ಪಾಲಕ್ ಸೊಪ್ಪಿನಿಂದ ರುಚಿಕರ ಸಾರು ಮಾಡಿ. ನಮ್ಮ ದೇಹಕ್ಕೆ ತುಂಬಾನೇ ಅಗತ್ಯ

ನಮ್ಮ ದೇಹಕ್ಕೆ ಮಾಂಸ, ಮೀನು, ಹಾಲು, ಮೊಟ್ಟೆ ಎಷ್ಟು ಮುಖ್ಯವೋ ಹಾಗೇ ಸೊಪ್ಪುಗಳು ಸಹ ಅಷ್ಟೇ ಮುಖ್ಯ. ಸೊಪ್ಪುಗಳಿಂದ ಕ್ಯಾಲ್ಸಿಯಂ, ಕಬ್ಬಿಣಾಂಶಗಳು, ಪೋಷಕಾಂಶಗಳು, ವಿಟಮಿನ್ಗಳು ನಮ್ಮ ದೇಹಕ್ಕೆ ಸಿಗುತ್ತದೆ. ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿ ಸೇರಿದಂತೆ ದೇಹದ ಅಗತ್ಯಗಳ ಪೂರೈಸುತ್ತದೆ. ಹೀಗಾಗಿ ಸೊಪ್ಪಿನ ಪಲ್ಯ, ಸೊಪ್ಪಿನ ಸಾರು ಮಾಡಿ ಸೇವಿಸುವುದು ಉತ್ತಮ. 

ಸೊಪ್ಪಿನ ಸಾರು ಎಂದಾಗ ನೆನಪಾಗೋದು ಪಾಲಕ್ ಸೊಪ್ಪಿನ ಸಾರು. ಪಾಲಕ್ ಸೊಪ್ಪು ಅತ್ಯಧಿಕ ಕಬ್ಬಿಣಾಂಶದಿಂದ ಕೂಡಿರಲಿದೆ. ಹೀಗಾಗಿ ಪಾಲಕ್ ಚಟ್ನಿ, ಪಾಲಕ್ ಸಾರು ಮಾಡಿ ಸವಿಯುಸುವುದು ದೇಹಕ್ಕೂ ನಿಮ್ಮ ಆರೋಗ್ಯಕ್ಕೂ ಬಹಳ ಉತ್ತಮ. ಪಾಲಕ್ನಲ್ಲಿ ವಿಟಮಿನ್ ಕೆ. ಹೇರಳವಾಗಿದ್ದು, ನಿಮ್ಮ ಚರ್ಮ, ಕಣ್ಣಿನ ದೃಷ್ಟಿಗೆ ಉತ್ತಮ. 

ಹಾಗಾದ್ರೆ ನಾವಿಂದು ಈ ಪಾಲಕ್ ಸೊಪ್ಪಿನಿಂದ ರುಚಿಕರ ಸಾರು ಮಾಡುವುದು ಹೇಗೆ? ಪಾಲಕ್ ಸೊಪ್ಪಿನ ಸಾರು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಪಾಕವಿಧಾನ ಯಾವುದು? ಎಂಬ ಕುರಿತು ತಿಳಿದುಕೊಳ್ಳೋಣ. 

ಬೇಕಾಗುವ ಪದಾರ್ಥಗಳು:

ಪಾಲಕ್ ಸೊಪ್ಪು - 2 

ಕಟ್ಟು ತೊಗರಿ ಬೇಳೆ - 50 ಗ್ರಾಮ್ 

ಬೆಳ್ಳುಳ್ಳಿ - 1 

ಈರುಳ್ಳಿ- 1 

ಟೊಮೆಟೋ- 2

 ಒಣ ಮೆಣಸು - 3 

ಹಸಿ ಮೆಣಸು- 2 

ಸಾಸಿವೆ

 ಕರಿಬೇವು 

ಅರಶಿಣ 

ಜೀರಿಗೆ 

ಇಂಗು 

ಉಪ್ಪು 

ಎಣ್ಣೆ 

ಪಾಲಕ್

ಸೊಪ್ಪಿನ ಸಾರು ಮಾಡುವ ವಿಧಾನ:

ಮೊದಲು ಪಾಲಕ್ ಸೊಪ್ಪನ್ನು ತೊಳೆದು ಚೆನ್ನಾಗಿ ರೆಡಿ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಕುಕ್ಕರ್ ಒಟ್ಟು ಅದಕ್ಕೆ ತೊಗರಿ ಬೇಳೆ ಹಾಕಿ. ಸ್ವಲ್ಪ ನೀರು ಹಾಕಿಕೊಂಡು ಅದಕ್ಕೆ ಹಸಿ ಮೆಣಸು, ಬೆಳ್ಳುಳ್ಳಿ, ಟೊಮೆಟೋ, ಪಾಲಕ್ ಸೊಪ್ಪು, ಹಾಕಿಕೊಂಡು 3 ಸೀಟಿ ಹೊಡೆಯುವವರೆಗು ಬಿಡಿ. 3 ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಂದರೆ ಇದು ಚೆನ್ನಾಗಿ ಪುಡಿಯಾಗುವಂತೆ ನುಣ್ಣಗೆ ಮಾಡಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆಯಲ್ಲಿ ಇಟ್ಟು ಜೀರಿಗೆ, ಸಾಸಿವೆ, ಈರುಳ್ಳಿ, ಒಣ ಮೆಣಸು, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.

ಬಳಿಕ ಇದಕ್ಕೆ ಇಂಗು ಹಾಗೂ ಅರಶಿಣ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿಕೊಂಡರೆ ಸಾಕು. ಈ ಒಗ್ಗರಣೆ ತಯಾರಾದ ಬಳಿಕ ಅದನ್ನು ಕುಕ್ಕರ್ನಲ್ಲಿರುವ ಸಾರಿಗೆ ಹಾಕಿಕೊಂಡಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದರೆ ಒಲೆ ಮೇಲೆ ಇಟ್ಟು ಒಂದು ನಿಮಿಷ ಬಿಸಿ ಮಾಡಿದರೂ ಉತ್ತಮ. ಇಷ್ಟಾದರೆ ನಿಮ್ಮ ಮುಂದೆ ಪಾಲಕ್ ಸೊಪ್ಪಿನ ಸಾರು ರೆಡಿಯಾಗಿರುತ್ತದೆ. ಈ ಸಾರು ಅನ್ನ, ಮುದ್ದೆ ಸೇರಿ ಎಲ್ಲಾ ರೀತಿ ಖಾದ್ಯದ ಜೊತೆ ಸವಿಯಬಹುದು. ಆರೋಗ್ಯಕ್ಕೂ ತುಂಬಾನೆ ಒಳ್ಳೆಯ ಸೊಪ್ಪಿನ ಸಾರು ಇದು.