ರೆಸ್ಟೋರೆಂಟ್ ರುಚಿಯ ಚಿಕನ್ ಫ್ರೈ ಬರೀ 10 ನಿಮಿಷದಲ್ಲಿ ರೆಡಿ ಮಾಡಬಹುದು!

ಮಾಂಸಹಾರಿ ಪ್ರಿಯರಿಗೆ ಚಿಕನ್ ಅಂದ್ರೆ ತುಂಬಾನೇ ಇಷ್ಟ. ಚಿಕನ್ನಲ್ಲಿ ಹಲವು ವಿಧವಾದ ಬಗೆ ಬಗೆಯ ಖಾದ್ಯ ಮಾಡಬಹುದು. ಹಾಗೆ ಚಿಕನ್ ಖಾದ್ಯ ಹಲವು ರೀತಿಯ ರುಚಿ ನೀಡಲಿದೆ. ಹೀಗಾಗಿ ಹಲವರಿಗೆ ಚಿಕನ್ ಖಾದ್ಯಗಳು ಬಹುಬೇಗ ಇಷ್ಟವಾಗುತ್ತೆ. ಇನ್ನು ಆರೋಗ್ಯದ ದೃಷ್ಟಿಯಲ್ಲಿ ಮಾಂಸಹಾರ ಉತ್ತಮವೇ ಆಗಿದ್ದರೂ ಇತ್ತೀಚಿಗೆ ಮಾಂಸಹಾರ ಒಂದಿಷ್ಟು ಸಮಸ್ಯೆ ತರುತ್ತಿರುವುದನ್ನು ನೀವು ನೋಡಬಹುದು. 

ಇನ್ನು ರೆಸಿಪಿ ವಿಚಾರದಲ್ಲಿ ಚಿಕನ್ನಿಂದ ಕಬಾಬ್, ಫ್ರೈ, ಚಿಲ್ಲಿ ಫ್ರೈ, ಬಿರಿಯಾನಿ, ಸಾರು, ನಾಟಿ ಶೈಲಿಯ ಸಾರು, ಸ್ಪೈಸಿ ಚಿಕನ್, ರೋಸ್ಟ್ ಹತ್ತಾರು ಬಗೆಯ ಸವಿ ಇದೆ. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ನೀವು ಕೇಳಿರದ, ಸವಿದಿರದ ಖಾದ್ಯಗಳೇ ತುಂಬಿರುತ್ತವೆ. ಅಷ್ಟೊಂದು ವೆರೈಟಿ ಬಗೆಯನ್ನು ಚಿಕನ್ನಿಂದ ಮಾಡಬಹುದು.

ಹಾಗಾದ್ರೆ ನಾವಿಂದು ರೆಸ್ಟೋರೆಂಟ್ ರುಚಿಯಲ್ಲಿ ಚಿಕನ್ ಫ್ರೈ ಅನ್ನು ಮನೆಯಲ್ಲೇ ಮಾಡುವುದನ್ನು ನೋಡೋಣ. ಹಾಗೆ ಭಾನುವಾರದಂದು ನಿಮ್ಮ ಮನೆಯಲ್ಲಿ ಚಿಕನ್ ಮಾಡುವ ಉದ್ದೇಶವಿದ್ದರೆ ಈ ಖಾದ್ಯವನ್ನು ಒಮ್ಮೆ ಸವಿದು ನೋಡಿ. ಹಾಗಾದ್ರೆ ಈ ಚಿಕನ್ ಫ್ರೈ ಮಾಡುವುದು ಹೇಗೆ ತಿಳಿಯೋಣ. 

ಚಿಕನ್ ಫ್ರೈ ಮಾಡಲು ಬೇಕಾಗುವ ವಸ್ತುಗಳಿವು

ಸ್ಕಿನ್ ಲೆಸ್ ಚಿಕನ್- ಅರ್ಧ ಕೆಜಿ
ಈರುಳ್ಳಿ- 2
ಹಸಿ ಮೆಣಸು
ಒಣ ಮೆಣಸು
ಎಣ್ಣೆ
ತುಪ್ಪ
ನಿಂಬೆ ಹಣ್ಣು
ಕರಿಬೇವು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಏಲಕ್ಕಿ
ಜೀರಿಗೆ
ಧನಿಯಾ
ಸೋಂಕಾಳು
ಲವಂಗ
ಚಕ್ಕೆ
ಉಪ್ಪು
ಕರಿಬೇವು 

ಚಿಕನ್ ಫ್ರೈ ಮಾಡುವ ವಿಧಾನವೇನು? 
ಮೊದಲು ಚಿಕನ್ ಚೆನ್ನಾಗಿ ತೊಳೆದು ಸ್ವಲ್ಪ ಅರಶಿನ ಪುಡಿ ಹಚ್ಚಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾನ್ ಒಟ್ಟು ಅದಕ್ಕೆ ಒಣ ಮೆಣಸು, ಧನಿಯಾ ಕಾಳು, ಚಕ್ಕೆ, ಲವಂಗ, ಏಲಕ್ಕಿ, ಓಂಕಾಳು ಹಾಕಿಕೊಂಡಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಒಲೆ ಆಫ್ ಮಾಡಿಕೊಂಡು ಫ್ರೈ ಮಾಡಿಕೊಂಡ ಮಸಾಲೆಯನ್ನು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. 

ಮಿಕ್ಸಿ ಜಾರ್ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಪುಡಿ ಪುಡಿಯಾಗಿ ರುಬ್ಬಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಮತ್ತು ತುಪ್ಪ ಹಾಕಿಕೊಳ್ಳಿ, ನಂತರ ಇದಕ್ಕೆ ಜೀರಿಗೆ, ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 30 ಸೆಕೆಂಡ್ ಫ್ರೈ ಮಾಡಿ. 

ಈಗ ತೊಳೆದುಕೊಂಡಿರುವ ಚಿಕನ್ ಪೀಸ್ ಅನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಉಪ್ಪು ಹಾಕಿ ಎಲ್ಲಾ ವಸ್ತು ಬೆರೆತುಕೊಳ್ಳುವಂತೆ ಮಿಕ್ಸ್ ಮಾಡಿ ನಂತರ 5 ನಿಮಿಷ ಬೇಯಲು ಬಿಡಿ. ಆಗಾಗ ಕೈ ಆಡಿಸುತ್ತಾ ಇರಿ. 5 ನಿಮಿಷದ ಬಳಿಕ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆ ಪುಡಿಯನ್ನು ಇದಕ್ಕೆ ಹಾಕಿ ಕಲಸಿಕೊಳ್ಳಿ. ಈ ಮಸಾಲೆಗೆ ಚಿಕನ್ ಪೀಸ್ ಜೊತೆ ಚೆನ್ನಾಗಿ ಬೆರೆಯುವಂತೆ ಮಾಡಿಕೊಳ್ಳಿ. 

2 ನಿಮಿಷ ಬಳಿಕ ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ. ನಂತರ ಮುಚ್ಚಳ ಮುಚ್ಚಿ ಸುಮಾರು 5 ನಿಮಿಷ ಬೇಯಿಸಿಕೊಳ್ಳಿ. ಆಗಾಗ ಕೈ ಆಡಿಸುತ್ತಾ ಇರಿ. ಇಷ್ಟಾದರೆ ನಿಮ್ಮ ಮುಂದೆ ಚಿಕನ್ ಫ್ರೈ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಈ ಫ್ರೈ ಮಾಡಿ ನೋಡಿ.