ಸ್ತ್ರೀಯರ ಮುಟ್ಟಿನ ದಿನಗಳಲ್ಲಿ ಏರುಪೇರು ಉಂಟಾಗಲು ಕಾರಣ ಏನು?

ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ವೈದ್ಯರು ಕೇಳುವ ಮೊದಲ ಪ್ರಶ್ನೆಯೇ ತಿಂಗಳಿಗೆ ಸರಿಯಾದ ಸಮಯದಲ್ಲಿ ಮುಟ್ಟು ಆಗುತ್ತಿದೆಯೇ?  ಇದಕ್ಕೆ ಉತ್ತರ ಎಲ್ಲರಿಂದಲೂ ಸರಿಸಮಾನವಾಗಿ ಸಿಗುವುದಿಲ್ಲ. ಈ ಏರುಪೇರಿಗೆ ಹಲವು ಕಾರಣಗಳಿವೆ. ಬದಲಾದ ಜೀವನ ಶೈಲಿ, ಬದಲಾದ ಆಹಾರ, ಕೆಲವು ಅಲರ್ಜಿಕಾರಕ ಔಷಧಗಳು, ಮಾನಸಿಕ ಕಿರುಕುಳ ಮೊದಲಾದ ಹಲವು ಕಾರಣಗಳಿಂದ ದಿನಗಳು ಹೆಚ್ಚು ಕಡಿಮೆಯಾಗುತ್ತಾ ಹೋಗುತ್ತವೆ. 

ಅವಧಿಗಳು ಸಾಮಾನ್ಯವಾಗಿ 3 ರಿಂದ 7 ದಿನಗಳವರೆಗೆ ಇರುತ್ತದೆ ಮತ್ತು ಕಿಬ್ಬೊಟ್ಟೆಯ ನೋವು ಮತ್ತು ಮನಸ್ಥಿತಿ ಬದಲಾವಣೆಗಳನ್ನು ಒಳಗೊಂಡಿರಬಹುದು. ನಿಮ್ಮ ವಯಸ್ಸು, ತೂಕದಲ್ಲಿನ ಬದಲಾವಣೆಗಳು, ಒತ್ತಡ, ಹಾರ್ಮೋನ್ ಸಮಸ್ಯೆಗಳು ಅಥವಾ ಔಷಧಿಗಳ ಕಾರಣದಿಂದಾಗಿ ಪಿರಿಯಡ್ಸ್ ನಿಲ್ಲಬಹುದು.

ಒಂದು ವೇಳೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಈ ದಿನಗಳು ಹಿಂದು ಮುಂದಾಗುವ ಕಾರಣಗಳ ಬಗ್ಗೆ ತಿಳಿದುಕೊಂಡರೆ ಉತ್ತಮ ಆರೋಗ್ಯ ಪಡೆಯುವುದು ಮಾತ್ರವಲ್ಲ ತಮ್ಮ ದಿನಚರಿಯನ್ನೂ ನಿಖರವಾಗಿ ನಿಯೋಜಿಸಿಕೊಳ್ಳಬಹುದು. ಈ ಏರುಪೇರಿಗೆ ಪ್ರಮುಖವಾದ ಏಳು ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಕಾರಣ ತಿಳಿದುಕೊಳ್ಳಿ.

1. ವ್ಯಾಯಾಮಗಳು: 
ಮಹಿಳೆಯರು ಕೈಗೊಳ್ಳುವ ಕೆಲವು ವ್ಯಾಯಾಮಗಳು ಒಳ ಅಂಗಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಅರಿವಿಲ್ಲದೇ ಯಾವುದೋ ಭಂಗಿಯಲ್ಲಿ ಒಳ ಅಂಗಗಳು ಹೆಚ್ಚು ಸೆಳೆತಕ್ಕೆ ಒಳಗಾಗಿ ಒತ್ತಡ ನೀಡಬಾರದೆಡೆ ಒತ್ತಡ ನೀಡಿ ಆಂತರಿಕ ಸ್ರಾವಗಳನ್ನು ತಡೆಗಟ್ಟುತ್ತದೆ. ಈ ಕಾರಣದಿಂದಲೇ ಹಲವು ಮಹಿಳಾ ಕ್ರೀಡಾಪಟುಗಳು ಏರುಪೇರಿನ ದಿನಗಳಿಂದ ಬಳಲುತ್ತಾರೆ.

2. ವೈದ್ಯರು ಸೂಚಿಸಿದ ಔಷಧಿಗಳು: 
ದೇಹದ ಬೇರೆ ಯಾವುದೋ ಕಾಯಿಲೆಗೆ ನೀಡಿರುವ ಔಷಧಿಯ ಪಾರ್ಶ್ವ ಪರಿಣಾಮದಿಂದ ದೇಹದ ಸೂಕ್ಷ್ಮ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲಾಗದೇ ದೇಹದ ಆಂತರಿಕ ಸ್ರಾವ ಹೆಚ್ಚು ಕಡಿಮೆಗೊಂಡು ತಿಂಗಳ ದಿನಗಳಲ್ಲಿ ಏರುಪೇರು ಕಾಣಿಸಿಕೊಳ್ಳುತ್ತದೆ.

3. ಒತ್ತಡ: 
ಮಾನಸಿಕ ಒತ್ತಡಕ್ಕೂ ತಿಂಗಳ ದಿನಗಳಿಗೂ ನಿಕಟ ಸಂಬಂಧವಿರುವುದು ಸಂಶೋಧನೆಗಳಿಂದ ಧೃಡಪಟ್ಟಿದೆ. ಯಾವುದೋ ಕಾರಣದಿಂದ ಮೆದುಳು ಹೆಚ್ಚಿನ ಒತ್ತಡಕ್ಕೆ ಒಳಗಾದರೆ ಹೆಚ್ಚಿನ ರಕ್ತಸಂಚಾರ ಬೇಡುವುದರಿಂದ ಇತರ ಅಂಗಗಳಿಗೆ ರಕ್ತಸಂಚಾರ ಕಡಿಮೆಯಾಗಿ ಆ ರಕ್ತದ ಮೂಲಕ ಆಗಮನವಾಗಬೇಕಿದ್ದ ಹಾರ್ಮೋನುಗಳು ಸೂಕ್ತಕಾಲಕ್ಕೆ ತಲುಪದೇ ರಜಾದಿನಗಳು ಏರುಪೇರಾಗುತ್ತವೆ.

4. ಅನಿಯಮಿತ ನಿದ್ಧೆ:
ನಿದ್ದೆಯ ಸಮಯದಲ್ಲಿ ನಮ್ಮ ದೇಹ ಎಚ್ಚರವಾಗಿದ್ದಕ್ಕಿಂತಲೂ ವಿಭಿನ್ನವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅನಿಯಮಿತ ನಿದ್ದೆಯ ಕಾರಣ ಸ್ರವಿಸಬೇಕಾಗಿದ್ದ ಹಾರ್ಮೋನು ಸ್ರವಿಸಲಾರದೇ, ಸ್ರವಿಸಬಾರದಾಗಿದ್ದ ಹಾರ್ಮೋನು ಸ್ರವಿಸಿ ಆಂತರಿಕವಾಗಿ ಹಲವು ಬದಲಾವಣೆಗಳಾಗುತ್ತವೆ. ಚಿಕ್ಕ ಮಕ್ಕಳಿರುವ ಮನೆಯಲ್ಲಿ ಮಕ್ಕಳು ರಾತ್ರಿ ಹಲವು ಬಾರಿ ಎದ್ದು ತಮ್ಮ ತಾಯಂದಿರ ನಿದ್ದೆಯನ್ನು ಕೆಡಿಸುವ ಕಾರಣ ಅವರ ತಿಂಗಳ ರಜಾದಿನಗಳೂ ಏರುಪೇರಾಗುವುದು ಸಾಮಾನ್ಯ.

5. ಸ್ಥೂಲಕಾಯ: 
ಸ್ಥೂಲಕಾಯವಿರುವ ಮಹಿಳೆಯರಲ್ಲಿ ಈಸ್ಟ್ರೋಜೆನ್ ಎಂಬ ಹಾರ್ಮೋನು ಹೆಚ್ಚು ಸ್ರವಿತವಾಗುತ್ತದೆ. ಈಸ್ಟ್ರೋಜನ್ ಅಗತ್ಯಕ್ಕಿಂತಲೂ ಹೆಚ್ಚಿದ್ದರೆ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗಲು ತಡವಾಗುತ್ತದೆ. ಪರಿಣಾಮವಾಗಿ ತಿಂಗಳ ರಜಾದಿನಗಳು ತಿಂಗಳಿಗೂ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. 

6. ಗರ್ಭನಿರೋಧಕ ಗುಳಿಗೆಗಳು: 
ಅನೈಚ್ಛಿಕ ಗರ್ಭದಿಂದ ದೂರವುಳಿಯಲು ಬಳಸುವ ಗರ್ಭನಿರೋಧಕ ಗುಳಿಗೆಗಳು ರಜಾದಿನಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಗುಳಿಗೆಗಳ ಹೊರತಾಗಿ ಉಪಯೋಗಿಸುವ ಇತರ ವಿಧಾನಗಳೂ ಈ ದಿನಗಳ ಮೇಲೆ ಪರಿಣಾಮ ಬೀರುತ್ತವೆ. 

7. ಅಗತ್ಯಕ್ಕಿಂತಲೂ ಹೆಚ್ಚು ಕೃಶಕಾಯರಾಗಿರುವುದು: 
ಕೃಶಕಾಯ ಆರೋಗ್ಯಕರವೇನೋ ಸರಿ. ಆದರೆ ಕನಿಷ್ಟಕ್ಕಿಂತಲೂ ಹೆಚ್ಚು ಕೃಶರಾಗಿರುವುದು ಆರೋಗ್ಯಕ್ಕೆ ಮಾರಕ. ಈ ಸ್ಥಿತಿಯಲ್ಲಿ ದೇಹಕ್ಕೆ ಅಗತ್ಯವಾದ ಈಸ್ಟ್ರೋಜನ್ ಹಾರ್ಮೋನು ಉತ್ಪತ್ತಿಯಾಗದೇ ಅಂಡಾಣು ಬಿಡುಗಡೆಯಾಗುವುದೇ ಇಲ್ಲ.