ಹಾಲು ಜೇನಿನಂತಿರುವ ಸಂಬಂಧ ಹಾಳಾಗುತ್ತಿರುವ ಲಕ್ಷಣಗಳಿವು!

ಒಂದು ಸಂಬಂಧ ಗಟ್ಟಿಯಾಗಿ ಇರಬೇಕೇಂದರೆ ಅಲ್ಲಿ ಪರಸ್ಪರ ವಿಶ್ವಾಸ, ನಂಬಿಕೆ ಮತ್ತು ಪ್ರಾಮಾಣಿಕತೆ ಇರಬೇಕು. ಹೀಗಿದ್ದಾಗ ಮಾತ್ರ ಆ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ಆದರೆ ಒಬ್ಬ ವ್ಯಕ್ತಿಯನ್ನು ಮೆಚ್ಚಲು ಅವರ ಕೆಲವು ಗುಣಗಳು ಕಾರಣವಾಗುತ್ತವೆ. ಹದಿಹರೆಯದ ಪ್ರೇಮದಲ್ಲೂ ಅಷ್ಟೇ, ತಮ್ಮ ನೆಚ್ಚಿನ ಸಂಗಾತಿಗಳನ್ನು ಮೆಚ್ಚಿಸಲು ಯುವಜನತೆ ಏನೇನೋ ಕ್ರಮಗಳನ್ನು ಅನುಸರಿಸುತ್ತಾರೆ ಹಾಗೂ ಅದಕ್ಕೆ ತಕ್ಕಂತೆ ನಾಟಕವನ್ನೂ ಆಡುತ್ತಾರೆ.

ಆದರೆ ಕೆಲಸಮಯದ ಬಳಿಕ ನಿಜ ವಿಷಯ ತಿಳಿದರೆ ಅದುವರೆಗೆ ಆ ವ್ಯಕ್ತಿಯ ಮೇಲೆ ಆವರೆಗೆ ಬೆಳೆಸಿಕೊಂಡಿದ್ದ ವ್ಯಾಮೋಹ, ಅಕ್ಕರೆ ಕರಗುತ್ತದೆ. ನಿಧಾನವಾಗಿ ಆಪ್ತತೆ ದೂರವಾಗಿ ಸಂಬಂಧ ಹಳಸಲು ಆರಂಭಿಸುತ್ತದೆ.

ಇತ್ತೀಚೆಗೆ ಮದುವೆಯಾದ ಅಥವಾ ಮದುವೆಯಾಗಲಿರುವ ಜೋಡಿಗಳಿಗೆ ಇಂತಹ ಸೂಚನೆಗಳನ್ನು ನೀಡುವ ಪ್ರಮುಖ ಸಂಕೇತಗಳನ್ನು ಇಲ್ಲಿ ವಿವರಿಸಲಾಗಿದೆ. 

ಜೊತೆ ಇರುವ ಅವಕಾಶಗಳು ಕಡಿಮೆಯಾಗುವುದು:
ಯಾವುದೋ ನೆಪದಲ್ಲಿ ಜೊತೆಯಾಗಿರುವುದು ಪ್ರೇಮಿಗಳ ಪ್ರಮುಖ ಲಕ್ಷಣ. ಒಂದು ವೇಳೆ ಪ್ರಮುಖ ಅವಶ್ಯಕತೆಯಿದ್ದಾಗಲೂ ಜೊತೆಯಾಗಲು ತಡವರಿಸಿದರೆ, ಅಥವಾ ನಿರಾಕರಿಸಿದರೆ ಅಥವಾ ಮುಂದೆ ಹಾಕುವ, ನಾಳೆ ನೋಡುವಾ ಎಂದು ಬೀಸುವ ದೊಣ್ಣೆ ತಪ್ಪಿಸಿಕೊಂಡರೆ ಮಾತ್ರ ಸಂಬಂಧ ಹದಗೆಡುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು.

ಸಂಬಂಧ ಮುಂದುವರೆಸುವ ಆಸಕ್ತಿ ಕಡಿಮೆಯಾಗುವುದು:
ಭವಿಷ್ಯದ ಬಗ್ಗೆ ಕಂಡ ಕನಸುಗಳನ್ನು ನನಸಾಗಿಸಲು ತೋರುವ ಒಲವು ಕಡಿಮೆಯಾದರೆ ಸಂಬಂಧ ಹದಗೆಡುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು. ಅಲ್ಲದೇ ಪ್ರಿಯತಮ/ಪ್ರಿಯತಮೆ ಗೆ ತನ್ನ ಸಂಗಾತಿಯಾಗುವವನು/ಳು ತನ್ನ ಅಂತಸ್ತಿಗೆ/ಜಾತಿಗೆ/ದರ್ಜೆಗೆ ಅರ್ಹನಲ್ಲ/ಳಲ್ಲ ಎಂಬ ಭಾವನೆ ಮೂಡಿ ಈ ಸಂಬಂಧದಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿರಬಹುದು. ಇನ್ನೂ ಹೆಚ್ಚೆಂದರೆ ಸಧ್ಯಕ್ಕೆ ಮದುವೆಯ ಕನಸು ತೋರಿಸಿ ದೈಹಿಕ ಸಂಬಂಧವನ್ನು ಮಾತ್ರ ಬಯಸುವ, ಆದರೆ ಸಂಗಾತಿಯಿಂದ ಈ ಸಂಬಂಧಕ್ಕೆ ಹಿರಿಯರ ಅಪ್ಪಣೆಗಾಗಿ ಒತ್ತಾಯ ಬಂದ ಕೂಡಲೇ ನಿಧಾನವಾಗಿ ಜಾರಿಕೊಳ್ಳುವುದು ಸಂಬಂಧ ಹದಗೆಡುತ್ತಿರುವ ಸ್ಪಷ್ಟ ಸೂಚನೆಯಾಗಿದೆ. ಈ ಸೂಚನೆ ಸಿಕ್ಕಿದಾಕ್ಷಣ ಮತ್ತೆ ಹತ್ತಿರಾಗಲು ಪ್ರಯತ್ನಿಸದೇ ದೂರಾಗುವುದೇ ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿದೆ.

ಅತಿಮುಖ್ಯವಲ್ಲದ ಸಂಗತಿಗಳು ಮುಖ್ಯವಾಗತೊಡಗುತ್ತವೆ:
ನಿಮ್ಮ ಸಂಗಾತಿ ಕ್ಷುಲ್ಲಕ ಕಾರಣಗಳಿಗೆ ಅತಿ ಹೆಚ್ಚಿನ ಮಹತ್ವ ನೀಡಿ ನಿಮ್ಮ ಅಗತ್ಯತೆ ಅಥವಾ ಭಾವನೆಗಳಿಗೆ ಬೆಲೆಕೊಡದೇ ಹೋದರೆ ಸಂಬಂಧ ಹದಗೆಡುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು. 

ತಟ್ಟನೇ ಪ್ರಕಟವಾಗುವ ವಿಶ್ವಾಸಭಂಗ:
ಯಾವುದೇ ಸಂಬಂಧದಲ್ಲಿ ಪರಸ್ಪರ ವಿಶ್ವಾಸ ಅತಿಮುಖ್ಯ. ಒಂದು ಹಂತದಲ್ಲಿ ನಿಮಗೆ ನಿಮ್ಮ ಸಂಗಾತಿ ವಿಶ್ವಾಸಾರ್ಹನಲ್ಲವೆಂಬ ಭಾವನೆ ಮೊಳೆಯತೊಡಗುತ್ತದೆ. ಒಂದು ವೇಳೆ ಈ ವಿಶ್ವಾಸಕ್ಕೆ ಬೆಲೆನೀಡದೇ ಹೋದರೆ ಪ್ರಕಟವಾಗುವ ವಿಶ್ವಾಸಭಂಗ ಸಂಬಂಧ ಹದಗೆಡುತ್ತಿರುವ ಸ್ಪಷ್ಟ ಸೂಚನೆಯಾಗಿದೆ. 

ನಿಮ್ಮ ಸಂಗಾತಿಯೊಡನೆ ಮನಬಿಚ್ಚಿ ಮಾತನಾಡಲು ಭಯವಾಗುತ್ತದೆ:
ಪ್ರತಿಯೊಬ್ಬರಲ್ಲೂ ಅತ್ಯಂತ ಖಾಸಗಿಯಾದ ಕೆಲವು ವಿಷಯಗಳಿರುತ್ತವೆ. ಒಂದು ವೇಳೆ ನಿಮ್ಮ ಸಂಗಾತಿ ಈ ವಿಷಯಗಳ ದುರುಪಯೋಗಪಡಿಸಿಕೊಂಡರೆ ಎಂಬ ಭಯ ಏನಾದರೂ ಕಾಡತೊಡಗಿದರೆ ಅಥವಾ ಈ ವಿಚಾರ ಯಾವುದೋ ವಾಗ್ವಾದವನ್ನು ಕೆದಕಿ ವಾಗ್ವಾದ ಕಲಹಕ್ಕೆ ತಿರುಗಿ, ಕಲಹ ಜಗಳವಾಗಿ, ಜಗಳ ಬೇರ್ಪಡುವಲ್ಲಿ ಪರ್ಯವಸಾನವಾಗಲೂಬಹುದು ಎಂಬ ಆತಂಕ ಮನದಲ್ಲಿ ಮೂಡಿದರೆ ನಿಮ್ಮ ಸಂಬಂಧ ಹದಗೆಡುತ್ತಿದೆ ಎಂದು ಅರ್ಥೈಸಿಕೊಳ್ಳಬಹುದು. 

ವಿಶ್ವಾಸ ಕಡಿಮೆಯಾಗುತ್ತದೆ:
ಇಬ್ಬರ ನಡುವೆ ಹುಟ್ಟಿಕೊಂಡಿರುವ ಮನಸ್ಥಾಪಗಳು ಬೆಳೆದು ಅಲ್ಲಿ ವಿಶ್ವಾಸವೇ ಇಲ್ಲದಾಗುತ್ತದೆ. ಹೀಗಾಗಿ ಇಬ್ಬರಲ್ಲು ಕೆಲವು ಪ್ರಶ್ನೆ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಹೇಳಬೇಕು ಎಂದುಕೊಂಡಿದ್ದ ವಿಚಾರಗಳು ಮನದಲ್ಲಿ ಉಳಿದು ಇಬ್ಬರ ನಡುವಿನ ಅಂತರ ಮತ್ತಷ್ಟು ದೊಡ್ಡದಾಗುತ್ತಾ ಸಾಗುತ್ತದೆ. ಹೀಗಾದಾಗ ಆ ಸಂಬಂಧ ಕೊನೆಗೊಳ್ಳುವ ಸಂಭವವೇ ಹಚ್ಚಾಗುತ್ತದೆ.