ಮಧ್ಯಾಹ್ನದ ನಿದ್ರೆಗೆ ಇಲ್ಲಿದೆ ಟಿಪ್ಸ್! ಯಾವ ಸಮಯದಲ್ಲಿ ಹಾಗೂ ಎಷ್ಟು ಸಮಯ ಮಲಗಬೇಕು?

ನಿದ್ರೆಯು ಮಾನವರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಬಹಳ ಮುಖ್ಯ. ನಿದ್ರೆ ಸರಿಯಾಗಿ ಆಗದಿದ್ದರೆ ಇಡೀ ದಿನ ಹಾಳಾದಂತೆ. ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿದ್ರಾಹೀನತೆ ಹಾಗೂ ನಿದ್ರೆಯ ಕೊರತೆಗೂ ಅಜಗಜಾಂತರ ವ್ಯತ್ಯಾಸವಿದೆ.

ಸರಿಯಾಗಿ ನಿದ್ರೆ ಆಗದಿದ್ದರೆ ಅದು ನಿದ್ರಾಹೀನತೆ ಆಗುವುದಿಲ್ಲ ನಿದ್ರಾಹೀನತೆ ಎಂದರೆ ಅದೊಂದು ಕಾಯಿಲೆಗೆ ಸಮನಾಗುತ್ತದೆ. ಆದರೆ ನಿದ್ರೆ ಸರಿಯಾಗಿ ಆಗದಿರುವುದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಇದರಲ್ಲಿ ನಿದ್ರಾಹೀನತೆ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೆ ನಿದ್ರೆ ಸರಿಯಾಗಿ ಆಗದಿದ್ದರೆ ಪರೋಕ್ಷವಾಗಿ ಇದು ನಮ್ಮ ಜೀವನ ಕ್ರಮಕ್ಕೆ ಸಂಬಂಧ ಹೊಂದಿರುತ್ತದೆ.

ಇನ್ನು ಹಲವರು ಮಧ್ಯಾಹ್ನ ಊಟವಾದ ಬಳಿಕ ಕೆಲ ಹೊತ್ತು ಮಲಗಿ ನಿದ್ರಿಸುತ್ತಾರೆ. ಅಂದರೆ 15 ನಿಮಿಷ 20 ನಿಮಿಷದಿಂದ ಹಿಡಿದು ಒಂದು ಗಂಟೆಯವರೆಗೂ ನಿದ್ರಿಸುವವರು ಇರಬಹುದು. ಇದು ಕೆಲವರಲ್ಲಿ ನಿತ್ಯದ ಕೆಲಸವಾದರೆ ಮತ್ತೆ ಕೆಲವರು ಆಗಾಗ ಈ ರೀತಿ ಮಧ್ಯಾಹ್ನ ಮಲಗಿ ವಿಶ್ರಾಂತಿ ಪಡೆಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ.

ಆದರೆ ಈ ರೀತಿ ಮಧ್ಯಾಹ್ನ ಮಲಗಿ ನಿದ್ರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಆಗಿದ್ದರೂ ಎಲ್ಲರಲ್ಲೂ ಇದು ಉತ್ತಮ ಅಭ್ಯಾಸ ಎನ್ನಲಾಗದು. ಹಾಗಾದ್ರೆ ಮಧ್ಯಾಹ್ನ ಯಾರು ಮಲಗಬಾರದು? ಮಲಗಿದರೂ ಎಷ್ಟು ಸಮಯ ನಿದ್ರೆ ಮಾಡಬೇಕು? ಇದರಿಂದ ಆಗುವ ಅನುಕೂಲ ಹಾಗೂ ಅನಾನುಕೂಲವೇನು ಎಂಬುದನ್ನು ನಾವಿಂದು ತಿಳಿಯೋಣ. 

ಮಧ್ಯಾಹ್ನ ಯಾವ ಸಮಯ ಮಲಗಬೇಕು?
ತಜ್ಞರ ಪ್ರಕಾರ ಮಧ್ಯಾಹ್ನದ ಊಟವನ್ನು 2 ಗಂಟೆಯ ಮೊದಲೇ ಮುಗಿಸಬೇಕಂತೆ. ಅಲ್ಲದೆ ಮಧ್ಯಾಹ್ನ ನೀವು ಮಲಗುವುದಾದರೆ 3 ಗಂಟೆಯ ಒಳಗೆ ಮಲಗಿ 4 ಗಂಟೆ ಒಳಗೆ ಎಚ್ಚರವಾಗಿರಬೇಕು. ಏಕೆಂದರೆ ತಡವಾಗಿ ಊಟ ಮಾಡಿ ತಡವಾಗಿ ಮಲಗಿ ತಡವಾಗಿ ಏಳುವುದು ರಾತ್ರಿ ನಿದ್ರೆ ಮೇಲೆ ಪರಿಣಾಮ ಬೀರಲಿದೆ. ತಡವಾಗಿ ಮಲಗಿದರೆ ರಾತ್ರಿ ನೀವು ಮಲಗಿದ ಬಳಿಕ ನಿದ್ರೆ ಬಾರದೆ ಇರಬಹುದು. ಹೀಗಾಗಿ ಮಧ್ಯಾಹ್ನದ ಆರಂಭದಲ್ಲೇ ಮಲಗಿ 4 ಗಂಟೆಯ ಒಳಗೆ ಎದ್ದೇಳಬೇಕು. ಈ ನಿದ್ರೆ ಕೇವಲ 15ರಿಂದ 20 ನಿಮಿಷದೊಳಗೆ ಇರಬೇಕು. ಇದಕ್ಕಿಂತ ಹೆಚ್ಚು ಸಮಯ ನಿದ್ರಿಸಬಾರದು ಎನ್ನಲಾಗಿದೆ. ಏಕೆಂದರೆ ಹೆಚ್ಚು ಸಮಯ ನೀವು ನಿದ್ರಿಸಿದಾಗ ಆ ದಿನದಲ್ಲಿ ಮತ್ತೆ ಯಾವ ಕೆಲಸವನ್ನು ಮಾಡಲು ಮನಸ್ಸಿರುವುದಿಲ್ಲ ಜೊತೆಗೆ ರಾತ್ರಿ ಹೆಚ್ಚು ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.

ಎಚ್ಚರವಾದಾಗ ತಕ್ಷಣ ಎದ್ದೇಳಬೇಕು:
ಇನ್ನು ಮಧ್ಯಾಹ್ನ ಮಲಗಿ ಕೆಲ ಸಮಯದಲ್ಲೇ ನಿಮಗೆ ಎಚ್ಚರವಾದರೆ ಮತ್ತೆ ಮಲಗಿ ನಿದ್ರಿಸಲು ಯತ್ನಿಸಬಾರದು. ಅದು ಕೇವಲ 5 ನಿಮಿಷದಲ್ಲಿ ಎಚ್ಚರವಾಗಿದ್ದರೂ ಸಹ ನೀವು ಎದ್ದೇಳಬೇಕು. ಏಕೆಂದರೆ ದೇಹಕ್ಕೆ ಎಷ್ಟು ವಿಶ್ರಾಂತಿ ಬೇಕು ಎಷ್ಟು ನಿದ್ರೆ ಬೇಕು ಎಂಬುದನ್ನು ನಿರ್ಧರಿಸಿರುತ್ತದೆ. ಹೀಗಾಗಿ ನೀವು ಒತ್ತಾಯಪೂರ್ವಕವಾಗಿ ನಿದ್ರಿಸಲು ಹೋದಾಗ ಕೆಲವೊಮ್ಮ ನಿದ್ರೆ ಬಾರದೆ ಸಮಯ ಹಾಳಾಗಬಹುದು, ಇಲ್ಲವೆ ಗಾಢ ನಿದ್ರೆಗೆ ಜಾರುವ ಮೂಲಕ ತಡವಾಗಿ ಎಚ್ಚರವಾಗಬಹುದು.

ಮಧ್ಯಾಹ್ನ ಅಥವಾ ರಾತ್ರಿಯೇ ಆಗಲಿ ನಿದ್ದೆ ಮಾಡುವ ಮೊದಲು ಅಲರಾಂ ಇಟ್ಟುಕೊಳ್ಳಬೇಕು. ಯಾಕಂದ್ರೆ ಪ್ರತಿನಿತ್ಯ ನೀವು ಇಂತಿಷ್ಟು ಸಮಯ ಮಾತ್ರ ನಿದ್ದೆ ಮಾಡಬೇಕು. ಆ ಸಮಯವನ್ನೇ ಪ್ರತಿನಿತ್ಯ ನೀವು ಪಾಲನೆ ಮಾಡಬೇಕು. ಹೀಗಾದಾಗ ನಿಮಗೆ ಸಮಯಕ್ಕೆ ಸರಿಯಾಗಿ ನಿದ್ರೆ ಬರಲು ಆರಂಭವಾಗುತ್ತದೆ. ಈ ರೀತಿ ನಿತ್ಯ ಮಾಡಿನೋಡಿ ಅದು ಮಧ್ಯಾಹ್ನವೇ ಆಗಿರಲಿ ಅಥವಾ ರಾತ್ರಿ ಆಗಲಿ ನಿದ್ರೆ ಮಾಡಲು ಸಹ ಸರಿಯಾದ ಸಮಯವನ್ನು ನಿಗಧಿ ಮಾಡಿಕೊಳ್ಳಿ.