್, ಮಿಲ್ಕ್ ಶೇಕ್ ಮಾಡಿ ಸವಿಯುವುದು ಬಹಳ ಉತ್ತಮ. ಹಾಗೆ ಮಕ್ಕಳಿಗೂ ಇವು ಇಷ್ಟವಾಗುತ್ತವೆ. ಆದ್ರೆ ಈ ರೀತಿಯ ಜ್ಯೂಸ್‌ಗೆ ಸಕ್ಕರೆ ಬಳಸದಿರುವುದು ಉತ್ತಮ. ಆದ್ರೆ ಸಿಹಿ ಬೇಕಾದರೆ ಜೇನುತುಪ್ಪ ಅಥವಾ ಬೆಲ್ಲ ಬಳಸಬಹುದು.