ಮಲೇರಿಯಾ ಕಾಯಿಲೆ ಹೇಗೆ ಹರಡುತ್ತದೆ? ಮಲೇರಿಯಾ ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದೆ. ಪ್ಲಾಸ್ಮೋಡಿಯಂ ಫಾಲ್ಸಿಪಾರಮ್ ಎಂಬುದು ಇದಕ್ಕೆ ಪ್ರಮುಖ ಕಾರಣ. ಈ ಮಲೇರಿಯಾ ಕಾಯಿಲೆಯು ಮಕ್ಕಳು ಹಾಗೂ ವಯಸ್ಕರಿಗೆ ಹೆಚ್ಚು ಅಪಾಯಕಾರಿಯಾಗಿದೆ, ಏಕೆಂದರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರಲಿದೆ, ಹೀಗಾಗಿ ಅವರಿಗೆ ಈ ಕಾಯಿಲೆ ಭೀಕರ ಪರಿಣಾಮ ಬೀರಬಹುದು.
ಮಲೇರಿಯಾ ಸೋಂಕು ಇರುವ ಸೊಳ್ಳೆಯು ಕಚ್ಚಿದಾಗ ಅದು ಯಕೃತ್ ಸೇರಿಕೊಂಡು ಯಕೃತ್ತಿನ ಜೀವಕೋಶಗಳಲ್ಲಿ ದ್ವಿಗುಣಗೊಂಡು ಕೆಂಪು ರಕ್ತ ಕಣಗಳ ಮೇಲೆ ದಾಳಿ ನಡೆಸುತ್ತದೆ. ಇದರಿಂದ ಜ್ವರ, ತಲೆನೋವು, ವಾಕರಿಕೆ, ವಾಂತಿ ಈ ರೀತಿಯ ಸಮಸ್ಯೆ ಕಂಡು ಬರುವುದು, ವಿಪರೀತ ಬೇಧಿಯಾಗುವುದು ಈ ಕಾಯಿಲೆಯ ಲಕ್ಷಣಗಳಲ್ಲಿ ಒಂದಾಗಿದೆ. ಕಾಯಿಲೆ ಅತಿಯಾದಾಗ ಅಂಗಾಂಗ ವೈಫಲ್ಯ ಕೂಡ ಉಂಟಾಗುವುದು. ಹೀಗಾಗಿ ಸಕಾಲಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಬಹುಮುಖ್ಯ ಅಂತಾರೆ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ.
ಮಕ್ಕಳಲ್ಲಿ ಮಲೇರಿಯಾ ಲಕ್ಷಣಗಳೇನು?
ಜ್ವರ
ಶೀತ
ತಲೆನೋವು
ವಾಕರಿಕೆ
ವಾಂತಿ
ಭೇದಿ
ಸೂಚನೆ:
ಮುಖ್ಯವಾದ ಅಂಶವೆಂದರೆ ಮಲೇರಿಯಾ ಹೊಂದಿರುವ ಎಲ್ಲಾ ಮಕ್ಕಳು ಜ್ವರದ ಜೊತೆಗೆ ಶೀತವನ್ನು ಹೊಂದಿರುವುದಿಲ್ಲ. ಆದರೆ ಅಸ್ವಸ್ಥತೆ ಅಥವಾ ಆಯಾಸದಂತಹ ಇತರ ರೋಗಲಕ್ಷಣಗಳು ಅವರಲ್ಲಿ ಕಂಡು ಬರುವುದು.
ಮಲೇರಿಯಾ ಬಂದರೆ ಮಗುವನ್ನು ಹೇಗೆ ಆರೈಕೆ ಮಾಡಬೇಕು?
ಮಗುವಿಗೆ ಮಲೇರಿಯಾ ಬಂದರೆ ಮಗುವನ್ನು ತುಂಬಾ ಜಾಗ್ರತೆಯಿಂದ ನೋಡಿಕೊಳ್ಳಬೇಕು. ವೈದ್ಯರಿಗೆ ತೋರಿಸಬೇಕು, ಅವರು ಸೂಚಿಸುವ ಔಷಧಗಳನ್ನು ಸರಿಯಾದ ಸಮಯಕ್ಕೆ ಕೊಡಬೇಕು. ಮಗುವಿಗೆ ಸಾಕಷ್ಟು ವಿಶ್ರಾಂತಿ ಬೇಕಾಗಿರುತ್ತದೆ, ಮಗುವಿಗೆ ಏನಾದರೂ ದ್ರವಾಂಶದ ಆಹಾರ ನೀಡಿ. ಮಗು ಸಂಪೂರ್ಣ ಚೇತರಿಸಿಕೊಳ್ಳುವವರಿಗೆ ಮಗುವನ್ನು ಹೆಚ್ಚು ಆಟವಾಡಲು ಬಿಡಬೇಡಿ, ಏಕೆಂದರೆ ವಿಶ್ರಾಂತಿ ತುಂಬಾನೇ ಮುಖ್ಯ.
ಯಾವ ಲಕ್ಷಣಗಳು ಅಪಾಯಕಾರಿ?
ಮಗುವಿನ ಕಣ್ಣು, ತ್ವಚೆ ಹಳದಿ ಬಣ್ಣಕ್ಕೆ ತಿರುಗುವುದು.
ಮೂತ್ರ ಅಥವಾ ಮಲದಲ್ಲಿ ರಕ್ತ ಕಂಡುಬರುವುದು.
ಜ್ವರ ಕಡಿಮೆಯಾಗದೇ ಇರುವುದು ಇವೆಲ್ಲಾ ಅಪಾಯಕಾರಿ ಲಕ್ಷಣಗಳು.