ಮುಖದ ಕಾಂತಿಗೆ ಮೊಸರು - ನಿಂಬೆಯ ಫೇಸ್‌ಪ್ಯಾಕ್‌ ಮಾಡುವ ವಿಧಾನವಿದು!

ಮುಖದ ಸೌಂದರ್ಯ ಕಾಪಾಡಿಕೊಳ್ಳಬೇಕೆಂಬುದು ಎಲ್ಲರ ಆಸೆಯಾಗಿರುತ್ತೆ. ಆದರೆ ಒತ್ತಡ, ಆಹಾರ ಪದ್ಧತಿ, ಧೂಳು, ಕೆಲಸ ಹೀಗೆ ಹತ್ತಾರು ಅಂಶಗಳು ಮುಖದ ಸೌಂದರ್ಯ ಹಾನಿಗೆ ಕಾರಣವಾಗುತ್ತವೆ. ಮುಖದಲ್ಲಿ ಕಲೆಗಳು, ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇಲ್ಲವೆ ಬಿಸಿಲಿಗೆ ಕಪ್ಪಾಗುವುದು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಕ್ರೀಮ್ಗಳ ಹಚ್ಚಿ ಅದರಿಂದ ಉಂಟಾಗುವ ವ್ಯಕ್ತಿರಿಕ್ತ ಪರಿಣಾಮವು ಮುಖದ ಸೌಂದರ್ಯ ಹಾಳು ಮಾಡುತ್ತದೆ.

ಆದರೆ ನಾವು ಮನೆಯಲ್ಲೇ ಕೆಲವೇ ವಸ್ತುಗಳ ಬಳಸಿ ಫೇಸ್ಪ್ಯಾಕ್ ಮಾಡಿಕೊಳ್ಳಬಹುದು. ಇದರಿಂದ ಮುಖದ ಆರೋಗ್ಯಕ್ಕೂ ಉತ್ತಮ ಔಷಧಿ ಸಿಕ್ಕಿದಂತಾಗುತ್ತದೆ. ಜೊತೆಗೆ ಯಾವುದೇ ಅಡ್ಡಪರಿಣಾಮವೂ ಆಗುವುದಿಲ್ಲ. ಹಾಗಾದರೆ ಮನೆಯಲ್ಲೇ ಮುಖದ ಸೌಂದರ್ಯ ಕಾಪಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೊಸರು ಮತ್ತು ಲಿಂಬೆಯಿಂದ ಮಾಡಿರುವಂತಹ ಪ್ಯಾಕ್ ಅನ್ನು ನೀವು ಬಳಸಿಕೊಳ್ಳಬಹುದರಿಂದ ಮುಖದ ಸೌಂದರ್ಯ ಕಾಪಾಡಬಹುದು. ಈ ಎರಡನ್ನು ಹೆಚ್ಚಾಗಿ ಹಲವಾರು ಸೌಂದರ್ಯವರ್ಧಕಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವು ಸಮೃದ್ಧವಾಗಿದ್ದು, ಇದು ಚರ್ಮಕ್ಕೆ ಅದ್ಭುತವನ್ನು ಉಂಟು ಮಾಡಲಿದೆ. ಲಿಂಬೆಯು ನಿಮ್ಮ ಚರ್ಮಕ್ಕೆ ಕಾಂತಿ ಹಾಗೂ ಕಲೆರಹಿತವಾಗಿ ಮಾಡುವುದು. ಇದಕ್ಕಾಗಿ 2 ಚಮಚ ಮೊಸರು, 2 ಚಮಚ ನಿಂಬೆರಸ ಇದ್ದರೆ ಸಾಕು.

ತಯಾರಿಸುವ ವಿಧಾನ:
ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಮೊಸರನ್ನು ಹಾಕಿ. ಇದಕ್ಕೆ ತಾಜಾ ನಿಂಬೆಯ ರಸ ಹಾಕಿ ಮತ್ತು ಎರಡನ್ನು ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಮೊಸರು ಮತ್ತು ನಿಂಬೆಯ ಫೇಸ್ ಪ್ಯಾಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ ಇದನ್ನು ಮುಖದಲ್ಲಿ ಮಸಾಜ್ ಮಾಡಿ. ಇದು ಕಣ್ಣಿಗೆ ತಾಗದಂತೆ ಎಚ್ಚರಿಕೆ ವಹಿಸಿ. 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಚರ್ಮವು ಇದನ್ನು ಸರಿಯಾಗಿ ಹೀರಿಕೊಳ್ಳಲಿ. 20 ನಿಮಿಷ ಬಿಟ್ಟು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.ಅಂತಿಮವಾಗಿ ಮೊಶ್ಚಿರೈಸರ್ ಹಚ್ಚಿಕೊಳ್ಳಿ ಮತ್ತು ಇದು ಚರ್ಮವನ್ನು ತೇವಾಂಶದಿಂದ ಇಡುವುದು. ವಾರದಲ್ಲಿ 2-3 ಸಲ ಇದನ್ನು ಬಳಸಿಕೊಂಡರೆ ಆಗ ನಿಮಗೆ ಕಾಂತಿಯುತ ಮತ್ತು ಕಲೆರಹಿತವಾಗಿರುವ ತ್ವಚೆ ನೀಡುವುದು.

ಮೊಸರಿನ ಲಾಭಗಳು:
ಮೊಸರಿನಲ್ಲಿ ಸತು, ಕ್ಯಾಲ್ಸಿಯಂ ಮತ್ತು ಪ್ರಮುಖವಾಗಿ ಲ್ಯಾಕ್ಟಿಕ್ ಆಮ್ಲವಿದ್ದು, ಚರ್ಮಕ್ಕೆ ಇವುಗಳು ಅದ್ಭುತವಾಗಿ ಕೆಲಸ ಮಾಡುವುದು. ಕಾಲಜನ್ ಉತ್ಪತ್ತಿಯನ್ನು ಹೆಚ್ಚು ಮಾಡಿ ಚರ್ಮವು ಬಿಗಿಯಾಗುವಂತೆ ಮಾಡುವುದು ಮತ್ತು ಇದರಿಂದ ಚರ್ಮವು ಯೌವನಯುತ ಮತ್ತು ಸುಂದರವಾಗಿ ಕಾಣುವುದು. ಇದರಲ್ಲಿ ಇರುವಂತಹ ನಂಜುನಿರೋಧಕ ಗುಣಗಳು ಚರ್ಮವನ್ನು ಯಾವುದೇ ರೀತಿಯ ಉರಿಯೂತ, ಸೊಂಕು, ಕಲೆಗಳು ಇತ್ಯಾದಿಯಿಂದ ಪರಿಣಾಮಕಾರಿಯಾಗಿ ರಕ್ಷಿಸುವುದು. ಇನ್ನು ಮೊಸರಿನಲ್ಲಿರುವ ಪ್ರೋಟೀನುಗಳು ಮುಖದ ಚರ್ಮಕ್ಕೆ ಕಾಂತಿ ಮತ್ತು ಸೆಳೆತವನ್ನು ನೀಡುತ್ತದೆ. ಅಲ್ಲದೇ ಇದರಲ್ಲಿರುವ ಸತುವಿನಲ್ಲಿ ಉರಿಯೂತ ನಿವಾರಕ ಗುಣಗಳಿರುವ ಕಾರಣ ಇದು ಚರ್ಮದ ಉರಿಯಿಂದ ರಕ್ಷಿಸುತ್ತದೆ ಹಾಗೂ ಚರ್ಮದ ಜೀವಕೋಶಗಳ ಬೆಳವಣಿಗೆಗೂ ನೆರವಾಗುತ್ತದೆ.

ನಿಂಬೆಯ ಲಾಭಗಳು:
ಸಿಟ್ರಸ್ ಗುಣವನ್ನು ಹೊಂದಿರುವ ನಿಂಬೆಹಣ್ಣು ಹಲವಾರು ರೀತಿಯಿಂದ ನಮ್ಮ ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಇದರಲ್ಲಿ ಕೆಲವೊಂದು ಪ್ರಮುಖ ವಿಟಮಿನ್ ಗಳು ಮತ್ತು ಖನಿಜಾಂಶಗಳು ಮಾತ್ರವಲ್ಲದೆ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದರ ಹೊರತಾಗಿ ನಿಂಬೆಯನ್ನು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಬಹುದಾಗಿದೆ. ಹೌದು, ನಿಮ್ಮ ಸೌಂದರ್ಯದ ಆರೈಕೆಯಲ್ಲಿ ನಿಂಬೆಯನ್ನು ಫೇಸ್ ಪ್ಯಾಕ್ ಹಾಗೂ ಮಾಸ್ಕ್ ಆಗಿ ಬಳಸಬಹುದು. 

ಇದರಿಂದ ನಿಮ್ಮ ಸೌಂದರ್ಯವೃದ್ಧಿಯಾಗುವುದು. ಇನ್ನು ವರ್ಷದ ಹೆಚ್ಚಿನ ಋತುಗಳಲ್ಲಿ ಕಂಡುಬರುವಂತಹ ನಿಂಬೆಹಣ್ಣೆಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಸ್ವಲ್ಪ ಹುಳಿ ಸ್ವಭಾವ ಹೊಂದಿರುವ ಕಾರಣದಿಂದಾಗಿ ಹೆಚ್ಚಿನವರು ನಿಂಬೆಹಣ್ಣಿನ ರಸದಿಂದ ದೂರ ಉಳಿಯುತ್ತಾರೆ. ಆದರೆ ಇದು ಕಲೆಗಳ ನಿವಾರಣೆ ಮಾಡುವುದು ಮತ್ತು ಸತ್ತ ಚರ್ಮದ ಕೋಶಗಳನ್ನು ಕಿತ್ತುಹಾಕಿ ಚರ್ಮದ ಬಣ್ಣ ಉತ್ತಮಪಡಿಸುವುದು.