ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ ಹೋಗಲಾಡಿಸಲು ಮನೆಯಲ್ಲೇ ಮಾಡಿ ಪರಿಹಾರ

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮಾತ್ರವಲ್ಲ, ಪುರುಷರೂ ಸಹ ಮುಖದ ಸೌಂದರ್ಯದ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಮುಖದ ಸೌಂದರ್ಯ ಕಾಪಾಡಿಕೊಳ್ಳುವುದು ಒಂದು ಸಾಹಸವಾಗಿದೆ. ಎಷ್ಟೇ ಪ್ರಯತ್ನಪಟ್ಟರು ಒಂದಲ್ಲಾ ಒಂದು ಸಮಸ್ಯೆ ಎದುರಿಸಬೇಕಾಗಿದೆ. ಅದರಲ್ಲೂ ಕಣ್ಣಿನ ಸುತ್ತ ಕಪ್ಪಾಗುವ ಸಮಸ್ಯೆ ಯುವ ಸಮುದಾಯವನ್ನು ಚಿಂತೆಗೀಡು ಮಾಡಿದೆ.

ಕಪ್ಪು ಕಲೆ ಉಂಟಾಗಲು ನಿದ್ರೆಯ ಕೊರತೆ, ಹೆಚ್ಚು ಗಂಟೆಗಳ ಕಾಲ ಕಂಪ್ಯೂಟರ್ ನೋಡೋದು, ರಾತ್ರಿಯಲ್ಲಿ ಕಣ್ಣುಗಳಿಗೆ ವಿಶ್ರಾಂತಿ ನೀಡದೆ ಮೊಬೈಲ್ ಫೋನ್ ಬಳಸುವುದು ಮುಂತಾದ ಹಲವು ಕಾರಣಗಳಿಂದ ಈ ಕಪ್ಪು ಕಲೆಗಳು ಉಂಟಾಗಬಹುದು. ಡಾರ್ಕ್ ಸರ್ಕಲ್ ಇದ್ದರೆ ಮುಖದ ಅಂದ ಕೆಡುತ್ತದೆ. ಡಾರ್ಕ್ ಸರ್ಕಲ್ ಹೋಗಲಾಡಿಸಲು ಅನೇಕ ಕ್ರೀಮ್‌ಗಳನ್ನು ಸಹ ಪ್ರಯತ್ನಿಸಿದ್ದೀರಾ? ಕ್ರೀಮ್ ಗಳನ್ನು ಬಳಸುವ ಬದಲು ನೈಸರ್ಗಿಕ ಪದಾರ್ಥಗಳಿರುವ ಐ ಮಾಸ್ಕ್ ಗಳನ್ನು ಹಚ್ಚಿಕೊಳ್ಳಿ.  ಹಾಗಾದರೆ ಯಾವೆಲ್ಲಾ ಉಪಾಯಗಳಿವೆ ಎಂಬುದನ್ನು ನೋಡಿ.

ತೆಂಗಿನ ಎಣ್ಣೆ:
ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯವಾಗಿ ಸಿಗುವ ಪದಾರ್ಥವಾಗಿದೆ. ಈ ತೆಂಗಿನೆಣ್ಣೆ ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ಹೋಗಲಾಡಿಸುತ್ತದೆ. ಇದಕ್ಕಾಗಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಕೈಯಲ್ಲಿ ತೆಗೆದುಕೊಂಡು ಕಣ್ಣಿನ ಸುತ್ತ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ಕಪ್ಪು ಕಲೆಗಳು ಬೇಗನೆ ಮಾಯವಾಗುತ್ತವೆ.

ಬಾದಾಮಿ ಎಣ್ಣೆಯ ಮಸಾಜ್:
ಬಾದಾಮಿ ಎಣ್ಣೆಯು ಚರ್ಮಕ್ಕೆ ಅತ್ಯುತ್ತಮವಾದ ಆರೋಗ್ಯಕರ ಅಂಶ ನೀಡುವ ವಸ್ತುಗಳಲ್ಲಿ ಒಂದಾಗಿದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ರೀತಿಯ ಬಾದಾಮಿ ಎಣ್ಣೆಯನ್ನು ನಿಮ್ಮ ಕಣ್ಣುಗಳಿಗೆ ಹಚ್ಚುವುದರಿಂದ ಡಾರ್ಕ್ ಸರ್ಕಲ್ ಹೋಗಲಾಡಿಸಬಹುದು. ಬಾದಾಮಿ ಎಣ್ಣೆಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ, ಅದನ್ನು ನಿಮ್ಮ ಕಣ್ಣಿನ ಸುತ್ತ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ, ರಾತ್ರಿಯಿಡೀ ಬಿಟ್ಟು ಮರುದಿನ ಬೆಳಿಗ್ಗೆ ತೊಳೆಯಿರಿ.

ರೋಸ್ ವಾಟರ್ ಮಾಸ್ಕ್:
ಕಂಪ್ಯೂಟರ್‌ನಲ್ಲಿ ಹೆಚ್ಚು ಕೆಲಸ ಮಾಡಿದ ನಂತರ ನಿಮ್ಮ ಕಣ್ಣುಗಳು ದಣಿದಿದ್ದರೆ, ಆ ಕಣ್ಣುಗಳನ್ನು ರಿಫ್ರೆಶ್ ಮಾಡಲು ರೋಸ್ ವಾಟರ್ ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ಹತ್ತಿ ಉಂಡೆಯನ್ನು ರೋಸ್ ವಾಟರ್‌ನಲ್ಲಿ ಅದ್ದಿ, ಅದನ್ನು ನಿಮ್ಮ ಕಣ್ಣುಗಳ ಮೇಲೆ ಇರಿಸಿ ಮತ್ತು 15 ನಿಮಿಷಗಳ ಕಾಲ ಅದನ್ನು ನೆನೆಸಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ಕಪ್ಪು ಕಲೆಗಳು ಮಾಯವಾಗುತ್ತದೆ ಮತ್ತು ಮೈಗ್ರೇನ್ ನಿಂದ ಮುಕ್ತಿ ಸಿಗುತ್ತದೆ.

ಹಾಲು ಮತ್ತು ಅಡಿಗೆ ಸೋಡಾದ ಮಾಸ್ಕ್:
ಹಾಲು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ತ್ವಚೆಯಿಂದ ಕಲ್ಮಶಗಳನ್ನು ತೆಗೆದುಹಾಕುವಲ್ಲಿ ಉತ್ತಮವಾಗಿದೆ. ಅಂತಹ ಹಾಲಿಗೆ ಬೇಕಿಂಗ್ ಸೋಡಾ ಸೇರಿಸಿ ಪೇಸ್ಟ್ ತಯಾರಿಸಿ ಸ್ವಲ್ಪ ಸಮಯ ಫ್ರಿಡ್ಜ್ ನಲ್ಲಿಟ್ಟು ನಂತರ ಕಣ್ಣಿನ ಸುತ್ತ ಹಚ್ಚಿ 30 ನಿಮಿಷ ನೆನೆಸಿ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡಿದರೆ ಡಾರ್ಕ್ ಸರ್ಕಲ್ ನಿಧಾನವಾಗಿ ಕಡಿಮೆಯಾಗುತ್ತದೆ.

ಟೀ ಬ್ಯಾಗ್ ಐ ಮಾಸ್ಕ್:
ಡಾರ್ಕ್ ಸರ್ಕಲ್ ಹೋಗಲಾಡಿಸಲು ಟೀ ಬ್ಯಾಗ್ ಅತ್ಯುತ್ತಮವಾದದ್ದು. ಅದಕ್ಕಾಗಿ ಟೀ ತಯಾರಿಸಲು ಬಳಸುವ ಟೀ ಬ್ಯಾಗ್ ಅನ್ನು ಫ್ರಿಡ್ಜ್ ನಲ್ಲಿ 5-10 ನಿಮಿಷ ಇಡಿ, ನಂತರ 10-15 ನಿಮಿಷ ಕಣ್ಣುಗಳ ಮೇಲೆ ಅದ್ದಿ ನಂತರ ತೆಗೆಯಿರಿ. ಪ್ರತಿದಿನ ಹೀಗೆ ಮಾಡಿದರೆ ಕಪ್ಪು ಕಲೆಗಳು ಬೇಗ ಮಾಯವಾಗುತ್ತವೆ. ಇದು ಕಣ್ಣಿನ ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ.

ಸೌತೆಕಾಯಿ:
ಸೌತೆಕಾಯಿಯು ಕಪ್ಪು ಕಲೆಗಳನ್ನು ಹೋಗಲಾಡಿಸಲು ಸಾಮಾನ್ಯವಾಗಿ ಬಳಸುವ ಪದಾರ್ಥವಾಗಿದೆ. ಏಕೆಂದರೆ ಸೌತೆಕಾಯಿಯಲ್ಲಿ ತಂಪಾಗಿಸುವ ಗುಣವಿದೆ. ಈ ಸೌತೆಕಾಯಿಯನ್ನು ಹೋಳುಗಳಾಗಿ ಕತ್ತರಿಸಿ, 30 ನಿಮಿಷಗಳ ಕಾಲ ಫ್ರಿಜ್‌ನಲ್ಲಿರಿಸಿ, ನಂತರ ಸೌತೆಕಾಯಿಯ ಚೂರುಗಳನ್ನು ನಿಮ್ಮ ಕಣ್ಣುಗಳ ಮೇಲೆ 30 ನಿಮಿಷಗಳ ಕಾಲ ಇರಿಸಿ. ಪ್ರತಿದಿನ ಹೀಗೆ ಮಾಡಿದರೆ ಕಣ್ಣುಗಳ ಸುತ್ತ ಇರುವ ಡಾರ್ಕ್ ಸರ್ಕಲ್ ಬೇಗನೆ ಕಡಿಮೆಯಾಗುತ್ತದೆ.