ಮಕ್ಕಳ ಈ ಕೆಟ್ಟ ಅಭ್ಯಾಸಗಳು ಪಾಲಕರನ್ನು ಮುಜುಗರಕ್ಕೊಳಪಡಿಸುತ್ತೆ.

ಪಾಲಕರಿಗೆ ತಮ್ಮ ಮಕ್ಕಳು ಏನು ಮಾಡಿದ್ರು ಸಹ ಇಷ್ಟವಾಗುತ್ತಾರೆ. ಬೇರೊಂದು ಮಗುವಿಗೆ ತಮ್ಮ ಮಕ್ಕಳು ಹೊಡೆದ್ರೂ  ನೋಡಿ ನಗುವ ಪಾಲಕರಿದ್ದಾರೆ. ಆದರೆ ನಿಮ್ಮ ಈ ಅತಿಯಾದ ಮುದ್ದು, ಮಕ್ಕಳ ಜೀವನ ಹಾಳು ಮಾಡುವ ಜೊತೆಗೆ ಪಾಲಕರನ್ನೂ ಸಂಕಷ್ಟಕ್ಕೆ ತರುತ್ತದೆ.

ಪೋಷಕರಿಗೆ ಮಕ್ಕಳ ಪಾಲನೆ ಮಾತ್ರವಲ್ಲ ಇನ್ನೂ ಅನೇಕ ಜವಾಬ್ದಾರಿಗಳಿರುತ್ತವೆ. ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ಇಬ್ಬರು ದುಡಿದ್ರೂ ಸಹ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿರುತ್ತದೆ. ಪಾಲಕರಿಬ್ಬರೂ ಕೆಲಸದಲ್ಲಿ ಬ್ಯುಸಿಯಿರುವ ಕಾರಣ ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಲು ಸಾಧ್ಯವಾಗುವುದಿಲ್ಲ. 

ಮಕ್ಕಳು ಯಾರ ಜೊತೆ ಸ್ನೇಹ ಬೆಳೆಸಿದ್ದಾರೆ ಹಾಗೆ ಮಕ್ಕಳು ಏನೆಲ್ಲ ಅಭ್ಯಾಸಗಳನ್ನು ಕಲಿತಿದ್ದಾರೆ ಎಂಬುದು ಪಾಲಕರಿಗೆ ತಿಳಿದಿರೋದಿಲ್ಲ. ಹಾಗಾಗಿ ಪಾಲಕರು ಎಷ್ಟೇ ಬ್ಯುಸಿಯಿದ್ರೂ ಮಕ್ಕಳ ಮೇಲೆ ಒಂದು ಕಣ್ಣಿಟ್ಟಿರಬೇಕು. ಮಕ್ಕಳ ಕೆಲ ಅಭ್ಯಾಸ ಗೊತ್ತಾದ ತಕ್ಷಣ ಅದನ್ನು ಬಿಡಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಮಕ್ಕಳ ಯಾವ ಅಭ್ಯಾಸ ಪಾಲಕರನ್ನು ಮುಜುಗರಕ್ಕೀಡು ಮಾಡುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ. 

ಸದಾ ಗಲಾಟೆ – ಜಗಳ:  
ಅನೇಕ ಮಕ್ಕಳು ಬಾಲ್ಯದಲ್ಲಿಯೇ  ಆಕ್ರಮಣಕಾರಿ ಪ್ರವೃತ್ತಿ ಹೊಂದಿರುತ್ತಾರೆ. ಸಿಕ್ಕವರಿಗೆಲ್ಲ ಹೊಡೆಯುತ್ತಿರುತ್ತಾರೆ. ಪಾಲಕರಿಗೆ ಇದು ತಮಾಷೆ ಎನ್ನಿಸುತ್ತದೆ. ಆದ್ರೆ ಮಕ್ಕಳು ದೊಡ್ಡವರಾದಂತೆ ಇದು ಮುಂದುವರೆದ್ರೆ ತೊಂದರೆ ಕಟ್ಟಿಟ್ಟಬುಟ್ಟಿ. ಹಾಗಾಗಿ ಮಕ್ಕಳ ಹೊಡೆಯುವ, ಗಲಾಟೆ ಮಾಡುವ ಚಟವನ್ನು ಆರಂಭದಲ್ಲಿಯೇ ಬಿಡಿಸಬೇಕು. ಮಕ್ಕಳಿಗೆ ಇದ್ರಿಂದಾಗುವ ನಷ್ಟವನ್ನು ಹೇಳ್ಬೇಕು. ಜೊತೆಗೆ ಪ್ರೀತಿಯಿಂದ ಮಾತನಾಡುವುದು ಹೇಗೆ ಎಂಬುದನ್ನು ಕಲಿಸಬೇಕು.

ಕೆಟ್ಟ ಪದ ಬಳಕೆ: 
ಮನೆಯಲ್ಲಿ ಪಾಲಕರು ಮಾತನಾಡುವ ಶಬ್ಧಗಳನ್ನು ಅಥವಾ ಸ್ನೇಹಿತರು, ಸುತ್ತಮುತ್ತಲಿನ ಜನರು ಬಳಸುವ ಶಬ್ಧವನ್ನು ಮಕ್ಕಳು ಬೇಗ ಗ್ರಹಿಸ್ತಾರೆ. ನಂತರ  ಅವರೂ ಅದರ ಬಳಕೆ ಶುರು ಮಾಡ್ತಾರೆ. ಕೆಲವೊಮ್ಮೆ ಮಕ್ಕಳಿಗೆ ಆ ಪದದ ಅರ್ಥವೇ ತಿಳಿದಿರುವುದಿಲ್ಲ. ನಿಮ್ಮ ಮಕ್ಕಳು ಕೆಟ್ಟ ಭಾಷೆ, ಕೊಳಕು ಪದ ಬಳಕೆ ಮಾಡ್ತಿದ್ದರೆ ಅದನ್ನು ತಪ್ಪಿಸುವ ಕೆಲಸ ಮಾಡಿ. 

ಕದಿಯುವ ಅಭ್ಯಾಸ:
ಮಕ್ಕಳಿಗೆ ವಸ್ತುವನ್ನು ಕದಿಯಬೇಕೆಂಬ ಉದ್ದೇಶವಿರುವುದಿಲ್ಲ. ಅವರಿಗೆ ಇಷ್ಟವಾಗ್ತಿದ್ದಂತೆ ಅದನ್ನು ಎತ್ತಿಟ್ಟುಕೊಳ್ತಾರೆ. ಮನೆಯಲ್ಲಿ ಮಾತ್ರವಲ್ಲ ಶಾಲೆಯಲ್ಲೂ ಇದು ರೂಢಿಯಾದ್ರೆ ಇದಕ್ಕೆ ಕಳ್ಳತನ ಎಂಬ ಹೆಸರು ಬರುತ್ತದೆ. ಹಾಗಾಗಿ ಮಕ್ಕಳಿಗೆ ಯಾವುದೇ ವಸ್ತುವನ್ನು ತೆಗೆದುಕೊಳ್ಳುವಾಗ್ಲೂ ಪಾಲಕರನ್ನು ಅಥವಾ ಆ ವಸ್ತುವಿನ ಮಾಲೀಕರನ್ನು ಕೇಳಬೇಕೆಂಬ ಗುಣ ಬೆಳೆಸಿ. 

ಕೀಟಲೆ:
ಮಕ್ಕಳೆಂದ ಮೇಲೆ ಸಣ್ಣಪುಟ್ಟ ಕೀಟಲೆ ಸಾಮಾನ್ಯ. ಆದ್ರೆ ಇದು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ಅಥವಾ ಸ್ನೇಹಿತರ ಜೊತೆ ಅತಿಯಾದ ಕೀಟಲೆ ಸಮಸ್ಯೆ ತರುತ್ತದೆ. 

ಹಠಮಾರಿ ಬುದ್ಧಿ: 
ಮಕ್ಕಳ ಮೊಂಡುತನ ಪಾಲಕರಿಗೆ ತಲೆನೋವು ತರಿಸುತ್ತದೆ. ಮಕ್ಕಳು ಚಿಕ್ಕ ಚಿಕ್ಕ ವಿಷ್ಯಕ್ಕೆ ಗಲಾಟೆ ಮಾಡ್ತಾರೆ. ಆರಂಭದಲ್ಲಿ ಮಕ್ಕಳು ಗಲಾಟೆ ಮಾಡ್ತಾರೆ ಎನ್ನುವ ಕಾರಣಕ್ಕೆ ಪಾಲಕರು ಎಲ್ಲವನ್ನೂ ಕೊಡಿಸ್ತಾರೆ. ಆದ್ರೆ ಇದೇ ಮುಂದುವರೆದ್ರೆ ಕಷ್ಟವಾಗುತ್ತದೆ. ಹಾಗಾಗಿ ಮಕ್ಕಳಿಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ವಿವರಿಸಬೇಕು. ಅವರ ಹಠಮಾರಿ ತನವನ್ನು ಕಡಿಮೆ ಮಾಡಲು ಬೈದು, ಹೊಡೆಯುವ ಬದಲು ಪ್ರೀತಿಯಿಂದ ತಿದ್ದಿ ಹೇಳಬೇಕು.