ಐದು ನಿಮಿಷ ಸಮಯ ಇದ್ದರೆ ಪುದಿನ-ಕಡಲೆ ಚಟ್ನಿ ರೆಡಿ ಮಾಡಿ!

ಬೆಳಗ್ಗೆ ತಿಂಡಿಗೆ ನೀವು ಹಲವು ರೀತಿಯ ಚಟ್ನಿಗಳ ಮಾಡಿರುತ್ತೀರಿ. ಅದರಲ್ಲೂ ಕಾಯಿ ಚಡ್ನಿ, ಪುದಿನ ಚಟ್ನಿ ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಪುದಿನ ಆರೋಗ್ಯಕ್ಕೂ ಉತ್ತಮವಾಗಿರೋದ್ರಿಂದ ಎಲ್ಲರಿಗೂ ಇಷ್ಟವಾಗುತ್ತದೆ. ಎಲ್ಲಾ ರೀತಿಯ ತಿಂಡಿಗೂ ಈ ಪುದಿನ ಚಟ್ನಿ ಸಿಕ್ಕಾಪಟ್ಟೆ ರುಚಿ ನೀಡಲಿದೆ. ಚಟ್ನಿಯಲ್ಲಿ ಹಾಗೂ ಕೆಲವು ಮಸಾಲೆಗಳಲ್ಲಿ ರುಚಿಗಾಗಿ ಬಳಸಲಾಗುವ ಪುದೀನ ಎಲೆಗಳು ಕೇವಲ ರುಚಿ ಪರಿಮಳ ನೀಡುವಲ್ಲಿ ಮಾತ್ರವಲ್ಲ, ಬದಲಿಗೆ ಹಲವಾರು ಔಷಧೀಯ ಗುಣಗಳಿಂದಲೂ ಸಮೃದ್ಧವಾಗಿದೆ.

ಇದರ ಪರಿಮಳ ಆಹ್ಲಾದಕರವಾಗಿದ್ದರೂ ರುಚಿ ಮಾತ್ರ ಕೊಂಚವೇ ಒಗರಾಗಿರುವುದರಿಂದ ಈ ಎಲೆಗಳನ್ನು ನೇರವಾಗಿ ತಿನ್ನಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಕೊಂಚಕೊಂಚವಾಗಿ ತಿನ್ನುತ್ತಾ ಬಂದರೆ ಕ್ರಮೇಣ ಇದು ಇಷ್ಟವಾಗತೊಡಗುತ್ತದೆ. ಈ ಎಲೆಗಳಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ. ಅಲ್ಲದೇ ಹೆಚ್ಚಿನ ಕರಗದ ನಾರು ಸಹಾ ಇದೆ. 

ಪುದೀನ ಎಲೆಗಳು ಜೀರ್ಣಕ್ರಿಯೆಯಲ್ಲಿ ಅತಿ ಹೆಚ್ಚು ಸಹಕಾರ ನೀಡುತ್ತದೆ ಹಾಗೂ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ. ಹೊಟ್ಟೆಯಲ್ಲಿ ಆಮ್ಲೀಯತೆಯಾಗುವುದನ್ನು ತಡೆದು ಅಪಾನವಾಯು, ಮಲಬದ್ಧತೆ, ಹೊಟ್ಟೆಯುರಿ, ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಈ ಗುಣಗಳ ಜೊತೆಗೆ ಇದು ತೂಕವನ್ನು ಇಳಿಸಲೂ ನೆರವಾಗುತ್ತದೆ. 

ಹೀಗಾಗಿ ಹೆಚ್ಚಿನವರು ಪುದಿನ ಚಟ್ನಿಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗಾದ್ರೆ ನಾವಿಂದು ತಿಂಡಿಗೆ ಪುದಿನ ಚಟ್ನಿ ಮಾಡುವುದು ಹೇಗೆ? ಪುದಿನ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳ ಬೇಕು? ಮಾಡುವುದು ಹೇಗೆ? ಚಟ್ನಿ ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ

ಪುದಿನ-ಕಡಲೆ ಚಟ್ನಿ ಮಾಡುವುದು ಹೇಗೆ? ಮೊದಲು ಒಂದು ಪಾತ್ರೆಯಲ್ಲಿ ಕಡಲೆ ಹಾಕಿಕೊಂಡು ಹುರಿದುಕೊಳ್ಳಿ. ಹುರಿದು ಬದಿಗಿಟ್ಟುಕೊಳ್ಳಿ. ಅದೇ ಪಾತ್ರೆಗೆ ಎಣ್ಣೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ, ಒಣ ಮೆಣಸು, ಹಸಿ ಮೆಣಸು, ಪುದಿನ, ಕೊತ್ತಂಬರಿ ಸೊಪ್ಪು ಹಾಕಿ ಎರಡು ನಿಮಿಷ ಫ್ರೈ ಮಾಡಿಕೊಳ್ಳಿ.

ಇದಾದ ಬಳಿಕ ಇದಕ್ಕೆ ಹುಣಸೆ ಹುಳಿ, ತೆಂಗಿನ ಕಾಯಿ ಹಾಕಿ ಫ್ರೈ ಮಾಡಿ. 1 ನಿಮಿಷ ಹುರಿದರೆ ಸಾಕು. ಇದಾದ ಬಳಿಕ ಈ ಮಸಾಲೆಯನ್ನು ತೆಗೆದುಕೊಂಡು ಮಿಕ್ಸಿ ಜಾರ್ಗೆ ಹಾಕಿಕೊಂಡು ಉಪ್ಪು ಹಾಕಿ, ಹುರಿದುಕೊಂಡ ಕಡಲೆ ಹಾಕಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನಿಮಗೆ ಎಷ್ಟು ತೆಳುವಾದ ಚಟ್ನಿ ಬೇಕೋ ಅಷ್ಟು ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಪುದಿನ-ಕಡಲೆ ಚಟ್ನಿ ರೆಡಿಯಾಗಿರುತ್ತೆ. ಇದನ್ನು ಚಪಾತಿ, ಇಡ್ಲಿ, ದೋಸೆ ಸೇರಿ ಎಲ್ಲಾ ಖಾದ್ಯದ ಜೊತೆಯೂ ಸವಿಯಬಹುದು. 

ಪುದಿನ ಎಲೆಯಲ್ಲಿ ಹಲವು ಆರೋಗ್ಯಕರ ಪ್ರಯೋಜನಗಳು: 
ಕೆಲವು ತಾಜಾ ಪುದೀನ ಎಲೆಗಳನ್ನು ನಿಮ್ಮ ನಿತ್ಯದ ಸಾಲಾಡ್ ನೊಂದಿಗೆ ಬೆರೆಸಿ ಹಸಿಯಾಗಿ ಸೇವಿಸಿ. ಇದರಿಂದ ಹೊಟ್ಟೆಯುಬ್ಬರಿಕೆಯಿಂದ ರಕ್ಷಣೆ ದೊರಕುವುದು ಮಾತ್ರವಲ್ಲ, ತೂಕ ಇಳಿಯಲೂ ನೆರವಾಗುತ್ತದೆ. ಪುದೀನ ಸೇವನೆಯ ಜೊತೆಗೇ ಕೊಬ್ಬು ಹೆಚ್ಚಿಸುವ, ಕ್ಯಾಲೋರಿಗಳು ಹೆಚ್ಚಿರುವ ಆಹಾರಗಳನ್ನು ಸೇವಿಸದೇ ಇರುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ನಿತ್ಯವೂ ಅರ್ಧ ಗಂಟೆಯಾದರೂ ನಡೆದಾಡುವುದು ತೂಕ ಇಳಿಯಲು ಅಗತ್ಯವಾಗಿದೆ.