ಯೋಗ ನಿದ್ರೆ ಮಾಡಿದರೆ ನಿದ್ರಾಹೀನತೆ, ಮಾನಸಿಕ ಒತ್ತಡ ಇರಲ್ಲ, ಆದರೆ ಈ ನಿಯಮ ಅನುಸರಿಸಬೇಕು?

ಯೋಗ ನಿದ್ರೆ ಮನಸ್ಸಿಗೆ-ದೇಹಕ್ಕೆ ವಿಶ್ರಾಂತಿ ನೀಡುವ ಅತ್ಯುತ್ತಮ ಪರಿಹಾರ. ಯೋಗ ನಿದ್ರೆ ಮಾಡಿ ಎದ್ದಾಗ ನಮ್ಮೆಲ್ಲಾ ಮಾನಸಿಕ ಒತ್ತಡ ಕಡಿಮೆಯಾಗಿರುವುದು. ಮನಸ್ಸಿಗೆ, ದೇಹಕ್ಕೆ ಹೊಸ ಹುಮ್ಮಸ್ಸು ಮರಳುತ್ತದೆ.

ಯೋಗ ನಿದ್ರೆ ಯಾರು ಬೇಕಾದರೂ ಮಾಡಬಹುದು. ಯೋಗದಲ್ಲಿ ಹಲವಾರು ಆಸನಗಳಿವೆ, ಎಲ್ಲಾ ಆಸನಗಳನ್ನು ಎಲ್ಲರಿಗೆ ಮಾಡಲು ಸಾಧ್ಯವಿಲ್ಲ, ಆದರೆ ಯೋಗ ನಿದ್ರೆ ಆ ರೀತಿಯಲ್ಲ, ಯಾರು ಬೇಕಾದರೂ ಯೋಗ ನಿದ್ರೆಯನ್ನು ಅಭ್ಯಾಸ ಮಾಡಿ ವಿಶ್ರಾಂತಿಯನ್ನು ಪಡೆಯಬಹುದು. 

ಯೋಗ ನಿದ್ರೆಯನ್ನು ನೀವು ಮಾಡುವುದಾದರೆ ಸರಿಯಾದ ರೀತಿಯಲ್ಲಿ ಮಾಡಬೇಕು. ಯೋಗ ನಿದ್ರೆಗೆ ಜಾರುವ ಮುನ್ನ ಸ್ವಲ್ಪ ವ್ಯಾಯಾಮ ಮಾಡಬೇಕು, ಕಠಿಣ ಯೋಗಾಸನಗಳನ್ನು ಮಾಡಲು ಸಾಧ್ಯವಾಗದಿದ್ದರೆ ಸರಳ ಯೋಗಾಸನ ಮಾಡಿ, ಇಲ್ಲದಿದ್ದರೆ ವಾಕ್ ಮಾಡಿ ಬಂದ ಮೇಲೆ ಕೂಡ ನೀವು ಯೋಗ ನಿದ್ರೆ ಅಭ್ಯಾಸ ಮಾಡಬಹುದು. ಯೋಗ ನಿದ್ರೆ ಎಂದರೆ ನಮ್ಮ ದೇಹದ ಪ್ರತಿಯೊಂದು ಭಾಗದ ಮೇಲೆ ಗಮನಹರಿಸಬೇಕು, ವಿಶ್ರಾಂತಿಗೆ ಜಾರಬೇಕು, ಆದರೆ ನಿದ್ದೆ ಮಾಡಬಾರದು. 

ಹೀಗೆ ಯೋಗ ನಿದ್ರೆಗೆ ಸಂಪೂರ್ಣ ಜಾರುವಾಗ ನಮಗೆ ಹೊರಗಿನ ಯಾವ ಶಬ್ದವೂ ಕಿವಿ ಮೇಲೆ ಬೀಳುವುದಿಲ್ಲ. ಮನಸ್ಸು ಒಂದು ಕಡೆ ಕೇಂದ್ರೀಕೃತವಾಗಿರುತ್ತದೆ. ಈ ರೀತಿ ಯೋಗ ನಿದ್ರೆ ಮಾಡುವಾಗ ಒಬ್ಬರು ಅದರ ಬಗ್ಗೆ ಹೇಳುವಂತಿರಬೇಕು. ಇಲ್ಲದಿದ್ದರೆ ಆಧುನಿಕ ಟೆಕ್ನಾಲಜಿ ಮೂಲಕ ಕೂಡ ಇನ್ಸ್ಟ್ರಕ್ಷನ್ ಪಡೆಯಬಹುದು.

ಹೀಗೆ ವಿಶ್ರಾಂತಿಯ ಭಾವಕ್ಕೆ ಜಾರಿದ ಮೇಲೆ ನಂತರ ನಿಧಾನಕ್ಕೆ ನಮ್ಮ ದೇಹದ ಒಂದೊಂದೇ ಭಾಗದ ಮೇಲೆ ಗಮನ ಹರಿಸಬೇಕು. ಕಾಲಿನ ಬೆರಳುಗಳು ಎಂದಾಗ ಕಾಲಿನ ಬೆರಳು ಅಲ್ಲಾಡಿಸಬೇಕು, ಕೈ ಬೆರಳು ಎಂದಾಗ ಕೈ ಬೆರಳನ್ನು ಅಲ್ಲಾಡಿಸಬೇಕು, ಹೀಗೆ ಸಂಪೂರ್ಣವಾಗಿ ಎಚ್ಚರವಾಗಬೇಕು, ಆದರೆ ಕಣ್ಣುಗಳನ್ನು ತೆಗೆಯಬಾರದು, ನಿಧಾನಕ್ಕೆ ಎದ್ದು ಕೂತು ಪ್ರಾರ್ಥನೆ ಮಾಡಿ ಕೈಗಳನ್ನು ಉಜ್ಜಿ ಆ ಬಿಸಿಯನ್ನು ಕಣ್ಣಿಗೆ ಒತ್ತಿ ನಂತರ ಅಂಗೈಯನ್ನು ಕಣ್ತೆರೆದು ನೋಡಬೇಕು. ಈ ಯೋಗ ನಿದ್ರೆ 15 ನಿಮಿಷ ಮಾಡಿದರೆ ತುಂಬಾನೇ ವಿಶ್ರಾಂತಿ ಅನಿಸುವುದು, ನಿದ್ದೆ ಕಡಿಮೆ ಮಾಡುವವರು ಇದನ್ನು ಅಭ್ಯಾಸ ಮಾಡಿದರೆ ದೇಹಕ್ಕೆ ತುಂಬಾನೇ ವಿಶ್ರಾಂತಿ ಸಿಗುವುದು. 

ಮಾನಸಿಕ ಒತ್ತಡ ಕಡಿಮೆ ಮಾಡಲು ಅತ್ಯುತ್ತಮವಾದ ಪರಿಹಾರ: 
ತುಂಬಾ ಜನರು ಅತಿಯಾದ ಮಾನಸಿಕ ಒತ್ತಡದಿಂದಾಗಿ ನಿದ್ದೆ ಮಾತ್ರೆಯ ಮೊರೆ ಹೋಗುತ್ತಾರೆ, ಅಲ್ಲದೆ ಅತಿಯಾದ ಮಾನಸಿಕ ಒತ್ತಡದಿಂದಾಗಿ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಂಟಾಗುವುದು, ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು ತುಂಬಾನೇ ಅವಶ್ಯಕ . ಅದಕ್ಕೆ ಈ ಯೋಗ ನಿದ್ರೆ ಸಹಾಯ ಮಾಡುತ್ತದೆ. ನಿದ್ರಾಹೀನತೆ ಸಮಸ್ಯೆ ಇರುವವರಿಗೆ ಆ ಸಮಸ್ಯೆಯಿಂದ ಹೊರ ಬರಲು ಇದು ತುಂಬಾನೇ ಪ್ರಯೊಜನಕಾರಿ.

ಮಾನಸಿಕ ಆರೋಗ್ಯ ಚೆನ್ನಾಗಿದೆ:
ಯೋಗ ನಿದ್ರೆ ಮನಸ್ಸಿನಲ್ಲಿದ್ದ ಭಯ, ಬೇಡ ಚಿಂತೆ ಎಲ್ಲವನ್ನೂ ಹೊರ ಹಾಕುತ್ತದೆ, ಹೀಗಾಗಿ ಮನಸ್ಸಿಗೆ ವಿಶ್ರಾಂತಿಯ ಅನುಭವ ಉಂಟಾಗುವುದು, ಇದರಿಂದಾಗಿ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ, ಏಕಾಗ್ರತೆ ಹೆಚ್ಚಾಗುವುದು, ಯೋಚನಾ ಸಾಮರ್ಥ್ಯ ಹೆಚ್ಚಿಸುವುದು.

ಈ ಯೋಗ ನಿದ್ರೆ ಅಭ್ಯಾಸ ಮಾಡುವುದರಿಂದ ನಮ್ಮ ಮನಸ್ಸಿನಲ್ಲಿನ ಗೊಂದಲ ಕಡಿಮೆಯಾಗುವುದು.