ಉಗುರಿನ ಮೇಲೆ ಕಪ್ಪು ಬಣ್ಣದ ಗೆರೆ ಇದ್ದರೆ ಅಪಾಯದ ಮುನ್ಸೂಚನೆಯೇ!

ಮಾನವರ ದೇಹದಲ್ಲಿ ಯಾವುದಾದರು ಬದಲಾವಣೆಯಾದರ ಅಥವಾ ಯಾವುದಾದರು ಗಂಭೀರ ಸ್ವರೂಪದ ಸಮಸ್ಯೆಗಳಾದರೆ ದೇಹವೇ ಅದನ್ನು ತೋರಿಸುತ್ತವೆ. ಯಾವುದಾದರು ಒಂದು ಅಂಗ ವಿಚಿತ್ರವಾಗಿ ವರ್ತಿಸುತ್ತದೆ. ನಮಗೆ ಯಾವುದಾದರು ಕಾಯಿಲೆ ಇದ್ದರೆ ದೇಹ ಅದರ ಮುನ್ಸೂಚನೆ ನೀಡಿಯೇ ನೀಡುತ್ತದೆ. ಇದು ಹಲವು ಬಾರಿ ದೃಢಪಟ್ಟಿದೆ ಕೂಡ.

ಉದಾಹರಣೆಗೆ ನಾವು ನೋಡುವುದಾದರೆ ಕಿಡ್ನಿ ವೈಫಲ್ಯ ಆಗುವ ಆರಂಭದಲ್ಲಿ ಜನರು ಏಕಾಏಕಿ ತೂಕ ಹೆಚ್ಚಳವಾಗುವುದು ಅಥವಾ ಕಡಿಮೆಯಾಗುವುದು, ಸುಸ್ತು, ತಲೆ ತಿರುಗುವುದು ಹೀಗೆ ಹತ್ತಾರು ಮುನ್ಸೂಚನೆಗಳು ಸಿಗುತ್ತವೆ. ಇದೇ ರೀತಿ ನಿಮ್ಮ ಕೈಬೆರಳಿನ ಮೇಲೆ ಕಪ್ಪು ಅಥವಾ ಬೂದು ಬಣ್ಣದಲ್ಲಿ ಗೆರೆ ಮೂಡಿದ್ದರೂ ಅದು ಸಹ ಒಂದು ಮುನ್ಸೂಚನೆಯಂತೆ.

ಹೌದು ನಿಮ್ಮ ಕೈ ಬೆರಳ ಮೇಲೆ ಕಪ್ಪು ಬಣ್ಣದಲ್ಲಿ ಒಂದು ಗೆರೆ ಮೂಡಿದಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮುಖ್ಯವಾಗಿ ಎಡಗೈ ಹೆಬ್ಬರಳಿನ ಮೇಲೆ ಕಪ್ಪು ಗೆರೆಯೊಂದು ಮೂಡಿದಿಯೇ? ನಮ್ಮ ಉಗುರುಗಳು ಸಹ ನಮ್ಮ ಆರೋಗ್ಯದ ಗುಟ್ಟು ಹೇಳುತ್ತವೆ.

ಅಮೆರಿಕ ಮೂಲದ ಚರ್ಮರೋಗ ತಜ್ಞರು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಫಾಲೋವರ್ಸ್ಗಳಿಗೆ ನೀಡಿದ್ದ ಸಲಹೆಯೊಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಜನರಲ್ಲಿ ಆತಂಕಕ್ಕೂ ಕಾರಣವಾಗಿದೆ. ಏಕೆಂದರೆ ಈ ರೀತಿಯ ಕಪ್ಪು ಗೆರೆಯು ಅಪರೂಪದ ಹಾಗೂ ಅತ್ಯಂತ ಗಂಭೀರ ಸ್ವರೂಪದ ಚರ್ಮ ಕ್ಯಾನ್ಸರ್ಗೆ ಕಾರಣವಾಗಿರಬಹುದು ಎಂದು ಡಾ ಲಿಂಡ್ಸೆ ಜುಬ್ರಿಟ್ಸ್ಕಿ ಹೇಳಿದ್ದಾರೆ.

ಇದು ಹಲವರಲ್ಲಿ ಆತಂಕಕ್ಕೆ ಕಾರಣವಾಗಿದ್ದರೆ ಮತ್ತೆ ಕೆಲವರು ಇದರಲ್ಲಿ ಸತ್ಯವಿಲ್ಲ ಎಂದಿದ್ದಾರೆ. ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ, ಡಾ ಲಿಂಡ್ಸೆ ಜುಬ್ರಿಟ್ಸ್ಕಿ ಅವರು ತಮ್ಮ ಅನುಯಾಯಿಗಳು ತಮ್ಮ ಉಗುರಿನ ಕೆಳಗೆ ಕಪ್ಪು ಬಣ್ಣದ ಉದ್ದವಾದ ಗೆರೆಯನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಲು ಕೇಳಿಕೊಂಡರು. ಹೌದು ಎಂದಾದರೆ, ಚರ್ಮದ ಕ್ಯಾನ್ಸರ್ನ ಒಂದು ವಿಧವಾದ ಸಬ್ಂಗುಯಲ್ ಮೆಲನೋಮಾವನ್ನು ಸೂಚಿಸಬಹುದಾದ್ದರಿಂದ ಅದನ್ನು ತಕ್ಷಣವೇ ಪರೀಕ್ಷಿಸುವಂತೆ ಬಳಕೆದಾರರನ್ನು ಒತ್ತಾಯಿಸಿದರು.

ಇದು ಸಬಂಗುಯಲ್ ಮೆಲನೋಮ ಎಂದು ಕರೆಯಲ್ಪಡುವ ಚರ್ಮದ ಕ್ಯಾನ್ಸರ್ನ ಅತ್ಯಂತ ಗಂಭೀರ ರೂಪವಾಗಿರಬಹುದು ಎಂದು ಡಾ. ಜುಬ್ರಿಟ್ಸ್ಕಿ ಹೇಳಿದರು. "ಇದು ಸಾಮಾನ್ಯವಲ್ಲದಿದ್ದರೂ, ನೀವು ಏನನ್ನು ಹುಡುಕುತ್ತಿದ್ದೀರಿ ಎಂದು ನಿಮಗೆ ತಿಳಿದಿಲ್ಲದಿದ್ದರೆ ಅದನ್ನು ಸುಲಭವಾಗಿ ತಪ್ಪಿಸಿಕೊಳ್ಳಬಹುದು" ಎಂದು ಅವರು ಹೇಳಿದರು.

ಇದಲ್ಲದೆ, ಉಗುರುಗಳ ಮೇಲಿನ ಎಲ್ಲಾ ಕಪ್ಪು ಗೆರೆಗಳು ಸಬ್ಂಗುಯಲ್ ಮೆಲನೋಮಗಳು ಅಥವಾ ಅಪಾಯಕಾರಿ ಅಲ್ಲ ಎಂದು ಡಾ ಜುಬ್ರಿಟ್ಸ್ಕಿ ಹೇಳಿದರು. ಉದ್ದನೆಯ ಮೆಲನೋನಿಚಿಯಾ, ಉದಾಹರಣೆಗೆ, ಕಂದು ಅಥವಾ ಕಪ್ಪು ಲಂಬವಾದ ಉಗುರು ಗೆರೆಯಾಗಿದ್ದು ಅದು ಸಾಮಾನ್ಯವಾಗಿ ಹಾನಿಕರವಲ್ಲ ಎಂದು ಅವರು ವಿವರಿಸಿದರು.

ನಿಮಗೆ ಹಾನಿಕರವಲ್ಲದ ಗೆರೆ ಇರುವ ಸಾಧ್ಯತೆಯೇ ಹೆಚ್ಚು. ಇದು ಕ್ಯಾಲ್ಸಿಯಂ ಕಾರಣದಿಂದಾಗಿ ಉಂಟಾಗಿರಬಹುದು. ಜೊತೆಗೆ ಹಲವು ವರ್ಷದಿಂದಲೂ ನಿಮ್ಮ ಉಗುರಿನ ಮೇಲೆ ಈ ಬಣ್ಣ ಇರಬಹುದು. ಇದು ಹಾನಿಕಾರಕವಲ್ಲ. ಆದರೆ ಒಂದಲ್ಲದೆ ಹಲವು ಉಗುರುಗಳ ಮೇಲೆ ಈ ರೀತಿ ಗೆರೆ ಕಂಡು ಬಂದರೆ ಅಥವಾ ಆಗಾಗ ಈ ಗೆರೆಯ ಬಣ್ಣ ಬದಲಾಗುತ್ತಿದೆ ಎಂದು ನಿಮಗೆ ಅನಿಸಿದರೆ, ಅಥವಾ ಈ ಗೆರೆ ಇತ್ತೀಚಿಗೆ ಮೂಡಲು ಆರಂಭಿಸಿದ್ದು, ದಿನ ಕಳೆದಂತೆ ಗಾಢ ಬಣ್ಣಕ್ಕೆ ತಿರುಗುತ್ತಿದೆ ಎಂದಾದರು ಪರೀಕ್ಷೆಯ ಅಗತ್ಯವಿದೆ ಎಂದಿದ್ದಾರೆ.

ಸಬ್ಂಗುಯಲ್ ಮೆಲನೋಮಗಳು ಪ್ರಪಂಚದಾದ್ಯಂತ ಎಲ್ಲಾ ಮಾರಣಾಂತಿಕ ಮೆಲನೋಮಗಳಲ್ಲಿ ಕೇವಲ 0.7% ರಿಂದ 3.5% ರಷ್ಟಿವೆ. ಅದರೆ ಇದು ಚರ್ಮ ರೋಗದ ಲಕ್ಷಣವೇ ಎಂದ ಗುರುತಿಸುವುದು ಕಷ್ಟದ ವಿಚಾರವಾಗಿದ್ದರೂ ನೈಜವಾಗಿ ಚರ್ಮದ ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ಇದೊಂದು ಚಿಹ್ನೆಯಾಗಿರಲಿದೆ. ಆದರೆ ಮೊದಲು ಕ್ಯಾನ್ಸರ್ ಪತ್ತೆಯಾಗುವುದು ಇದರಿಂದಲೇ ಎಂದು ಹೇಳಿದರೆ ತಪ್ಪಾಗಲಿದೆ.