ಮಗು ಬೆಳೆಯುತ್ತಿದ್ದಂತೆ ಹಾಲಿನ ಜೊತೆಗೇ ಇತರ ಆಹಾರಗಳನ್ನೂ ಕೊಡಬೇಕು. ಈ ಆಹಾರಗಳಿಗೆ ಬದಲಾಗಿ ಹಾಲನ್ನು ಕುಡಿಸುವುದು ಅಷ್ಟು ಒಳ್ಳೆಯದಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಮೊದಲಾದ ಅಗತ್ಯ ಪೋಷಕಾಂಶಗಳಿದ್ದರೂ ಇದು ಪರಿಪೂರ್ಣ ಆಹಾರವೇನೂ ಅಲ್ಲ.
ಅಂಬೆಗಾಲಿಡುತ್ತಿರುವ ಮಗುವಿಗೆ ದಿನಕ್ಕೆ 350 ಮಿಲಿ ಲೀಟರ್ ನಿಂದ 400 ಮಿಲಿ ಲೀಟರ್ ನಷ್ಟು ಹಾಲು ಬೇಕಾಗುತ್ತದೆ ಮತ್ತು ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನದನ್ನು ಕುಡಿಸುವುದು ಒಳ್ಳೆಯದಲ್ಲ. ಹೆಚ್ಚಿನ ಪ್ರಮಾಣದ ಹಾಲು ಕುಡಿಸುವುದರಿಂದ ಕಬ್ಬಿಣ ಮತ್ತು ಜೀವಸತ್ವಗಳ ಸಹಿತ ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಇತರ ಆಹಾರಗಳನ್ನು ನಿಮ್ಮ ಮಗು ಸೇವಿಸದೇ ಹೋಗಬಹುದು. ಆದ್ದರಿಂದ ಮಗುವಿನ ಬೆಳವಣಿಗೆ ದೃಷ್ಟಿಯಿಂದ ಅದರ ಆಹಾರಕ್ರಮ ಹೇಗಿರಬೇಕೆಂದು ಈ ಲೇಖನದಲ್ಲಿ ಹೇಳಲಾಗಿದೆ.
ಊಟದ ತಟ್ಟೆಯಲ್ಲಿರಲಿ ಪೌಷ್ಠಿಕ ಆಹಾರ:
ಹೆಚ್ಚಿನ ಅಂಬೆಗಾಲಿಡುತ್ತಿರುವ ಮಕ್ಕಳು ಬಹಳ ಕಡಿಮೆ ವೈವಿಧ್ಯದ ಆಹಾರಗಳನ್ನು ತಿನ್ನುವ ಒಂದು ಹಂತದ ಮೂಲಕ ಹಾದು ಹೋಗುತ್ತಾರೆ. ಇದು ಅವರ ಬೆಳವಣಿಗೆಯ ಸಾಮಾನ್ಯ ಭಾಗವಾಗಿದೆ, ಆದರೆ, ನಿಮ್ಮ ಮಗು ಏಕೆ ಸರಿಯಾಗಿ ತಿನ್ನುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹಾ ಮುಖ್ಯವಾಗಿದೆ.
ಊಟ ಬದಲಿಗೆ ಹಾಲು ಬಯಸುವ ಮಕ್ಕಳು:
ಹೆಚ್ಚಿನ ಅಂಬೆಗಾಲಿಡುತ್ತಿರುವ ಮಕ್ಕಳಂತೆಯೇ, ನಿಮ್ಮ ಮಗು ತಿನ್ನುವುದಕ್ಕಿಂತಲೂ ಆಟಕ್ಕೇ ಹೆಚ್ಚಿನ ಆದ್ಯತೆ ನೀಡಿ ತನ್ನ ಸಮಯವನ್ನು ಊಟಕ್ಕಿಂತಲೂ ಆಟಕ್ಕಾಗಿ ಹೆಚ್ಚು ಆಯ್ಕೆ ಮಾಡುತ್ತದೆ. ಹಾಗಾಗಿ ಊಟದ ಮೇಜಿನ ಬಳಿ ಕುಳಿತು ಆಹಾರವನ್ನು ಹೆಚ್ಚಿನ ಸಮಯದವರೆಗೆ ಅಗಿಯುವುದಕ್ಕಿಂತಲೂ ತಕ್ಷಣ ಒಂದು ಲೋಟ ಹಾಲನ್ನು ಕುಡಿದು ಮರುಕ್ಷಣವೇ ತನ್ನ ಆಟಿಕೆಗಳಿಗೆ ಹಿಂತಿರುಗುವುದನ್ನು ಮಕ್ಕಳು ಕಂಡುಕೊಳ್ಳಬಹುದು.
ಮಗು ಊಟ ಮಾಡುತ್ತಿಲ್ಲವೇ?
ಕೆಲವೊಮ್ಮೆ ಮಗುವಿನ ಆರೋಗ್ಯ ಏರುಪೇರಾಗಿದ್ದರೂ ಮಗು ಊಟ ಮಾಡದೇ ಇರುವುದರ ಕಾರಣವಾಗಿರಬಹುದು. ಕೆಲವೊಮ್ಮೆ ತನಗೆ ಬಲವಂತವಾಗಿ ತಿನ್ನಿಸಲಾಗುತ್ತಿದೆ ಎಂಬ ಅರಿವೂ ಮಗುವಿಗೆ ಆಗುವ ಮೂಲಕ ಹಿರಿಯರ ಗಮನ ಸೆಳೆಯಲೂ ಊಟ ಮಾಡದೇ ಇರಲು ಹಠ ಹಿಡಿಯಬಹುದು.ಆದ್ದರಿಂದ ಒಂದು ವೇಳೆ ಮಗು ದಿನವೊಂದರಲ್ಲಿ ಒಂದೇ ಹೊತ್ತು ಘನ ಆಹಾರವನ್ನು ಸೇವಿಸಿದರೆ ದೃತಿಗೆಡದಿರಿ. ಬದಲಿಗೆ ಇಡೀ ವಾರದಲ್ಲಿ ಮಗು ಯಾವ ವೈವಿಧ್ಯತೆಯ ಆಹಾರಗಳನ್ನು ಸೇವಿಸಿದೆ ಎಂಬ ಬಗ್ಗೆ ಗಮನ ಹರಿಸಿ.
ಮಗು ತಿನ್ನದಿದ್ದರೆ ಏನು ಮಾಡಬೇಕು?
ಮಗುವಿಗೆ ಹಸಿವು ಆದಾಗ ತಾನೇ ತಾಯಿಯ ಬಳಿ ಬರುತ್ತದೆ. ಆಗ ಮಗು ಬಯಸುವ ಹಾಲನ್ನು ಕೊಡದೇ ಅಗತ್ಯವಿರುವ ಘನ ಆಹಾರವನ್ನೇ ನೀಡಿ. ನಿಮ್ಮ ಮಗುವಿಗೆ ತಾನು ಬಯಸಿದಾಗೆಲ್ಲಾ ಹಾಲು ನೀಡಿದರೆ, ಅಥವಾ ಮಗುವಿನ ತಟ್ಟೆಯಲ್ಲಿರುವ ಆಹಾರವನ್ನು ಮಗು ಇಷ್ಟಪಡದಿದ್ದರೆ, ನೀವೇ ನಿಮ್ಮ ಮಗುವಿಗೆ ಕೆಟ್ಟ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸುತ್ತೀರಿ. ನಿಮ್ಮ ಮಗು ಆಹಾರಕ್ಕಾಗಿ ನಿಮ್ಮ ಬಳಿಗೆ ಬಂದಾಗ ನೀವು ನಿರಂತರವಾಗಿ ಮಗುವಿಗೆ ಅಗತ್ಯವಿರುವ ಘನ ಆಹಾರಗಳನ್ನು ನೀಡುತ್ತಾ ಬಂದರೆ ಮಗು ಶೀಘ್ರವೇ ತನ್ನ ಪಾಲಿಗೆ ಬಂದದ್ದೇ ಪಂಚಾಮೃತ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತದೆ ಹಾಗೂ ಈ ಆಹಾರವನ್ನು ಸೇವಿಸಲು ತೊಡಗುತ್ತದೆ.
ಮಗು ಕೇಳಿದಾಗೆಲ್ಲಾ ಹಾಲು ನೀಡಬೇಡಿ:
ಒಂದು ವೇಳೆ ನಿಮ್ಮ ಕುಟುಂಬದ ಇತರ ಸದಸ್ಯರೂ ಮಗುವಿಗೆ ಆಹಾರ ನೀಡುತ್ತಿದ್ದರೆ ಅವರಿಗೂ ಈ ವಿಧಾನದ ಬಗ್ಗೆ ತಿಳಿಸಿ ಹಾಗೂ ಮಗು ಕೇಳಿದಾಗಲೆಲ್ಲಾ ಹಾಲನ್ನು ನೀಡದಿರುವಂತೆ ಎಚ್ಚರಿಸಿ. ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ನಿಮ್ಮ ಮಗುವಿಗೆ ಮುಖ್ಯ ಆಹಾರ ಗುಂಪುಗಳಿಂದ ವ್ಯಾಪಕವಾದ ಆಹಾರವನ್ನು ನೀಡುವುದನ್ನು ಮುಂದುವರಿಸಿ.